ಪುನೀತ್ ರಾಜಕುಮಾರ್ ಅವರಿಗೆ ಜೇಕಬ್‌ ವರ್ಗಿಸ್ ಸಿನಿಮಾ ನಿರ್ದೇಶಿಸುವುದು ಖಾತ್ರಿಯಾಗಿದೆ. ಈ ಸಿನಿಮಾ ಪುನೀತ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲೇ ತಯಾರಾಗಲಿದೆ ಎನ್ನುವುದು ವಿಶೇಷ.

ದಶಕದ ಹಿಂದೆ ಪುನೀತ್‌ ರಾಜಕುಮಾರ್ ಅವರಿಗೆ ‘ಪೃಥ್ವಿ’ ನಿರ್ದೇಶಿಸಿದ್ದರು ಜೇಕಬ್‌ ವರ್ಗಿಸ್‌. ಭೂಮಾಫಿಯಾ ಕಥಾವಸ್ತು ಇದ್ದ ಈ ಸಿನಿಮಾ ಪುನೀತ್ ಸಿನಿಮಾ ಜೀವನದಲ್ಲೊಂದು ವಿಶಿಷ್ಟ ಪ್ರಯೋಗವಾಗಿ ಗುರುತಾಗಿದೆ. ಇದೀಗ ಪುನೀತ್‌ರಿಗಾಗಿ ಜೇಕಬ್‌ ಮತ್ತೊಂದು ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ಪುನೀತ್ ಅವರ ಆಪ್ತ ಸಹಾಯಕ ರಾಜಕುಮಾರ್ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ಹೌದು, ಸುದ್ದಿ ಈಗ ಅಧಿಕೃತ. ಪುನೀತ್‌ ರಾಜಕುಮಾರ್ ಅವರಿಗೆ ಜೇಕಬ್ ಸಿನಿಮಾ ಮಾಡಲಿದ್ದು, ಚಿತ್ರಕಥೆ ಸಿದ್ಧವಾಗಿದೆ. ಸದ್ಯಕ್ಕೆ ಇದಕ್ಕಿಂತ ಹೆಚ್ಚೇನೂ ಹೇಳುವಂತಿಲ್ಲ. ಚಿತ್ರದ ವಸ್ತು, ಶೂಟಿಂಗ್, ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಸ್ವತಃ ನಟ ಪುನೀತ್‌ ರಾಜಕುಮಾರ್ ಮತ್ತು ಜೇಕಬ್ ಅವರೇ ತಿಳಿಸಲಿದ್ದಾರೆ” ಎನ್ನುತ್ತಾರೆ ಪುನೀತ್ ರಾಜಕುಮಾರ್ ಅವರ ಆಪ್ತ ಸಹಾಯಕ ರಾಜಕುಮಾರ್‌.

ಪುನೀತ್ ರಾಜಕುಮಾರ್ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ಇತರೆಯವರಿಗೆ ಸಿನಿಮಾಗಳನ್ನು ನಿರ್ಮಿಸಿದ್ದಿದೆ. ಆ  ಚಿತ್ರಗಳಲ್ಲಿ ಅವರು ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ಜೇಕಬ್‌ ನಿರ್ದೇಶನದ ಸಿನಿಮಾ ಅವರ ಬ್ಯಾನರ್‌ನಡಿ ನಿರ್ಮಾಣವಾಗಲಿದ್ದು, ಮೊದಲ ಬಾರಿ ತಮ್ಮ ಬ್ಯಾನರ್‌ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ತಿಂಗಳ ಹೊತ್ತಿಗೆ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದ್ದು, 2022ರ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ. ಪುನೀತ್ ಸದ್ಯ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್‌’ ಚಿತ್ರೀಕರಣದಲ್ಲಿದ್ದು, ಇದಾದ ನಂತರ ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ದಲ್ಲಿ ನಟಿಸಲಿದ್ದಾರೆ. ಈ ಚಿತ್ರಗಳ ನಂತರ ಜೇಕಬ್ ಸಿನಿಮಾ ಶುರುವಾಗಲಿದೆ. ಇವಲ್ಲದೆ ದಿನಕರ್ ತೂಗುದೀಪ, ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್‌ ನಟಿಸುವ ಚಿತ್ರಗಳೂ ಘೋಷಣೆಯಾಗಿವೆ.

ಪುನೀತ್ ರಾಜಕುಮಾರ್ ಮತ್ತು ಜೇಕಬ್ ವರ್ಗಿಸ್ ಕಾಂಬಿನೇಷನ್‌ನಲ್ಲಿ ತಯಾರಾಗಿದ್ದ ‘ಪೃಥ್ವಿ’ ಸಿನಿಮಾದ ಹಾಡು

LEAVE A REPLY

Connect with

Please enter your comment!
Please enter your name here