ಸರ್ಕಾರದಿಂದಲೇ ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡುವ ಯೋಜನೆಗೆ ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ಬಿಲ್ ಪಾಸಾಗಿದೆ. ದುಬಾರಿ ಟಿಕೆಟ್ ದರ, ತೆರಿಗೆ ವಂಚನೆ ತಪ್ಪಿಸುವ ಸಲುವಾಗಿ ಸರ್ಕಾರ ಇಂಥದ್ದೊಂದು ಯೋಜನೆ ಜಾರಿಗೆ ತಂದಿದೆ. ದೇಶದಲ್ಲೇ ಇದು ಮೊದಲ ಪ್ರಯೋಗ.

ಇನ್ನು ಮುಂದೆ ಆಂಧ್ರಪ್ರದೇಶದ ಜನರು ಸರ್ಕಾರ ನಡೆಸುವ ಆನ್‌ಲೈನ್‌ ಟಿಕೆಟ್ ಮಾರಾಟ ವ್ಯವಸ್ಥೆಯಲ್ಲಿ ಟಿಕೆಟ್ ಖರೀದಿಸಿ ಥಿಯೇಟರ್‌ಗೆ ತೆರಳಿ ಸಿನಿಮಾ ವೀಕ್ಷಿಸಬೇಕು. ದೇಶದಲ್ಲೇ ಮೊದಲ ಬಾರಿಗೆ ಸರ್ಕಾರದ ಆನ್‌ಲೈನ್‌ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಸಿನಿಮಾ ಟಿಕೆಟ್‌ ದರ ಖರೀದಿಸುವ ಯೋಜನೆಗೆ ಆಂಧ್ರ ಸರ್ಕಾರ ಚಾಲನೆ ಕೊಟ್ಟಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ವಿಧಾನ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇದು ಏಕ ಪರದೆ ವ್ಯವಸ್ಥೆ (ಸಿಂಗಲ್ ಸ್ಕ್ರೀನ್‌) ಮತ್ತು ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಿಗೂ ಅನ್ವಯವಾಗುತ್ತದೆ. ತೆಲುಗು ಸಿನಿಮಾ ವಲಯದಲ್ಲಿ ಈ ಬೆಳವಣಿಗೆ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರದರ್ಶಕರ ಏಕಸ್ವಾಮ್ಯ ತಡೆಹಿಡಿಯಲು ಇದು ಒಳ್ಳೆಯ ಮಾರ್ಗ ಎಂದು ಕೆಲವರು ಯೋಜನೆ ಸ್ವಾಗತಿಸಿದರೆ, ವಾಸ್ತವದಲ್ಲಿ ಇದು ಕಷ್ಟಸಾಧ್ಯ ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ.

ನೂತನ ಯೋಜನೆ ಕುರಿತು ಮಾಹಿತಿ ನೀಡಿರುವ ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಪೆರ್ನಿ ವೆಂಕಟರಾಮಯ್ಯ, “ಬಹಳಷ್ಟು ಸಿನಿಮಾ ಪ್ರದರ್ಶಕರು ಹೆಚ್ಚಿನ ಟಿಕೆಟ್ ದರ ವಿಧಿಸಿ ಮಧ್ಯಮವರ್ಗದ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ದೊಡ್ಡ ಹೀರೋಗಳ ಸಿನಿಮಾಗಳು ತೆರೆಕಂಡ ಆರಂಭದ ದಿನಗಳಲ್ಲಿ ಥಿಯೇಟರ್‌ನವರು ಒಂದು ಸಾವಿರ ರೂಪಾಯಿವರೆಗೂ ಟಿಕೆಟ್ ದರ ನಿಗಧಿ ಮಾಡುವುದಿದೆ. ತೆರಿಗೆ ವಂಚನೆಯೂ ಆಗುತ್ತಿದೆ. ಇನ್ನು ಕೆಲವು ಬಾರಿ ದಿನದಲ್ಲಿ ನಾಲ್ಕು ಶೋಗಳನ್ನು ಮೀರಿ ಆರೇಳು ಶೋಗಳನ್ನು ನಡೆಸುತ್ತಾರೆ. ನೂತನ ಯೋಜನೆಯಿಂದಾಗಿ ಈ ಎಲ್ಲಾ ತೊಡಕುಗಳು ನಿವಾರಣೆಯಾಗಲಿವೆ. ಬ್ಲಾಕ್‌ ಟಿಕೆಟ್‌ ದಂಧೆಗೂ ಕಡಿವಾಣ ಬೀಳಲಿದ್ದು, ಜನರು ಥಿಯೇಟರ್‌ಗಳ ಎದುರು ಕ್ಯೂನಲ್ಲಿ ನಿಲ್ಲುವುದು ತಪ್ಪುತ್ತದೆ” ಎಂದಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕ ಡಿ.ವಿ.ವಿ.ದಾನಯ್ಯ ಸರ್ಕಾರದ ಯೋಜನೆಯನ್ನು ಸ್ವಾಗತಿಸಿದ್ದಾರೆ. ಮತ್ತೊಂದೆಡೆ ನಿರ್ಮಾಪಕರು ಹಾಗೂ ಪ್ರದರ್ಶಕರ ವಲದಯಲ್ಲೇ ಕೆಲವರು, ವಾಸ್ತವವಾಗಿ ಈ ಯೋಜನೆಯ ಜಾರಿ ಕಷ್ಟ ಎಂದಿದ್ದಾರೆ. ಇದು ರಾಜಕೀಯ ಪ್ರೇರಿತ ಎನ್ನುವ ವದಂತಿಗಳೂ ಹರಿದಾಡುತ್ತಿವೆ.

Previous articleರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್ 2’ಗೆ ಚಾಲನೆ; ರಾಕೇಶ್ ಮಯ್ಯ, ವಿನಾಯಕ ಜೋಷಿ ಚಿತ್ರತಂಡಕ್ಕೆ ಸೇರ್ಪಡೆ
Next articleಪೊಲೀಸರ ವಿಚಾರಣೆಗೆ ಹಾಜರಾದ ಹಂಸಲೇಖ; ಠಾಣೆ ಎದುರು ಕೇಳಿ ಬಂದ ಪರ – ವಿರೋಧದ ಘೋಷಣೆ

LEAVE A REPLY

Connect with

Please enter your comment!
Please enter your name here