ಆಸ್ಟ್ರೇಲಿಯಾದ ಖ್ಯಾತ ನಟ ಡೇವಿಡ್ ಗುಲ್ಪಿಲಿಲ್ (68 ವರ್ಷ) ನಿನ್ನೆ ಅಗಲಿದ್ದಾರೆ. ಶ್ವಾಸಕೋಶ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದರು. ‘ವಾಕಬೌಟ್’ (1971) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ಉತ್ತಮ ಡ್ಯಾನ್ಸರ್, ಚಿತ್ರಕಲಾವಿದನಾಗಿಯೂ ಖ್ಯಾತಿ ಪಡೆದಿದ್ದರು.
ಆಸ್ಟ್ರೇಲಿಯಾ ಸಿನಿಮಾ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದ ನಟ ಡೇವಿಡ್ ಗುಲ್ಪಿಲಿಲ್ ನಿನ್ನೆ ಅಗಲಿದ್ದಾರೆ. ಆಸ್ಟ್ರೇಲಿಯಾದ ಯೊಲ್ನು ಬುಡಕಟ್ಟು ಜನಾಂಗ ವಾಸಿಸುವ ಮಂದಲ್ಪಿಂಗು ಪ್ರದೇಶದಲ್ಲಿ ಜನಿಸಿದ ಗುಲ್ಪಿಲಿಲ್ ‘ವಾಕಬೌಟ್’ (1971) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಚೊಚ್ಚಲ ಸಿನಿಮಾದಲ್ಲೇ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಆಸ್ಟ್ರೇಲಿಯಾ ಮೂಲ ನಿವಾಸಿಗಳು ಮತ್ತು ವಲಸಿಗರ ಮಧ್ಯೆ ಕೊಂಡಿಯಂತಿದ್ದ ಗುಲ್ಪಿಲಿಲ್ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿಯೂ ಗೌರವ ಪಡೆದಿದ್ದರು. ‘ದಿ ಲಾಸ್ಟ್ ವೇವ್’, ‘ಕ್ರೊಕಡೈಲ್ ದಂಡೀ’, ‘ದಿ ಟ್ರ್ಯಾಕರ್’, ‘ರ್ಯಾಬಿಟ್-ಪ್ರೂಫ್ ಫೆನ್ಸ್’, ‘ಟೆನ್ ಕ್ಯಾನೊಸ್’, ‘ಗೋಲ್ಡ್ಸ್ಟೋನ್’, ‘ಚಾರ್ಲೀಸ್ ಕಂಟ್ರಿ’ ಅವರ ಕೆಲವು ಪ್ರಮುಖ ಸಿನಿಮಾಗಳು. ‘ಪೈನ್ ಗ್ಯಾಪ್’, ‘ದಿ ಟೈಮ್ಲೆಸ್ ಲ್ಯಾಂಡ್’ ಅವರ ಜನಪ್ರಿಯ ಕಿರುತೆರೆ ಸರಣಿಗಳು.
ನಾಲ್ಕು ವರ್ಷಗಳ ಹಿಂದೆ ವೈದ್ಯರು ಗುಲ್ಪಿಲಿಲ್ ಅವರಲ್ಲಿ ಶ್ವಾಸಕೋಶ ಕ್ಯಾನ್ಸರ್ ಗುರುತಿಸಿದ್ದರು. ಚಿಕಿತ್ಸೆ ಶುರುಮಾಡಿದ್ದ ನಟ ‘ಮೈ ನೇಮ್ ಈಸ್ ಗುಲ್ಪಿಲಿಲ್’ ಸಾಕ್ಷ್ಯಚಿತ್ರ ಆರಂಭಿಸಿದ್ದರು. ಗುಲ್ಪಿಲಿಲ್ ಸಹನಿರ್ಮಾಣದಲ್ಲಿ ತಯಾರಾದ ಇದು ಅವರ ಬದುಕಿನ ಕತೆ. ಸಾಕ್ಷ್ಯಚಿತ್ರದ ನಿರ್ಮಾಪಕನಾಗಿ ಮೊದಲ ಬಾರಿಗೆ ತಮ್ಮ ಹೆಸರನ್ನು ಡೇವಿಡ್ ದಲೈತಂಗು ಎಂದು ಟೈಟಲ್ ಕಾರ್ಡ್ನಲ್ಲಿ ನಮೂದಿಸಿದ್ದರು. ಮಾಲಿ ರೇನಾಲ್ಡ್ಸ್ ನಿರ್ದೇಶನದ ಸಾಕ್ಷ್ಯಚಿತ್ರ ಇದೇ ವರ್ಷದ ಆರಂಭದಲ್ಲಿ ಪ್ರಸಾರವಾಗಿತ್ತು. “ಆಸ್ಟ್ರೇಲಿಯಾ ಮೂಲ ಸಂಸ್ಕೃತಿಯನ್ನು ಜಗತ್ತಿಗೆ ತಲುಪಿಸಿದ ಸಾಂಸ್ಕೃತಿಕ ರಾಯಭಾರಿ ಗುಲ್ಪಿಲಿಲ್” ಎಂದು ಅಲ್ಲಿನ ಸರ್ಕಾರ ನಟನನ್ನು ಸ್ಮರಿಸಿದೆ.