ಕರ್ನಾಟಕ ಚಲನಚಿತ್ರ ಅಕಾಡೆಮಿ ಇಂದಿನಿಂದ (ನ.02) ‘ಪುನೀತ್ ಸ್ಮರಣಾಂಜಲಿ ಆನ್‌ಲೈನ್‌ ಚಿತ್ರೋತ್ಸವ’ ಹಮ್ಮಿಕೊಂಡಿದೆ. ನಟನ ಆಯ್ದ ಹತ್ತು ಅತ್ಯುತ್ತಮ ಸಿನಿಮಾಗಳು ಇಪ್ಪತ್ತು ದಿನಗಳ ಕಾಲ  ಪ್ರದರ್ಶನಗೊಳ್ಳಲಿವೆ. ಅಕಾಡೆಮಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಸಿನಿಮಾ ವೀಕ್ಷಿಸಬಹುದು.

ನಟ ಪುನೀತ್ ರಾಜಕುಮಾರ್ ನೆನಪಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ. ‘ಪುನೀತ್ ಸ್ಮರಣಾಂಜಲಿ ಆನ್‌ಲೈನ್‌ ಚಿತ್ರೋತ್ಸವ’ ನಡೆಸಲಿದ್ದು, ಇಲ್ಲಿ ಪುನೀತ್‌ರ ಆಯ್ದ ಹತ್ತು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. www.kcainfo.org ನಲ್ಲಿ ನೋಂದಾಯಿಸಿಕೊಂಡು ಆಸಕ್ತರು ಸಿನಿಮಾಗಳನ್ನು ವೀಕ್ಷಿಸಬಹುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್ ಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಇಂದಿನಿಂದ (ನವೆಂಬರ್‌ 2) ಚಿತ್ರೋತ್ಸವ ಆರಂಭವಾಗಿದೆ. ಬೆಟ್ಟದ ಹೂವು (ನವೆಂಬರ್‌ 2), ಭಕ್ತ ಪ್ರಹ್ಲಾದ (ನ. 3-4), ಮೌರ್ಯ (ನ. 5-6), ಪೃಥ್ವಿ (ನ. 7-8), ಅಭಿ (ನ. 9–10), ಅಜಯ್‌ (ನ.11-12), ಅರಸು (ನ.13-14), ಮಿಲನ (ನ.15-16), ಪವರ್‌ (ನ.17-18) ಮತ್ತು ಅಪ್ಪು (ನ.19-20) ಚಿತ್ರಗಳು ಪ್ರದರ್ಶನಗೊಳ್ಳಲಿವೆ.

“ಪುನೀತ್‌ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ತಮ್ಮ ಚಿತ್ರಗಳ ಮೂಲಕ ನಮ್ಮ ನೆನಪಿನಲ್ಲಿ ಸದಾ ಉಳಿದಿರುತ್ತಾರೆ. ಕನ್ನಡ ನಾಡು, ನುಡಿ, ನೆಲ, ಜನ, ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ಚಿತ್ರಗಳನ್ನು ಆನ್‌ಲೈನ್‌ ಮೂಲಕ ಅಭಿಮಾನಿಗಳಿಗೆ ಪ್ರದರ್ಶಿಸುವ ಚಿತ್ರಸಂಗಮ ವಿನೂತನ ಕಾರ್ಯಕ್ರಮ ಕಳೆದ ವರ್ಷ ಯಶಸ್ವಿಯಾಗಿತ್ತು. ಅಂತೆಯೇ ಈ ಬಾರಿಯೂ ಎರಡನೆ ಆವೃತ್ತಿ ನಡೆದಿದ್ದು, ಪುನೀತ್ ರಾಜಕುಮಾರ್ ಅವರ ಹತ್ತು ಉತ್ತಮ ಚಿತ್ರಗಳು ಅಕಾಡೆಮಿ ವೆಬ್‌ಸೈಟ್‌ನಲ್ಲಿ ಪ್ರದರ್ಶನಗೊಳ್ಳಲಿವೆ” ಎಂದಿದ್ದಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್‌, “ಸಿನಿಮಾ ವೀಕ್ಷಿಸುವ ಮೂಲಕ ಪುನೀತ್‌ರನ್ನು ಸ್ಮರಿಸುವ ಕಾರ್ಯಕ್ರಮವಿದು. ಸಿನಿಪ್ರೇಮಿಗಳು ಚಿತ್ರೋತ್ಸವ ಯಶಸ್ವಿಗೊಳಿಸಬೇಕು” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here