ಅವಳ ಬದುಕಿನಲ್ಲಿ ಎಲ್ಲವೂ ಇದೆ. ಬುದ್ದಿವಂತಿಕೆ, ರೂಪ, ಸಿರಿತನ, ಒಳ್ಳೆಯ ಗೆಳೆಯರು, ಪ್ರೇಮಿ, ಸ್ಥಾನಮಾನ ಎಲ್ಲವೂ. ಆದರೆ “ನಾನು ತುಂಬಾ ಪ್ರಾಕ್ಟಿಕಲ್” ಎಂಬ ಧೋರಣೆಯಿಂದಲೇ ಅವಳು ಬದುಕನ್ನು ತನ್ನದೇ ದೃಷ್ಟಿಯಿಂದ ನೋಡಲು ಶುರುಮಾಡುತ್ತಾಳೆ – ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ‘ಆಮ್ಹಿ ಧೋಗಿ’ ಮರಾಠಿ ಸಿನಿಮಾ.
“ನಾನು ಮನೆಗೆ ಹೋಗಿ ನನ್ನ ಅಮ್ಮನನ್ನು ತಬ್ಬಿ ಮುತ್ತಿಡಬೇಕನಿಸ್ತಿದೆ. ಹೇ ಸಾರಿ. ನಿನಗೆ ಅಮ್ಮ ಇಲ್ಲ ಅಲ್ವ? ನಾನಿದೆಲ್ಲ ಹೇಳಿದ್ರೆ ನಿನಗೆ ಬೇಜಾರಾಗಬಹುದು” ಶಾಲೆಯ ಪೋರಿಯೊಬ್ಬಳು ಸ್ಕೂಲ್ ವ್ಯಾನಿನಲ್ಲಿ ಕೂತು ಗೆಳತಿಗೆ ಹೇಳುತ್ತಾಳೆ. ಆ ಹುಡುಗಿ ಸ್ವಲ್ಪವೂ ವಿಚಲಿತಳಾಗದೇ, “ನನಗೇನೂ ಬೇಜಾರಿಲ್ಲ. ನನ್ನ ಅಮ್ಮ ಹೇಗಿದ್ಲು ಅಂತಾನೇ ನಾನು ನೋಡಿಲ್ಲ. ನನಗೇನೂ ಅನ್ಸೋದಿಲ್ಲ” ಅನ್ನುತ್ತಾಳೆ. ಅವಳೇ ನಮ್ಮ ಕಥಾನಾಯಕಿ ಸಾವಿತ್ರಿ ಸರ್‌ದೇಸಾಯಿ. “ನಾನು ಎಮೋಷನಲ್ ಫೂಲ್ ಅಲ್ಲ, ನಾನು ತುಂಬಾ ಪ್ರಾಕ್ಟಿಕಲ್” ಅಂತ ಹೇಳುತ್ತಲೇ ಇರುವವಳ ಕಥಾನಕವೇ ‘ಆಮ್ಹಿ ಧೋಗಿ’.
ಯಾವ ಕಾರಣಕ್ಕೂ ಎರಡನೇ ಮದುವೆ ಆಗುವುದಿಲ್ಲ ಅನ್ನುತ್ತಿದ್ದ ಅಪ್ಪ, ಇದ್ದಕ್ಕಿದ್ದಂತೆಯೇ ಮದುವೆಯಾಗಿ ಬರುತ್ತಾನೆ. ಅದೂ ಅವಳು 10ನೇ ಕ್ಲಾಸಿನ ಹುಡುಗಿಯಾಗಿದ್ದಾಗ. ಅವಳು ಕೂಗಾಡುವುದಿಲ್ಲ. ಎಮೋಷನಲ್ ಆಗುವುದಿಲ್ಲ. ಆದರೆ ಪ್ರಪಂಚದಲ್ಲಿ ಓದೋಕೆ ಬರೆಯೋಕೆ ಬರದಿರೋರೂ ಇರ್ತಾರೆ ಅಂತ ಅಮ್ಮಿ ಎಂಬ ಅಪ್ಪನ ಹೊಸ ಹೆಂಡತಿಯನ್ನು ನೋಡಿ ಅಚ್ಚರಿಪಡುತ್ತಾಳೆ. ಮನೆ ಬಿಡುತ್ತಾಳೆ.
ಅವಳ ಬದುಕಿನಲ್ಲಿ ಎಲ್ಲವೂ ಇದೆ. ಬುದ್ದಿವಂತಿಕೆ, ರೂಪ, ಸಿರಿತನ, ಒಳ್ಳೆಯ ಗೆಳೆಯರು, ಪ್ರೇಮಿ, ಸ್ಥಾನಮಾನ ಎಲ್ಲವೂ. ಆದರೆ “ನಾನು ತುಂಬಾ ಪ್ರಾಕ್ಟಿಕಲ್” ಎಂಬ ಧೋರಣೆಯಿಂದಲೇ ಅವಳು ಬದುಕನ್ನು ತನ್ನದೇ ದೃಷ್ಟಿಯಿಂದ ನೋಡಲು ಶುರುಮಾಡುತ್ತಾಳೆ. ಆ ದೃಷ್ಟಿಯೇ ಅವಳ ಬದುಕಿನ ದಿಕ್ಕುಗಳನ್ನು ಬದಲಿಸುತ್ತಾ ಹೋಗುತ್ತದೆ. ಪ್ರೇಮಿಸಿದ ಹುಡುಗ ಮದುವೆಯಾಗು ಅಂದರೆ ‘ಪ್ರೇಮ ವೈಯಕ್ತಿಕ. ಮದುವೆ ಸಾಮಾಜಿಕ’ ಅನ್ನುತ್ತಾಳೆ. ಒಂಟಿತನವನ್ನೂ, ಅದು ಕಟ್ಟಿಕೊಡುವ ತನ್ನದೇ ಜಗತ್ತನ್ನು ಅವಳು ಪ್ರೀತಿಸುತ್ತಾಳೆ. ಮೇಲೆ ಜಾಣತನ, ಗೋಲ್ಡ್ ಮೆಡಲೂ. ಇದನ್ನೆಲ್ಲ ಬೇರೆಲ್ಲದಕ್ಕಿಂತ ತುಸು ಹೆಚ್ಚೇ ಪ್ರೀತಿಸಿಬಿಡುತ್ತಾಳೆ.
ನನಗಿಷ್ಟವಿಲ್ಲ ಅನ್ನುತ್ತಲೇ ಮುನ್ನುಗ್ಗುತ್ತಾಳೆ, ಗೆಲ್ಲುತ್ತಾಳೆ. ಆದರೆ ನಿಜಕ್ಕೂ ಗೆದ್ದೆನಾ? ತನ್ನ ಧೋರಣೆಗಳಿಂದಾಗಿ ಕಳೆದುಕೊಂಡದ್ದೆಷ್ಟು? ಪಡೆದುಕೊಂಡದ್ದೆಷ್ಟು ಅಂತ ಅವಳನ್ನು ಪ್ರಶ್ನಿಸುವುದು ಅದೇ ಅನಕ್ಷರಸ್ಥ ಅಮ್ಮಿ. ಅವಳು ಎಲ್ಲರಿಗೂ ಮುಲಾಜಿಲ್ಲದೇ ನನ್ನ ಮಲತಾಯಿ ಅಂತ ಪರಿಚಯಿಸುತ್ತಿದ್ದವಳು. ಪ್ರೇಮ ಮುರಿದಾಗಲೂ ಮನಸು ಗಟ್ಟಿಮಾಡಿಕೊಳ್ಳುವ ಅವಳನ್ನು ಮಲತಾಯಿಯ ಕಡೆಯ ಮಾತುಗಳು ಬ್ರೇಕ್‍ಡೌನ್ ಆಗುವಂತೆ ಮಾಡುತ್ತವೆ.
“ನಾನು ಹಠ, ಮೊಂಡುತದೊಂದಿಗೆ ಮುನ್ನಲೆಯಲ್ಲಿದ್ದೆ. ಅಮ್ಮ ನನ್ನೊಂದಿಗೆ ಮೌನದ ಹಿನ್ನೆಲೆಯಾಗಿದ್ದಳು” ಅನ್ನುವ ಸಾವಿತ್ರಿಗೆ ಬುದ್ದಿವಂತಿಕೆಗಿಂತ ಹೃದಯವಂತಿಕೆಯ ತೂಕವೇ ಹೆಚ್ಚೆಂದು ಅರ್ಥವಾಗುತ್ತವಲ್ಲಿಗೆ ಸಿನೆಮಾ ಮುಗಿಯುತ್ತದೆ. ಅವಳೇಕೆ ಅಷ್ಟು ಕಡ್ಡಿತುಂಡಾದಂತೆ ಮಾತಾಡುವವಳಾದಳು? ಅಮ್ಮನಿಲ್ಲದ ಬಾಲ್ಯ ಹಾಗೆ ಮಾಡಿತಾ? ಬುದ್ದಿ ಇಲ್ದೆ ಇರೋರನ್ನ ನಿಕೃಷ್ಟವಾಗಿ ನೋಡುವವರು ನಮ್ಮ ಸುತ್ತಲೂ ಇರುತ್ತಾರೆ. ನಮ್ಮ ಬುದ್ದಿವಂತಿಕೆಗೆ ಅಹಂಕಾರವೂ ಸೇರಿದ ಗಳಿಗೆಯಲ್ಲಿ ಬದುಕು ತನ್ನದೇ ರೀತಿಯಲ್ಲಿ ಪಾಠಗಳನ್ನು ಕಲಿಸುತ್ತದಾ? ಎಂಬೆಲ್ಲ ಪ್ರಶ್ನೆಗಳು ಕಾಡತೊಡಗಿದವು. ಪ್ರತಿಮಾ ಜೋಶಿ ನಿರ್ದೇಶನದ ತಮ್ಮ ಮೊದಲ ಯತ್ನದಲ್ಲೇ ಗೆದ್ದಿದ್ದಾರೆ. ಚಿಕ್ಕಮ್ಮನಾಗಿ ಮುಕ್ತಾ ಬಾರ್ವೆ. ಮಗಳಾಗಿ ಪ್ರಿಯಾ ಬಾಪಟ್ ಚೆಂದದ ಅಭಿನಯ ನೀಡಿದ್ದಾರೆ.