ವೆಂಕಟ್ ಪ್ರಭು ನಿರ್ದೇಶನದಲ್ಲಿ ಸಿಂಬು ನಟಿಸಿರುವ ‘ಮಾನಾಡು’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ‘ಗ್ರೌಂಡ್‌ಹಾಗ್ ಡೇ’ ಇಂಗ್ಲೀಷ್ ಸಿನಿಮಾದ ಸ್ಫೂರ್ತಿಯಿಂದ ತಯಾರಾಗಿರುವ ಚಿತ್ರವಿದು. ಈ ಫ್ಯಾಂಟಸಿ ಡ್ರಾಮಾ ಸಿನಿಮಾ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳುವ ಉಮೇದಿನಲ್ಲಿದ್ದಾರೆ ನಟ ಸಿಂಬು.
ಮುಂದಿನ ವಾರ ತೆರೆಕಾಣಲಿರುವ ಸಿಂಬು ನಟನೆಯ ‘ಮಾನಾಡು’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬಿಲ್ ಮರ್ರೇ ನಿರ್ದೇಶನದ ಕ್ಲಾಸಿಕ್ ಸಿನಿಮಾ ‘ಗ್ರೌಂಡ್‌ಹಾಗ್ ಡೇ’ ಪ್ರೇರಣೆಯಿಂದ ತಯಾರಾಗಿರುವ ಚಿತ್ರವಿದು. ಇಂಗ್ಲಿಷ್ ಚಿತ್ರದಂತೆ ಇಲ್ಲಿ ಕಾಮಿಡಿಯಷ್ಟೇ ಇಲ್ಲ. ಭ್ರಷ್ಟ ಮತ್ತು ಸ್ವಾರ್ಥ ರಾಜಕಾರಣದ ಸನ್ನಿವೇಶಗಳ ಹೆಣಿಗೆಯೊಂದಿಗೆ ಭರಪೂರ ಆಕ್ಷನ್ ಇದೆ. ಮಹತ್ವದ ಸಭೆಯೊಂದರಲ್ಲಿ ನಾಡಿನ ಮುಖ್ಯಮಂತ್ರಿಯನ್ನು ಕೊಲ್ಲುವ ಸಿಂಬು ಪಾತ್ರ ಮುಂದೆ ಹಲವು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ವಿಲನ್ ಪಾತ್ರಗಳನ್ನು ಎಂಜಾಯ್ ಮಾಡುವ ಎಸ್.ಜೆ.ಸೂರ್ಯ ಅವರಿಗೆ ಇಲ್ಲಿ ಮತ್ತೊಂದು ಉತ್ತಮ ಪಾತ್ರ ಸಿಕ್ಕಿರುವಂತಿದೆ. ಎಸ್.ಎ.ಚಂದ್ರಶೇಖರ್, ಮನೋಜ್ ಭಾರತೀರಾಜಾ, ಡೇನಿಯಲ್ ಪೋಪ್, ವೈ.ಜಿ.ಮಹೇಂದ್ರನ್, ಕರುಣಾಕರನ್ ಇತರರು ನಟಿಸಿದ್ದಾರೆ. ನವೆಂಬರ್ 25ರಂದು ಸಿನಿಮಾ ತೆರೆಕಾಣಲಿದೆ.