ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ನಿರ್ಮಾಪಕರು ಆತಂಕಕ್ಕೀಡಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಈಗ ಮತ್ತೆ ಕೋವಿಡ್ ಭೀತಿ ಎದುರಾಗಿದೆ. ಮತ್ತೊಂದೆಡೆ ಆಂಧ್ರದಲ್ಲಿ ಟಿಕೆಟ್ ದರಗಳನ್ನು ಹದಿನೈದಿಪ್ಪತ್ತು ರೂಪಾಯಿಗೆ ಇಳಿಸಿದ್ದು, ವಿತರಕರು ಹಾಗೂ ಪ್ರದರ್ಶಕರು ಚಿಂತೆಗೀಡಾಗಿದ್ದಾರೆ.
‘ಬಾಹುಬಲಿ 2’ ಹಾಗೂ ‘ಕೆಜಿಎಫ್’ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಫೇಮಸ್ ಆಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹೀಗೆ ಪ್ರಾದೇಶಿಕ ಭಾಷಾ ಚಲನ ಚಿತ್ರರಂಗವೆಂದು ಕರೆಸಿಕೊಳ್ತಿದ್ದ ಈ ಚಿತ್ರರಂಗಗಳು ಈಗ ಜಗತ್ತಿನಾದ್ಯಂತ ತಮ್ಮ ಸಿನಿಮಾಗಳಿಂದ ಗುರುತಿಸಿಕೊಳ್ಳುತ್ತಿವೆ. ಅದರಂತೆ ಯಾವುದೇ ಸ್ಟಾರ್ ನಟ ಇರಲಿ, ಈಗೀಗ ಐದು ಭಾಷೆಯಲ್ಲಿ ರಿಲೀಸ್ ಆಗೋದು ಕಾಮನ್ ಆಗಿ ಹೋಗಿದೆ. ಇನ್ನು ಎಲ್ಲಾ ಭಾಷೆಯ ಆಡಿಯೆನ್ಸ್‌ಗಳನ್ನು ತಲುಪುವ ಸಲುವಾಗಿ ಬಜೆಟ್ ನ ಗಾತ್ರ ದೊಡ್ಡದಾಗಿದೆ. ಈಗೀಗ ಯಾವುದೇ ಸ್ಟಾರ್ ನಟರ ಸಿನಿಮಾವಾಗಲಿ ಅದರ ಬಜೆಟ್ ಕಮ್ಮಿ ಎಂದರೂ 200 ಕೋಟಿ ಇರುತ್ತದೆ.
ಸದ್ಯ ತೆಲುಗಿನ ‘ರಾಧೆ ಶ್ಯಾಮ್’, ‘RRR’ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಅದರಲ್ಲಿ ‘RRR’ ಸಿನಿಮಾದ ಬಜೆಟ್ 500 ಕೋಟಿಯಾದರೆ, ‘ರಾಧೆ ಶ್ಯಾಮ್’ ಬಜೆಟ್ ಸರಿಸುಮಾರು 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿವೆ. ಈಗಾಗಲೇ ರಿಲೀಸ್‌ಗೂ ಮುಂಚೆಯೇ ಈ ಎರಡು ಚಿತ್ರಗಳ ಥಿಯೇಟರ್ ರೈಟ್ಸ್ ಸೋಲ್ಡ್ ಔಟ್ ಆಗಿವೆ. ನಿರ್ಮಾಪಕರು ಲಾಭದಲ್ಲಿದ್ದಾರೆ. ಆದರೆ ಸದ್ಯ ಆತಂಕದಲ್ಲಿರೋದು ಈ ಎರಡು ಚಿತ್ರಗಳನ್ನ ದೊಡ್ಡ ಮೊತ್ತಕ್ಕೆ ಕೊಂಡು ಕೊಂಡಿರೋ ವಿತರಕರು. ಯಾಕೆಂದರೆ ಆಂಧ್ರಪ್ರದೇಶದಲ್ಲಿ ಸದ್ಯಕ್ಕೆ ಟಿಕೆಟ್ ಪ್ರೈಸ್‌ಗೆ ಅಲ್ಲಿನ ಮುಖ್ಯಮಂತ್ರಿ ಜಗನ್ ಅಂಕುಶ ಹಾಕಿದ್ದಾರೆ. ಮೆಟ್ರೋ ಸಿಟಿಗಳಲ್ಲಿ ಟಿಕೆಟ್ ಪ್ರೈಸ್ ನೂರು ರುಪಾಯಿ ದಾಟಬಾರದು ಅನ್ನೋದಾದರೆ, ಟೈಯರ್ -2 , ಟೈಯರ್ -3 ನಗರಗಳ ಟಿಕೆಟ್ ಪ್ರೈಸ್ ಅಂತೂ ಕೇಳುವ ಹಾಗೆಯೇ ಇಲ್ಲ. 20 ರುಪಾಯಿ, 15 ರುಪಾಯಿಗೆಲ್ಲಾ ಟಿಕೆಟ್ ಸೇಲ್ ಮಾಡುವಂತೆ ಸರ್ಕಾರ ನಿಯಮ ಜಾರಿಗೆ ತಂದಿದೆ. ಈ ನಿಯಮವನ್ನು ವಿರೋಧಿಸಿ ಆಂಧ್ರಪ್ರದೇಶದಲ್ಲಿ ಸುಮಾರು 300 ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಹಾಗೆ ಏಷ್ಯದ ಅತಿದೊಡ್ಡ ಸಿನಿಮಾ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ರಭಾಸ್ ಒಡೆತನದ ‘ಎಪಿಕ್’ ಚಿತ್ರಮಂದಿರ ಕೂಡ ಆಟ ಮುಗಿಸಿದೆ. ಬೆಳ್ಳಿ ಪರದೆಯ ಸಂಭ್ರಮಕ್ಕೆ ತೆರೆ ಎಳೆದಿದೆ.
ಇದರಿಂದ ಆಂದ್ರಪ್ರದೇಶದ ವಿತರಕರು ಆತಂಕದಲ್ಲಿದ್ದಾರೆ. 25 ರುಪಾಯಿ, 30 ರುಪಾಯಿಗೆ ಟಿಕೆಟ್ ಸೇಲ್ ಮಾಡಿ ಅದು ಹೇಗೆ ಕೋಟಿ ಕೋಟಿ ಬಂಡವಾಳ ಎತ್ತೋದು ಅಂತ ಆಕಾಶ ನೋಡ್ತಿದ್ದಾರೆ. ಇನ್ನು ‘ಬಾಹುಬಲಿ’ ಆಗಲಿ ಅಥವಾ ‘ಕೆಜಿಎಫ್’ ಆಗಲಿ ಆಂಧ್ರಪ್ರದೇಶದಲ್ಲಿ ದೊಡ್ಡ ಅಮೌಂಟ್ ಬಾಚಿದ್ವು. ದಾಖಲೆಯನ್ನು ಬರೆದಿದ್ವು. ಈಗ ಹೊಸ ನೀತಿಯಿಂದ ದೊಡ್ಡ ಬಂಡವಾಳದ ಚಿತ್ರಗಳಿಗೆ ಬೀಳುವ ಹೊಡೆತ ಅಂತಿಂಥದ್ದಲ್ಲ.
ಇನ್ನು ಇದರ ಜೊತೆ ಮಹಾರಾಷ್ಟ್ರದಲ್ಲಿ ಕೋವಿಡ್ ನಿಯಮ ಜಾರಿಯಲ್ಲಿದೆ. ಅಲ್ಲಿನ್ನೂ 100% ಟಿಕೆಟ್ ಬುಕಿಂಗ್‌ಗೆ ಅವಕಾಶ ಇಲ್ಲ. ಜೊತೆಗೆ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ಸಂಕಷ್ಟದಲ್ಲಿದ್ದ ಚಿತ್ರರಂಗ ಈಗಷ್ಟೇ ಚೇತರಿಸಿಕೊಳ್ತಿದೆ. ಮತ್ತೆ ಎದ್ದು ನಿಲ್ಲೋ ಭರವಸೆಯಲ್ಲಿದೆ. ಇದರ ನಡುವೆ ಇಂತಹ ಅಡ್ಡಿ ಆತಂಕಗಳು ಚಿತ್ರೋದ್ಯಮದ ಬೆನ್ನೆಲುಬು ಮುರಿಯುತ್ತಿವೆ.
ಈಗ ಸಿನಿಮಾ ನೋಡಬೇಕೆಂದರೆ ಥಿಯೇಟರ್‌ಗೆ ಹೋಗಬೇಕು ಅಂತೇನಿಲ್ಲ. ಕೊರೊನಾ ನಂತರ ಸಿನಿಮಾ ನೋಡುವ ಆಯಾಮವೇ ಬದಲಾಗಿದೆ. ಪ್ರೇಕ್ಷಕ ತಾನು ಕುಂತಲ್ಲಿಯೇ ವಿವಿಧ ಓಟಿಟಿ ಫ್ಲಾಟ್ ಫಾರಂಗಳ ಮೂಲಕ ಜಗತ್ತಿನ ಯಾವುದೇ ಸಿನಿಮಾವನ್ನ ಬೇಕಾದರೂ ನೋಡಬಹುದಾದಂತಹ ಅವಕಾಶ ಪಡೆದುಕೊಂಡಿದ್ದಾನೆ. ಇಂತಹ ಸಮಯದಲ್ಲಿ ಪ್ರೇಕ್ಷಕನನ್ನ ಥಿಯೇಟರ್ ಗೆ ಕರೆಸೋದು ಹರಸಾಹಸವಾಗಿದೆ. ಹೀಗಿರುವಾಗ ಟಿಕೆಟ್ ಪ್ರೈಸು, ಕೊರೊನಾ ರೂಲ್ಸು, 400 ಕೋಟಿ, 500 ಕೋಟಿ ಹಾಕಿ ಸಿನಿಮಾ ಮಾಡಬೇಕು ಎನ್ನೋ ನಿರ್ಮಾಪಕನನ್ನ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತಿದೆ.
ಇನ್ನು ‘ಬಾಹುಬಲಿ’, ‘ಕೆಜಿಎಫ್’ ನಂತರ ಎಲ್ಲಾ ಸ್ಟಾರ್‌ಗಳು, ಪ್ಯಾನ್ ಇಂಡಿಯಾ ಚಿತ್ರಗಳತ್ತ ಮನಸ್ಸು ಹೊರಳಿಸಿದ್ದಾರೆ. ಹಾಗಂತ ಆ ರೀತಿ ಬಂದಂತಹ ಎಲ್ಲಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿಲ್ಲ. ಅದೇ ಮಟ್ಟದಲ್ಲಿ ದುಡ್ಡು ಮಾಡುತ್ತಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ರಜಿನಿಕಾಂತ್ ನಟನೆಯ ‘ಅಣ್ಣಾತ್ತೆ’. ಈ ಸಿನಿಮಾ 180 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದರೆ ಥಿಯೇಟರ್‌ನಲ್ಲಿ ಗಳಿಸಿದ್ದು 170 ಕೋಟಿಯಷ್ಟೇ. ಹಾಗೆ ಮೋಹನ್ ಲಾಲ್ ನಟನೆಯ ‘ಮರಕ್ಕರ್’ ನೂರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದರೆ ಥಿಯೇಟರ್ ನಲ್ಲಿ ಈ ಸಿನಿಮಾದ ಗಳಿಕೆ 50 ಕೋಟಿ ಕೂಡ ದಾಟಲಿಲ್ಲ. ಹಾಗೆ 130 ಕೋಟಿ ಬಜೆಟ್‌ನ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾ ಸಹ ತಮಿಳುನಾಡು ಬಿಟ್ಟು ಬೇರೆ ಕಡೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಹೀಗಾಗಿ ಮಾತೆತ್ತಿದರೆ 300 ಕೋಟಿ, 400 ಕೋಟಿ ಅನ್ನೋ ನಿರ್ಮಾಪಕರು ಹಿಂದಡಿ ಇಡುವ ಪರಿಸ್ಥಿತಿ ತಲೆದೋರಿದೆ.