ಹಳೇ ಕಥೆಯನ್ನು ತೆಗೆದುಕೊಂಡು ಹೊಸದಾಗಿ ಪ್ರೆಸೆಂಟ್ ಮಾಡುವುದಿದೆಯಲ್ಲ, ಮತ್ತು ಅದೇ ಹಳೇ ಕಥೆಯನ್ನು ಜನರು ಎರಡೂವರೆ ಘಂಟೆ ಗಟ್ಟಿಯಾಗಿ ಚೇರಿಗೆ ಅಂಟಿಕೊಂಡು ಸಿನಿಮಾ ನೋಡಿಸುವ ಕಲೆ ಇದೆಯಲ್ಲ. ಅದು ದೊಡ್ಡದು – ಚಿತ್ರಕಲಾವಿದ, ಕಲಾ ನಿರ್ದೇಶಕ ಬಾದಲ್ ನಂಜುಂಡಸ್ವಾಮಿ ಬರಹ
ಎಷ್ಟೊಂದು ರಿವ್ಯೂವ್ಸ್ ಇವೆ. ವಾಸ್ತವಾಗಿ ಒಂದು ಸಿನಿಮಾ ನೋಡಿದ ಮೇಲೆ ಅದು ಹೇಗಿದೆ ,ಆ ಕಥೆ, ಆ ಘಟನೆ, ಹೇಗಿತ್ತು? ಏನು ಅನ್ನಿಸುತ್ತಿದೆ? ಆ ಸಿನಿಮಾ ಏನನ್ನು ಧ್ವನಿಸುತ್ತಿದೆ?…ಈ ರೀತಿಯ ವಿಮರ್ಶೆಗಳು ಹೆಚ್ಚ್ಚು ಕಂಡು ಬರುತ್ತವೆ. ಮತ್ತದು ಸಂತೋಷದ ವಿಷಯ. ಆದರೆ ಇದರ ಜೊತೆಗೆ ಸಿನಿಮಾದ ತಾಂತ್ರಿಕತೆಯ ಸಾಧ್ಯತೆ ಅಸಾಧ್ಯತೆಯ ಬಗ್ಗೆಯೂ ಹೆಚ್ಚೆಚ್ಚು ಬರೆದಾಗ, ಅದು ಮುಂದೆ ಸಿನೆಮಾ ಮಾಡಲು ಹೊರಟಿರುವ ಸಿನೆಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು. ಯಾಕೆಂದರೆ ಈ ವಿಷಯದ ಕೊರತೆಯೇ ನಮಗೆ ಒಳ್ಳೆ ಸಿನೆಮಾ ಸಿಗದಿರಲು ಕಾರಣ.
‘ಗರುಡ ಗಮನ ವೃಷಭ ವಾಹನ’ದ ಕಥೆ ಅದೇ ಹಳೇ ಕಥೆ. ಈ ರೀತಿ ಕಥೆಯ ಚಿತ್ರಗಳು ಬೇರೆ ಬೇರೆ ಭಾಷೆಯಲ್ಲಿ ನೂರಾರು ಬಂದು ಹೋಗಿವೆ. ಆದರೆ ಅದೇ ಹಳೇ ಕಥೆಯನ್ನು ತೆಗೆದುಕೊಂಡು ಹೊಸದಾಗಿ ಪ್ರೆಸೆಂಟ್ ಮಾಡುವುದಿದೆಯಲ್ಲ, ಮತ್ತು ಅದೇ ಹಳೇ ಕಥೆಯನ್ನು ಜನರು ಎರಡೂವರೆ ಘಂಟೆ ಗಟ್ಟಿಯಾಗಿ ಚೇರಿಗೆ ಅಂಟಿಕೊಂಡು ಸಿನಿಮಾ ನೋಡಿಸುವ ಕಲೆ ಇದೆಯಲ್ಲ. ಅದು ದೊಡ್ಡದು. ಯಾಕೆಂದರೆ ಇಲ್ಲಿ ಬಹುತೇಕ ನಮಗೆ ಒಂದು ಕಥೆ ಹೇಳುವ ಅಥವ ಕಥೆ ಕಟ್ಟುವ ಪ್ರಕ್ರಿಯೆಯೇ ಸರಿಯಾಗಿ ಗೊತ್ತಿಲ್ಲ. ಆ ಕಾರಣಕ್ಕಾಗಿ ಏನೋ ಹೊಸದು, ಹೊಚ್ಚ ಹೊಸ ವಿಷಯ ಹೇಳುವ ಕಥೆ ಮಾಡುತ್ತೇವೆ. ಆದರೆ ಅದನ್ನು ಕಥೆಯಾಗಿ ಹೆಣೆಯುವಲ್ಲಿ ಹಾದಿ ತಪ್ಪುತ್ತೇವೆ. ಆಮೇಲೆ ನಮ್ಮಲ್ಲಿ ಒಳ್ಳೆ ಸಿನಿಮಾಗಳೇ ಇಲ್ಲ ಎಂದು ಹಲುಬುತ್ತೇವೆ.
ವಾಸ್ತವವಾಗಿ ಜಗತ್ತಿನಲ್ಲಿ ಇರುವುದು ಅದದೇ ಕಥೆಗಳು…ಅದೇ ಪ್ರೀತಿ, ಅದೇ ದ್ವೇಷ, ಅದೇ ಜಗಳ, ಅದೇ ಕಿತಾಪತಿ, ಅದೇ ಕ್ಷಮೆ, ಅದೇ ಹೀರೋ, ಅದೇ ವಿಲನ್…ಇಷ್ಟರ ಸುತ್ತಲೇ ಕಥೆ ಹೆಣೆಯಬೇಕಿರುತ್ತದೆ. ಸೊ ಇದನ್ನುಬಿಟ್ಟು ಹೊಸದಾಗಿ ಏನೋ ಹೇಳಲು ಹೊರಟಾಗ, ಕಡೆ ಪಕ್ಷ ಅದೇ ಹಳೇ ಕಥೆಯಲ್ಲಿನ ನರೇಷನ್, ಪ್ರೆಸೆಂಟೇಷನ್ ಅನ್ನು ಎರಡೂವರೆ ಘಂಟೆ ಬೋರ್ ಹೊಡೆಯದೆ ತಿಳಿಸುವ ಜ್ಞಾನ ಅಥವಾ ಪ್ರತಿಭೆ ಇರಬೇಕಾಗುತ್ತದೆ. ಆಗಷ್ಟೇ ನಮಗೆ ಹೊಸದೇನೋ ಇಷ್ಟವಾಗುವುದು ಹಾಗು ಒಳ್ಳೆ ಕಥೆ ಎನಿಸುವುದು. ಇಲ್ಲವಾದರೆ ಎಷ್ಟೇ ಹೊಸ ಪ್ರಯತ್ನಗಳೂ ಹೊಳೆಯಲ್ಲಿ ಹುಣಿಸೇಹಣ್ಣು ತಿಕ್ಕಿದಂತೆ. ಈ ಕಾರಣಕ್ಕೆ ನಮ್ಮ ವಿಮರ್ಶೆಗಳು ಬರೀ ಕಥೆಯ ನಂತರದ ಸುತ್ತ ತಿರುಗದೆ ಕ್ಯಾಮೆರಾಮನ್ ಯಾಕೆ ಇಲ್ಲಿ ಕ್ಲೋಸ್ ಅಪ್ ಶಾಟ್ ಇಟ್ಟ? ಆ ಕ್ಲೋಸ್ ಅಪ್ ಇಂದಾಗಿ ನಮ್ಮೊಳಗೆ ಯಾವ ಭಾವ ಉತ್ಪತ್ತಿ ಯಾಯಿತು? ಯಾವ ದೃಶ್ಯದ ಲಿಂಕ್ ಮಿಸ್ ಆಯಿತು? ಆ ದೃಶ್ಯ ನಮಗೆ ಯಾಕೆ ಎಂಪಥಿ ಕ್ರಿಯೇಟ್ ಮಾಡಿಕೊಡಲಿಲ್ಲ? ಎಲ್ಲಿ ಸ್ಲೋ ಮೋಷನ್ ಬೇಕಿತ್ತು? ಬೇಡಿತ್ತು? ಅವುಗಳು ರಿಪೀಟ್ ಆದಷ್ಟು ಯಾಕೆ ಬೋರ್ ಆಗುತ್ತಿತ್ತು? …ಇಂಥವುಗಳ ಬಗ್ಗೆ ಇನ್ನಷ್ಟು ಚರ್ಚೆ ಆದಾಗ…ಅದು ಸಿನಿಮಾ ಮಾಡುವವನಿಗೆ ಒಂದಷ್ಟು ಪಾಠವಾಗಿ, ಆತ ಮುಂದೆ ಒಳ್ಳೆ ಸಿನಿಮಾ ಕೊಡುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಒಳ್ಳೆ ಸಿನೆಮಾ ಅಂದರೆ ಅದು ಚೆನ್ನಾಗಿ ಕಥೆ ಹೇಳುವ ಪ್ರಕ್ರಿಯೆಯೇ ಆಗಿದೆ!