ರಾಜಮೌಳಿ ನಿರ್ದೇಶದ ಬಹುನಿರೀಕ್ಷಿತ ‘RRR’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ನೇರವಾಗಿ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಿದ್ದು ವಿಶೇಷ. ಅದ್ಧೂರಿ ತಾರಾಗಣದ ಪೀರಿಯಡ್‌ ಸಿನಿಮಾ ಜನವರಿ 7ರಂದು ಬಿಡುಗಡೆಯಾಗಲಿದೆ.

‘ಬಾಹುಬಲಿ’ ಸರಣಿ ಸಿನಿಮಾಗಳ ನಂತರ ಬಿಡುಗಡೆಯಾಗುತ್ತಿರುವ ರಾಜಮೌಳಿ ಸಿನಿಮಾ ‘RRR’. ಆರಂಭದಿಂದಲೂ ಸುದ್ದಿಯಲ್ಲಿರುವ ಸಿನಿಮಾದ ಟ್ರೈಲರ್‌ ಇಂದು ಬಡುಗಡೆಯಾಗಿದೆ. ಇಲ್ಲಿಯವರೆಗೆ ಬಿಡಿಬಿಡಿಯಾಗಿ ಕಾಣಿಸಿದ್ದ ಕತೆ ಇಂದಿನ ಟ್ರೈಲರ್‌ನಲ್ಲಿ ಹೊಸ ರೂಪದಲ್ಲಿ ತೋರುತ್ತಿದೆ. ದೊಡ್ಡ ಪರದೆ ಮೇಲೆ ವಿಶ್ಯುಯಲ್‌ ಬ್ಯೂಟಿ ಜೊತೆಗೆ ಆಕರ್ಷಕವಾಗಿ ಕತೆ ಹೇಳುವುದು ರಾಜಮೌಳಿ ಶೈಲಿ. ಇಂದು ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿಯೂ ಈ ಶೈಲಿ ಮುಂದುವರೆದಿದೆ. ಈ ಬಾರಿ ಅವರು ಸ್ವಾತಂತ್ರ್ಯಪೂರ್ವದ ಕತೆಯನ್ನು ಹೇಳುತ್ತಿದ್ದು, ಕತೆಯ ಕ್ಯಾನ್ವಾಸ್‌ ದೊಡ್ಡದು. ಮೂರು ನಿಮಿಷಗಳ ಟ್ರೈಲರ್‌ನಲ್ಲಿ ಚಿತ್ರದ ನಾಯಕನಟರಾದ ಜ್ಯೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ತೇಜಾ ಅವರ ಪಾತ್ರಗಳಿಗೆ ಹೆಚ್ಚು ಸ್ಕೋಪ್‌ ಇದ್ದು, ಇನ್ನುಳಿದ ಪ್ರಮುಖ ಪಾತ್ರಗಳ ಪರಿಚಯವೂ ಸಿಗುತ್ತದೆ. ನಿರ್ದೇಶಕ ರಾಜಮೌಳಿ ಸೇರಿದಂತೆ ಚಿತ್ರದ ತಾರೆಯರು ಹಾಗೂ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಟ್ರೈಲರ್‌ ಶೇರ್‌ ಮಾಡಿದ್ದಾರೆ.

ಇತ್ತೀಚೆಗೆ ತೆರೆಕಂಡ ಚಿತ್ರದ ‘ನಾಟು ನಾಟುʼ ವೀಡಿಯೋ ಸಾಂಗ್‌ ಮತ್ತು ಡ್ಯಾನ್ಸ್‌ ಸಿನಿಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿಗೆ ಹೆಜ್ಜೆ ಹಾಕಿ ಕುಣಿದಿರುವ ಸಿನಿಪ್ರಿಯರ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮುನ್ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿಬ್ರಿಟಿಷ್‌ ನಟಿ ಒಲಿವಿಯಾ ಮೊರಿಸ್, ಹಾಲಿವುಡ್ ನಟ ರೇ ಸ್ಟೀವನ್‌ಸನ್‌, ಐರಿಷ್ ನಟ ಅಲಿಸನ್ ಡೂಡಿ ಇದ್ದಾರೆ. ತೆಲುಗು ಬುಡಕಟ್ಟು ನಾಯಕರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮಾರಂ ಭೀಮ್‌ ಅವರ ಕತೆಗಳಿಗೆ ಕಲ್ಪನೆ ಬೆರೆಸಿ ಮಾಡುತ್ತಿರುವ ಸಿನಿಮಾ ‘RRR’. ರಾಮ್ ಚರಣ್ ಅವರು ಅಲ್ಲೂರಿ ಸೀತಾರಾಮ ಪಾತ್ರದಲ್ಲಿದ್ದರೆ ಜ್ಯೂನಿಯರ್ ಎನ್‌ಟಿಆರ್ ಕೊಮಾರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. ಮೂಲ ತೆಲುಗು ಮತ್ತು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳಲ್ಲಿ ಜನವರಿ 7ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here