ಮೋಹನ್‌ಲಾಲ್‌ ಅಭಿನಯದ ಬಹುನಿರೀಕ್ಷಿತ ‘ಮರಕ್ಕರ್: ಅರೇಬಿಕಡಲಂಟೆ ಸಿಂಹಂ’ ಮಲಯಾಳಂ ಚಿತ್ರವನ್ನು ಅಮೇಜಾನ್‌ ಪ್ರೈಮ್‌ ಖರೀದಿಸಿದೆ. ನೂರು ಕೋಟಿ ರೂಪಾಯಿ ಬಜೆಟ್‌ನ ಫ್ಯಾಂಟಸಿ ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಅಪೇಕ್ಷಿಸಿದ್ದರು. ಆದರೆ ಪ್ರದರ್ಶಕರ ಜೊತೆಗಿನ ಮಾತುಕತೆ ಫಲಿಸದ ಕಾರಣ ನಿರ್ಮಾಪಕರು OTT ಮೊರೆ ಹೋಗಿದ್ದಾರೆ.

ಮೋಹನ್‌ಲಾಲ್‌ ಅಭಿನಯದ ‘ಮರಕ್ಕರ್: ಅರೇಬಿಕಡಲಂಟೆ ಸಿಂಹಂ’ ಸುಮಾರು ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾ. 16ನೇ ಶತಮಾನದ ನೌಕಾದಳದ ಕಮ್ಯಾಂಡರ್‌ ಕುಂಜಾಲಿ ಮರಕ್ಕಲ್ ಸಾಹಸದ ಕತೆಯಿದು. ಪೀರಿಯಡ್ ಫ್ಯಾಂಟಸಿ ಸಿನಿಮಾ ತೆರೆಗೆ ಸಿದ್ಧವಾಗಿ ಒಂದೂವರೆ ವರ್ಷಗಳೇ ಕಳೆದಿತ್ತು. ಕೋವಿಡ್‌ ಕಾರಣದಿಂದ ಬಿಡುಗಡೆ ವಿಳಂಬವಾಗಿದ್ದರಿಂದ ಚಿತ್ರದ ನಿರ್ಮಾಪಕ ಆಂಟೋನಿ ಪೆರುಂಬವೂರ್‌ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ದುಬಾರಿ ಬಜೆಟ್‌ ಚಿತ್ರವಾದ್ದರಿಂದ ನಿರ್ಮಾಪಕರು ಪ್ರದರ್ಶಕರಿಂದ ದೊಡ್ಡ ಮೊತ್ತದ ಶೇರ್ ಅಪೇಕ್ಷಿಸಿದ್ದರು. ಆದರೆ ಪ್ರದರ್ಶಕರು ಇದಕ್ಕೆ ಸಿದ್ಧರಿರಲಿಲ್ಲ. ಹಾಗಾಗಿ ಅಂತಿಮವಾಗಿ ನಿರ್ಮಾಪಕರು ಚಿತ್ರವನ್ನು ಅಮೇಜಾನ್ ಪ್ರೈಮ್‌ಗೆ ಕೊಟ್ಟಿದ್ದಾರೆ. ಚಿತ್ರದ ಬಿಡುಗಡೆ ಕುರಿತಾಗಿ ಪ್ರೈಮ್‌ ವೀಡಿಯೋ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದೆ.

ಚಿತ್ರದ ನಿರ್ದೇಶಕ ಪ್ರಿಯದರ್ಶನ್‌ ಅವರು ಈ ಬಗ್ಗೆ ಮಾತನಾಡಿ, “ನಿರ್ಮಾಪಕ ಆಂಟೋನಿ ಈ ಚಿತ್ರಕ್ಕಾಗಿ ದೊಡ್ಡ ಮೊತ್ತದ ರಿಸ್ಕ್ ತೆಗೆದುಕೊಂಡಿದ್ದಾರೆ. ಕಳೆದೆರೆಡು ವರ್ಷಗಳಿಂದ ತಾವು ಪಡೆದ ಸಾಲದ ಹಣಕ್ಕಾಗಿ ಬಡ್ಡಿ ತೆರುತ್ತಲೇ ಇದ್ದಾರೆ. ಚಿತ್ರಮಂದಿರಗಳ ದೊಡ್ಡ ಪರದೆಗಳಲ್ಲೇ ಸಿನಿಮಾ ತೆರೆಕಾಣಬೇಕು ಎನ್ನುವುದು ನನ್ನ ಹಾಗೂ ನಟ ಮೋಹಲ್‌ಲಾಲ್‌ ಅವರ ಒತ್ತಾಸೆಯಾಗಿತ್ತು. ಆದರೆ ನಿರ್ಮಾಪಕರ ಹಿತದೃಷ್ಟಿಯಿಂದ ನಾವೆಲ್ಲರೂ ಈ ತೀರ್ಮಾನಕ್ಕೆ ಬರಬೇಕಾಗಿದೆ. ನಾವಿಬ್ಬರೂ ಚಿತ್ರಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ. ಸಿನಿಮಾ ಜನರಿಗೆ ತಲುಪಿ ಲಾಭ ಮಾಡಿದರೆ ಆಗ ಲಾಭಾಂಶದಲ್ಲಿ ಪಾಲು ಪಡೆಯಲಿದ್ದೇವೆ. ಚಿತ್ರಮಂದಿರಗಳ ಮಾಲೀಕರು ಈ ಬೆಳವಣಿಗೆಯಿಂದ ನಮ್ಮನ್ನು ದೂರುವುದು ಸೂಕ್ತವಲ್ಲ” ಎಂದಿದ್ದಾರೆ.

ಒಂದು ಮೂಲದ ಪ್ರಕಾರ ಪ್ರೈಮ್ ವೀಡಿಯೋ ‘ಮರಕ್ಕರ್‌’ ಚಿತ್ರದ ಸ್ಟ್ರೀಮಿಂಗ್ ರೈಟ್ಸ್‌ಗೆ ಸುಮಾರು 90 ಕೋಟಿ ರೂಪಾಯಿ ವ್ಯಯಿಸುತ್ತಿದೆ ಎನ್ನಲಾಗಿದೆ. ಸ್ಟ್ರೀಮಿಂಗ್‌ ಅವಧಿಯ ನಂತರ ಸ್ಯಾಟಲೈಟ್ ಹಕ್ಕುಗಳಿಂದಲೂ ಸಿನಿಮಾ ಹಣ ಗಳಿಸುತ್ತದೆ. ಈ ಬೆಳವಣಿಗೆ ಮಾಲಿವುಡ್‌ನಲ್ಲಿ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ. ಸ್ಟಾರ್ ನಟರ ಸಿನಿಮಾಗಳನ್ನು ಥಿಯೇಟರ್‌ಗಳಿಗೆ  ಬಿಡುಗಡೆ ಮಾಡದೆ ನೇರವಾಗಿ OTTಗೆ ಕೊಡುವುದರಿಂದಲೇ ಹೆಚ್ಚು ಲಾಭ ಪಡೆಯಬಹುದು ಎನ್ನುವ ಲೆಕ್ಕಾಚಾರ ಚರ್ಚೆಗೆ ಕಾರಣವಾಗಿದೆ. ‘ಮರಕ್ಕರ್‌’ ಸಿನಿಮಾ ಕುರಿತು ಮಾತನಾಡಿರುವ ಪ್ರದರ್ಶಕ ವಲಯದ ಪ್ರಮುಖರಾದ ಆಂಚಲ್ ಜಯಕುಮಾರ್‌, “ಮಾತುಕತೆಯ ಸಂದರ್ಭದಲ್ಲಿ ಹದಿನೈದು ಕೋಟಿ ರೂಪಾಯಿ ಮತ್ತು ಐನೂರು ಸ್ಕ್ರೀನ್‌ಗಳಿಗೆ ಮಾತನಾಡಿದ್ದೆವು. ನಿರ್ಮಾಪಕರು ದೊಡ್ಡ ಡಿಮ್ಯಾಂಡ್‌ ಇಟ್ಟಾಗ ನಾವು ಹಿಂದೆ ಸರಿಯಬೇಕಾಯ್ತು” ಎಂದಿದ್ದಾರೆ. ಪ್ರಣವ್ ಮೋಹನ್‌ಲಾಲ್‌, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು, ಮಂಜು ವಾರಿಯರ್, ಕೀರ್ತಿ ಸುರೇಶ್‌, ಸುಹಾಸಿನಿ ಚಿತ್ರದ ಪ್ರಮುಖ ತಾರೆಯರು. ಈ ಸಿನಿಮಾ ಅತ್ಯುತ್ತಮ ಪ್ರಾದೇ‍ಷಿಕ ಭಾಷಾ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್‌, ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದೆ.

LEAVE A REPLY

Connect with

Please enter your comment!
Please enter your name here