ಬಾಲಿವುಡ್ ನಟಿ ಅನುಷ್ಕಾ ಮತ್ತು ಅವರ ಸಹೋರದ ಕರ್ಣೇಶ್ ಶರ್ಮ ಒಡೆತನದ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಸಂಸ್ಥೆ ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ ಈ ಸಂಸ್ಥೆ ಮುಂದಿನ ಒಂದೂವರೆ ವರ್ಷದಲ್ಲಿ ಈ OTTಗಳಿಗೆ ವೆಬ್ ಸರಣಿ, ಸಿನಿಮಾಗಳನ್ನು ನಿರ್ಮಿಸಲಿದೆ.
ನಟಿ ಅನುಷ್ಕಾ ಶರ್ಮಾ ‘ಚಕ್ಡಾ ಎಕ್ಸ್‌ಪ್ರೆಸ್’ ಬಯೋಪಿಕ್ ಚಿತ್ರದೊಂದಿಗೆ ಸಿನಿಮಾಗೆ ಮರಳಿ ಮೊನ್ನೆ ಸುದ್ದಿಯಾಗಿದ್ದರು. ಇದೀಗ ತಮ್ಮ ನಿರ್ಮಾಣ ಸಂಸ್ಥೆ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಮೂಲಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಕಂಟೆಂಟ್ ನಿರ್ಮಿಸುವ ಸುದ್ದಿ ನೀಡಿದ್ದಾರೆ. 2013ರಲ್ಲಿ ಸಹೋದರ ಕರ್ಣೇಶ್ ಶರ್ಮ ಜೊತೆಗೂಡಿ ಅನುಷ್ಕಾ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಸಂಸ್ಥೆ ಆರಂಭಿಸಿದ್ದರು. 2015ರಲ್ಲಿ ಈ ಸಂಸ್ಥೆಯಡಿ ಅವರು ನಿರ್ಮಿಸಿದ್ದ ‘NH -10’ ಹಿಂದಿ ಸಿನಿಮಾ ಯಶಸ್ವಿಯಾಗಿತ್ತು. ಇತ್ತೀಚೆಗೆ ಅವರು ನೆಟ್‌ಫ್ಲಿಕ್ಸ್‌ಗಾಗಿ ‘ಬುಲ್‌ಬುಲ್’, ಅಮೇಜಾನ್ ಪ್ರೈಮ್‌ಗಾಗಿ ‘ಪಾತಾಲ್ ಲೋಕ್’ ಸರಣಿ ನಿರ್ಮಿಸಿದ್ದರು. ಇದೀಗ ಇವೆರೆಡೂ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ 400 ಕೋಟಿ ರೂಪಾಯಿ ಬೃಹತ್ ಮೊತ್ತದ ನಿರ್ಮಾಣ ಒಪ್ಪಂದ ಮಾಡಿಕೊಂಡಿದ್ದಾರೆ.
ನೆಟ್‌ಫ್ಲಿಕ್ಸ್ ಕೂಡ ಸುದ್ದಿಯನ್ನು ಖಚಿತಪಡಿಸಿದ್ದು ಕ್ಲೀನ್ ಸ್ಲೇಟ್ ಫೀಲ್ಮ್ಸ್ ಮುಂದಿನ ಕೆಲ ತಿಂಗಳುಗಳಲ್ಲಿ ನೆಟ್‌ಫ್ಲಿಕ್ಸ್‌ಗಾಗಿ ಮೂರು ಸರಣಿಗಳನ್ನು ನಿರ್ಮಿಸುವ ಕುರಿತು ಅಧಿಕೃತವಾಗಿ ಘೋಷಿಸಲಿದೆ. ಆದರೆ ಅಮೇಜಾನ್ ಪ್ರೈಮ್ ಕಡೆಯಿಂದ ಈ ಕುರಿತಾಗಿ ಇನ್ನೂ ಅಧಿಕೃತಿ ಮಾಹಿತಿ ಹೊರಬಿದ್ದಿಲ್ಲ. ಬಲ್ಲ ಮೂಲಗಳ ಪ್ರಕಾರ ಇವೆರೆಡೂ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಅನುಷ್ಕಾ ಶರ್ಮಾ ಸಂಸ್ಥೆ ಒಟ್ಟು ಎಂಟು ಸರಣಿಗಳನ್ನು ನಿರ್ಮಿಸಲಿದೆ ಎನ್ನಲಾಗಿದೆ. ಸದ್ಯದಲ್ಲೇ ಇವರು ನಿರ್ಮಿಸಿರುವ ‘ಮಾಯಿ’ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಅನುಷ್ಕಾ ಬ್ಯಾನರ್ ನಿರ್ಮಿಸುತ್ತಿರುವ ಅಗಲಿದ ಬಾಲಿವುಡ್ ನಟ ಇರ್ಫಾನ್ ಖಾನ್‌ರ ಪುತ್ರ ಬಾಬಿಲ್ ಖಾನ್ ನಟನೆಯ ‘ಕ್ವಲಾ’ ಚಿತ್ರೀಕರಣದಲ್ಲಿದೆ. ಸುದೀರ್ಘ ಅವಧಿಯ ಬ್ರೇಕ್‌ನ ನಂತರ ನಟನೆಯ ಮರಳುತ್ತಿರುವ ನಟಿ ಅನುಷ್ಕಾರ ‘ಚಕ್ಡಾ ಎಕ್ಸ್‌ಪ್ರೆಸ್’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಭಾರತೀಯ ಮಹಿಳಾ ಕ್ರಿಕೆಟ್‌ನ ಖ್ಯಾತ ಕ್ರಿಕೆಟರ್ ಝುಲನ್ ಗೋಸ್ವಾಮಿ ಅವರ ಕುರಿತ ಬಯೋಪಿಕ್ ಚಿತ್ರವಿದು.