ಭಾರತದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ ‘ಪುಷ್ಪ’ ಪ್ರಮುಖವಾದುದು. ನಾಡಿದ್ದು ಸಿನಿಮಾ ತೆರೆಕಾಣುತ್ತಿದೆ. ಚಿತ್ರದ ಪ್ರೊಮೋಷನ್‌ಗಾಗಿ ಹೀರೋ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಬಂದಿದ್ದರು.
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸಿರುವ ‘ಪುಷ್ಪ’ ಆರಂಭದಿಂದಲೂ ಸುದ್ದಿಯಲ್ಲಿರುವ ಸಿನಿಮಾ. ಕನ್ನಡತಿ ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ. ಚಿತ್ರದ ಪ್ರೊಮೋಷನ್‌ಗಾಗಿ ಹೀರೋ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಇಂದು ಬೆಂಗಳೂರಿಗೆ ಬಂದಿದ್ದರು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡ ನಟ ಧನಂಜಯ ಕೂಡ ಅವರಿಗೆ ಜೊತೆಯಾಗಿದ್ದರು. ಈ ಸಿನಿಮಾ ಕನ್ನಡ ಡಬ್ಬಿಂಗ್ ಅವರತಣಿಕೆಯಲ್ಲೂ ರಾಜ್ಯದಲ್ಲಿ ತೆರೆಕಾಣುತ್ತಿದೆ. ಕನ್ನಡ ಅವತರಣಿಕೆಗೆ ನಟಿ ರಶ್ಮಿಕಾ ಡಬ್ ಮಾಡಿಲ್ಲ ಎನ್ನವ ಅಸಮಾಧಾನ ಅವರ ಕನ್ನಡ ಅಭಿಮಾನಿಗಳದ್ದು. ಮೂಲ ತೆಲುಗಿನಲ್ಲಿ ಡಬ್ ಮಾಡಿರುವ ಅವರು ಕನ್ನಡದಲ್ಲೇಕೆ ಮಾಡಬಾರದಿತ್ತು ಎಂದು ಪತ್ರಕರ್ತರು ರಶ್ಮಿಕಾರನ್ನು ಪ್ರಶ್ನಿಸಿದರು. “ಮೊದಲು ತೆಲುಗು ಸಿನಿಮಾ ಡಬ್ಬಿಂಗ್ ಮುಗಿಯಿತು. ಕನ್ನಡ ಅವತರಣಿಕೆಗೆ ಡಬ್ ಮಾಡಲು ಸಮಯ ಇರಲಿಲ್ಲ. ಅಲ್ಲದೆ ಕೆಲವು ತಾಂತ್ರಿಕ ಸಮಸ್ಯೆ ಎದುರಾಯ್ತು. ‘ಪುಷ್ಪ’ ಸೆಕೆಂಡ್ ಪಾರ್ಟ್‌ಗೆ ಖಂಡಿತಾ ಡಬ್ ಮಾಡುತ್ತೇನೆ” ಎಂದರು ರಶ್ಮಿಕಾ.
‘ಪುಷ್ಪ’ ಚಿತ್ರದಲ್ಲಿನ ಅವರ ಶ್ರೀವಲ್ಲಿ ಪಾತ್ರ ಹಾಡುಗಳ ಮೂಲಕ ಈಗಾಗಲೇ ಜನಪ್ರಿಯವಾಗಿದೆ. ಚಿತ್ರದಲ್ಲಿನ ರಶ್ಮಿಕಾ ಫಸ್ಟ್‌ಲುಕ್ ಬಿಡುಗಡೆಯಾಗಿದ್ದಾಗ ಅವರು ಟ್ರಾಲ್‌ಗೆ ಒಳಗಾಗಿದ್ದೂ ಇದೆ. ಈ ಪಾತ್ರದ ಬಗ್ಗೆ ವಿಪರೀತ ಪ್ರೀತಿಯಿದೆ. “ಈ ಪಾತ್ರ ಮಾಡುವಂತೆ ನಿರ್ದೇಶಕ ಸುಕುಮಾರ್ ಹೇಳಿದಾಗ ನನಗೆ ಕಾನ್ಫಿಡೆನ್ಸ್ ಇರಲಿಲ್ಲ. ತುಂಬಾ ಇಂಟೆನ್ಸೀವ್ ಆದ ಪಾತ್ರವಿದು. ನಿರ್ದೇಶಕರು ಭರವಸೆ ತುಂಬಿದ ನಂತರವಷ್ಟೇ ನಾನು ಓಕೆ ಎಂದಿದ್ದು. ಶೂಟಿಂಗ್ ಸೆಟ್‌ನಲ್ಲಿ ಅಲ್ಲು ಅರ್ಜುನ್ ಅವರು ಕೂಡ ಕಂಫರ್ಟ್ ಝೋನ್ ಕಲ್ಪಿಸಿಕೊಟ್ಟರು. ಇದರಿಂದ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಯ್ತು. ಕೇವಲ ಹುಡುಗಿಯರಷ್ಟೇ ಅಲ್ಲ, ಹುಡುಗರು ಕೂಡ ನನ್ನ ಪಾತ್ರವನ್ನು ಅನುಕರಿಸುತ್ತಿದ್ದಾರೆ. ಚಿತ್ರದಲ್ಲಿ ಎಲ್ಲರೂ ತುಂಬಾ ಹಾರ್ಡ್‌ವರ್ಕ್ ಮಾಡಿದ್ದಾರೆ” ಎನ್ನುವ ರಶ್ಮಿಕಾ ಸಿನಿಮಾವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
ನಟ ಧನಂಜಯ ಅವರು ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮೂಲಕ ಅವರದ್ದು ನೆಗೆಟಿವ್ ಶೇಡ್ ಎನ್ನುವುದು ಗೊತ್ತಾಗಿದೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಅವರು, “ಚಿತ್ರದಲ್ಲಿ ತುಂಬಾ ಪಾತ್ರಗಳಿದ್ದು, ನನ್ನ ಪಾತ್ರಕ್ಕೂ ಸ್ಕೋಪ್ ಇದೆ. ಟಗರು ಚಿತ್ರದಲ್ಲಿನ ಡಾಲಿ ಪಾತ್ರದಂತೆ ಇಲ್ಲಿಯೂ ಪಾತ್ರಕ್ಕೆ ಪೋಲಿ ಗುಣವಿದೆ. ನಿರ್ದೇಶಕ ಸುಕುಮಾರ್ ಮತ್ತು ಹೀರೋ ಅಲ್ಲು ಅರ್ಜುನ್ ಅವರನ್ನು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಈಗ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಿದ್ದು ಸುಯೋಗ. ಸೆಟ್‌ನಲ್ಲಿ ಅವರ ಎನರ್ಜಿ ನನಗೆ ತುಂಬಾ ಇಷ್ಟವಾಗುತ್ತಿತ್ತು. ನಿರ್ದೇಶಕ ಸುಕುಮಾರ್ ತಾವು ಕಲ್ಪಿಸಿಕೊಂಡ ಕತೆಯನ್ನು ಅಂದುಕೊಂಡಂತೆ ತೆರೆಗೆ ತರಲು ತುಂಬಾ ಶ್ರಮವಹಿಸಿ ಕೆಲಸ ಮಾಡಿದ್ದಾರೆ” ಎಂದರು ಧನಂಜಯ್.
ನಟ ಅಲ್ಲು ಅರ್ಜುನ್ ಅವರಿಗೆ ವೃತ್ತಿ ಬದುಕಿನಲ್ಲಿ ಇದು ಮತ್ತೊಂದು ಪ್ರಮುಖ ಸಿನಿಮಾ ಆಗಲಿದೆ ಎನ್ನುವ ವಿಶ್ವಾಸ. ಈ ಹಿಂದೆ ‘ಆರ್ಯ’ ಚಿತ್ರದೊಂದಿಗೆ ನಿರ್ದೇಶಕ ಸುಕುಮಾರ್ ಇವರ ಸಿನಿಮಾ ಬದುಕಿಗೆ ತಿರುವು ನೀಡಿದ್ದರು. ಮುಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದ ʼಆರ್ಯ2′ ಕೂಡ ಕ್ಲಿಕ್ಕಾಯ್ತು. “ಅದೊಂದು ದಿನ ಮಾತಿಗೆ ಸಿಕ್ಕಿದ್ದ ಸುಕುಮಾರ್ ಸರ್ ಏನಾದರೂ ಡಿಫರೆಂಟ್ ಆಗಿ ಮಾಡೋಣ ಡಾರ್ಲಿಂಗ್ ಎಂದರು. ಮುಂದಿನ ದಿನಗಳಲ್ಲಿ ಪುಷ್ಪ ಸಿನಿಮಾದ ರೂಪುರೇಷೆ ಸಿದ್ಧವಾಯ್ತು. ಇದು ಯಾವುದೇ ಘಟನೆಯನ್ನು ಆಧರಿಸಿದ ಚಿತ್ರವಲ್ಲ. ಸಂಪೂರ್ಣ ಕಾಲ್ಪನಿಕ. ಕನ್ನಡರಿಗರು ಸದಾ ನನ್ನ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರಿಗೆ ಆಭಾರಿ” ಎಂದ ಅಲ್ಲು ಅರ್ಜುನ್ ಕನ್ನಡದಲ್ಲಿ ಚಿತ್ರದ ಸಂಭಾಷಣೆಯೊಂದನ್ನು ಹೇಳಿದರು.