ಮರುಭೂಮಿಯಲ್ಲಿ ನಜೀಬನ ಬದುಕು ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವ ಅವನ ಯತ್ನವೇ ‘ಆಡುಜೀವಿತಂ’ ಮಲಯಾಳಂ ಸಿನಿಮಾದ ಮುಖ್ಯ ಕಥಾ ಹಂದರ. ನಿರ್ದೇಶಕ ಬೆಸ್ಲೀ ಚಿತ್ರದ ಮೊದಲ ಭಾಗವನ್ನು ಫ್ಲಾಷ್‌ಬ್ಯಾಕ್ ತಂತ್ರದ ಜೊತೆ ನಿರೂಪಿಸಿದ್ದಾರೆ. ನಜೀಬನಿಗೆ ಚಿರಪರಿಚಿತವಾದ, ಸದಾ ಮಳೆ ಸುರಿಯುವ, ಹಸಿರು ಮೆತ್ತಿದ ಶ್ರೀಮಂತ ಪ್ರಕೃತಿಯನ್ನು, ಆತನಿಗೆ ಸಂಪೂರ್ಣ ಅಪರಿಚಿತವಾದ, ಬಿಸಿಯುಗುಳುವ, ಮರುಭೂಮಿಯ ವಿಪರೀತ ಪ್ರಕೃತಿಯ ಜೊತೆಗೆ ಅಕ್ಕ ಪಕ್ಕ ಇಡುತ್ತಾರೆ. ಎ ಆರ್ ರೆಹಮಾನ್ ಸಂಗೀತ ಸಿನಿಮಾದ ದೃಶ್ಯಗಳನ್ನು ಹೆಚ್ಚು ಗಾಢವಾಗಿಸಿದೆ. ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ.

ಬೆನ್ಯಾಮಿನ್ ರಚಿಸಿರುವ ನೈಜ್ಯ ಘಟನೆ ಆಧಾರಿತ ಕಾದಂಬರಿ ಆಡುಜೀವಿತಂ ಮಲಯಾಳಂ ಭಾಷೆಯ ಅತ್ಯಂತ ಜನಪ್ರಿಯ ಕೃತಿ. ಅತೀ ಹೆಚ್ಚು ಮರುಮುದ್ರಣ ಕಂಡಿರುವ ಮತ್ತು ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಕಾದಂಬರಿ. ಕಾದಂಬರಿ ಓದಿದಾಗಿನಿಂದಲೇ ಅದನ್ನು ಚಲನಚಿತ್ರವಾಗಿಸುವ ಯತ್ನದಲ್ಲಿದ್ದ ನಿರ್ದೇಶಕ ಬ್ಲೆಸ್ಸೀಯವರ ಕನಸು ಸುದೀರ್ಘ 16 ವರ್ಷಗಳ ಶ್ರಮದ ಬಳಿಕ ನನಸಾಗಿದೆ. ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿರುವ ‘ಆಡುಜೀವಿತಂ – ದಿ ಗೋಟ್ ಲೈಫ್’ ಈಗ ತೆರೆಕಂಡಿದೆ.

ನಮ್ಮ ದೇಶದ ಅದರಲ್ಲೂ ಕೇರಳದ ಬಹುತೇಕ ಶ್ರಮಜೀವಿಗಳಂತೆ ನಜೀಬನಿಗೂ ಗಲ್ಫ್ ದೇಶಕ್ಕೆ ಹೋಗಿ, ಒಂದಷ್ಟು ಕಾಲ ಕಷ್ಟಪಟ್ಟು ದುಡಿದು, ತನ್ನ ಸ್ವಂತ ಊರಲ್ಲೊಂದು ಚೆಂದದ ಬದುಕು ಕಟ್ಟಿಕೊಳ್ಳುವ ಕನಸು. ಅದಕ್ಕಾಗಿಯೇ ಹಸಿರಿನಿಂದ ನಳನಳಿಸುವ ಕೇರಳವನ್ನು ತೊರೆದು, ವಯಸ್ಸಾದ ಅಮ್ಮ, ಗರ್ಭಿಣಿ ಹೆಂಡತಿಯನ್ನು ಬಿಟ್ಟು ದೂರದ ಮರಳುಗಾಡಿನ ದೇಶಕ್ಕೆ ಕಾರ್ಮಿಕನಾಗಿ ಹೋಗುತ್ತಾನೆ. ತನ್ನದೇ ಊರಿನ ಹದಿವಯಸ್ಸಿನ ಹಕೀಮನ ಜೊತೆ ಸೌದಿ ಅರೇಬಿಯಾಕ್ಕೆ ಬಂದಿಳಿದ ನಜೀಬನ ಬದುಕು ಬೇರೆಯೇ ತಿರುವು ಪಡೆದುಕೊಳ್ಳುತ್ತದೆ. ಮಲಯಾಳಂ ಬಿಟ್ಟರೆ ಬೇರೆ ಭಾಷೆ ಅರಿಯದ ನಜೀಬ, ಕಣ್ಣು ಕಾಣುವವರೆಗೂ ವಿಸ್ತರಿಸಿರುವ, ಸಾಗರದಂತೆ ಕೊನೆಯೇ ಇಲ್ಲದ ಮರಳಿನ ಲೋಕದಲ್ಲಿ ಬಂಧಿಯಾಗುತ್ತಾನೆ. ಶ್ರಮ ಜೀವನವನ್ನು ನಿರೀಕ್ಷಿಸಿ ಬಂದವನು ಜೀತದಾಳಾಗುತ್ತಾನೆ.

ಮರುಭೂಮಿಯಲ್ಲಿ ನಜೀಬನ ಬದುಕು ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವ ಅವನ ಯತ್ನವೇ ‘ಆಡುಜೀವಿತಂ’ನ ಮುಖ್ಯ ಕಥಾ ಹಂದರ. ಬೆಸ್ಲೀ, ಚಿತ್ರದ ಮೊದಲ ಭಾಗವನ್ನು ಫ್ಲಾಷ್‌ಬ್ಯಾಕ್ ತಂತ್ರದ ಜೊತೆ ನಿರೂಪಿಸಿದ್ದಾರೆ. ನಜೀಬನಿಗೆ ಚಿರಪರಿಚಿತವಾದ, ಸದಾ ಮಳೆ ಸುರಿಯುವ, ಹಸಿರು ಮೆತ್ತಿದ ಶ್ರೀಮಂತ ಪ್ರಕೃತಿಯನ್ನು, ಆತನಿಗೆ ಸಂಪೂರ್ಣ ಅಪರಿಚಿತವಾದ, ಬಿಸಿಯುಗುಳುವ, ಮರುಭೂಮಿಯ ವಿಪರೀತ ಪ್ರಕೃತಿಯ ಜೊತೆಗೆ ಅಕ್ಕ ಪಕ್ಕ ಇಡುತ್ತಾರೆ. ನದಿಯಿಂದ ಮರಳು ತೆಗೆದು ಜೀವನ ಸಾಗಿಸುತ್ತಿದ್ದ ನಜೀಬನಿಗೆ ಊರಿನಲ್ಲಿ ಮರಳು ಜೀವನಾಧಾರವಾಗಿದ್ದರೆ, ಪರದೇಶದಲ್ಲಿ ಅದೇ ಮರಳು ಜೀವ ಹಿಂಡುವ ಶಾಪವಾಗುತ್ತದೆ.

ಕೇರಳದ ತಂಪು ಮರಳು, ಸೌದಿಯ ಕಾದ ಮರಳಾಗುವ, ಸೌದಿಯಲ್ಲಿ ಅಕಸ್ಮಾತಾಗಿ ಚೆಲ್ಲಿದ ನೀರು ಕೇರಳದಲ್ಲಿ ತುಂಬಿದ ನದಿಯಾಗಿ ಹರಿಯುವಂತಹ ದೃಶ್ಯ ಸಂಯೋಜನೆಗಳ ಮೂಲಕ ಎರಡು ಪ್ರಪಂಚಗಳ ನಡುವೆ ಇರುವ ವೈರುಧ್ಯವನ್ನು ನಿರ್ದೇಶಕರು ಎತ್ತಿ ತೋರಿಸುತ್ತಾರೆ. ಆ ಮೂಲಕವೇ ನಜೀಬನ ಚೆಂದದ ಊರಿನ, ಮುದ್ದಿನ ಮಡದಿಯ, ಅಕ್ಕರೆಯ ಅಮ್ಮನ ಕತೆ ಹೇಳುತ್ತಾರೆ. ಆ ಬಳಿಕ ಕತೆ ಪೂರ್ತಿಯಾಗಿ ನಜೀಬನನ್ನೇ ಕೇಂದ್ರವಾಗಿಟ್ಟುಕೊಂಡು ನೇರ ನಿರೂಪಣೆಯಲ್ಲಿ ಸಾಗುತ್ತದೆ. ಉಳಿವಿಗಾಗಿ ಹೋರಾಡುವವನ ಈ ಕತೆಗೆ ಬೆಸ್ಲೀ ಹೆಚ್ಚು ಕಮರ್ಷಿಯಲ್ ಅಂಶಗಳನ್ನು ಸೇರಿಸಿಲ್ಲ. ಹೀಗಾಗಿ, 3 ಗಂಟೆಗಳ ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತದೆ.

ಕತೆ ಬಹುತೇಕ ನಿರೀಕ್ಷಿತ ದಿಕ್ಕಿನಲ್ಲಿ ಸಾಗುತ್ತದೆಯಾದ್ದರಿಂದ ಮತ್ತು ನಿರ್ದೇಶಕರು ಹೊಸ ತಿರುವು, ಹೆಚ್ಚುವರಿ ರೋಚಕತೆ, ಕೌತುಕತೆ ತುಂಬಲು ಯತ್ನಿಸುವುದಿಲ್ಲವಾದ್ದರಿಂದ, ತೆರೆಯ ಮೇಲಿನ ನಾಯಕನ ಬದುಕಂತೆ, ಚಿತ್ರವು ಮುಂದೆ ಸಾಗುತ್ತಾ ತಟಸ್ಥವಾಗಿದೆ ಅನಿಸುವ ಸಾಧ್ಯತೆ ಇದೆ. ಎಷ್ಟರಮಟ್ಟಿಗೆ ಎಂದರೆ ಕೆಲ ಸಂದರ್ಭಗಳಲ್ಲಿ ನಾಯಕನ ಬದುಕಿನ ಏಕತಾನತೆ, ತೆರೆಯನ್ನು ದಾಟಿ ನಮ್ಮನ್ನೂ ಆವರಿಸಿಕೊಂಡು ಬಿಡುತ್ತದೆ. ಇಂತಹ ಸ್ಲೋ ಬರ್ನರ್ ಚಿತ್ರಗಳನ್ನು ಮೆಚ್ಚುವರಿಗೆ ಇದು ಚಿತ್ರದ ಧನಾತ್ಮಕ ಅಂಶವೆನಿಸಬಹುದು. ಆದರೆ, ನಾಯಕನ ಸಾಹಸ ಪ್ರಯಾಣದ ಥ್ರಿಲ್ ಬಯಸಿ ಬಂದವರಿಗೆ ಚಿತ್ರದ ಈ ಓಘ ತೊಂದರೆ ಎನಿಸುವ ಸಾಧ್ಯತೆ ಇದೆ.

ನಾಯಕ ಸೌದಿಗೆ ಹೊರಟ ಕತೆ ಹೇಳಿದ ನಂತರ ನಿರ್ದೇಶಕರ ನಜೀಬನ ಕುಟುಂಬವನ್ನೂ ಸಂಪೂರ್ಣವಾಗಿ ಮರೆತು ಬಿಡುತ್ತಾರೆ. ಆತನ ಅಮ್ಮ ಹಾಗೂ ಹೆಂಡತಿಯ ನೋವನ್ನು, ಅವರ ಪರಿಸ್ಥಿತಿಯನ್ನು ತೋರಿಸುವುದಿಲ್ಲ. ನಿಜ, ನಜೀಬನಿರುವ ಸ್ಥಿತಿಗೆ ಹೋಲಿಸಿದರೆ ಅವರ ಬದುಕು ಸ್ವರ್ಗವೇ ಆದರೂ, ಚಿತ್ರವನ್ನು ಭಾವನಾತ್ಮಕ ಸೂತ್ರವೊಂದರಲ್ಲಿ ಬಂಧಿಸುವಲ್ಲಿ ಈ ಎಳೆ ಸಹಾಯ ಮಾಡುತ್ತಿತ್ತೇನೋ. ಏಕೆಂದರೆ, ಇದು ಸರ್ವೈವಲ್ ಡ್ರಾಮವೇ ಆದರೂ, ಇದರ ಪ್ರಮುಖ ಪಾತ್ರ ನಜೀಬ್ ಇಲ್ಲಿ ‘ನಾಯಕ’ನಲ್ಲ. ಅಂದರೆ, ತನ್ನೂರಿನಲ್ಲಿ ಆತ್ಮವಿಶ್ವಾಸದಲ್ಲಿ ನಳನಳಿಸುವ ನಾಯಕ, ಭಾಷೆ ಗೊತ್ತಿಲ್ಲದ ಪರದೇಶದಲ್ಲಿ ಪೂರ್ತಿ ಕುಗ್ಗಿ ಹೋಗಿರುತ್ತಾನೆ.

ದಾಸ್ಯದಿಂದ ತಪ್ಪಿಸಿಕೊಳ್ಳುವ ಅವನ ಪ್ರಯಾಣದಲ್ಲಿ ಕೂಡ ನಜೀಬನದ್ದು ಮುಂದಾಳಿನ ಪಾತ್ರವಲ್ಲ. ಅವನನ್ನು ಕರೆದೊಯ್ಯುವ ಆತನ ಸಹಚಾರಿ, ಮಾರ್ಗದರ್ಶಕ ಆಫ್ರಿಕನ್ ಮೂಲದ ಇಬ್ರಾಹಿಂ ನಾಯಕನ ಗುಣಗಳನ್ನು ಪ್ರದರ್ಶಿಸುತ್ತಾನೆ. ಹೀಗಾಗಿ, ನಾಯಕನಲ್ಲದ ನಾಯಕನ ಈ ಪ್ರಯಾಣ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಕಾಡುವುದಿಲ್ಲ. ಮುಖ್ಯವಾಗಿ ಈ ಚಿತ್ರ ಒಂದು ವಿಶ್ಯುಯಲ್‌ ಟ್ರೀಟ್. ಗಾಡ್ಸ್‌ ಓನ್ ಕಂಟ್ರಿ ಕೇರಳದ ಸೌಂದರ್ಯವನ್ನು ಕಣ್ಣು ತಂಪಾಗುವಂತೆ ಸೆರೆಹಿಡಿಯಲಾಗಿದೆಯಾದರೂ, ನೆನಪಿನಲ್ಲಿ ಉಳಿಯುವುದು, ರುದ್ರರಮಣೀಯ ಮರಭೂಮಿ, ಅಂದದ ಅಪಾಯಕಾರಿ ಮರಳು ದಿಣ್ಣೆಗಳು. ಮರಳುಗಾಡನ್ನು ದಕ್ಷಿಣ ಭಾರತೀಯ ಸಿನಿಮಾವೊಂದು ಇಷ್ಟು ದೀರ್ಘವಾಗಿ ಮತ್ತು ವಿವರವಾಗಿ ತೋರಿಸಿರುವುದು ಇದೇ ಮೊದಲು ಇರಬೇಕು. ಚಿತ್ರದ 80ರಷ್ಟು ಭಾಗವನ್ನು ಆವರಿಸಿರುವ ಮರುಭೂಮಿಯ ದೃಶ್ಯಗಳನ್ನು ಸುನಿಲ್ ಕೆ ಎಸ್ ಅತ್ಯಂತ ಮನೋಹರವಾಗಿ ಸೆರೆ ಹಿಡಿದಿದ್ದಾರೆ. ಅದರ ಅಗಾಧತೆ, ಕ್ರೂರತೆ, ನಿರ್ಲಿಪ್ತತೆ, ತಾತ್ವಿಕತೆ ಮನಸ್ಸನ್ನು ತಟ್ಟುತ್ತದೆ. ಎ ಆರ್ ರೆಹಮಾನ್ ಸಂಗೀತ ಈ ದೃಶ್ಯಗಳನ್ನು ಮತ್ತಷ್ಟು ಗಾಢವಾಗಿಸಿದೆ. ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ.

ಈ ಸಿನಿಮಾದಲ್ಲಿ ಪೃಥ್ವಿರಾಜ್ ತಮ್ಮ ಚಿತ್ರ ಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎನ್ನಲು ಅಡ್ಡಿಯಿಲ್ಲ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ದೈಹಿಕ ಬದಲಾವಣೆಗಳನ್ನು ಮಾಡಿಕೊಂಡಿರುವ ಅವರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಹಕೀಂ ಪಾತ್ರದಲ್ಲಿ ಕೆ ಆರ್ ಗೋಪಾಲ್ ಉತ್ತಮವಾಗಿ ಅಭಿನಯಿಸಿದ್ದಾರೆ. ನಜೀಬ್‌ ಪತ್ನಿಯಾಗಿ ನಟಿಸಿರುವ ಅಮಲಾ ಪೌಲ್‌ಗೆ ತೆರೆಯ ಮೇಲೆ ಹೆಚ್ಚಿನ ಅವಕಾಶವಿಲ್ಲ. ಉತ್ತಮ ಜೀವನದ ಕನಸು ಹೊತ್ತು ಪಾಶ್ಚಿಮಾತ್ಯ ದೇಶಗಳತ್ತ ಮುಖ ಮಾಡುವವರಿಗೂ, ಗಲ್ಫ್ ದೇಶಗಳ ಹಾದಿ ತುಳಿಯುವವರಿಗೂ ಹೆಚ್ಚಿನ ಸಂದರ್ಭದಲ್ಲಿ ಪ್ರಮುಖ ವ್ಯತ್ಯಾಸ ಒಂದಿರುತ್ತದೆ. 90 ದಶಕದವರೆಗಂತೂ ಗಲ್ಫ್ ದೇಶಗಳಿಗೆ ದೈಹಿಕ ಶ್ರಮದ ಕೆಲಸಗಳನ್ನು ಅರಸಿ ಕಾರ್ಮಿಕರಾಗಿ ಹೋಗುತ್ತಿದ್ದವರ ಸಂಖ್ಯೆಯೇ ಅಧಿಕ.

ಅಲ್ಲಿನ ಸ್ನೇಹಪರವಲ್ಲದ ವಾತಾವರಣದಲ್ಲಿ, ಮೈಮುರಿದು ದುಡಿದು ಹಣ ಕೂಡಿಟ್ಟು ತಮ್ಮ ಸ್ವಂತ ಊರಲ್ಲೊಂದು ನೆಮ್ಮದಿಯ ಬದುಕು ಕಟ್ಟಿಕೊಂಡವರು ಕೆಲವರಾದರೆ, ಆ ಅವಕಾಶಕ್ಕಾಗಿ ಸಾಲ ಸೋಲ ಮಾಡಿ ಹಣ ಕೊಟ್ಟು ಮೋಸ ಹೋದವರು ಅದೆಷ್ಟೋ ಮಂದಿ. ಇಲ್ಲಿ ಕಟ್ಟಿದ ಮಹಲುಗಳಲ್ಲಿ, ಅಲ್ಲಿ ಅವರು ಸುರಿಸಿದ ಬೆವರು, ಕಣ್ಣೀರು, ನೆತ್ತರುಗಳ ಛಾಯೆ ಕಾಣುವುದಿಲ್ಲವಾದ್ದರಿಂದ, ‘ಗಲ್ಫ್ ದುಡ್ಡಿನ ಮಹಿಮೆ’ ಎಂದು ಕುಹಕ, ಅಸಡ್ಡೆ, ಅಸೂಯೆ ಇಲ್ಲಿ ಸಾಮಾನ್ಯ. ‘ಆಡುಜೀವಿತಂ’ ಇನ್ನು ಮುಂದೆ ಇಂತಹ ಬೀಡುಬೀಸು ಹೇಳಿಕೆ ನೀಡುವ ಮೊದಲು, ಹತ್ತು ಬಾರಿ ಯೋಚಿಸುವಂತೆ ಮಾಡುತ್ತದೆ.

LEAVE A REPLY

Connect with

Please enter your comment!
Please enter your name here