13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಮಂಗಳವಾರದ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಧರ್ಮಗುರುಗಳ ಉಪಸ್ಥಿತಿಗೆ ಸಾಕ್ಷಿಯಾಯ್ತು. ಮೈಸೂರು ಸುತ್ತೂರು ಮಠದ ಇತಿಹಾಸ ಕಟ್ಟಿಕೊಡುವ ‘ಸುತ್ತೂರು ಶ್ರೀಮಠ ಗುರು ಪರಂಪರೆ’ ಅನಿಮೇಷನ್ ಚಿತ್ರ ಪ್ರದರ್ಶನದಲ್ಲಿ ಶಿವಮೂರ್ತಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪಾಲ್ಗೊಂಡರು.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಧರ್ಮಪೀಠದ ಜಗದ್ಗುರುಗಳು ಸಿನಿಮೋತ್ಸವದಲ್ಲಿ ಭಾಗಿಯಾದರು. ಮೈಸೂರು ಸುತ್ತೂರು ಶ್ರೀಮಠದ ಸಾವಿರ ವರ್ಷಗಳ ಇತಿಹಾಸವನ್ನು ಕಟ್ಟಿಕೊಟ್ಟಿರುವ ‘ಸುತ್ತೂರು ಶ್ರೀಮಠ ಗುರು ಪರಂಪರೆ’ ಆನಿಮೇಷನ್ ಚಿತ್ರ ಪ್ರದರ್ಶನಕ್ಕೆ ಮಂಗಳವಾರ ಬೆಂಗಳೂರು ಅಂತಾರಾಷೀಯ ಚಿತ್ರೋತ್ಸವ ಕಣ್ಣಾಯಿತು. ಅಮೆರಿಕ, ಜಪಾನ್, ಇಟಲಿಯಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿರುವ ಅನಿಮೇಷನ್ ಚಿತ್ರ ಪ್ರದರ್ಶನದಲ್ಲಿ ಸುತ್ತೂರು ಶ್ರೀಮಠದ ಶಿವಮೂರ್ತಿ ದೇಶಿಕೇಂದ್ರ ಸಾಮೀಜಿಗಳು, ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಹಾಗೂ ಬೆಂಗಳೂರಿನ ಕೆಲವು ಮಠಗಳ ಧಾರ್ಮಿಕ ಗುರುಗಳು ಪಾಲ್ಗೊಂಡು ಚಿತ್ರವೀಕ್ಷಿಸಿದರು.
ಈ ಸಂದರ್ಭದಲ್ಲಿ ಸುತ್ತೂರಿನ ಶಿವಮೂರ್ತಿ ದೇಶೀಕೇಂದ್ರ ಸಾಮೀಜಿಗಳು ಮಾತನಾಡಿ, “ಶ್ರೀಮಠದ ಧಾರ್ಮಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ತೋರ್ಪಡಿಸುವುದು ಸುಲಭದ ಕೆಲಸವಲ್ಲ. ಅದನ್ನು ನಿರ್ದೇಶಕರಾದಿಯಾಗಿ ಚಿತ್ರತಂಡ ನಾಲ್ಕು ವರ್ಷಗಳ ಸತತ ಪರಿಶ್ರಮದ ಫಲವಾಗಿ ಆಗುಮಾಡಿಕೊಟ್ಟಿದೆ. ವಿದೇಶಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳಿಗೆ ಪಾತ್ರವಾದ ಈ ಚಿತ್ರ ಭಾರತದಲ್ಲೇ ಇದೇ ಮೊದಲ ಬಾರಿಗೆ ಅದರಲ್ಲೂ ಬೆಂಗಳೂರು ಅಂತಾರಾಷೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿರುವುದು ಸಂತಸದ ಸಂಗತಿ” ಎಂದರು.
ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಈ ಅನಿಮೇಷನ್ ಚಿತ್ರವು ಕೇವಲ ಸುತ್ತೂರು ಮಠದ ಪರಂಪರೆಯ ಚಿತ್ರಣ ಮಾತ್ರವಾಗಿರದೆ ಕನ್ನಡ ನಾಡಿನ ಶರಣ ಸಂಸ್ಕೃತಿ, ದಾಸೋಹ ಸಂಸ್ಕೃತಿ, ಸಹಬಾಳ್ವೆ ಸಂಸ್ಕೃತಿಯ ದರ್ಶನವಾಗಿದೆ. ಯುದ್ಧದ ಕರಿನೆರಳು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಶಾಂತಿ, ಸೌಹಾರ್ದತೆ ಸಾರುವ ಇಂತಹ ಚಿತ್ರಗಳು ಹೆಚ್ಚು ಪ್ರದರ್ಶನಗೊಳ್ಳಬೇಕು” ಎಂದ ಅವರು ಈ ಅವಕಾಶ ಕಲ್ಪಿಸಿದ ಚಿತ್ರೋತ್ಸವದ ನಿರ್ದೇಶಕ ಸುನೀಲ್ ಪುರಾಣಿಕರ್ರನ್ನು ಅಭಿನಂದಿಸಿದರು. ಚಿತ್ರಪ್ರದರ್ಶನದ ವೇಳೆ ಸುನಿಲ್ ಪುರಾಣಿಕ್, ಜನಪದ ತಜ್ಞ ಗೊ.ರು.ಚನ್ನಬಸಪ್ಪ, ಹಿರಿಯ ಚಿತ್ರನಿರ್ಮಾಪಕ ಎಸ್.ಎ.ಚಿನ್ನೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜಯರಾಜ್, ಅನಿಮೇಷನ್ ಚಿತ್ರದ ನಿರ್ದೇಶಕ ಅಬ್ದುಲ್ ಕರೀಂ ಉಪಸ್ಥಿತರಿದ್ದರು.