ಆನಂದ್ ದೇವರಕೊಂಡ ನಟನೆಯ ತೆಲುಗು ಕಾಮಿಡಿ ಸಿನಿಮಾ ‘ಪುಷ್ಪಕ ವಿಮಾನಂ’ ನಾಳೆ ತೆರೆಕಾಣುತ್ತಿದೆ. ಅವರ ಸಹೋದರ, ನಟ ವಿಜಯ್ ದೇವರಕೊಂಡ ಈ ಚಿತ್ರ ನಿರ್ಮಿಸಿದ್ದಾರೆ. ದಾಮೋದರ್ ನಿರ್ದೇಶನದ ಚಿತ್ರದ ನಾಯಕಿಯಾಗಿ ಗೀತಾ ಸೈನಿ ನಟಿಸಿದ್ದಾರೆ.

‘ಅರ್ಜುನ್ ರೆಡ್ಡಿ’ ತೆಲುಗು ಸಿನಿಮಾ ಖ್ಯಾತಿಯ ಹೀರೋ ವಿಜಯ್ ದೇವರಕೊಂಡ ಅವರ ಕಿರಿಯ ಸಹೋದರ ಆನಂದ್ ದೇವರಕೊಂಡ. ಅಣ್ಣನಂತೆ ತಾವೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಆನಂದ್‌ರ ‘ಮಿಡ್ಲ್ ಕ್ಲಾಸ್ ಮೆಲೋಡೀಸ್‌’ ತೆಲುಗು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ಈಗ ವಿಜಯ್ ಅವರು ಸಹೋದರನಿಗಾಗಿ ‘ಪುಷ್ಪಕ ವಿಮಾನಂ’ ಸಿನಿಮಾ ನಿರ್ಮಿಸಿದ್ದಾರೆ. ನಾಳೆ ಈ ಸಿನಿಮಾ ತೆರೆಕಾಣುತ್ತಿದ್ದು, ಸಹೋದರನ ಸಿನಿಮಾ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ ವಿಜಯ್. ಕಳೆದೆರೆಡು ವಾರಗಳಿಂದ ಸಿನಿಮಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ವಿಜಯ್‌ ಈ ಬಾರಿ ಸಹೋದರನಿಗೆ ಗೆಲುವು ಸಿಗುತ್ತದೆ ಎನ್ನುವ ಉಮೇದಿನಲ್ಲಿದ್ದಾರೆ.

ಇದೊಂದು ಫ್ಯಾಮಿಲಿ ಎಂಟರ್‌ಟೇನರ್‌ ಎನ್ನಲಾಗಿದ್ದು ಚಿತ್ರದಲ್ಲಿ ಆನಂದ್‌ ಸರ್ಕಾರಿ ಶಾಲೆ ಶಿಕ್ಷಕನ ಪಾತ್ರ ನಿರ್ವಹಿಸುತ್ತಿದ್ದಾರೆ. ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಮದುವೆ ನಂತರ ಆತ ಎದುರಿಸುವ ಸಮಸ್ಯೆಗಳೇ ಚಿತ್ರದ ಕಥಾವಸ್ತು. ಹಾಸ್ಯನಟ ಸುನೀಲ್‌ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದು, ಇದು ಚಿತ್ರದ ಪ್ರಮುಖ ಪಾತ್ರ. ಗೀತಾ ಸೈನಿ ಚಿತ್ರದ ನಾಯಕಿ. ಮೊನ್ನೆ ಬಿಡುಗಡೆಯಾದ ಚಿತ್ರದ ಟ್ರೈಲರ್‌ನಲ್ಲಿ ಸಿನಿಪ್ರಿಯರಿಗೆ ಕತೆಯ ಪರಿಚಯ ಸಿಕ್ಕಿದೆ. ವಿಜಯ್‌ ಟ್ವಿಟರ್‌ನಲ್ಲಿ ನಿರಂತರವಾಗಿ ಈ ಚಿತ್ರದ ಬಗ್ಗೆ ಟ್ವೀಟ್‌ ಮಾಡುತ್ತಿದ್ದು, ಪ್ರೀಮಿಯರ್ ಶೋ ಕುರಿತು ಮಾಹಿತಿ ನೀಡಿದ್ದಾರೆ. ಇನ್ನು ವಿಜಯ್ ದೇವರಕೊಂಡ ಅವರ ‘ಲಿಗರ್‌’ ಜಾರಿಯಲ್ಲಿದೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ನಾಯಕಿ ಅನನ್ಯಾ ಪಾಂಡೆ.

LEAVE A REPLY

Connect with

Please enter your comment!
Please enter your name here