ಸೀಕ್ರೆಟ್ ಏಜೆಂಟ್ ತಯಾರಾಗುವ ರೀತಿ, ಆತ ನಿಭಾಯಿಸಬೇಕಾದ ಕಾರ್ಯಗಳು, ಸವಾಲುಗಳನ್ನು ಎಲಿ ಕೊಹೆನ್ ಕತೆಯ ಮೂಲಕ ತಿಳಿಸುತ್ತದೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ‘ದಿ ಸ್ಪೈ’ ವೆಬ್ ಸರಣಿ.
ಇದೊಂದು ವೆಬ್ ಸರಣಿ ನೋಡಿದ ಮೇಲೆ ನನ್ನ ಗೆಳೆಯನೊಬ್ಬ ಫೋನ್ ಮಾಡಿದ. ಆತ ಪ್ರೊಡಕ್ಷನ್ ಇಂಜಿನಿಯರ್. ನಿತ್ಯವೂ ಒಂದಲ್ಲಾ ಒಂದು ಸವಾಲು ಎದುರಾಗುವ ವೃತ್ತಿಯದು. ”ನೀನು ಹೇಳಿದ ಸೀರೀಸ್ ನೋಡಿದ ಮೇಲೆ ನಾನಿಂಥಾ ತಡಕ್ಲಾಂಡಿ ಕೆಲಸ ಮಾಡ್ಕೊಂಡು ಇದನ್ನೇ ದೊಡ್ಡ ತಲೆನೋವು ಅಂದ್ಕೊಂಡಿದ್ನಲ್ಲಾ” ಎಂದು ನಿಟ್ಟುಸಿರಿಟ್ಟ. ಈ ಸರಣಿ ನೋಡಿದರೆ ನಿಮ್ಮಲ್ಲೂ ಅದೇ ಭಾವ ಮೂಡಬಹುದು. ಏಕೆಂದರೆ ಅದು ಒಬ್ಬ ಗೂಢಾಚಾರನ ಕತೆ.
ಎಲಿಯಾಹು ಬೆನ್-ಶೌಲ್ ಕೊಹೆನ್ (ಎಲಿ ಕೊಹೆನ್) ಎಂಬ ಇಸ್ರೇಲಿ ಗೂಢಚಾರನ ಕತೆಯದು. ಆರು ಕಂತುಗಳಲ್ಲಿ ತೆರೆದುಕೊಳ್ಳುವ ‘ದಿ ಸ್ಪೈ’ ನೈಜ ಘಟನೆ ಆಧಾರಿತ. ಹಾಸ್ಯ ಕಲಾವಿದನಾಗಿದ್ದು ಇದರಲ್ಲಿ ಗಂಭೀರವಾಗಿ ನಟಿಸಿದ ಸಚ್ಚಾ ಬಾರೊನ್ ಕೊಹೆನ್ ನಟನೆಯ ‘ದಿ ಸ್ಪೈ’ ಕೆಲವು ಕಡೆ ಸಿನಿಮಾದಂತೆಯೂ, ಕೆಲವು ಕಡೆ ಸಾಕ್ಷ್ಯಚಿತ್ರದಂತೆಯೂ ಮತ್ತೂ ಕೆಲವೆಡೆ ಸಿನಿಮೀಯ ಸನ್ನಿವೇಶಗಳಂತೆಯೂ ಕಾಣುತ್ತದೆ. ಇಸ್ರೇಲ್‌ಗೆ ಸುತ್ತಲೂ ಶತ್ರುದೇಶಗಳೇ. 1961ರಿಂದ 1965ರವರೆಗೆ ಕಮೆಲ್ ಅಮೀನ್ ಥಾಬೆತ್ ಎಂಬ ಹೆಸರಿಟ್ಟುಕೊಂಡು ತಾನೊಬ್ಬ ಉನ್ನತ ಮಟ್ಟದ ವ್ಯಾಪಾರಿ ಎಂಬ ಸೋಗಿನೊಂದಿಗೆ ಸಿರಿಯಾದಲ್ಲಿ ಗೂಢಚಾರ್ಯೆ ಮಾಡುತ್ತಿದ್ದ ಎಲಿ ಕೊಹೆನ್ ಇವತ್ತಿಗೆ ಇಸ್ರೇಲಿನ ರಾಷ್ಟ್ರೀಯ ಹೀರೋ. ಯಾವ ಕಾಲಕ್ಕೂ ಸಮಾಜದ ತಿಳಿವಳಿಕೆಗೆ ಬಾರದವರೇ ಅತ್ಯುತ್ತಮ ಗೂಢಾಚಾರ್ಯರು ಎಂಬ ಹೇಳಿಕೆ ಆ ವಲಯದಲ್ಲಿದೆ. ಆದಾಗ್ಯೂ ಸಿರಿಯನ್ನರ ಕೈಗೆ ಸಿಕ್ಕಿಬಿದ್ದ ಎಲಿ ಕೊಹೆನ್ನನ್ನು ತನ್ನ ದೇಶದ ಗೂಢಾಚಾರ ಎಂದು ಇಸ್ರೇಲ್ ಒಪ್ಪಿಕೊಳ್ಳಲು ಕಾರಣ ವೈರಿದೇಶದ ಬಗ್ಗೆ ಆತ ಒದಗಿಸಿಕೊಟ್ಟ ಅತ್ಯಮೂಲ್ಯ ಒಳನೋಟಗಳು.
ಅರುವತ್ತರ ದಶಕದವೆಂಬುದು ಸಿರಿಯಾ ಪಾಲಿಗೆ ನಿರಂತರ ಕ್ರಾಂತಿಗಳ ಕಾಲ. ಎಡ-ಬಲ-ನಡುವಿನ ಮಧ್ಯೆ ಯಾವುದೇ ಸರ್ಕಾರ ಬಂದರೂ ಇಸ್ರೇಲ್ ಶಾಶ್ವತ ಶತ್ರು. ಜತೆಗೆ ಗೋಲಾನ್ ಹೈಟ್ಸ್‌ನಿಂದ ಇಳಿದು ಬರುತ್ತಿದ್ದ ನೀರಿನ ಸೆಲೆ ಇಸ್ರೇಲಿನ ಜನಜೀವನಕ್ಕೆ ಅತ್ಯಮೂಲ್ಯ. ಹಾಗಾಗಿ ಏನಕೇನ ಪ್ರಕಾರೇಣ ಜಲಮೂಲ ಉಳಿಸಿಕೊಳ್ಳುವುದು ಇಸ್ರೇಲಿಗಿದ್ದ ಏಕೈಕ ಗುರಿ. ಹೀಗಿರುವಾಗ ವೈರಿ ರಾಷ್ಟ್ರದ ಒಳಗೆ ಕಳಿಸಲು ಇಸ್ರೇಲಿ ಗೂಢಾಚಾರ್ಯ ಸಂಸ್ಥೆ ಮೊಸ್ಸಾದ್ ಕಣ್ಣಿಗೆ ಬೀಳುವವ ಎಲಿ ಕೊಹೆನ್. ಈಜಿಪ್ಟ್‌ನಲ್ಲಿ ಹುಟ್ಟಿ ಬೆಳೆದು ನಂತರ ಇಸ್ರೇಲ್‌ಗೆ ವಲಸೆ ಬಂದ ಆತನಿಗೆ ಅರಬ್ಬಿ ಭಾಷೆ, ಸಂಸ್ಕೃತಿ ಬಗ್ಗೆ ಹೇಳಿಕೊಡಬೇಕಿರಲಿಲ್ಲ. ಆದರೆ ವಿಮಾ ಕಂಪನಿಯಲ್ಲಿ ಗುಮಾಸ್ತಗಿರಿ ಮಾಡಿಕೊಂಡಿದ್ದ ಎಲಿ ಕೊಹೆನ್‌ಗೆ ಮೊಸ್ಸಾದ್ ವಿಸ್ತೃತವಾದ ತರಬೇತಿ ನೀಡುತ್ತದೆ. ಏಜೆಂಟ್‌ಗಳನ್ನು ತಯಾರು ಮಾಡುವ, ತರಬೇತಿ ನೀಡುವ ಸನ್ನಿವೇಶಗಳು ಸರಣಿಯಲ್ಲಿ ನಮ್ಮ ಕುತೂಹಲ ತಣಿಸುವಂತೆ ಮೂಡಿಬಂದಿದೆ.
ಜತೆಗೆ ಈ ಸರಣಿ ನೋಡಲು ಯಾವುದೇ ಪೂರ್ವಸಿದ್ಧತೆ ಬೇಕಿಲ್ಲ. ಆ ಕಾಲದ ಸಿರಿಯಾದ ರಾಜಕೀಯ ವಿದ್ಯಮಾನಗಳ ಬಗೆಗೆ ಸರಣಿಯ ಆರು ಎಪಿಸೋಡುಗಳಲ್ಲಿ ಎಲ್ಲೆಲ್ಲಿ ಬೇಕೋ ಅಲ್ಲೆಲ್ಲಾ ಅಗತ್ಯ ವಿವರಣೆ ಇರುವುದು ನೋಡುಗನ ಮಟ್ಟಿಗೆ ಅನುಕೂಲಕರ. ದೊಡ್ಡ ಮಟ್ಟದ ಆಮದು-ರಫ್ತು ಉದ್ಯಮಿಯಂತೆ ಸಿರಿಯಾ ಸೇರುವ ಎಲಿ ಕೊಹೆನ್ ಅಂದಿನ ಮಿಲಿಟರಿ ಆಡಳಿತದಲ್ಲಿ ಪ್ರಬಲವಾಗಿರುವ ಅಷ್ಟೂ ಮಂದಿಯ ವಿಶ್ವಾಸ ಗಳಿಸುತ್ತಾನೆ. ಸ್ವತಃ ಸಿರಿಯನ್ನರಿಗೂ ಪ್ರವೇಶವಿಲ್ಲದ ಮಿಲಿಟರಿ ಕಾಲೋನಿಗಳಿಗೆ ಆಹ್ವಾನದ ಮೇರೆಗೆ ಪ್ರವೇಶ ಪಡೆಯುತ್ತಾನೆ. ಎಲ್ಲೆಲ್ಲಿ ಬಂಕರ್‌ಗಳಿವೆ ಎಂಬುದನ್ನು ನೋಡಿ ಮನನ ಮಾಡಿಕೊಂಡು ಅದನ್ನು ಪ್ರಾಮಾಣಿಕವಾಗಿ ಇಸ್ರೇಲ್‌ಗೆ ಕಳಿಸುತ್ತಾನೆ. ಅಷ್ಟೇ ಅಲ್ಲ, ಬಂಕರ್‌ಗಳಲ್ಲಿರುವ ಸೈನಿಕರು ಬಿಸಿಲ ಬೇಗೆಯಲ್ಲಿ ಬೇಯುತ್ತಾರೆ, ಅವರಿಗೆ ಉಪಕಾರವಾಗುವಂಥ ಉಡುಗೊರೆಯೊಂದನ್ನು ತಾನು ನೀಡಬೇಕು ಎಂಬ ಕಾರಣ ಹೇಳಿ ಎಲಿ ಕೊಹೆನ್ ಕೈಗೊಳ್ಳುವುದು ಮರ ನೆಡುವ ಕಾರ್ಯಕ್ರಮ. ಆಳೆತ್ತರ ಬೆಳೆದು ನಿಂತ ಮರಗಳನ್ನೇ ಬಂಕರ್‌ಗಳ ಜಾಗಕ್ಕೆ ಸ್ಥಳಾಂತರಿಸಿ ನೆಡಿಸಿದ್ದು ಈತ ಸತ್ತು ಎರಡು ವರ್ಷಗಳ ನಂತರ ನಡೆದ ಸಿಕ್ಸ್ ಡೇ ವಾರ್‌ನಲ್ಲಿ ಇಸ್ರೇಲಿಗರ ಪಾಲಿಗೆ ವರದಾನವಾಯಿತು. ಆತ ನೆಟ್ಟ ಮರಗಳೇ ಬಂಕರ್‌ಗಳ ನೆಲೆ ಬಿಟ್ಟುಕೊಡುವ ಕೈಕಂಬಗಳಾದವು.
ಎಲಿ ಕೊಹೆನ್ ಇತರೆ ಏಜೆಂಟ್‌ಗಳಿಂತ ಭಿನ್ನವಾಗಿ ನಿಲ್ಲುವುದು ಆತ ತೆಗೆದುಕೊಳ್ಳುತ್ತಿದ್ದ ರಿಸ್ಕ್‌ನ ಕಾರಣದಿಂದ. ಒಂದು ಮಿಲಿಟರಿ ಆಡಳಿತವನ್ನು ಬೀಳಿಸಿ ಮತ್ತೊಂದು ಪಂಗಡದ ಮಿಲಿಟರಿ ಆಡಳಿತ ಅಧಿಕಾರಕ್ಕೆ ಬರುವಲ್ಲಿ ಆತ ಪ್ರಮುಖ ಪಾತ್ರ ವಹಿಸುತ್ತಾನೆ. ಆ ಹೊಸ ಆಡಳಿತದಲ್ಲಿ ಆತ ಅದೆಷ್ಟು ಪ್ರಬಲನಾಗಿದ್ದ ಎಂದರೆ ಸಿರಿಯಾದ ರಕ್ಷಣಾ ಸಚಿವನ ಜವಾಬ್ದಾರಿಯನ್ನು ಅವನಿಗೇ ನೀಡಲು ಮುಂದಾಗುತ್ತಾರೆ. ವೈರಿ ದೇಶದ ಒಳನುಗ್ಗಿ ಅದೇ ದೇಶದ ರಕ್ಷಣಾ ಸಚಿವನಾಗಬೇಕು ಎಂದರೆ ಆತ ಅದೆಂಥ ಮಹಾನ್ ಕಿಲಾಡಿಯಾಗಿರಬೇಕೋ ಊಹಿಸಿ. ಅವನ ಕಿಲಾಡಿತನದ ಪರಿಚಯವನ್ನೂ ನಮ್ಮ ಊಹೆಗಷ್ಟೇ ಬಿಡದೆ ಹಂತ ಹಂತವಾಗಿ ವಿವರಿಸುತ್ತದೆ ‘ದಿ ಸ್ಪೈ’.
ತಾನು ಒಳಗೊಳಗೇ ತೆಗೆದುಕೊಂಡ ನಿರ್ಧಾರಗಳ ಬಗೆಗೆ ನೆರೆಯ ರಾಷ್ಟ್ರಕ್ಕೆ ತಿಳಿಯುತ್ತದೆ ಎಂದಾದರೆ ವಿಚಾರ ಯಾವುದೋ ರೂಪದಲ್ಲಿ ಹೊರಹೋಗುತ್ತಿದೆ ಎಂಬ ಅನುಮಾನ ಬಂದೇ ಬರುತ್ತದೆ. ಗೂಢಚಾರಿಕೆ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರದ್ದಷ್ಟೇ ಸ್ವತ್ತಲ್ಲ. ಏಜೆಂಟುಗಳು ಇತರೆ ರಾಷ್ಟ್ರಗಳ ಬಳಿಯೂ ಇರುತ್ತಾರೆ. ಮೇಲಿಂದ ಎಲಿ ಕೊಹೆನ್ ತೆಗೆದುಕೊಳ್ಳುತ್ತಿದ್ದ ರಿಸ್ಕ್‌ಗಳು ಅಪಾರ. ಮಾರ್ಸ್ ಕೋಡ್‌ನಲ್ಲಿ ಕಳಿಸುವ ಸಂದೇಶಗಳು ಪಸರಿಸುವುದು ರೇಡಿಯೋ ತರಂಗ ಮೂಲಕ. ಅನುಮಾನ ಬಂದು ಹುಡುಕಿದರೆ ರೇಡಿಯೋ ತರಂಗ ಬಿತ್ತರವಾಗುವ ಸ್ಥಳ ಪತ್ತೆ ಹಚ್ಚಲಾರದ ಒಗಟೇನಲ್ಲ. ಹಾಗಾಗಿ ಕೆಲಕಾಲ ಸುಮ್ಮನಿರು ಎಂದು ಆತನಿಗೆ ಮೇಲಿಂದ ಆಜ್ಞೆ ಬಂದರೂ ಆತ ನಿರಂತರ ಸಂದೇಶಗಳನ್ನು ಕಳಿಸುತ್ತಲೇ ಇರುತ್ತಾನೆ. ಅಂಥ ಒಂದು ದಿನ ಸಿರಿಯಾದ ಏಜೆಂಟರು ಅವನನ್ನು ಪತ್ತೆ ಹಚ್ಚಿಬಿಡುತ್ತಾರೆ. ಇನ್ನೇನು ರಕ್ಷಣಾ ಸಚಿವಾಲಯಕ್ಕೇ ಕಳಿಸಲು ಸಿದ್ಧವಿದ್ಧ ಸಿರಿಯಾಕ್ಕೆ ಇದು ದೊಡ್ಡ ಪ್ರಮಾಣದ ಮುಖಭಂಗ. ಹಾಗಾಗಿ ಆತನನ್ನು ಬಹಿರಂಗವಾಗಿ ಗಲ್ಲಿಗೇರಿಸುತ್ತದೆ ಅಲ್ಲಿನ ಸರ್ಕಾರ.
ಸಾಮಾನ್ಯವಾಗಿ ಇಂಥವ ತನ್ನ ಏಜೆಂಟ್ ಎಂದು ಯಾವುದೇ ಸರ್ಕಾರ ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೂ ಎಲಿ ಕೊಹೆನ್ ತನ್ನ ಗೂಢಾಚಾರ ಎಂಬುದನ್ನು ಇಸ್ರೇಲ್ ಒಪ್ಪಿಕೊಳ್ಳುತ್ತದೆ. ಆತನ ಜೀವದಾನಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತದೆ. ಆದರೂ ಆತನನ್ನು ಸಾವಿನ ದವಡೆಯಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಗಲ್ಲಿಗೇರಿಸುವ ವಿಚಾರವನ್ನು ಮೊದಲ ಎಪಿಸೋಡಿನಲ್ಲೇ ತಿಳಿಸಿ, ನಂತರದಲ್ಲಿ ಅಲ್ಲಿಯವರೆಗಿನ ಪಯಣದ ಬಗೆಗೆ ವಿವರಿಸುವ ಮಾರ್ಗ ಆಯ್ಕೆ ಮಾಡಿಕೊಂಡದ್ದು ನೋಡುಗನ ಮಟ್ಟಿಗೆ ಅನುಕೂಲಕರವಾಗಿದೆ. ಇಲ್ಲವಾದರೆ ಅಷ್ಟೂ ಹೊತ್ತು ಆ ಪಾತ್ರದ ಜತೆಗೊಂದು ನಂಟು ಬೆಳೆಸಿಕೊಂಡು ಕೊನೆಗೆ ಆತ ಸಾಯುತ್ತಾನೆ ಎಂದು ತಿಳಿಯುವುದು ನೋಡಲು ಕಷ್ಟವಾಗುವ ವಿಚಾರ.