1997ರ ಜನವರಿ 29ರಂದು ‘ಅಮೃತವರ್ಷಿಣಿ’ ಸಿನಿಮಾ ತೆರೆಕಂಡಿತ್ತು. ಒಂದು ಪರಿಪೂರ್ಣ ಪ್ರಯೋಗ ಎನಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಮೈಲುಗಲ್ಲಾದ ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 25 ವರ್ಷ. ತಮ್ಮ ವೃತ್ತಿ ಬದುಕಿನ ಈ ವಿಶೇಷ ಸಿನಿಮಾ ಬಗ್ಗೆ ನಟ ರಮೇಶ್ ಅರವಿಂದ ಮಾತನಾಡಿದ್ದಾರೆ.
“ಅಮೃತವರ್ಷಿಣಿ ಸಿನಿಮಾಗೆ 25 ವರ್ಷ! ಚಿಟಿಕೆ ಹೊಡೆಯೋದ್ರಲ್ಲಿ ಈ ಇಪ್ಪತ್ತೈದು ವರ್ಷಗಳು ಕಳೆದುಹೋಗಿವೆ ಎನಿಸುತ್ತಿದೆ. ನಟನೆ, ನಿರ್ದೇಶನದಲ್ಲಿ ಸಮಯ ಹೋಗಿದ್ದೇ ಗೊತ್ತಾಗಿಲ್ಲ. ಎಂಥ ಸಿನಿಮಾ ಅದು!” ಎಂದು ನೆನಪುಗಳಿಗೆ ಜಾರುತ್ತಾರೆ ನಟ ರಮೇಶ್ ಅರವಿಂದ್. ಕತೆ, ನಿರೂಪಣೆ, ಛಾಯಾಗ್ರಹಣ, ಸಂಗೀತ, ಸಾಹಿತ್ಯ, ಕಲಾವಿದರ ಬಳಗ… ಹೀಗೆ ಎಲ್ಲಾ ವಿಭಾಗಗಳಲ್ಲೂ ಪರಿಪೂರ್ಣತೆಯಿಂದ ಪ್ರೇಕ್ಷಕರನ್ನು ಸೆಳೆದ ಚಿತ್ರ ಅದು. ಏಕತಾನತೆಯ ಕತೆಗಳ ಮಧ್ಯೆ ವಿಶಿಷ್ಟ ಮತ್ತು ತಾಜಾ ಪ್ರಯೋಗವಾಗಿ ಮಾತ್ರವಲ್ಲದೆ ಮಾರುಕಟ್ಟೆ ದೃಷ್ಟಿಯಿಂದಲೂ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲಾಯ್ತು.
ನಟ ರಮೇಶ್ ಆಗ ‘ಪಕ್ಕದ್ಮನೆ ಹುಡ್ಗ’ ಇಮೇಜಿನಿಂದ ಗುರುತಿಸಿಕೊಂಡಿದ್ದರು. ಅರಗಿಣಿ, ಶ್ರೀಗಂಧ, ಅನುರಾಗ ಸಂಗಮ, ಕರ್ಪೂರದ ಗೊಂಬೆ, ನಮ್ಮೂರ ಮಂದಾರ ಹೂವೆ ಚಿತ್ರಗಳಲ್ಲಿ ರಮೇಶ್‌ರನ್ನು ಪ್ರೇಕ್ಷಕರು ತಮ್ಮ ಮನೆಯ ಹುಡುಗನಂತೆ ನೋಡಿದ್ದರು. ಆಗ ನಿರ್ದೇಶಕ ದಿನೇಶ್ ಬಾಬು ಅವರು ‘ಅಮೃತವರ್ಷಿಣಿ’ ಕತೆ ಹೇಳಿದಾಗ ಸಹಜವಾಗಿಯೇ ರಮೇಶ್‌ರಿಗೆ ಗೊಂದಲವಾಗಿತ್ತು. ಪಕ್ಕದ್ಮನೆ ಹುಡ್ಗ ಇಮೇಜಿನಲ್ಲಿ ತಮ್ಮನ್ನು ನೋಡುತ್ತಿದ್ದ ಜನರು ಈ ನೆಗೆಟೀವ್ ಶೇಡ್, ಡಾರ್ಕ್ ಲೇಯರ್‌ನಲ್ಲಿನ ಪಾತ್ರದಲ್ಲಿ ಹೇಗೆ ಸ್ವೀಕರಿಸಬಹುದು ಎಂದು ಅವರಿಗೆ ಆತಂಕವಿತ್ತು.
“ಅಫ್‌ಕೋರ್ಸ್, ನಟನಾಗಿ ಇಂತಹ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದೆ. ಆದರೆ ಆಗ ತೆರೆಕಂಡ ಸಾಲು, ಸಾಲು ಸಿನಿಮಾಗಳಲ್ಲಿ ನಾನು ‘ಒಳ್ಳೇ ಹುಡ್ಗ’ ಇಮೇಜಿನ ಹೀರೋ. ಅಮೃತವರ್ಷಿಣಿ ಆಫರ್ ಬಂದಾಗ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಿದ್ದು ಹೌದು. ನಿರ್ದೇಶಕ ದಿನೇಶ್ ಬಾಬು ಅವರು ಕನ್ವಿನ್ಸ್ ಮಾಡಿದ ನಂತರ ಒಪ್ಪಿಕೊಂಡೆ. ಇದು ನನ್ನ ವೃತ್ತಿ ಬದುಕಿನ ವಿಶಿಷ್ಟ ಪಾತ್ರವಾಯ್ತು” ಎನ್ನುತ್ತಾರೆ ರಮೇಶ್. ಅತ್ಯುತ್ತಮ ನಟನೆಗಾಗಿ ಈ ಪಾತ್ರ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು. ಇದು ಅವರಿಗೆ ಮೊದಲ ಫಿಲ್ಮ್‌ಫೇರ್ ಗೌರವ ಎನ್ನುವುದು ವಿಶೇಷ. ಈ ಪಾತ್ರದ ಅವಕಾಶ ಬಂದಾಗ ರಮೇಶ್ ತಮ್ಮ ಪತ್ನಿಯ ಸಲಹೆ ಕೇಳಿದ್ದರೆ? “ಇಲ್ಲ, ಅವರು ಯಾವತ್ತೂ ನನ್ನ ಸಿನಿಮಾ, ಪಾತ್ರಗಳ ನಿರ್ಧಾರದ ವಿಷಯದಲ್ಲಿ ಮಧ್ಯೆ ಬರೋಲ್ಲ. ಅಂತಿಮವಾಗಿ ಇದು ನನ್ನದೇ ನಿರ್ಧಾರ” ಎನ್ನುತ್ತಾರವರು.
‘ಅಮೃತವರ್ಷಿಣಿ’ ಚಿತ್ರದಲ್ಲಿನ ಅಭಿಷೇಕ್ ಭಾರದ್ವಾಜ್ ಪಾತ್ರ ಸಂಪೂರ್ಣ ನೆಗೆಟೀವ್ ಶೇಡ್‌ನ ಪಾತ್ರ ಎನ್ನುವುದನ್ನು ರಮೇಶ್ ಒಪ್ಪುವುದಿಲ್ಲ. “ಪ್ರತಿಯೊಬ್ಬರ ವ್ಯಕ್ತಿತ್ವದಲ್ಲೂ ಡಾರ್ಕ್ ಲೇಯರ್‌ಗಳಿರುತ್ತವೆ ಎಂದು ಸೈಕಾಲಜಿ ಹೇಳುತ್ತೆ. ಅಂಥದ್ದೊಂದು ಶೇಡ್ ಈ ಪಾತ್ರದ್ದು. ಈ ಚಿತ್ರದಲ್ಲಿ ಅಭಿಷೇಕ್‌ನ ಪ್ರೀತಿಗೆ ಕಾರಣ ಬೇಕಿತ್ತು. ಅಲ್ಲಿ ಅವನು ನಾಲ್ಕೈದು ಹಾಡು ಹಾಡ್ತಾನೆ. ಯಾವ ಚಿತ್ರದಲ್ಲಿ ವಿಲನ್‌ಗೆ ನಾಲ್ಕೈದು ಹಾಡುಗಳಿರುತ್ತವೆ!?” ಎನ್ನುವ ರಮೇಶ್ ಆ ಪಾತ್ರದ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಸದ್ಯ ಅವರೀಗ ‘ಶಿವರಾಜಿ ಸೂರತ್ಕಲ್ 2’ ಸಿನಿಮಾ ಚಿತ್ರೀಕರಣದಲ್ಲಿದ್ಧಾರೆ. ಇತ್ತೀಚೆಗೆ ಥಿಯೇಟರ್‌ನಲ್ಲಿ ಬಿಡುಗಡೆಯಾದ ಅವರ ‘100’ ಸೈಬರ್ ಕ್ರೈಂ – ಥ್ರಿಲ್ಲರ್ ಸಿನಿಮಾ ಫೆಬ್ರವರಿ 4ರಿಂದ ZEE5ನಲ್ಲಿ ಸ್ಟ್ರೀಮ್ ಆಗಲಿದೆ. ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದ ಅವರ ಅಭಿಮಾನಿಗಳು OTTಯಲ್ಲಿ ವೀಕ್ಷಿಸಬಹುದು. ‘ಶಿವರಾಜಿ ಸೂರತ್ಕಲ್ 2’ ನಟನೆ ಜೊತೆ ತಮ್ಮ ಮುಂದಿನ ನಿರ್ದೇಶನದ ಸಿನಿಮಾಗೆ ರಮೇಶ್ ಅರವಿಂದ್ ಚಿತ್ರಕಥೆ ರಚನೆಯಲ್ಲಿ ತೊಡಗಿದ್ದಾರೆ.