‘ಫೈರ್ ಬ್ರಾಂಡ್’ ಮರಾಠಿ ಸಿನಿಮಾದ ಸುನಂದಾ (ಉಷಾ ಜಾದವ್) ಹಳೆಯ ನೋವನ್ನು ನಿಧಾನಕ್ಕೆ ನಿವಾರಿಸಿಕೊಳ್ತಾ, ಎಲ್ಲ ಗಂಟುಗಳನ್ನೂ, ಗೋಜಲುಗಳನ್ನೂ ಸಡಿಲಿಸಿಕೊಳ್ತಾ, ಎಲ್ಲಾ ಬಂಧನಗಳನ್ನೂ ಕಳಚುತ್ತಾ ಕ್ಲೈಮ್ಯಾಕ್ಸಿನ ಹೊತ್ತಿಗೆ ಗಂಡು ಮತ್ತು ಹೆಣ್ಣು ಎಂಬ ಸಹಜ ಸತ್ಯವನ್ನು ಒಪ್ಪಿ ಹಗುರಾಗುತ್ತಾಳೆ. ‘ಸರ್’ ಇದಕ್ಕೆ ವಿರುದ್ಧವಾದ ಹಿಂದಿ ಸಿನೆಮಾ. ಎರಡೂ ಸಿನಿಮಾಗಳು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿವೆ.

ಸಿನೆಮಾ ಅಂದರೆ ಸೆಕ್ಸ್ ಮತ್ತು ಕ್ರೈಂ ಅನ್ನುವ ಹಾಗಾಗಿದೆ ಈಗ. ಓಟಿಟಿ ಪ್ಲಾಟ್‍ಫಾಮ್‍ಗಳಲ್ಲಂತೂ ಸಸ್ಪೆನ್ಸ್ ಥ್ರಿಲ್ಲರ್ ಅನ್ನುವ ಹೆಸರಲ್ಲಿ ಬರೀ ಇದೇ. ಯಾರೋ ಹೇಳಿದರು ಅಂತ ‘ಗತಂ’ ನೋಡಿ ಥತ್ ಅನಿಸ್ತು. ಮುದ್ದು ಮುಖಗಳಿದ್ದರೂ ‘ನಿಶ್ಯಬ್ದ’ದ್ದೂ ಇದೇ ಎಳೆ. ಕೊಲೆ ಮತ್ತು ಸೆಕ್ಸ್ ಕೊಳೆ. ಈಚೆಗೆ ನನ್ನನ್ನು ತುಂಬಾ ಕಾಡಿದ ಎರಡು ಸಿನೆಮಾಗಳು ‘ಫೈರ್ ಬ್ರಾಂಡ್’ (ಮರಾಠಿ) ಮತ್ತು ‘ಸರ್’ (ಹಿಂದಿ). ಬಾಲ್ಯದಲ್ಲಿ ಅತ್ಯಾಚಾರಕ್ಕೊಳಗಾಗಿ ಇನ್ನೂ ಅದನ್ನು ಮರೆಯಲಾಗದೇ ಒದ್ದಾಡುವ ಒಳಗುದಿಯ ಹೆಣ್ಣವಳು. ಹೊರಗೆ ಫೈರ್ ಬ್ರಾಂಡ್. ಸಕ್ಸಸ್‍ಫುಲ್ ಲಾಯರ್. ಅತ್ಯಂತ ಉದಾರಿ ಆರ್ಕಿಟೆಕ್ಟ್ ಗಂಡ. ಗಂಡ ಅಂದರೆ ಹೀಗಿರಬೇಕು ಅನಿಸುವ ಗಂಡನಲ್ಲ ಗೆಳೆಯ ಅನ್ನುವಂತವನು.

ಈ ಎರಡು ಮುಖ್ಯಪಾತ್ರಗಳನ್ನಿಟ್ಟುಕೊಂಡು ಹಲವು ಕೋರ್ಟ್ ಕೇಸುಗಳು, ಮಾನಸಿಕ ತಜ್ಞರು, ಹೆಣ್ಣು ಗಂಡನ್ನು ಶೋಷಿಸುವ ಕುಟುಂಬ.. ಹೀಗೆ ಹಲವು ಸೆಕೆಂಡರಿ ಕ್ಯಾರಕ್ಟರುಗಳು ಮತ್ತು ಉಪಕತೆಗಳ ಜೊತೆ ಸಾಗುತ್ತದೆ ಸಿನೆಮಾ. ಫೈರ್ ಬ್ರಾಂಡ್ ಸುನಂದಾ (ಉಷಾ ಜಾದವ್) ಪಾತ್ರ ಹಳೆಯ ನೋವನ್ನೂ ನಿಧಾನಕ್ಕೆ ನಿವಾರಿಸಿಕೊಳ್ತಾ, ಎಲ್ಲ ಗಂಟುಗಳನ್ನೂ, ಗೋಜಲುಗಳನ್ನೂ ಸಡಿಲಿಸಿಕೊಳ್ತಾ ಎಲ್ಲ ಬಂಧನಗಳನ್ನೂ ಕಳಚುತ್ತಾ ಕ್ಲೈಮ್ಯಾಕ್ಸಿನ ಹೊತ್ತಿಗೆ ಗಂಡು ಮತ್ತು ಹೆಣ್ಣು ಎಂಬ ಸಹಜ ಸತ್ಯವನ್ನು ಒಪ್ಪಿ ಹಗುರಾಗುತ್ತಾಳೆ.

ಅವಳನ್ನು ಪ್ರೀತಿಸುವ, ಆರಾಧಿಸುವ ಗಂಡ ಇದ್ದೂ ಅವಳ ಮಾನಸಿಕ ಗೊಂದಲಗಳಿಗೆ ಉತ್ತರ ಸಿಗಲು ಇನ್ನೊಬ್ಬ ಸ್ನೇಹಿತನ ಅಗತ್ಯವೇನಿತ್ತು ಎಂಬ ನೋಡುಗರ/ಸಮಾಜದ ಪ್ರಶ್ನೆಯನ್ನು ಅವಳು ಅತ್ಯಂತ ಸಹಜ ಎಂಬಂತೆ ಮೀರಿಬಿಡುತ್ತಾಳೆ. ಅಷ್ಟೇ ಸಹಜವಾಗಿ ಗಂಡನಿಗೂ ಹೇಳುತ್ತಾಳೆ. ಮಾಧವ ಪಾತ್ರದ ಗಿರೀಶ್ ಕುಲಕರ್ಣಿಯ ಕಡೇ ದೃಶ್ಯದ ಅಭಿನಯ ಐಸಿನ ಕೊರೆತದ ಹಾಗಿದೆ. ಗಿಲ್ಟ್‌ನಿಂದ ಮುಕ್ತವಾದ ಅವಳ ಆ ‘ಸೋ ವಾಟ್?’ ಸ್ಥಿತಿಯನ್ನು ಯಾರು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು. ನಾನು ಬಿಚ್ಚೆಸೆದ ಗಂಟುಗಳು ನೋಡುವ ನಿಮ್ಮನ್ನು ಸುತ್ತಿಕೊಂಡರೆ ನಾನೇನು ಮಾಡಲಿ? ಅನ್ನುವಂತೆ ಆ ಕ್ಯಾರೆಕ್ಟರ್‍. ಒಂಥರಾ ಡಿಸ್ಟರ್ಬಿಂಗ್ ಅನಿಸುವಂತಾ ಕ್ಲೈಮ್ಯಾಕ್ಸ್ ನಿಧಾನಕ್ಕೆ ಯೋಚಿಸುವಂತೆ ಮಾಡುತ್ತದೆ.

‘ಸರ್’ ಇದಕ್ಕೆ ವಿರುದ್ಧವಾದ ಸಿನೆಮಾ. ಮದುವೆ ಕಳಚಿಬಿದ್ದ ಶ್ರೀಮಂತ, ಗಂಡನನ್ನ ಕಳೆದುಕೊಂಡ ಮನೆಗೆಲಸದ ಹುಡುಗಿ. ಅಂತಸ್ತಿನ ಅಂತರವನ್ನು ನೋಡುವವರ ಮುಖಕ್ಕೆ ರಾಚುವಂತೆ ತೋರಿಸುತ್ತದೆ ಈ ಸಿನೆಮಾ. ಅವಳು ರತ್ನ, ಅವನು ಅಶ್ವಿನ್. ಅವರಿಬ್ಬರ ಹೆಸರಿನಲ್ಲೂ ಲುಕ್ಕಿನಲ್ಲೂ ಅದೇ ಅಂತರ. ತಿಲೋತ್ತಮಾ ಮತ್ತು ವಿವೇಕ್ ತಮ್ಮ ಪಾತ್ರಗಳನ್ನು ನಿರ್ವಹಿಸಿರುವ ರೀತಿ ಅವರ ದೇಹಭಾಷೆ ಎಲ್ಲವೂ ಅಂತರ ಮತ್ತೆ ಮತ್ತೆ ಕಾಣುವಂತೆ ಮಾಡುವ ಸಂಗತಿಗಳೇ. “ಮನೆಗೆಲಸದವಳ ಜೊತೆ ಲವ್ವಾ? ಅವಳಿಗೆ ಸರಿಯಾಗಿ ಫೋರ್ಕ್ ಬಳಸೋಕೆ ಬರತ್ತಾ?” ಅಂತ ರೇಗುವ ಗೆಳೆಯ. “ಮನೆಗೆಲಸದವಳ ಜೊತೆಗೆ ಲವ್ವಾ? ದೇಶ ಬಿಟ್ಟು ಹೋಗೋದೇ ವಾಸಿ” ಅನ್ನುವ ಆಯ್ಕೆ ಕೊಡುವ ಅಪ್ಪ. ಹೈ ಫೈ ಅಮ್ಮ, ಪಾರ್ಟಿ ಟೈಪಿನ ಬಳಗ ಎಲ್ಲ ಇದ್ದರೂ “ಸೋ ವಾಟ್? ಐ ಜಸ್ಟ್ ಡೋಂಟ್ ಕೇರ್” ಅನ್ನುವವನು ಅವನು.

ಆದರೆ ಅವಳು? ಸೆಕ್ಯೂರಿಟಿ ಏನನ್ನುತ್ತಾನೆ. ಆ ಡ್ರೈವರ್ ಏನಂದುಕೊಳ್ತಾನೆ ಅಂತ ಯೋಚಿಸುವವಳು. ಭಾಗ್ಯವನ್ನು ಬಾಚಿಕೊಳ್ಳುವ ಎಲ್ಲ ರೀತಿಯ ಅವಕಾಶವಿದ್ದೂ “ಟಚ್ ಮಿ ನಾಟ್‍” ಅನ್ನುವವಳು. “ಸೋ ವಾಟ್?” ಅನ್ನುವ ನಡೆಗೆ ಅವಳು ಬಿಲ್ಕುಲ್ ವಿರುದ್ಧ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಂತರಗಳಿದ್ದರೂ ಲವ್ವಾಗಿ ಮದುವೆಯಾಗಿಬಿಡುತ್ತದೆ ಅನ್ನುವುದು ಕೆಲವು ಧಾರಾವಾಹಿ, ಸಿನೆಮಾಗಳಲ್ಲಿ ಕಾಣಸಿಗುವ ರೊಮ್ಯಾಂಟಿಕ್ ವಿಷಯ ಅಷ್ಟೆ. ಅಸಲಿಗೆ ಇದು ಎಷ್ಟರಮಟ್ಟಿಗೆ ಸಾದ್ಯ ಎಂಬುದನ್ನು ಅಚ್ಚುಹೊಡೆದಷ್ಟು ಅಚ್ಚುಕಟ್ಟಾಗಿ ತೋರಿಸಿದೆ ಈ ಸಿನೆಮಾ.

ಒಂದೇ ಭೂಮಿಯ ಮೇಲಿದ್ದೂ ನಮ್ಮ ಲೋಕಗಳು ಬೇರೆ. ಗಂಡು ಹೆಣ್ಣು ಪ್ರೀತಿ ಇಷ್ಟು ಸಾಲದು ಒಟ್ಟಾಗಲು ಅನ್ನುವ ಈ ಸಿನೆಮಾದಲ್ಲಿ ವಾಚ್ಯ ಕೆಲವಾದರೆ ಅಡುಗೆ ಮನೆಯ ವಸ್ತುಗಳ ಶಬ್ದಗಳಿಂದ ಹಿಡಿದು ಅವಳು ಸೆರಗಿನಿಂದ ಕುತ್ತಿಗೆ ವರೆಸಿಕೊಳ್ಳುವವರೆಗೆ ಸೂಚ್ಯವೇ ಹೆಚ್ಚು. ಈ ಸೂಚ್ಯಗಳೇ ಹೆಚ್ಚು ಕಾಡುತ್ತವೆ. ಎಲ್ಲ ಸಿಕ್ಕುಗಳನ್ನೂ ಬಿಡಿಸಿಕೊಂಡು “ಸೋ ವಾಟ್?” ಅಂತ ಬದುಕೋದು ಅಷ್ಟು ಸುಲಭವಲ್ಲ ಅನ್ನುತ್ತದೆ ಸಿನೆಮಾ. ಈ ಎರಡೂ ಸಿನೆಮಾದ ನಾಯಕಿಯರು ಬಿಳಿಚರ್ಮದ, ಕೆಂಪು ಲಿಪ್‌ಸ್ಟಿಕ್ಕಿನ ಹೊಳೆಹೊಳೆವ ಕೆನ್ನೆಗಳ ಸುಂದರಿಯರಲ್ಲ. ಆದರೆ ಆಡಿದ ಮಾತಿನಲ್ಲೂ, ನೋಡಿದ ನೋಟದಲ್ಲೂ ಕಾಡುತ್ತಾರೆ.

LEAVE A REPLY

Connect with

Please enter your comment!
Please enter your name here