ಸಂಗೀತ ಸಂಯೋಜಕ ಹಂಸಲೇಖ ಅವರು ಇಂದು ಮಧ್ಯಾಹ್ನ ಬಸವನಗುಡಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಮೈಸೂರಿನ ಸಮಾರಂಭವೊಂದರಲ್ಲಿನ ಅವರ ಹೇಳಿಕೆಗೆ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆಯಿದು.
ಕನ್ನಡ ಚಿತ್ರರಂಗದ ಮೇರು ಸಂಗೀತ ಸಂಯೋಜಕ ಹಂಸಲೇಖಾ ಅವರು ಇಂದು ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆಂದು ಹಾಜರಾಗಿದ್ದರು. ಮೈಸೂರಿನ ಸಮಾರಂಭವೊಂದರಲ್ಲಿನ ಹಂಸಲೇಖರ ಹೇಳಿಕೆ ವಿರೋಧಿಸಿ ಸಂಘಟನೆಯೊಂದು ಅವರ ವಿರುದ್ಧ ದೂರು ದಾಖಲಿಸಿತ್ತು. ಈ ಸಂಬಂಧ ಹಂಸಲೇಖ ಅವರು ವಕೀಲರಾದ ಸಿ.ಎಸ್.ದ್ವಾರಕಾನಾಥ್ ಅವರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ವಿಚಾರಣೆ ನಂತರ ಹಂಸಲೇಖ ತೆರಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪರ ವಕೀಲ ಸಿ.ಎಸ್.ದ್ವಾರಕಾನಾಥ್, “ಪೊಲೀಸರ ವಿಚಾರಣೆ ಕುರಿತ ಮಾಹಿತಿಯನ್ನು ಹೊರಗೆಡಹುವಂತಿಲ್ಲ. ನಮಗೆ ನ್ಯಾಯದ ಮೇಲೆ ನಂಬಿಕೆ ಇದ್ದು, ಕಾನೂನು ಹೋರಾಟ ಮುಂದುವರೆಸುತ್ತೇವೆ. ವಿಚಾರಣೆಗೆ ಮತ್ತೆ ಕರೆ ಬಂದರೆ ಹಂಸಲೇಖ ಅವರು ಹಾಜರಾಗುತ್ತಾರೆ” ಎಂದಿದ್ದಾರೆ. ಹಂಸಲೇಖ ಅವರು ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ಠಾಣೆ ಎದುರು ಪರ-ವಿರೋಧದ ಘೋಷಣೆಗಳು ಕೇಳಿಬಂದವು. ನಟ ಚೇತನ್ ಅವರು ಇತ್ತೀಚೆಗೆ ಹಂಸಲೇಖ ಅವರ ಮನೆಗೆ ತೆರಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಪ್ರಕರಣ ನಡೆದ ದಿನದಿಂದಲೂ ಸೋಷಿಯಲ್ ಮಿಡಿಯಾದಲ್ಲಿ ಹಂಸಲೇಖ ಅವರ ಪರ ಮತ್ತು ವಿರೋಧವಾಗಿ ಹಲವರು ಪೋಸ್ಟ್’ಗಳನ್ನು ಹಾಕುತ್ತಿದ್ದಾರೆ.