ಹೊಟ್ಟೆ ಹೊರೆಯಲು ಹಳ್ಳಿಯಿಂದ ನಗರಕ್ಕೆ ಬರುವ ಯುವಕರು ಮಾಲೀಕನ ಗೋದಾಮಿನಲ್ಲಿ ಬಂಧಿಯಾಗುತ್ತಾರೆ. ಅವರು ಇಲ್ಲಿಂದ ಪಾರಾಗುವ ಬಗೆ ಹೇಗೆ? – ‘7 ಪ್ರಿಸನರ್ಸ್’ ಬ್ರೆಜಿಲ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಆತನ ಹೆಸರು ಮ್ಯಾಟುಯಸ್. ಅಮ್ಮ ಹಾಗೂ ಸಹೋದರಿಯರ ಜೊತೆ ಬ್ರೆಜಿಲ್‌ನ ಒಂದು ಸಣ್ಣ ಹಳ್ಳಿಯಲ್ಲಿ ವಾಸವಿರುವ ಬಡ ಕುಟುಂಬದ ಯುವಕ. ಆತನಿಗೆ ತಾಯಿಯ ಮೇಲೆ ಎಲ್ಲಿಲ್ಲದ ಪ್ರೀತಿ ಹಾಗೆ ಆಕೆಗೂ ಕೂಡ . ಹೀಗಿರುವಾಗ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಪಕ್ಕದ ಪಟ್ಟಣಕ್ಕೆ ಹೋಗಿ ಕೆಲಸ ಮಾಡುವ ಸಂದರ್ಭ ಎದುರಾಗುತ್ತದೆ. ಅದರ ಪ್ರಕಾರ ಏಜೆಂಟ್ ಒಬ್ಬನ ಮೂಲಕ ಕೆಲಸ ಸಹ ದೊರೆಯುತ್ತದೆ. ಕೊಂಚ ಮಟ್ಟಿಗೆ ಅಡ್ವಾನ್ಸ್ ಪಡೆದು ದೊಡ್ಡ ಕನಸುಗಳೊಂದಿಗೆ ಪಟ್ಟಣದ ಕಡೆ ಪ್ರಯಾಣ ಬೆಳೆಸುತ್ತಾನೆ. ಇವನ ಜೊತೆ ಇನ್ನು ನಾಲ್ಕು ಜನ ಹುಡುಗರು ಸಹ ಪಟ್ಟಣಕ್ಕೆ ಬಂದು ಇಳಿದು ತಾವು ಕೆಲಸ ಮಾಡಬೇಕಿದ್ದ ಜಾಗಕ್ಕೆ ಬಂದು ತಲುಪುತ್ತಾರೆ. ಅದು ಬೃಹತ್ ಗುಜರಿ ಸಾಮಗ್ರಿಗಳ ಗೋದಾಮು. ಬಂದ ಉತ್ಸಾಹದಲ್ಲಿ ಹುಡುಗರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹೀಗೆ ಒಂದು ವಾರ ಮುಗಿದ ನಂತರ ಗೋದಾಮು ಮಾಲೀಕನ ಬಳಿ ತಾವು ಒಂದು ವಾರ ಮಾಡಿದ್ದ ಕೆಲಸದ ಸಂಬಳ ಕೇಳುತ್ತಾರೆ.
ಮಾಲೀಕನ ಉತ್ತರ ಕೇಳಿ ಎಲ್ಲರಿಗೂ ಸಿಡಿಲು ಬಡಿದಂತೆ ಆಗುತ್ತದೆ. “ನಾನು ನಿಮಗೆ ಕೊಟ್ಟಿರುವ ಅಡ್ವಾನ್ಸ್ ಹಣ ಹಾಗೂ ಇಲ್ಲಿ ತಿನ್ನುವ ವೆಚ್ಚ, ಉಳಿದುಕೊಳ್ಳುವ ವೆಚ್ಚ ಇವೆಲ್ಲವನ್ನೂ ತೀರಿಸಬೇಕಾದರೆ ಇನ್ನೂ ಕೆಲ ತಿಂಗಳುಗಳ ಕಾಲ ಕೆಲಸ ಮಾಡಬೇಕು” ಎಂದು ಹೇಳುತ್ತಾನೆ ಮಾಲೀಕ. ಅಕ್ಷರಶಃ ಅವರು ಮಾಲೀಕನಿಗೆ ಏಜೆಂಟ್‌ನಿಂದ ಬಿಕರಿಯಾಗಿರುತ್ತಾರೆ. ಮುಂದೆ ಇವರು ಮಾಡುವ ನಿರ್ದಾರಗಳೇನು? ಅದರ ಪರಿಣಾಮ? ಇವೆಲ್ಲವನ್ನೂ ನೀವು ಚಿತ್ರದಲ್ಲೇ ನೋಡಬೇಕು. ಈ ಚಿತ್ರದಲ್ಲಿ ತುಂಬಾ ಇಷ್ಟವಾದ ವಿಷಯ ಪಾತ್ರಗಳ ಬರವಣಿಗೆ. ಹೌದು, ತುಂಬಾ ಚೆನ್ನಾಗಿ ಬರೆಯಲಾಗಿದೆ. ತನಗೆ ಗೊತ್ತಿಲ್ಲದೆ ತನ್ನೊಳಗೊಬ್ಬ ಸ್ವಾರ್ಥಿ ಇರುತ್ತಾನೆ ಎಂಬುದನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ ನಿರ್ದೇಶಕರು. ಚಿತ್ರ ನೋಡುವಾಗ ನಿಮಗೆ ಅರಿವಾಗುವುದಿಲ್ಲ, ಆದರೆ ಮುಗಿದ ನಂತರ ಸ್ವಲ್ಪ ಯೋಚನೆ ಮಾಡಿದರೆ ಹಲವು ಅಂಶಗಳು ಗೋಚರಿಸುತ್ತವೆ. ಹಾಗೆಯೇ ಎಲ್ಲರ ಅಭಿನಯ ಅಷ್ಟೇ ಸಹಜವಾಗಿದೆ. ಇನ್ನು ಕ್ಯಾಮೆರಾ ಕೆಲಸ , ರೀರೆಕಾರ್ಡಿಂಗ್, ಸೌಂಡ್ ಡಿಸೈನ್ , ಪ್ರೊಡಕ್ಷನ್ ಎಲ್ಲವೂ ಅಚ್ಚುಕಟ್ಟು.
ಸಿನಿಮಾ : 7 ಪ್ರಿಸನರ್ಸ್ | ನಿರ್ದೇಶನ : ಅಲೆಕ್ಸಾಂಡರ್ ಮೊರಾಟ್ಟೊ | ತಾರಾಬಳಗ : ಕ್ರಿಶ್ಚಿಯನ್ ಮಲ್ಹೆರಿಯೊಸ್, ರೊಡ್ರಿಗೊ ಸಂತೊರೊ, ಬ್ರ್ಯೂನೊ ರೊಚಾ, ವಿಟರ್ ಜ್ಯೂಲಿಯನ್