ಅದೊಂದು ಕಥಾಗುಚ್ಛ, ಇಲ್ಲಿ ಒಟ್ಟು 5 ಕತೆಗಳಿವೆ. ಐದೂ ಕತೆಗಳು ಅದರದೇ ರೀತಿಯಲ್ಲಿ ಭಿನ್ನವಾಗಿದೆ. ‘ಪುದಮ್ ಪುದು ಕಾಲೈ ವಿಧಿಯಾತ’ ತಮಿಳು ಆಂಥಾಲಜಿ ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಸಿನಿಮಾ ನೋಡುವ ಉದ್ದೇಶ ಒಬ್ಬೊಬ್ಬರಿಗೆ ಒಂದೊಂದು. ಕೆಲವು ಸಿನಿಮಾಗಳು ಮನರಂಜನೆ ನೀಡಿದರೆ ಮತ್ತೆ ಕೆಲವು ನಮಗೆ ಒಂದೊಳ್ಳೆ ಪುಸ್ತಕ ಓದಿದಂತಹ ಅನುಭೂತಿ ಕೊಡುತ್ತವೆ. ಆಂತರಿಕ ಪ್ರಯಾಣವೊಂದನ್ನು ಸಾಧ್ಯವಾಗಿಸುತ್ತವೆ. ‘ಪುದಮ್ ಪುದು ಕಾಲೈ ವಿಧಿಯಾತ’ ಅಂತಹ ಸಿನಿಮಾ. ಸಿನಿಮಾ ಅಂದರೆ.. ಅದೊಂದು ಕಥಾಗುಚ್ಛ, ಇಲ್ಲಿ ಒಟ್ಟು 5 ಕತೆಗಳಿವೆ. ಐದೂ ಕತೆಗಳು ಅದರದೇ ರೀತಿಯಲ್ಲಿ ಭಿನ್ನವಾಗಿದೆ.
ಕತೆ 1. ‘ಮುಗಕವಸ ಮುತಮ್’ | ಇದೊಂದು ಲವಲವಿಕೆಯ ಕತೆ. ಕೊರೋನಾ ಲಾಕ್‍ಡೌನ್ ಸಮಯದಲ್ಲಿನ ಖಾಲಿ ರಸ್ತೆಯಲ್ಲಿ ಪೋಲೀಸರ ನಡುವೆ ಅರಳುವ ಪ್ರೇಮದ ನವಿರಾದ ಕತೆ. ಅವರಿಬ್ಬರೂ ಸೇರಿ ಮದುವೆ ಮನೆಯಿಂದ ಹುಡುಗಿಯನ್ನು ಕರೆತಂದು ಪ್ರೇಮಿಗೆ ಒಪ್ಪಿಸುವ, ಸಹಾಯ ಮಾಡುವ ಪಜೀತಿಯೂ ಚೆನ್ನ. ಕಡೆಯಲ್ಲಿ ಅವಳು ಮಾಸ್ಕ್‌ನಲ್ಲೇ ಮುತ್ತು ಕೊಟ್ಟು, ವಾಕ್ಸಿನೇಷನ್ ಆದ ಮೇಲೆ ಸಿಗೋಣ ಎನ್ನುವುದು ಬಲುಮಜ.
ಕತೆ 2: ‘ಲೋನರ್ಸ್’ | ಕೊರೋನಾ ಕಾಲದಲ್ಲಿ ಸಾವೆಂಬುದು ಮಾಮೂಲಿ ಅನಿಸುವಂತಹ ಸ್ಥಿತಿಗೆ ತಲುಪಿದ್ದೆವಲ್ಲಾ.. ಕೆಲಸ ಕಳೆದುಕೊಂಡವರು, ಜೊತೆಗಿದ್ದ ಜೀವಗಳನ್ನು ಕಳೆದುಕೊಂಡವರು ಎಲ್ಲರದ್ದೂ ಬೇರೆ ಬೇರೆ ತಲ್ಲಣ. ತಂತ್ರಜ್ಞಾನವೆಂಬುದು ಈ ಒಂಟಿಬಡಕ ಜೀವಗಳನ್ನು ಒಟ್ಟುಗೂಡಿಸಿ ಭಾವದ ಜೊತೆಯಾಗಿಸುವ ಕತೆ ಇದು.
ಕತೆ 3 : ‘ಮೌನಮೇ ಪಾರ್ವಯಾಯ್’ | ಜೋಜೋ ಜಾರ್ಜ್ ಎಂಬ ದೈತ್ಯನಟ ಒಂದೂ ಮಾತಿಲ್ಲದೇ ನಟಿಸುತ್ತಾನೆ ಇದರಲ್ಲಿ. ಆಕೆಯೂ. ಇದೊಂದು ಕಾವ್ಯದಂಥ ಕತೆ. ಮುನಿಸಿಕೊಂಡು ಮಾತಾಡದ ಗಂಡನ ಹೆಂಡತಿ ಅವರು. ಅವಳಿಗೆ ಕೋವಿಡ್ ಸೋಂಕಾಗಿಬಿಡುತ್ತದೆ. ಕಾಫಿಯೂ ಮಾಡಿಕೊಳ್ಳದ ಅವನು ಅಡುಗೆಮನೆಯ ಫೀಲ್ಡಿಗಿಳಿಯುತ್ತಾನೆ. ಅವಳಿಗೆ ಕೆಮ್ಮು ಹೆಚ್ಚಿದಷ್ಟೂ ಇವನ ಆತಂಕ ಏರುತ್ತದೆ. ಜೊತೆಗೆ ಹಳೆಯ ಜಗಳ, ದುಡುಕು, ಪಶ್ಚಾತ್ತಾಪಗಳೆಲ್ಲ ಒಳಗೇ ಸಂಭವಿಸುತ್ತವೆ. ಅವಳಿಗೆ ಬೇಕಾದ ಆರೈಕೆಯನ್ನು ಯುದ್ಧೋತ್ಸಾಹದಲ್ಲಿ ಮಾಡುವ ಅವನು, ಒಳಗೇ ಕರಗುವ ಅವಳು. ಕಡೆಯ ಬರುವ ವರದಿ ಏನು? ಮೌನದ ಈ ಕತೆಯಲ್ಲಿ ಕೊನೆಗೆ ಆಡುವ ಒಂದೇ ಒಂದು ಶಬ್ದ ಯಾವುದು?
ಕತೆ 4 : ‘ನಿಝಲ್ ತರುಮ್ ಇಧಮ್’ | ಇದೊಂದು ನೆನಪುಗಳು ಮತ್ತು ಒಂಟಿತನದ ಡೆಫಿನಿಷನ್ ಹುಡುಕುವಂಥ ಸೊಗಸಾದ ಕತೆ. ನನ್ನನ್ನು ತುಂಬಾ ಕಾಡಿದ ಕತೆ. ಅಮ್ಮನಿಲ್ಲದ ಮೂವತ್ತರ ಉದ್ಯೋಗಿಗೆ ಅಪ್ಪನಿಗೂ ಹೃದಯಾಘಾತವಾದ ಸುದ್ದಿ ಬರುತ್ತದೆ. ಪಾಂಡಿಚೆರಿಗೆ ಹೋಗಿ ಒಂಟಿತನ ಅನುಭವಿಸುತ್ತಾಳೆ. ಮನೆ ಮಾರಲು ತಯಾರಿ ನಡೆಸುತ್ತಾಳೆ. ಈ ಅವಧಿಯಲ್ಲಿ ಅಕಸ್ಮಾತ್ ಸಿಕ್ಕ ಗೆಳೆಯರ ಮಾತು, ನಾಯಿಯೊಂದರ ಸ್ನೇಹ, ಪಕ್ಕದ ಮನೆಯ ಹುಡುಗನೊಬ್ಬನ ತಳಮಳಗಳು ಅವಳ ಯೋಚನೆಯ ದಿಕ್ಕು ಬದಲಿಸುತ್ತವೆ. ಅಮ್ಮ ಹೋದ ಮೇಲೆ ಆ ದುಃಖವನ್ನು ಮಗಳೊಂದಿಗೆ ಒಂದಾದರೂ ಮಾತಾಡಿ ಹಂಚಿಕೊಳ್ಳದ ಅಪ್ಪನ ಬಗ್ಗೆ ಕೋಪವಿರುತ್ತದೆ ಅವಳಿಗೆ. ಆದರೆ ಆ ಮೌನದ ಅರ್ಥ ಈಗ ಅವಳಿಗಾಗುತ್ತದೆ. ಇಡೀ ಕತೆಯನ್ನು ಅವಳನ್ನು ಹಿಂಬಾಲಿಸುವ ನೆನಪುಗಳನ್ನು ಸೊಗಸಾದ ರೂಪಕಗಳ ಮೂಲಕ ಹೇಳಿದ್ದಾರೆ. ಪಾಂಡಿಗೆ ಹೋಗಬೇಕೆಂದು ಆಸೆಯಾಗುವಷ್ಟು ಸುಂದರ ದೃಶ್ಯಗಳವು. ಈ ಕತೆಯಲ್ಲಿ ಅವಳು ಇಲ್ಲದ ಅಪ್ಪನ ಜೊತೆ ಮಾತಾಡುತ್ತಾ ತಾನು ಯಾರಿಗೂ ಹೆಚ್ಚು ಹತ್ತಿರವಾಗಲಾರೆ, ಯಾರಾದರೂ ಹತ್ತಿರ ಬಂದರೂ ಓಡುತ್ತೇನೆ. ನನಗೆ ನಾನೇ ಗೋಡೆ ಕಟ್ಟಿಕೊಂಡಿದ್ದೇನೆ. ಆದರೆ ಈ ಒಂಟಿತನ ಕಷ್ಟ ..ಎಂದೆಲ್ಲಾ ಹೇಳುತ್ತಾ ಅಳುತ್ತಾಳೆ. ಈ ದೃಶ್ಯದ ನಂತರ ಭಾವನೆಗಳನ್ನು ವಿವರಿಸುವ ಒಂದು ಸೊಗಸಾದ ಹಾಡು ಕೂಡ ಇದೆ.
ಕತೆ 5 : ಮಾಸ್ಕ್ | ಇದು ಮುಖವಾಡಗಳ ಕತೆ. ಒಬ್ಬೊಬ್ಬರದೂ ಒಂದೊಂದು ಮುಖವಾಡ ಇಲ್ಲಿ. ತಾನು ಗೇ ಎಂದು ಹೇಳಿಕೊಳ್ಳಲಾರದವನ, ಒಳಗೆ ನೋವಿಟ್ಟುಕೊಂಡು, ಪಶ್ಚಾತ್ತಾಪ ಇಟ್ಟುಕೊಂಡು ಹೊರಗೆ ದೊಡ್ಡ ರೌಡಿಯಂತೆ ಅತ್ಯಂತ ಸುಖಿಯಂತೆ ನಟಿಸುವವನ.. ಹೀಗೆ. ಮಾಸ್ಕ್ ತೆರೆದ ಹಾಗೆ ಒಂದು ದಿನ ಗಟ್ಟಿಯಾಗಿ ನಿಂತು ನಮ್ಮ ನಿಜ ಮುಖ ಎದುರಿಸದೇ ಹೋದರೆ ಉಸಿರುಗಟ್ಟುತ್ತದೆ. ಈ ಕತೆಯಲ್ಲಿ ಒಬ್ಬೊಬ್ಬರೂ ತಮ್ಮ ಮುಖಗವುಸು ತೆಗೆದಾಗ ಹಕ್ಕಿಯಷ್ಟು ಹಗುರಾಗುತ್ತಾರೆ. ನೆಲದ ಮೇಲಿದ್ದೂ ತೇಲುವ ಖುಷಿ ಅವರದು. ಬಾಲಾಜಿ ಮೋಹನ್ ಇದರ ನಿರ್ದೇಶಕ.