ಮೊದಲಾರ್ಧದಲ್ಲಿ ಆಂಟನಿ ಕುಟುಂಬ ಅನುಭವಿಸುವ ಕಷ್ಟಗಳು ಪ್ರೇಕ್ಷಕರಲ್ಲಿ ಕರುಣೆ ಹುಟ್ಟಿಸುತ್ತವೆ. ಫ್ಲಾಶ್ಬ್ಯಾಕ್ ತೆರೆದುಕೊಳ್ಳುತ್ತಿದ್ದಂತೆ ಆಕ್ಷನ್ – ಡ್ರಾಮಾ ಕತೆ ಬಿಚ್ಚಿಕೊಳ್ಳುತ್ತದೆ. ಮಾಸ್ ಎಲಿಮೆಂಟ್ಸ್ ನೋಡಲಿಚ್ಛಿಸುವವರಿಗೆ ಇಷ್ಟವಾಗಬಹುದು. ‘ಕಾವಲ್’ ಮಲಯಾಳಂ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಎಲ್ಲಾ ಕಥೆಗಳು ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಒಬ್ಬ ರಾಜ ಇದ್ದನೆಂದು ಶುರುವಾಗುತ್ತವೆ. ಈ ಸಿನಿಮಾದಲ್ಲಿ ಒಬ್ಬನಲ್ಲ ಇಬ್ಬರಿದ್ದಾರೆ. ತಂಬಾನ್ ಮತ್ತು ಆಂಟನಿ. ಊರಲ್ಲಿ ನೆಡೆಯೋ ಅನ್ಯಾಯದ ವಿರುದ್ದ ತೊಡೆತಟ್ಟಿ ನಿಲ್ಲುವಂತ ಧೀರರು. ಇವರೆದುರು ಹಣ, ಅಧಿಕಾರ ದರ್ಪ ನಡೆಯದು. ಒದ್ದು ಬುದ್ಧಿ ಹೇಳೋದು, ಅನ್ಯಾಯ ಆದವರಿಗೆ ನ್ಯಾಯ ಒದಗಿಸುವುದು ಇವರ ಕರ್ತವ್ಯ. ಹೀಗೆ ಊರಿನ ಬಡವರಿಗೆ ಬೇಕಾದ, ಶ್ರಿಮಂತರಿಗೆ ಬೇಡವಾಗಿರುವಂತಹ ವ್ಯಕ್ತಿತ್ವದವರಾದ ಇವರಿಗೆ ಅದು ಹೇಗೋ ಊರಿನ ಸಿರಿವಂತನ ಕೈಗೊಂಬೆಯಂತಾಗಿರುವ ಪೋಲಿಸರು ತಿರುಗಿ ಬೀಳುತ್ತಾರೆ.
ಈ ಗಲಾಟೆಯಲ್ಲಿ ಆಂಟನಿ ತನ್ನ ಕಾಲಿನ ಸ್ವಾದೀನ ಕಳೆದುಕೊಳ್ಳುತ್ತಾನೆ. ತಂಬಾನ್, ಆಂಟನಿಯಿಂದ ದೂರಾಗುವಂತಹ ಸಂದರ್ಭ ಎದುರಾಗುತ್ತದೆ. ಹಲವು ವರ್ಷಗಳ ನಂತರ ವಯಸ್ಸಾದ ಆಂಟನಿ ಕುಟುಂಬ ಸಂಕಷ್ಟಕ್ಕೀಡಾಗಿ ಹಳೇ ಸಾಲ ಉರುಳಾಗಿ ಕಾಡುತ್ತದೆ. ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲಾಗಂತಹ ಅಸಹಾಯಕ ಸ್ಥಿತಿಗೆ ತಲುಪಿರುವ ಆಂಟನಿಯ ಸಾವಾಗುತ್ತದೆ. ಆಂಟನಿ ಮಗಳ ಮೇಲೆ ಕಣ್ಣಿಟ್ಟಿದ್ದ ಸಾಲಗಾರ ಹೀನಾಯವಾಗಿ ನೆಡೆದುಕೊಳ್ಳತೊಡಗುತ್ತಾನೆ. ಆಕೆ ದುಃಸ್ಥಿತಿ ಎದುರಿಸಲಾಗದೆ ಆತ್ಮಹತ್ಯೆ ಪ್ರಯತ್ನ ಮಾಡುತ್ತಾಳೆ. ನಂತರ ಆಂಟನಿ ಪುತ್ರ ಪರಊರಿನಲ್ಲಿದ್ದ ತಂಬಾನ್ನನ್ನು ಬೇಟಿಯಾಗುತ್ತಾನಾದರೂ, ಬಿಟ್ಟು ಬಂದ ಆ ಊರಿಗೆ ಬರಲು ತಂಬಾನ್ ನಿರಾಕರಿಸುತ್ತಾನೆ. ನಂತರ ಏನಾಗುತ್ತದೆ? ತಂಬಾನ್ ಊರಿಗೆ ಬಂದು ಕುಟುಂಬಕ್ಕೆ ಕಾವಲಾಗಿ ನಿಲ್ಲುತ್ತಾನೆಯೇ? ಕತೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದೇ ಸಿನಿಮಾದ ವಸ್ತು.
ಕೋಪಾವೇಷ, ಆಕ್ರೋಷದ ತಂಬನ್ ಪಾತ್ರಕ್ಕೆ ಸುರೇಸ್ ಗೋಪಿ ನ್ಯಾಯ ಸಲ್ಲಿಸಿದ್ದಾರೆ. ಆರಂಭದ ಕೆಲ ಹೊತ್ತಿನಲ್ಲಿ ಪಾತ್ರ ಪರಿಚಯವಾಗುತ್ತಲೇ ವೀಕ್ಷಕರಿಗೆ ಪಾತ್ರಗಳ ಉದ್ದೇಶ ಅರ್ಥವಾಗಿಬಿಡುತ್ತದೆ. ಅದರ ನಡುವೆಯೇ ಯೌವ್ವನದಲ್ಲಿ ಹುಟ್ಟಿಕೊಂಡಿದ್ದ ವೈರತ್ವ ಹಾಗೂ ಆಂಟೋನಿಯ ಸಾವಿನ ನಿಗೂಢತೆ ತೆರೆದುಕೊಳ್ಳುವುದರಿಂದ ಕುತೂಹಲಕ್ಕೆ ಮರುಜೀವ ಸಿಗುತ್ತದೆ. ಚಿತ್ರ ಕನೆಕ್ಟ್ ಆದರೆ, ಕಷ್ಟ ಕಂಡು ಮರುಗುವ ಪ್ರೇಕ್ಷಕರು ಆಕ್ಷನ್ ಸೀಕ್ವೆನ್ಸ್ಗಳನ್ನೂ ಇಷ್ಟಪಡಬಲ್ಲರು. ಚಿತ್ರದಲ್ಲಿ ಶೃಂಗಾರ ದೃಶ್ಯಗಳಿಲ್ಲವಾದರೂ ಸುಂದರಿ ಝಯಾ ಡೇವಿಡ್ ನೆನಪಿನಲ್ಲುಳಿಯುತ್ತಾರೆ.