ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ಈ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘RRR’ ಬಿಡುಗಡೆ ಮುಂದೂಡಲಾಗುತ್ತದೆ ಎನ್ನುವ ವದಂತಿಗಳಿವೆ. ಚಿತ್ರದ ನಿರ್ದೇಶಕ ರಾಜಮೌಳಿ ವದಂತಿಗಳನ್ನು ಅಲ್ಲಗಳೆದಿದ್ದಾರೆ.
ಒಮಿಕ್ರಾನ್ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಕೆಲವೆಡೆ ನೈಟ್ ಕರ್ಫ್ಯೂ ಹೇರಲಾಗಿದೆ. ದಿಲ್ಲಿಯಲ್ಲಿ ನಿನ್ನೆಯಿಂದ ಯೆಲ್ಲೋ ಅಲರ್ಟ್ ಘೋಷಣೆಯಾಗಿದ್ದು, ಅಲ್ಲಿ ಚಿತ್ರಮಂದಿರಗಳು ಮುಚ್ಚಿವೆ. ಈ ಪರಿಸ್ಥಿತಿ ಗಮನಿಸಿ ಶಾಹೀದ್ ಕಪೂರ್ ನಟನೆಯ ‘ಜರ್ಸೀ’ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯ್ತು. ಡಿಸೆಂಬರ್ 31ಕ್ಕೆ ತೆರೆಕಾಣಬೇಕಿದ್ದ ಸಿನಿಮಾ ಸದ್ಯಕ್ಕೆ ಥಿಯೇಟರ್‌ಗೆ ಬರುತ್ತಿಲ್ಲ. ‘RRR’ ಚಿತ್ರವೂ ಮುಂದಕ್ಕೆ ಹೋಗಬಹುದು ಎನ್ನುವ ವದಂತಿಯಿದ್ದು, ರಾಜಮೌಳಿ ಇದನ್ನು ಅಲ್ಲಗಳೆದಿದ್ದಾರೆ. ರಾಮ್ ಚರಣ್ ತೇಜಾ, ಅಲಿಯಾ ಭಟ್, ಜ್ಯೂನಿಯರ್ ಎನ್‌ಟಿಆರ್, ಅಜಯ್ ದೇವಗನ್ ನಟನೆಯ ಸಿನಿಮಾ ಈಗಾಗಲೇ ನಿರ್ಧರಿಸಿದಂತೆ 2022ರ ಜನವರಿ 7ರಂದು ತೆರೆಕಾಣಲಿದೆ. ಸ್ವತಃ ನಿರ್ದೇಶಕ ರಾಜಮೌಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
‘RRR’ ಚಿತ್ರತಂಡ ಪ್ರೊಮೋಷನ್‌ನಲ್ಲಿ ಸಂಪೂರ್ಣ ಬ್ಯುಸಿಯಾಗಿದೆ. ದೇಶದ ಮೆಟ್ರೋ ನಗರಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡ ಬಿಗ್‌ಬಾಸ್, ಕಪಿಲ್ ಶರ್ಮಾ ಶೋನಲ್ಲೂ ಭಾಗವಹಿಸಿದೆ. ಸದ್ಯ ತಿರುವನಂತಪುರಂನಲ್ಲಿ ಪ್ರಮೊಷನ್ ನಡೆಸುತ್ತಿದೆ. ಚಿತ್ರಕ್ಕೆ ದೊಡ್ಡ ಮಟ್ಟದ ಆರಂಭ ಸಿಗುವುದೇನೋ ಹೌದು. ಆದರೆ ಒಮಿಕ್ರಾನ್ ಕೇಸ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲೆಲ್ಲಾ ಥಿಯೇಟರ್‌ಗಳಲ್ಲಿ ರಾತ್ರಿ ಶೋಗಳು ಇರುವುದಿಲ್ಲ. ಮುಂದಿನ ವಾರದ ಹೊತ್ತಿಗೆ ಏನೇನೆಲ್ಲಾ ಬದಲಾವಣೆಗಳಾಗಲಿವೆ ಎನ್ನುವುದನ್ನು ನೋಡಬೇಕಿದೆ. ಮೂಲ ತೆಲುಗು ಭಾಷೆಯ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘RRR’ ತೆರೆಕಾಣಲಿದೆ.