ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಛಾಯಾಗ್ರಾಹಕ ಡಿ.ಸಿ.ನಾಗೇಶ್‌ ಇಂದು ಬೆಳಗ್ಗೆ ಅಗಲಿದ್ದಾರೆ. ಸುಮಾರು ಮೂರೂವರೆ ದಶಕಗಳ ಕಾಲ ಅವರು ಹವ್ಯಾಸಿ ಸಿನಿಮಾ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಎಂಬತ್ತರ ದಶಕದ ಆರಂಭದಿಂದ ಇತ್ತೀಚಿನವರೆಗೂ ಸಕ್ರಿಯರಾಗಿದ್ದ ಹಿರಿಯ ಸಿನಿಮಾ ಛಾಯಾಗ್ರಾಹಕ ಡಿ.ಸಿ.ನಾಗೇಶ್‌ (66 ವರ್ಷ) ಇಂದು ಅಗಲಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ 5.30ಕ್ಕೆ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದು, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇಂದು ಸಂಜೆ ವಿಲ್ಸನ್‌ ಗಾರ್ಡನ್‌ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ಹವ್ಯಾಸಿ ಸಿನಿಮಾ ಛಾಯಾಗ್ರಾಹಕರಾಗಿದ್ದ ಡಿ.ಸಿ.ನಾಗೇಶ್‌ 1980ರಿಂದ 2010ರವರೆಗೆ ಹೆಚ್ಚು ಸಕ್ರಿಯರಾಗಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳ ಬದುಕು – ಸಾಧನೆಯನ್ನು ಬಿಂಬಿಸುವ ಫೋಟೊ ಎಕ್ಸಿಬಿಷನ್‌ ಶುರುಮಾಡಿದ್ದು ಡಿ.ಸಿ.ನಾಗೇಶ್‌. ಚಿತ್ರರಂಗದ ಎಲ್ಲರೊಂದಿಗೂ ಆತ್ಮೀಯರಾಗಿದ್ದ ಅವರು ಕನ್ನಡದ ಪ್ರಮುಖ ವಾರ ಪತ್ರಿಕೆ, ಮಾಸ ಪತ್ರಿಕೆಗಳಿಗೆ ಫ್ರೀಲ್ಯಾನ್ಸರ್‌ ಆಗಿ ಕೆಲಸ ಮಾಡಿದ್ದಾರೆ. ಅವರು ಫೋಟೋ ಶೂಟ್‌ ಮಾಡಿದ್ದ ಹಲವು ನಟ – ನಟಿಯರು ಚಿತ್ರರಂಗದಲ್ಲಿಂದು ಹೆಜ್ಜೆ ಗುರುತು ಮೂಡಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವಾರು ಕಾರ್ಯಕ್ರಮಗಳಿಗೆ ಅವರು ಫೋಟೊಗ್ರಾಫರ್‌ ಆಗಿ ದುಡಿದಿದ್ದಾರೆ. ಡಿ.ಸಿ.ನಾಗೇಶ್‌ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಮಾತನಾಡುತ್ತಾ, “ನಾಗೇಶ್ ಬಹಳ ವರ್ಷಗಳಿಂದ ನನಗೆ ಪರಿಚಿತರಾಗಿದ್ದರು. ನಾನು ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಸೆಟ್‌ನಲ್ಲಿ ಕೆಲಸ ಮಾಡುತ್ತಿದಾಗ ಪತ್ರಕರ್ತರ ಜೊತೆಯಲ್ಲಿ ಬರುತ್ತಿದ್ದರು. ಪತ್ರಿಕೆಗಳಿಗೆ ಕಲಾವಿದರ ವಿಶೇಷ ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ನಂತರದ ದಿನಗಳಲ್ಲಿ ಚಲನಚಿತ್ರ ಆಕಾಡೆಮಿ ನಡೆಸುತ್ತಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಛಾಯಾಚಿತ್ರಗಳ ಪ್ರದರ್ಶನದ ಜವಾಬ್ದಾರಿ ಹೊತ್ತಿದ್ದ ಅವರು ನನ್ನ ಸಹಕಾರ ಕೇಳುತ್ತಿದ್ದರು. ನಮ್ಮಲ್ಲಿ ಪೋಟೋಗಳ ವಿನಿಮಯ ನಡೆಯುತ್ತಿತ್ತು. ಬರೀ ಅಶ್ವತ್ಥನಾರಾಯಣ ಆಗಿದ್ದ ನನಗೆ ನಮ್ಮ ಸ್ಟುಡಿಯೋ ಹೆಸರು ‘ಪ್ರಗತಿ’ ಸೇರಿಸಿ, ‘ಪ್ರಗತಿ ಅಶ್ವತ್ಥನಾರಾಯಣ’ ಎಂದು ನಾಮಕರಣ ಮಾಡಿದ್ದೇ ಡಿ.ಸಿ.ನಾಗೇಶ್‌” ಎಂದು ಅಗಲಿದ ಹಿರಿಯ ಛಾಯಾಗ್ರಾಹಕರನ್ನು ಸ್ಮರಿಸುತ್ತಾರೆ.

LEAVE A REPLY

Connect with

Please enter your comment!
Please enter your name here