ಹೇಮಂತ್‌ ರಾವ್‌ ನಿರ್ದೇಶನದ ‘ಸಪ್ತ ಸಾಗರದಲ್ಲಿ ಎಲ್ಲೋ’ ರೊಮ್ಯಾಂಟಿಕ್‌ – ಡ್ರಾಮಾ ಸಿನಿಮಾದ ಮೊದಲರ್ಧದ ಚಿತ್ರೀಕರಣ ಮುಕ್ತಾಯವಾಗಿದೆ. ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಜೋಡಿಯ ಹೊಸ ಸ್ಟಿಲ್‌ ರಿಲೀಸ್‌ ಮಾಡಿರುವ ಚಿತ್ರತಂಡ ಮುಂದಿನ ಶೆಡ್ಯೂಲ್‌ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದೆ.

ಎಲ್ಲವೂ ಅಂದುಕೊಂಡಂತೆಯೇ ಅಗಿದ್ದರೆ ಈ ವೇಳೆಗಾಗಲೇ ‘ಸಪ್ತ ಸಾಗರದಲ್ಲಿ ಎಲ್ಲೋ’ ಚಿತ್ರೀಕರಣ ಪೂರ್ಣಗೊಂಡು ಸಿನಿಮಾ ರಿಲೀಸ್‌ಗೆ ಸಿದ್ಧವಾಗಬೇಕಿತ್ತು. ಕೋವಿಡ್‌ನಿಂದಾಗಿ ಎಂಟ್ಹತ್ತು ತಿಂಗಳು ವಿಳಂಬವಾಗಿದೆ. “ಈಗ ಮೊದಲರ್ಧದ ಚಿತ್ರೀಕರಣ ಮುಕ್ತಾಯವಾಗಿದೆ. ಇದು 2010 ಮತ್ತು 2020 ಎರಡು ಟೈಮ್‌ಲೈನ್‌ನಲ್ಲಿ ನಡೆಯಲಿರುವ ಕತೆ. ಈಗ ಮುಂದಿನ ಶೆಡ್ಯೂಲ್‌ಗೆ ಹೀರೋ ರಕ್ಷಿತ್‌ ಹತ್ತನ್ನೆರೆಡು ಕೆಜಿ ಮೈತೂಕ ಹೆಚ್ಚಿಕೊಳ್ಳಬೇಕಿದೆ. ಈ ಬಾಡಿ ಟ್ರಾನ್ಸ್‌ಫಾರ್ಮೇಷನ್‌ಗಾಗಿ ನಲವತ್ತು ದಿನಗಳ ಕಾಲ ಬಿಡುವು. ನಂತರದ ಶೆಡ್ಯೂಲ್‌ ಮಂಗಳೂರಿನಲ್ಲಿ ನಡೆಯಲಿದೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಹೇಮಂತ್‌ ರಾವ್‌.

ಈಗ ನಡೆಸಿರುವ ಚಿತ್ರೀಕರಣದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ. ಮಂಗಳೂರು ಶೆಡ್ಯೂಲ್‌ ಮುಗಿಸಿದ ನಂತರ ಬೆಂಗಳೂರಿನಲ್ಲಿ ಸೆಟ್‌ ಹಾಕಿ ಕೆಲವು ಸನ್ನಿವೇಶಗಳನ್ನು ಚಿತ್ರಿಸಬೇಕಿದೆಯಂತೆ. ಅದಾದ ನಂತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರೈಸಿ ಈ ವರ್ಷದಲ್ಲೇ ಚಿತ್ರವನ್ನು ತೆರೆಗೆ ತರಲಿದ್ದೇವೆ ಎನ್ನುತ್ತಾರವರು. ಚರಣ್‌ ರಾಜ್‌ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಚೊಚ್ಚಲ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲೇ ಗಮನ ಸೆಳೆದ ಹೇಮಂತ್‌ ರಾವ್‌ ‘ಕವಲುದಾರಿ’ಯಲ್ಲೂ ಗೆದ್ದಿದ್ದರು. ‘ಸಪ್ತ ಸಾಗರದಲ್ಲಿ ಎಲ್ಲೋ’ ಅವರ ನಿರ್ದೇಶನದ ಮೂರನೇ ಸಿನಿಮಾ. ಅವರ ನಿರ್ಮಾಣದ ‘ಭೀಮ ಸೇನ ನಳಮಹರಾಜ’ ಸಿನಿಮಾ ಕಳೆದ ವರ್ಷ OTTಯಲ್ಲಿ ಬಿಡುಗಡೆಯಾಗಿತ್ತು.

ರಕ್ಷಿತ್‌ ಶೆಟ್ಟಿ, ನಿರ್ದೇಶಕ ಹೇಮಂತ್‌ ರಾವ್‌, ರುಕ್ಮಿಣಿ ವಸಂತ್

LEAVE A REPLY

Connect with

Please enter your comment!
Please enter your name here