ಐತಿಹಾಸಿಕ ಚಿತ್ರ ಮಾಡುವಾಗ ಅದನ್ನು ‘ಸುಂದರ’ವಾಗಿಯೇ ಕಾಣಿಸಬೇಕು ಎನ್ನುವ ‘ಬನ್ಸಾಲಿಯಿಸಂ’ ಅನ್ನು ಈ ಚಿತ್ರ ಮೀರಿದೆ ಎನ್ನುವುದು ಚಿತ್ರದ ಗೆಲುವು. ಸಂಗೀತ ಈ ಚಿತ್ರದ ಶಕ್ತಿ. ZEE5ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಸಂಹಿತಾ – ದಿ ಸ್ಕ್ರಿಪ್ಟ್’ ನೋಡಬೇಕಾದ ಮರಾಠಿ ಸಿನಿಮಾ.
ಒಂದು ಕಥೆ – ಕಥೆಯ ಹೆಸರು ‘ದರ್ಪಣ್’ ಅಥವಾ ಕನ್ನಡಿ. ಅದು ಆ ಕಥೆಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಎಂದರೆ ಆ ಕಥೆ ಅದಕ್ಕೆ ಸಂಬಂಧಿಸಿದ ನಾಲ್ಕು ಜನ ಮಹಿಳೆಯರಿಗೆ ನಾಲ್ಕು ರೀತಿಯಲ್ಲಿ ಕಂಡಿರುತ್ತದೆ. ಆ ನಾಲ್ವರೂ ಅದರಲ್ಲಿ ತಮ್ಮ ತಮ್ಮ ಆತ್ಮದ ಪ್ರತಿಬಿಂಬವನ್ನು ನೋಡಿಕೊಂಡಿರುತ್ತಾರೆ. ಕಥೆಯ ವಿಶೇಷತೆ ಎಂದರೆ ಆ ನಾಲ್ಕು ಹೆಂಗಸರು ಇಂದಿನ ಹೆಂಗಸರ ಪ್ರತಿನಿಧಿಗಳಾಗಿ, ಅವರ ಸಮಸ್ಯೆಗಳು ಇಂದಿನ ಸಮಸ್ಯೆಗಳಾಗಿ ಕಂಡು ಬರುವ ಸಂದರ್ಭದಲ್ಲೇ ಅವು ಸುಮಾರು 75 ವರ್ಷಗಳ ಹಿಂದೆ ಹೆಂಗಸರು ಎದುರಿಸುತ್ತಿದ್ದ ಸಮಸ್ಯೆಗಳಿಗಿಂತ ಭಿನ್ನವಾಗಿ ಏನೂ ಇಲ್ಲ ಎನ್ನುವುದನ್ನು ನಿರ್ದೇಶಕರಾದ ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕ್ತಂಕರ್ ಯಾವುದೇ ಘೋಷಣೆಯನ್ನು ಬಳಸಿಕೊಳ್ಳದೆ ನಾಟಕೀಯತೆಯೊಂದಿಗೆ ಚಿತ್ರ ಭಾಷೆಯಲ್ಲಿ ಕಟ್ಟಿಕೊಡುತ್ತಾರೆ.
ಸ್ವಂತಿಕೆ ಮತ್ತು ಆತ್ಮವಿಶ್ವಾಸ ಮಾಳವಿಕಾಳಲ್ಲಿ ಮತ್ತು ರೇವತಿಯಲ್ಲಿ ಒಂದು ಅವಗುಣವಾಗಿಯೇ ಕಂಡುಬರುತ್ತದೆ – ಸಮಾಜಕ್ಕೂ, ಸಂಸಾರಕ್ಕೂ. ಭೈರವಿ ಮತ್ತು ಹಿಮಾಂಗಿನಿ ಮದುವೆಯಾದ, ಮಗುವಿನ ತಂದೆಯಾದ ಪುರುಷರನ್ನು ಪ್ರೀತಿಸುತ್ತಾರೆ ಮತ್ತು ಆ ಸಂಬಂಧದಲ್ಲಿ ಅವರನ್ನು ಮತ್ತು ಅವರನ್ನು ಮಾತ್ರ ಅಪರಾಧಿಗಳನ್ನಾಗಿ ನೋಡಲಾಗುತ್ತದೆ. ಆದರೆ ಸಿನಿಮಾಕ್ಕೆ ಒಂದು ಸುಂದರ ಅರ್ಥ ಕೊಡುವುದು ಚಿತ್ರಕ್ಕೆ ಕೊಡುವ ಮುಕ್ತಾಯದ ಬಗ್ಗೆ ರೇವತಿ ಹೇಳುವ ಮಾತು. ಅದಕ್ಕೆ ಮೊದಲು ಚಿತ್ರದ ಬಗ್ಗೆ ಸ್ವಲ್ಪ…
ಸಂಹಿತಾ – The script. ಇನ್ನೇನು ಸಾವಿನ ಹೊಸ್ತಿಲಲ್ಲಿರುವ ಚಿತ್ರ ನಿರ್ಮಾಪಕನೊಬ್ಬನಿಗೆ ಒಂದೊಮ್ಮೆ ತಾನು ಓದಿ, ಮೆಚ್ಚಿದ್ದ ಕಥೆಯೊಂದನ್ನು ಚಿತ್ರ ಮಾಡುವ ಹಿರಿಯಾಸೆ. ಆದರೆ ಅವನ ಆರೋಗ್ಯ ಅದಕ್ಕೆ ಸಹಕರಿಸುತ್ತಿಲ್ಲ. ಆತನ ಮಟ್ಟಿಗೆ ಅದು ಆತನ ಕೊನೆಯ ಆಸೆಯೂ ಹೌದು. ಆತನ ಎರಡನೆಯ ಹೆಂಡತಿ ಶಿರೀನ್. ಅವರಿಬ್ಬರದೂ ಅನುಪಮ ದಾಂಪತ್ಯ. ಶಿರೀನ್ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ರೇವತಿಗೆ ಆ ಕಥೆಯನ್ನು ಚಿತ್ರ ಮಾಡಿಕೊಡಲು ಕೇಳುತ್ತಾಳೆ. ಶಿರೀನ್ ಆ ಕಥೆಯನ್ನು ವರ್ಣಿಸುವುದು ‘ಅದೊಂದು ಸಮರ್ಪಣೆಯ ಕಥೆ, ಒಂದು passionate love story’ – ನಂತರ ತನ್ನ ದಾಂಪತ್ಯದ ಬಗ್ಗೆ ಶಿರೀನ್ ಮಾತನಾಡುತ್ತಾಳೆ.
ಅವಳು ಗಂಡನಿಗೆ ಎರಡನೆಯ ಹೆಂಡತಿ. ಮೊದಲ ಹೆಂಡತಿಗೆ ಒಬ್ಬ ಮಗನಿದ್ದಾನೆ. ದೊಡ್ಡ ಸ್ಥಿತಿವಂತರಾದ ಗಂಡನ ಕುಟುಂಬ ಇವರ ಮದುವೆಗೆ ಒಪ್ಪುವುದೇ ಒಂದು ನಿಬಂಧನೆಯ ಮೇಲೆ. ಯಾವುದೇ ಕಾರಣಕ್ಕೂ ಶಿರೀನ್ ಮಗುವನ್ನು ಹಡೆಯುವ ಹಾಗಿಲ್ಲ, ಆಸ್ತಿ ಪಾಲಾಗುವ ಹಾಗಿಲ್ಲ! ಆದರೆ ಶಿರೀನ್ ಯಾವ ಪರಿ ಪ್ರೇಮದಲ್ಲಿ ಮುಳುಗಿರುತ್ತಾಳೆ ಎಂದರೆ ಅದಕ್ಕೆ ಒಪ್ಪುತ್ತಾಳೆ. ಮೊದಲ ಹೆಂಡತಿಯಲ್ಲಿ ಹುಟ್ಟಿದ ಅವಳ ಗಂಡನ ಮಗ ಇಲ್ಲಿಯವರೆಗೂ ಅವಳನ್ನು ‘ಅಮ್ಮಾ’ ಎಂದು ಕೂಗೇ ಇಲ್ಲ. ಆ ಬಗ್ಗೆ ಅವಳಿಗೆ ನೋವಿದೆ, ಆದರೆ ಅದಕ್ಕಾಗಿ ಅವಳ ಬದುಕು, ಮಾತು ಯಾವುದೂ ಕಹಿ ಆಗಿಲ್ಲ. ಆದ್ದರಿಂದಲೇ ಅವಳ ಪ್ರಕಾರ ‘ದರ್ಪಣ್’ ತೀವ್ರ ಪ್ರೇಮದ, ಸಮರ್ಪಣೆಯ ಕಥೆ. ಅದು ಆಕೆಯ ದೃಷ್ಟಿಕೋನ. ಚಿತ್ರ ನಿರ್ಮಾಣದ ಮೊದಲ ಕಾಣಿಕೆಯಾಗಿ ಶಿರೀನ್, ರೇವತಿಗೆ ಒಂದು ಅನುಪಮ ಸೌಂದರ್ಯದ ಕೈಗನ್ನಡಿಯನ್ನು ಕೊಡುಗೆಯಾಗಿ ನೀಡುತ್ತಾಳೆ.
ಆದರೆ ಒಂದು ಸಮಸ್ಯೆ, ಆಕೆಗೆ ಮತ್ತು ಆಕೆಯ ಗಂಡನಿಗೆ ಮಸುಕುಮಸುಕಾಗಿ ಕಥೆ ನೆನಪಿದೆ, ಕತೆಗಾರ್ತಿ ಯಾರು ಎನ್ನುವುದು ನೆನಪಿದೆ, ಆದರೆ ಅವರ ಬಳಿಯಿದ್ದ ಪುಸ್ತಕ ಕಳೆದುಹೋಗಿದೆ. ಅದನ್ನು ಹುಡುಕಿ, ಸ್ಕ್ರಿಪ್ಟ್ ಬರೆಯುವುದು ರೇವತಿಯ ಕೆಲಸ. ನಾಯಕಿಯ ಪಾತ್ರಕ್ಕೆ ಶಿರೀನ್, ಹೇಮಾಂಗಿನಿ ಎನ್ನುವ ಕಲಾವಿದೆಯನ್ನು ಸೂಚಿಸುತ್ತಾಳೆ. ರೇವತಿ ಸಾಠೆ, ಯಶಸ್ವೀ ನಿರ್ದೇಶಕಿ. ಮಗಳು ರಿಶಿ ವ್ಯಾಲಿಯ ಬೋರ್ಡಿಂಗ್ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಅವಳ ಅಸಿಸ್ಟೆಂಟ್ ಹೇಳುವ ಮಾತು ಕೇಳಿದರೆ ಅವಳ ಮದುವೆಯಲ್ಲಿ ಏನೋ ಸಮಸ್ಯೆ ಇದೆ, ಗಂಡ ಹೆಂಡತಿ ಡಿವೋರ್ಸ್ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಆದರೆ ಕಥೆ ಶುರುವಾದ ಸುಮಾರು 60-70 ನಿಮಿಷಗಳವರೆಗೆ ಗಂಡ ತೆರೆಯ ಮೇಲೆ ಬರುವುದೇ ಇಲ್ಲ.
ರೇವತಿ ಲೈಬ್ರರಿಗಳನ್ನು ಅಲೆಯುತ್ತಾಳೆ, ಪುಸ್ತಕ ಸಿಗುವುದಿಲ್ಲ. ಕಡೆಗೆ ಕಥೆ ಬರೆದ ತಾರಾ ದೇಸ್ಕರ್‌ಳನ್ನು ಸಂಪರ್ಕಿಸುತ್ತಾಳೆ. ಆಕೆಯ ಬಳಿಯೂ ಆ ಪುಸ್ತಕ ಇಲ್ಲ, ಎಲ್ಲೋ ಮಿಸ್ ಆಗಿದೆ. ನೆನಪಿನಿಂದ ಕಥೆ ಹೇಳುತ್ತೇನೆ ಎನ್ನುತ್ತಾಳೆ. ಅದೊಂದು ಸಮರ್ಪಣೆಯ ಕಥೆಯಂತೆ ಹೌದೆ ಎನ್ನುವ ರೇವತಿಯ ಮಾತಿಗೆ ಬಿಲ್ಕುಲ್ ಅಲ್ಲ ಎಂದು ತಲೆ ಅಲ್ಲಾಡಿಸುವ ಆಕೆಯ ಪ್ರಕಾರ ಅದೊಂದು ‘ಅಸಮಾನ ವರ್ಗಗಳ ನಡುವೆ ನಡೆದ ಶೋಷಣೆಯ ಕಥೆ’. ಈ ಭಿನ್ನನೋಟ ಕಂಡು ಕಥೆಗಾರ್ತಿ ರೇವತಿಯ ಕುತೂಹಲ ಕೆರಳುತ್ತದೆ. ಕಥೆ ನಡೆದ ಅರಮನೆ ತೋರಿಸುತ್ತೇನೆ ಎಂದು ಲೇಖಕಿ ಕರೆದುಕೊಂಡು ಹೋಗುತ್ತಾಳೆ, ಅಲ್ಲಿನ ಕೆಲಸಗಾರರೊಂದಿಗೆ ಅಧಿಕಾರಯುತವಾಗಿ ಮಾತನಾಡುತ್ತಾಳೆ. ಚಹಾದ ಜೊತೆಗೆ ಕಥೆ ಹೇಳುತ್ತಾ ಹೋಗುತ್ತಾಳೆ. ಆಕೆ ಕಥೆ ಹೇಳುತ್ತಿದ್ದಂತೆ ರೇವತಿಯ ಕಲ್ಪನೆಯಲ್ಲಿ ಅದು ಘಟಿಸುತ್ತಾ ಹೋಗುತ್ತದೆ. ಆಕೆ ತನ್ನನ್ನು ತಾನು ಮಹಾರಾಣಿಯ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಾಳೆ. ಅದಕ್ಕೂ ಕಾರಣ ಇದೆ.
ಕಥೆಯ ಕಾಲ ಸುಮಾರು 1946. ಹೇರ್ವಾಡ ಸಂಸ್ಥಾನದ ರಾಜ ಸತ್ಯಶೀಲ. ಅದು ಅವನ ಮಗನ ಮುಂಡನದ ಸಂದರ್ಭ. ರಾಜನ ಮಲತಾಯಿ ಅರಮನೆಯೊಳಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲೆಂದು ತನ್ನ ಅಣ್ಣನ ಮಗಳು ಮಾಳವಿಕಾಳನ್ನು ಮಹಾರಾಜನಿಗೆ ಮದುವೆ ಮಾಡಿಸಿದ್ದಾಳೆ. ಅದು ಕಡೆಗೂ ‘ಮಾಡಿಸಿದ’ ಮದುವೆಯಾಗಿಯೇ ಉಳಿದುಬಿಟ್ಟಿದೆ. ಮಾಳವಿಕ ಸ್ವತಂತ್ರ ಮನೋಭಾವದ ಹೆಣ್ಣು, ಸ್ವಾಭಿಮಾನಿ. ಇಂಗ್ಲಿಷ್ ಸಾಹಿತ್ಯ ಅವಳ ವಿಶೇಷ ಆಸಕ್ತಿ. ಇಬ್ಬರೂ ಒಳ್ಳೆಯವರು, ಇಬ್ಬರ ನಡುವಿನಲ್ಲಿ ಹೊಂದಾಣಿಕೆ ಇದೆ, ಪರಸ್ಪರ ಗೌರವ ಇದೆ. ಆದರೆ ಪ್ರೇಮದ ತೀವ್ರತೆಯಿಲ್ಲ. ಮುಂಡನದ ಸಂಜೆ, ಸಮಾರಂಭದಲ್ಲಿ ಹಾಡಲು ಭೈರವಿ ಎನ್ನುವ ಗಾಯಕಿ ಬಂದಿದ್ದಾಳೆ. ಜೊತೆಯಲ್ಲಿ ಆಕೆಯ ತಾಯಿ. ಇಡೀ ಚಿತ್ರದ ತೀವ್ರ ಅನುರಕ್ತಿಯ ಕ್ಷಣಗಳಿರುವುದು ಚಿತ್ರದ ಹಾಡುಗಳಲ್ಲಿ. ಸಂಭಾಷಣೆ ಮತ್ತು ದೃಶ್ಯಗಳು ಕಥೆಯನ್ನು ವಿಸ್ತಾರಗೊಳಿಸಿದರೆ, ಹಾಡುಗಳು ಅದನ್ನು ಆಳವಾಗಿಸುತ್ತವೆ.
ಆ ಸಂಜೆ ಭೈರವಿಯ ಮೊದಲ ಆಲಾಪದಲ್ಲೇ ರಾಜನ ಹೃದಯ ಅಲ್ಲೋಲ ಕಲ್ಲೋಲವಾಗುತ್ತದೆ. ಅವನ ಅಷ್ಟು ವರ್ಷಗಳ ಒಂಟಿಹೆಜ್ಜೆಗಳ ಪಯಣಕ್ಕೆ ತಣ್ಣನೆಯ ಗಾಳಿ ಬೀಸಿದಂತಾಗುತ್ತದೆ. ಮತ್ತು ರಾಣಿಗೂ ಇದರ ಅರಿವಾಗುತ್ತದೆ. ಆಗ ಭೈರವಿ ಹಾಡುವ ಹಾಡು, ‘ಅಲ್ಫಾಸೋಂ ಕೊ ಹೈ ಮಂಜೂರ್ ದಸ್ತೂರ್ ಎ ಜಮಾನ, ಸುರ್ ತೊ ಹೈ ನಾ ಸಮಜ್, ಗುನ್ಹೇಗಾರ್ ಹೋಗಯಾ…’ ನಿಜ, ಪದಗಳು ಜಗದ ನೀತಿನಿಯಮಗಳನ್ನು ಅರಿತು, ಅಂಕೆಯೊಳಗೇ ಇರುತ್ತವೆ. ಆದರೆ ಎದೆ ಮಿಡಿದಂತೆ ನಡೆಯುವ ರಾಗಗಳಿಗೆ ನಿಯಮಾವಳಿಗಳನ್ನು ಕಲಿಸುವವರು ಯಾರು? ರಾಜ ಭೈರವಿಯ ಹಾಡಿಗೆ ಮೆಚ್ಚುಗೆ ಸೂಚಿಸಲು ಹೇಳಿಕಳಿಸುತ್ತಾನೆ. ನಾವು ಆಸ್ಥಾನ ಹಾಡುಗಾರರೇ ಹೊರತು, ಖಾಸಗಿ ಬೈಠಕ್ ಮಾಡುವವರಲ್ಲ ಎಂದು ಆಕೆಯ ತಾಯಿ ಮೊದಲು ನಿರಾಕರಿಸಿದರೂ ಒತ್ತಾಯದ ಮೇರೆಗೆ ಮಗಳನ್ನು ಕಳಿಸಿಕೊಡುತ್ತಾಳೆ. ರಾಜ ಕೇಳುವುದು, ನನಗಾಗಿ ಒಂದು ಹಾಡು ಹಾಡುವೆಯಾ ಎಂದು ಮಾತ್ರ. ಭೈರವಿ ಒಪ್ಪಿಕೊಳ್ಳುತ್ತಾಳೆ, ಆಕೆಯ ಪ್ರಯಾಣ ಮುಂದೂಡುತ್ತಲೇ ಇರುತ್ತದೆ. ಸಂಜೆಗಳಲ್ಲಿ ಅರಮನೆ ಪೂರಾ ಭೈರವಿಯ ರಾಗಗಳು. ರಾಜ ಕಿರೀಟ ಕಳಚಿಟ್ಟು ಹಾಡಿಗೆ ತಲೆದೂಗುತ್ತಿರುತ್ತಾನೆ. ಆಗ ಅವಳು ಹಾಡುವ ಒಂದು ಹಾಡಿನ ಭಾವ, ‘ಪಲ್ ಕೆ ನಾ ಮೂಂದೋ ಸಾಜನಾ …ಕಣ್ಣೆವೆಗಳನ್ನು ಮುಚ್ಚದಿರು ಪ್ರಿಯಾ….’ ಸದಾ ಕಣ್ಣುಮುಚ್ಚಿ ಹಾಡು ಕೇಳುವ ರಾಜನ ಮುಖದ ತುಂಬಾ ಮುಗುಳ್ನಗೆ. ಆತ ಕಣ್ಣು ಬಿಡುತ್ತಾನೆ. ಈಗ ಭೈರವಿಯ ಮುಖದಲ್ಲಿ ಮುಗುಳ್ನಗೆ.
ರಾಜನಿಗೆ ರಾಣಿಯೊಂದಿಗೆ ಯೂರೋಪಿಗೆ ಹೊರಡಬೇಕಾದ ಕಾರ್ಯಕ್ರಮವಿರುತ್ತದೆ. ಸ್ನೇಹಿತರೊಂದಿಗೆ ಶಿಕಾರಿ ಹೋಗುತ್ತೇನೆ ಎಂದು ಮಾತುಕೊಟ್ಟಿದ್ದೇನೆ, ಸ್ವಲ್ಪ ತಡೆದು ಹೋಗೋಣ ಎಂದರೆ ರಾಣಿ ಒಪ್ಪುವುದಿಲ್ಲ. ಸರಿ ಆಮೇಲೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದ ರಾಜನನ್ನು ಬಿಟ್ಟು ಗೊತ್ತಾದ ಸಮಯಕ್ಕೆ ಹೊರಟುಬಿಡುತ್ತಾಳೆ. ಸ್ನೇಹಿತರೊಂದಿಗೆ ಶಿಕಾರಿಗೆ ಹೊರಟ ರಾಜ ಜೊತೆಯಲ್ಲಿ ಭೈರವಿ ಮತ್ತು ಆಕೆಯ ತಾಯಿಯನ್ನೂ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ರಾಜ ಮತ್ತು ಭೈರವಿ ಒಂದಾಗುತ್ತಾರೆ. ಮಹಲಿಗೆ ವಾಪಸ್ ಬಂದ ರಾಜ ಕೂಡಲೆ – ಬಹುಶಃ ಗಿಲ್ಟ್‌ನಿಂದ – ಹೆಂಡತಿಯನ್ನು ನೋಡಲು ಹೋಗುತ್ತಾನೆ. ಆಕೆ ಯುರೋಪಿಗೆ ಹೊರಟಾಗಿರುತ್ತದೆ. ಮತ್ತೊಂದು ಕ್ಷಣ ತಡಮಾಡದೆ, ಭೈರವಿಗೆ ಒಂದು ಮಾತೂ ಹೇಳದೆ ತಾನೂ ಯುರೋಪಿಗೆ ಹೊರಟು ಬಿಡುತ್ತಾನೆ. ತಾನು ಅವಳನ್ನು ಗೆದ್ದಾಗಿದೆ, ಇನ್ನೂ ಕಾಯುತ್ತಾಳೆ ಎನ್ನುವ ಆ ಅಹಂ ಗಂಡಿನದಾ ಅಥವಾ ರಾಜನದಾ…?
ಇಷ್ಟು ಕಥೆ ಮುಗಿಸಿ ಕಥೆಗಾರ್ತಿ ಮತ್ತು ನಿರ್ದೇಶಕಿ ಊರಿಗೆ ಹಿಂದಿರುಗುತ್ತಾರೆ. ಚಿತ್ರ ಶುರುವಾಗಿ ಸುಮಾರು ಒಂದು ಗಂಟೆ ಆಗಿರುತ್ತದೆ. ನಿರ್ದೇಶಕಿ ಮನೆಗೆ ಬರುತ್ತಾಳೆ. ಹಳ್ಳಿಯಿಂದ ಗಂಡ ಬಂದಿರುತ್ತಾನೆ. ಅಲ್ಲಿ ಅವನ ಹೂವಿನ ದೊಡ್ಡ ವ್ಯವಸಾಯ ಇದೆ. ಚಿತ್ರ ನೋಡುವವರಿಗೆ ಆಗ ಅರಿವಾಗುತ್ತದೆ. ನಿರ್ದೇಶಕಿ ರಾಜನ ರೂಪದಲ್ಲಿ ಗಂಡನನ್ನು ಕಲ್ಪಿಸಿಕೊಂಡಿರುತ್ತಾಳೆ. ರಾಣಿಯ ರೂಪದಲ್ಲಿ ತನ್ನನ್ನೇ ಕಲ್ಪಿಸಿಕೊಂಡಿದ್ದ ಅವಳು ಆ ಮೂಲಕ ತಮ್ಮಿಬ್ಬರ ದಾಂಪತ್ಯ ಸಹ ಪ್ರೇಮರಾಹಿತ್ಯವನ್ನು ಅನುಭವಿಸುತ್ತಿದೆ ಎಂದು ಹೇಳುತ್ತಿದ್ದಾಳೆ. ಏಕೆಂದರೆ ಅವಳ ಪ್ರಕಾರ ‘ದರ್ಪಣ್’, ‘ಪ್ರೇಮದ ಬಿಸುಪನ್ನು ಕಳೆದುಕೊಂಡ ಸಂಸಾರದ ಕಥೆ’.
ಇಲ್ಲಿ ಚಿತ್ರದ ನಟಿ ಹೇಮಾಂಗಿನಿಯದು ಇನ್ನೊಂದು ಕಥೆ. ಅವಳ ಸ್ನೇಹಿತ, ಸಂಗಾತಿ ಕಲಾವಿದನಿಗೆ ಮೊದಲ ಮದುವೆಯಿಂದ ಹುಟ್ಟಿದ ಮಗಳಿರುತ್ತಾಳೆ. ಆ ಮಗುವಿನ ತಾಯಿ ಮರುಮದುವೆ ಆಗಿದ್ದಾಳೆ. ಆ ಮಗಳು ಇಲ್ಲಿ ಬಂದರೆ ಅಪ್ಪನ ಜೀವನದಲ್ಲಿ ಮತ್ತೊಬ್ಬ ಹೆಣ್ಣು. ಅದನ್ನು ತಡೆಯಲಾಗದ ಆ ಹುಡುಗಿ ಇದು ನನ್ನ ಅಪ್ಪನ ಮನೆ, ಇಲ್ಲಿ ನೀನು ಯಾರು ಎಂದು ಕೇಳುತ್ತಾಳೆ. ಆದರೆ ಹೇಮಾಂಗಿನಿ ಸಿಟ್ಟಾಗುವುದಿಲ್ಲ, ಕರಗಿ ಚೂರಾಗುವುದೂ ಇಲ್ಲ. ತನ್ನ ಘನತೆಯನ್ನು ಉಳಿಸಿಕೊಂಡೇ ಮಾತನಾಡುತ್ತಾಳೆ. ಅವಳ ಪ್ರಕಾರ ‘ದರ್ಪಣ್’ ಕಥೆಯಲ್ಲಿ ರಾಜ, ರಾಣಿ, ಭೈರವಿ ಮೂರೂ ಜನ ಒಟ್ಟಾಗಿ ಸೇರಿ ಆ ಕನ್ನಡಿಯನ್ನು ಜೋಪಾನ ಮಾಡುತ್ತಾರೆ. ಹಾಗಾಗಿ ಅದು ‘ಮಾಗಿದ ಮನಸುಗಳ ಸಂಬಂಧದ ಕಥೆ.’ ಅವಳ ಅದೇ ಮಾಗಿದ ಮನಸ್ಸು ಅವಳ ಬದುಕಿನಲ್ಲಿಯೂ ಅವಳಿಗೆ ಸಂಬಂಧಿಸಿದ ಎಲ್ಲರನ್ನೂ ಏಕಮುಷ್ಟಿಯಾಗಿ ಹಿಡಿದು ಜೋಡಿಸುವ ಕೆಲಸ ಮಾಡುತ್ತದೆ. ಚಿತ್ರದ ಕಡೆಯಲ್ಲಿ ಒಂದು ಹಾಡಿದೆ, ‘ಬಾಕಿ ಹೈ ಕುಚ್ ಸವಾಲ್ ನೋಕಿಲೇ, ಲಹೂಲುಹಾರ್ ಜಿಂದಗೀ ತು ಫಿರ್ ಭೀ ಹೈ ಮೆಹರ್ಬಾನ್..’ – ‘ಎದೆ ಚುಚ್ಚುವಂತಹ ಒಂದಿಷ್ಟೇ ಸವಾಲುಗಳು ಬಾಕಿ ಉಳಿದುಬಿಟ್ಟಿವೆ, ರಕ್ತಸಿಕ್ತ ಬದುಕೇ ಆದರೂ ಕೂಡ ನೀನು ನನ್ನ ಪಾಲಿಗೆ ದಯಾಮಯಿಯೇ ಹೌದು…’ ಇದನ್ನು ಭೈರವಿ ಹಾಡುತ್ತಾಳೆ.
ಈ ಕಥೆಗೆ ಯಾವ ಕೊನೆ ಕೊಡಬೇಕು, ರಾಜ ಸಂಸಾರಕ್ಕೆ ಹಿಂದಿರುಗಿ ಭೈರವಿಯನ್ನು ಒಂಟಿಯಾಗಿ ಉಳಿಸಬೇಕೆ, ಅಥವಾ ಭೈರವಿಯ ಜೊತೆಯಲ್ಲಿದ್ದು ರಾಣಿಯನ್ನು ನಿರ್ಲಕ್ಷಿಸಬೇಕೆ, ಅಸಲಿಗೆ ಆ ಕನ್ನಡಿಯನ್ನು ಹಾಗೆ ಉಳಿಸಬೇಕೆ ಅಥವಾ ಒಡೆಸಬೇಕೆ ಎಂದು ಇದಕ್ಕೆ ಸಂಬಂಧಿಸಿದ ನಾಲ್ಕೂ ಹೆಂಗಸರೂ ಸೇರಿ ಚರ್ಚೆ ಮಾಡುತ್ತಾರೆ. ಮೂಲ ಕಥೆಗಾರ್ತಿ ಕಥೆ ಹೇಳುವಾಗ ಹೇಗೆ ರಾಜನಿಂದ ದೂರಾಗಿದ್ದ ಭೈರವಿಯನ್ನು ರಾಜ ಮತ್ತೆ 8-10 ವರ್ಷಗಳ ನಂತರ ಸಂಧಿಸುತ್ತಾನೆ, ಆಗ ಭೈರವಿಗೆ 10 ವರ್ಷಗಳ ಒಬ್ಬ ಮಗಳಿರುತ್ತಾಳೆ, ಆ ಮಗಳಿಗೂ ಥೇಟ್ ರಾಜನಿಗಿದ್ದಂತೆ ಕಣ್ಣಿನ ಪಕ್ಕದಲ್ಲಿ ಚಂದ್ರಾಕೃತಿಯ ಮಚ್ಚೆ ಇರುತ್ತದೆ ಎಂದು ಹೇಳಿರುತ್ತಾಳೆ. ಚಿತ್ರದ ಕಡೆಯಲ್ಲಿ ಆ ಕಥೆಗಾರ್ತಿಯ ಕೆನ್ನೆಯ ಮೇಲೂ ಥೇಟ್ ಅದೇ ಮಚ್ಚೆ ಕಾಣಿಸುತ್ತದೆ. ಆಕೆ ಕಥೆ ಮುಗಿಸುವುದು ಹೀಗೆ : ರಾಣಿ ಭೈರವಿಯ ಮಗಳನ್ನು ತನ್ನ ಮಗನಿಗೆ ಸರಿಸಮಾನವಾಗಿ ಪ್ರೀತಿಸಿದಳು. ಅವಳನ್ನೂ ವಿದೇಶದಲ್ಲಿ ಓದಿಸಿದಳು. ಆ ಹುಡುಗಿ ಮದುವೆಯಾಗಲಿಲ್ಲ ಮತ್ತು ಸುಖವಾಗಿದ್ದಳು ಎಂದಷ್ಟೇ ಹೇಳುತ್ತಾಳೆ. ಕಥೆ ಮಾತನಾಡುವುದು ಇಲ್ಲಿ. ಅವಳು ಮದುವೆ ಆಗಲಿಲ್ಲ ಮತ್ತು ಆಮೇಲೆ ಸುಖವಾಗಿ ಇದ್ದಳು ಎಂದು ಹೇಳುವುದರಲ್ಲಿ ಹೆಣ್ಣಿನ ಬದುಕಿನ ‘ಸಾರ್ಥಕತೆ’ಯ ಬಗ್ಗೆ ಕಲಿಸುವ ಎಲ್ಲಾ ಮಿಥ್‌ಗಳನ್ನೂ ಒಡೆದು ಹಾಕುತ್ತದೆ.
ಕಥೆಯ ಅಂತ್ಯದ ಬಗ್ಗೆ ನಿರ್ದೇಶಕಿ ರೇವತಿ ಒಂದು ಪಾತ್ರದ ಮೂಲಕ ಕಬೀರನ ದೋಹೆ ಹಾಡಿಸಿ ವಿವರಿಸುತ್ತಾಳೆ. ದಾಂಪತ್ಯ ಎಂದರೆ ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿಯೇ ನೇಯಬೇಕಾದ ವಸ್ತ್ರ. ಒಬ್ಬರು ಅಡ್ಡ ಎಳೆ ಎಳೆದರೆ, ಮತ್ತೊಬ್ಬರು ಬಿಗಿ ತಪ್ಪದಂತೆ ಅದಕ್ಕೆ ಉದ್ದ ಎಳೆ ಹೆಣೆಯಬೇಕು… ಇಲ್ಲಿ ಆಕೆ ಇನ್ನೊಂದು ಮಾತನ್ನೂ ಹೇಳುತ್ತಾಳೆ. ಇಡೀ ಕಥೆಯ ಎಲ್ಲಾ ಹೆಣ್ಣು ಪಾತ್ರಗಳೂ ಅಂತಃಶಕ್ತಿ ಇರುವ ಪಾತ್ರಗಳೇ. ರಾಣಿ ಮಹಾರಾಜ ಇನ್ನೊಬ್ಬಳೊಡನೆ ಪ್ರೇಮದಲ್ಲಿ ಬಿದ್ದಿದ್ದಾನೆ ಎಂದು ಗೊತ್ತಾದ ಮೇಲೂ ಕುಸಿದು ಬೀಳುವುದಿಲ್ಲ. ಮಹಾರಾಜ ಬಿಟ್ಟುಹೋದ ಅಂದುಕೊಂಡ ಮೇಲೂ ಭೈರವಿ ಬೇಡುವುದಿಲ್ಲ. ಏಕಾಕಿಯಾಗಿಯೇ ಮಗಳನ್ನು ಬೆಳೆಸುತ್ತಿರುತ್ತಾಳೆ. ನಿಜಕ್ಕೂ ಇಬ್ಬರನ್ನೂ ಬಿಟ್ಟು ಕೊಡಲಾಗದೆ, ಆಧಾರಕ್ಕೆ ಹಂಬಲಿಸುವವನು ಮಹಾರಾಜ ಮಾತ್ರ! ಹೆಣ್ಣಿನ survival instinct ಅದು. ಕಡೆಗೆ ಕಥೆ ಹೆಣ್ಣಿನ ಆ ಶಕ್ತಿಯ ಕನ್ನಡಿಯಾಗುತ್ತದೆ.
ಈ ಚಿತ್ರದ ವಿಶೇಷವಿರುವುದು ಕಥೆಯನ್ನು ದೇಶಕಾಲದ ಚೌಕಟ್ಟಿಗೆ ಕಟ್ಟು ಹಾಕದೆ ಹೇಳುವ ಕುಶಲತೆಯಲ್ಲಿ. ನಿಜಜೀವನದ ಪಾತ್ರಗಳಿಗೆ ಕಥೆಯ ಪಾತ್ರಗಳನ್ನು ಆರೋಪಿಸುವ ಮೂಲಕ ಕಥೆ ತನ್ನನ್ನು ತಾನು ‘ಕಾಲ’ದಿಂದ ಬಿಡುಗಡೆ ಮಾಡಿಸಿಕೊಳ್ಳುತ್ತದೆ. ಚಿತ್ರ ನೋಡುವಾಗ ಯೋಚಿಸಬೇಕಾಗಿರುವುದು, ಇಷ್ಟು ದಶಕಗಳ ನಂತರವೂ ನಮ್ಮ ‘ಸ್ತ್ರೀ ಮಾದರಿ’ಗಳು ಏಕೆ ಆ ಮೂಸೆಯನ್ನು ಬಿಟ್ಟು ಹೊರಗೆ ಬರುತ್ತಿಲ್ಲ? ಹೆಣ್ಣಿನ ಸಾರ್ಥಕತೆ ಏಕೆ ಕುಟುಂಬಕ್ಕೆ ‘ಪೋಷಕ’ ಅಥವಾ ‘ಪೂರಕ’ ಪಾತ್ರಗಳಲ್ಲೇ ಹೆಚ್ಚು ‘ಶೋಭಿಸು’ತ್ತವೆ? ಅವನ್ನು ಹಾಗೆ ನೋಡುವುದಕ್ಕೆ ಎಲ್ಲರನ್ನೂ ರೂಪಿಸುತ್ತಿರುವ ವ್ಯವಸ್ಥೆ ಮತ್ತು ಆ ವ್ಯವಸ್ಥೆ ಒದಗಿಸುವ ರಕ್ಷಣೆ ಇಲ್ಲಿ ಸುಖವೂ ಹೌದು, ಸವಾಲೂ ಹೌದು. ಅದನ್ನು ಮೀರಬೇಕೆಂದರೆ ಪ್ರತಿ ಜೀವವೂ ಬೇರೆಬೇರೆ ಬೆಲೆ ತೆರಲೇಬೇಕು. ಆ ವ್ಯವಸ್ಥೆ ಒದಗಿಸುವ ರಕ್ಷಣೆ ಮತ್ತು ಅದರಿಂದ ಬಿಡಿಸಿಕೊಳ್ಳುವುದಕ್ಕಾಗಿ ಹೆಣ್ಣು ನಡೆಸುವ ಹೋರಾಟ ಈ ಚಿತ್ರದ ಕಥಾವಸ್ತು. ಇಲ್ಲಿನ ಕೆಲವು ಮಹಿಳೆಯರು ಆ ವ್ಯವಸ್ಥೆಯ ಚೌಕಟ್ಟಿನೊಳಗೇ ತಮ್ಮದೊಂದು ಸ್ಪೇಸ್ ಕಂಡುಕೊಂಡಿರುತ್ತಾರೆ, ಕೆಲವು ಪಾತ್ರಗಳು ಅದನ್ನು ವಿಸ್ತರಿಸುವ ಪ್ರಯತ್ನ ನಡೆಸುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಬದುಕನ್ನು ಎದುರಿಸಿದ್ದಾರೆ.
ಐತಿಹಾಸಿಕ ಚಿತ್ರ ಮಾಡುವಾಗ ಅದನ್ನು ‘ಸುಂದರ’ವಾಗಿಯೇ ಕಾಣಿಸಬೇಕು ಎನ್ನುವ ‘ಬನ್ಸಾಲಿಯಿಸಂ’ ಅನ್ನು ಈ ಚಿತ್ರ ಮೀರಿದೆ ಎನ್ನುವುದು ಚಿತ್ರದ ಗೆಲುವು. ಸಂಗೀತ ಈ ಚಿತ್ರದ ಶಕ್ತಿ. ನೋಡಬೇಕಾದ ಚಿತ್ರ ಇದು. ಮಾತೆಲ್ಲಾ ಮುಗಿದ ಮೇಲೆ ಉಳಿದ ಮಾತು, ಮತ್ತೊಂದು ಮಹಿಳಾ ದಿನಾಚರಣೆಯ ಶುಭಾಶಯಗಳು…