ಮನಸಿನ ತೊಯ್ದಾಟಕ್ಕೆ ಸಿನಿಮಾದುದ್ದಕ್ಕೂ ಅಲೆಗಳ ರೂಪಕ ಬಳಸಲಾಗಿದೆ. ಇಲ್ಲಿ ಯಾರೂ ಕೆಟ್ಟವರಿಲ್ಲ. ಎಲ್ಲರೂ ಸಂದರ್ಭಕ್ಕೆ ಪ್ರತಿಕ್ರಿಯಿಸುತ್ತಾ ಹೋಗುತ್ತಾರಷ್ಟೆ – ‘ಗೆಹ್ರಾಯಿಯಾ’ ಹಿಂದಿ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಇಲ್ಲಿ ಯಾರೂ ಕೆಟ್ಟವರಿಲ್ಲ. ಕಪ್ಪಲ್ಲದ, ಬಿಳಿಯಲ್ಲದ, ಗ್ರೇ ಕ್ಯಾರೆಕ್ಟರುಗಳು. ಇಲ್ಲಿ ಯಾರದೂ ತಪ್ಪಿಲ್ಲ. ಸಂದರ್ಭ ಸೃಷ್ಟಿಸುವ ಅನಿವಾರ್ಯತೆ ಇಲ್ಲಿ ಎಲ್ಲರನ್ನೂ ಮುನ್ನಡೆಸುತ್ತದೆ. ಪರಿಸ್ಥಿತಿಗಳು ಮನುಷ್ಯರನ್ನು ಬಟ್ಟೆ ಒಗೆದಂತೆ ಒಗೆಯುತ್ತವೆ. ಬಟ್ಟೆ ಹಿಂಡುವಂತೆಯೇ ಹಿಂಡುತ್ತವೆ ಮನಸುಗಳನ್ನು. ಆದರೆ, ಒಣಗಿ, ಮತ್ತೆ ಇಸ್ತ್ರಿಯಾಗಿ ಮೈ ಏರಿ ಮಿನುಗುತ್ತದೆ ಬದುಕ ಬಟ್ಟೆ. ಸಿದ್ಧವಾಗುತ್ತದೆ ಮತ್ತೊಂದು ಒಗೆತಕ್ಕೆ.

‘ಗೆಹ್ರಾಯಿಯಾ’ ಸಿನಿಮಾ ಮುಗಿದ ಮೇಲೆ ನನಗೆ ಅನಿಸಿದ್ದಿದು. ಸಿನಿಮಾ ಆರಂಭವಾಗಿ ಒಂದರ್ಧ ಗಂಟೆ ನೋಡುವಾಗ ಇದ್ಯಾವುದೋ ಮತ್ತದೇ ಮಾತಿಗೊಮ್ಮೆ ‘Fuck’ ಅನ್ನುವ ಕಿತ್ತೋದ ಸಿನಿಮಾ ಅನಿಸಿತ್ತು. ಆದರೆ ಕತೆ ಅಲ್ಲಿಂದಾಚೆ ಹೂದಳದಂತೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಈ ಕತೆಯ ಎಲ್ಲ ದಳಗಳೂ ಒಂದಕ್ಕೊಂದು ತಂತು ಬೆಸೆದುಕೊಂಡು, ಒಂದು ಹರಿದರೆ ಮತ್ತೊಂದೂ ಹರಿಯುವಷ್ಟು ಸೂಕ್ಷ್ಮವಾಗಿ ಹೆಣೆದುಕೊಂಡಿರುತ್ತವೆ. ಝೇನ್ ತನ್ನ ಫಿಯಾನ್ಸಿ ಟಿಯಾಳೊಂದಿಗೆ ಕರಣ್ ಜೊತೆ ಅದಾಗಲೇ ಆರು ವರ್ಷಗಳಿಂದ ಇರುವ ಅಲಿಷಾಳನ್ನು ಭೇಟಿಯಾಗ್ತಾನೆ. ಅಲಿಷಾ ಮತ್ತು ಟಿಯಾ ಕಸಿನ್ಸ್. ಝೇನ್‌ನ ವ್ಯವಹಾರದ ಬಂಡವಾಳದ ಪಾಲು ಟಿಯಾಳ ಅಪ್ಪನದೂ.

ಪ್ರೇಮ ಎಂಬುದೊಂದು ವಿಚಿತ್ರ ವಸ್ತು. ಅದು ಯಾರ ನಡುವೆ ಯಾವಾಗ ಯಾಕಾಗುತ್ತದೆಂದು ಹೇಳಲು ಬಾರದು. ಇಲ್ಲಿಯೂ ಹಾಗಾಗುತ್ತದೆ. ಟಿಯಾಳ ಬಾಯ್‌ಫ್ರೆಂಡ್‌ ಝೇನ್‌ಗೆ (ಸಿಧ್ದಾರ್ಥ್) ಅಲಿಷಾಳ(ದೀಪಿಕಾ) ಮೇಲೆ ಪ್ರೀತಿಯಾಗುತ್ತದೆ. ಬಾಲ್ಯದಲ್ಲಿ ಕಹಿಯುಂಡ ಹಿನ್ನೆಲೆಯಿಂದಲೋ ಎಂಬಂತೆ ಅವರಿಬ್ಬರಿಗೂ ತಾವು ಪರಸ್ಪರ ಉತ್ತಮ ಆಯ್ಕೆ ಅನಿಸಿಬಿಡುತ್ತದೆ. ಜೊತೆಯಲ್ಲಿ ಬದುಕಲು ತೀರ್ಮಾನಿಸುತ್ತಾರೆ. ಆದರೆ ಇದನ್ನು ಪಾಪ ಟಿಯಾಗೆ ಹೇಗೆ ಹೇಳುವುದು? ಮತ್ತು ಅವರಪ್ಪನ ಬಂಡವಾಳ? ಅದನ್ನು ಹಿಂದಿರುಗಿಸಿ ನಂತರ ಹೇಳುವ ತಯಾರಿಯಲ್ಲಿದ್ದವನು ವ್ಯವಹಾರದಲ್ಲಿ ಮತ್ತಷ್ಟು ಆಳಕ್ಕೆ ಬಿದ್ದು, ಕಾರ್ಪೋರೇಟ್ ಜಗತ್ತಿನ, ಬ್ಯುಸಿನೆಸ್‌ನ ಅನಿವಾರ್ಯತೆಗಾಗಿ ಯಾರನ್ನು ಉಳಿಸಿಕೊಳ್ಳಲೂ ತೋಚದಾಗುತ್ತಾನೆ. ಅಷ್ಟರಲ್ಲಿ ಅಲಿಷಾ ಬಸುರಿ ಕೂಡ ಆಗಿರುತ್ತಾಳೆ. ಕತೆ ಇಲ್ಲಿಂದ ಗಾಢವಾಗುತ್ತಾ ಹೋಗುತ್ತದೆ. ಸುಳಿಗಳು ಸುತ್ತುತ್ತಾ ಎಲ್ಲ ಪಾತ್ರಗಳನ್ನೂ ಎಳೆದುಕೊಳ್ಳುತ್ತಾ ಹೋಗುತ್ತದೆ.

ಝೇನ್‌ ಯಾರನ್ನು ಮುಗಿಸಲಿ ಈಗ ಅಂತ ಯೋಚಿಸುತ್ತಾ ತಾನೇ ಮುಗಿಯುವಾಗ ಕತೆ ಅಂತ್ಯವಾಗಿದ್ದರೆ ಅದು ಇಷ್ಟು ಕಾಡುತ್ತಿರಲಿಲ್ಲವೇನೋ.. ಬಾಲ್ಯದಲ್ಲಾದ ತಾಯಿಯ ಆತ್ಮಹತ್ಯೆ, ಅಪ್ಪನ ಮೇಲಿನ ಸಿಟ್ಟು, ಹಳೆಯ ಗೆಳೆಯನೊಂದಿಗೆ ಹರಿದುಕೊಂಡ ಸಂಬಂಧ, ಪ್ರೇಮಿ ಕೊಟ್ಟ ಪೆಟ್ಟು, ಇದಿಷ್ಟೂ‌ ಭಾರ ಹೊತ್ತ ಅಲಿಷಾಗೆ ಟಿಯಾ ಮತ್ತೊಂದು ಸತ್ಯ ಹೇಳುತ್ತಾಳೆ. ಅವಳ ಹುಟ್ಟಿನ ಗುಟ್ಟು ಅದು. ಇಷ್ಟು ವರ್ಷ ಅವಳು ಯಾರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಳೋ ಅವರೀಗ ನಿರ್ದೋಷಿ. ಇಲ್ಲಿ ಅಪ್ಪನಾಗಿ‌ ನಾಸಿರುದ್ದೀನ್ ಷಾ ಆಡುವ‌ ಮಾತುಗಳು ನೇರವಾಗಿ ಹೃದಯಕ್ಕೆ ತಾಕುತ್ತವೆ. ಎಲೆನ್ ಹಾಪ್ಕಿನ್ಸ್ ಹೇಳುವಂತೆ “ಸತ್ಯವೆಂಬುದು ದೃಷ್ಟಿಕೋನದ ಬಣ್ಣವಷ್ಟೆ” ಅನಿಸುತ್ತದೆ.

ಇಲ್ಲಿಗೂ ಮುಗಿಯುವುದಿಲ್ಲ ಸಿನಿಮಾ. ಮತ್ತೆ ಭೇಟಿಯಾಗುತ್ತಾರೆ ಟಿಯಾ, ಅಲಿಷಾ… ಎಲ್ಲ ಮುಗಿದ ಮೇಲೆ. ಹುಡುಗಾಟದ ಹುಡುಗಿಯಾಗಿದ್ದ ಟಿಯಾ ‘ಇನ್ನೆಷ್ಟು ದಿನ ನಾವು ಈ ಉಸಿರುಕಟ್ಟುವಿಕೆಯಲ್ಲಿರಬೇಕೆಂದು ಕೇಳುತ್ತಾ ಆಳದ ಬಾವಿಯಿಂದ ತನ್ನನ್ನೂ ಎತ್ತಿಕೊಂಡು ಅಲಿಷಾಳನ್ನೂ ಕೈ ಹಿಡಿದು ‘ಹೋಗೋಣ ಬಾ’ ಅನ್ನುತ್ತಾಳಲ್ಲಾ… ಅಲ್ಲಿಗೆ ಮತ್ತೆ ತೊಡಲು ಸಿದ್ದ ಬದುಕಿನ ಒಗೆದ ಬಟ್ಟೆ. ಸಿದ್ದ ಅದು ಮತ್ತೊಂದು ಒಗೆತಕ್ಕೆ. ಮನಸಿನ ತೊಯ್ದಾಟಕ್ಕೆ ಸಿನಿಮಾದುದ್ದಕ್ಕೂ ಅಲೆಗಳ ರೂಪಕ ಬಳಸಲಾಗಿದೆ. ಇಲ್ಲಿ ಯಾರೂ ಕೆಟ್ಟವರಿಲ್ಲ. ಎಲ್ಲರೂ ಸಂದರ್ಭಕ್ಕೆ ಪ್ರತಿಕ್ರಿಯಿಸುತ್ತಾ ಹೋಗುತ್ತಾರಷ್ಟೆ.

ಈ ಕತೆಯ ಮುಖ್ಯಪಾತ್ರಗಳ, ಬದುಕುಗಳ ಗೊಂದಲದ ಮೂಲ ಅವರ ತಂದೆ ತಾಯಿಗಳ ಸಂಬಂಧಗಳ ಗೋಜಲಿನಲ್ಲಿದೆ. ಆದರೆ ಇಷ್ಟು ಎಲೈಟ್ ಜನರೂ ಸ್ವೇಚ್ಛೆ ಬಯಸುವವರೂ ತಮ್ಮ ತಂದೆ ತಾಯಿಗಳ ಅಫೇರ್‌ಗಳನ್ನು ಸಮಾಧಾನದಿಂದ ಒಪ್ಪದೆ ನೈತಿಕತೆ ಹುಡುಕುವುದು ಎಷ್ಟು ಸರಿ ಅನಿಸುತ್ತದೆ. ಉಳಿದಂತೆ ಸಿನಿಮಾ ಮೊದಲು ನಮ್ಮನ್ನು ದಡದಲ್ಲಿ‌ನಿಲ್ಲಿಸಿ ನಿಧಾನಕ್ಕೆ ಪಾದ ತೋಯಿಸಿ, ಮೆಲ್ಲಗೆ ಎಳೆದುಕೊಳ್ಳುತ್ತಾ ಸುಳಿಯಂತೆ ಒಮ್ಮೆ ತಿರುಗಿಸಿಬಿಡುತ್ತದೆ. ಹಾಗೆ ತಿರುಗುವಾಗ ಯಾರು ಸರಿ? ಯಾವುದು ಸತ್ಯ? ಪ್ರಶ್ನೆಗಳಿಗೆ ನಾವು ನಾವೇ ಉತ್ತರ ಕಂಡುಕೊಳ್ಳುವಂತೆ ಮಾಡುತ್ತದೆ. ಗೆಹ್ರಾಯಿಯಾ ಅಂದರೆ ‘ಆಳಗಳು’. ಪ್ರತಿಮನಸ್ಸಿಗೂ ‌ಇಲ್ಲಿ ಅದರದೇ ಆಳ!

LEAVE A REPLY

Connect with

Please enter your comment!
Please enter your name here