ಮೇಕೆ ದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿನಿಮಾ ನಟಿಯರಾದ ಉಮಾಶ್ರೀ, ಜಯಮಾಲಾ, ನಟರಾದ ದುನಿಯಾ ವಿಜಯ್, ಸಾಧು ಕೋಕಿಲ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ಕಾರದ ಕೋವಿಡ್ ನಿಮಯ ಉಲ್ಲಂಘಿಸಿದ ಆರೋಪ ಅವರ ಮೇಲಿನದ್ದು.
ಮೇಕೆ ದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಮೊನ್ನೆ ಕಾರ್ಯಕ್ರಮದ ಉದ್ಘಾಟನೆಯಂದು ಹಲವು ಸಿನಿಮಾ ನಟ-ನಟಿಯರು ಪಾಲ್ಗೊಂಡಿದ್ದರು. ರಾಜಕೀಯದಲ್ಲೂ ಸಕ್ರಿಯರಾಗಿರುವ ನಟಿಯರಾದ ಉಮಾಶ್ರೀ, ಜಯಮಾಲಾ ಮತ್ತು ನಟರಾದ ದುನಿಯಾ ವಿಜಯ್, ಸಾಧುಕೋಕಿಲ, ನಿರ್ಮಾಪಕ ಸಾ.ರಾ.ಗೋವಿಂದು ಅಂದು ಪಾದಯಾತ್ರೆ ನಡೆಸಿದ್ದರು. ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೂವತ್ತಕ್ಕೂ ಹೆಚ್ಚು ಪ್ರಮುಖರ ಮೇಲೆ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಹೇರಿತ್ತು. ಈ ಸಂದರ್ಭದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರ ಜೊತೆ ಸಿನಿಮಾ ತಾರೆಯರ ಮೇಲೂ ದೂರು ದಾಖಲಾಗಿದೆ. ಚಿತ್ರರಂಗದ ಕಡೆಯಿಂದ ಮೇಕೆ ದಾಟು ಯೋಜನೆಗೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲವಿದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಹೇಳಿಕೆ ಕೊಟ್ಟಿತ್ತು. ಈ ಹೇಳಿಕೆ ಕುರಿತಂತೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದಿದ್ದವು. ನಟ ಶಿವರಾಜಕುಮಾರ್ ಪಾದಯಾತ್ರೆ ಉದ್ಥಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಕೊನೆಯ ಹಂತದಲ್ಲಿ ಅವರು ಈ ನಿರ್ಧಾರದಿಂದ ಹಿಂದೆ ಸರಿದು ತಟಸ್ಥರಾಗಿ ಉಳಿದರು.