ಅಶೋಕ್‌ ಚಕ್ರವರ್ತಿ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ‘ಸಕೂಚಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ‘ಪದ್ಮಾವತಿ’ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್‌ ಸಿನಿಮಾದ ಹೀರೋ.

ಪ್ರೇಮಕತೆಯ ಏಕತಾನತೆಯ ಮಧ್ಯೆ ಹಾರರ್‌ – ಥ್ರಿಲ್ಲರ್‌ ಸಿನಿಮಾಗಳು ಕೈಹಿಡಿಯುತ್ತವೆ. ಯುವ ತಂತ್ರಜ್ಞರು ಇಂತಹ ಕಥಾವಸ್ತುಗಳೊಂದಿಗೆ ಸಿನಿಮಾ ಪ್ರವೇಶಿಸಿ ಗೆದ್ದ ಅನೇಕ ಉದಾಹರಣೆಗಳಿವೆ. ನಿರ್ದೇಶಕ ಅಶೋಕ್ ಚಕ್ರವರ್ತಿ ‘ಸಕೂಚಿ’ಯಲ್ಲಿ ಇಂಥದ್ದೇ ಒಂದು ಕತೆ ಹೇಳಲು ಹೊರಟಿದ್ದಾರೆ. ವಿಶೇಷವೆಂದರೆ ಈ ಸಿನಿಮಾಗೆ ತಮಗಾದ ಅನುಭವವೇ ಅವರಿಗೆ ಪ್ರೇರಣೆಯಾಗಿದೆ. ಇದೀಗ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಹಾರರ್‌ ಜೊತೆ ಇಲ್ಲಿ ಅವರು ಪ್ರೇಮಕತೆಯೊಂದನ್ನು ಹೇಳಿರುವಂತಿದೆ. ಸ್ಮಶಾನ ದೃಶ್ಯಗಳು, ವಾಮಾಚಾರದ ಜೊತೆ ವಿಕ್ಷಿಪ್ತ ವ್ಯಕ್ತಿತ್ವದ ಕೆಲವು ಪಾತ್ರಗಳನ್ನಿಲ್ಲಿ ಕಾಣಬಹುದು.  

“ಕೆಲವು ವರ್ಷಗಳ ಹಿಂದೆ ನಾನು ಶೃಂಗೇರಿಯಿಂದ ಕೊಪ್ಪಕ್ಕೆ ಪ್ರಯಾಣಿಸುತ್ತಿದ್ದೆ. ಅಲ್ಲೇ ಒಂದು ರೆಸಾರ್ಟ್‌ನಲ್ಲಿ ತಂಗಿದೆ. ರಾತ್ರಿ ಸಿಡಿಲಿನ ಅಬ್ಬರದ ನಡುವೆ ತುಂತುರು ಮಳೆಯಾಗುತ್ತಿತ್ತು. ಭಾರೀ ಸಿಡಿಲಿನ‌ ಶಬ್ದಕ್ಕೆ ಎತ್ತರದ ಮರದ‌ ಕೊಂಬೆ ಮುರಿದು ಬಿತ್ತು.‌  ಭಯಂಕರ ಶಬ್ದ. ಆನಂತರ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ವಿಜಯನಗರದಲ್ಲಿ ಮತ್ತೆ ಅದೇ ಶಬ್ದ ಕೇಳಿದೆ. ಈಗಲೂ ಆ ಶಬ್ದ ಕಿವಿಯಲ್ಲೇ ಇದ್ದ ಹಾಗೆ ಇದೆ. ನಂತರ ಅದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದೆ. ಆಗ ತಿಳಿಯಿತು ಇದೊಂದು‌ ಪ್ರಯೋಗ ಅಂತ. ಈ ವಿಷಯವನ್ನಿಟ್ಟುಕೊಂಡು ಕತೆ ಮಾಡಿ ನಿರ್ಮಾಪಕರಿಗೆ ಹೇಳಿದೆ. ಈಗ ಸಿನಿಮಾ ಸಿದ್ದವಾಗಿದೆ. ಪ್ರೇತಾತ್ಮಗಳಿಗೆ ಪ್ರೇತಾತ್ಮ ಈ ಸಕೂಚಿ” ಎಂದು ತಮ್ಮ ಸಿನಿಮಾ ರೂಪುಗೊಂಡ ಬಗೆಯನ್ನು ಹೇಳುತ್ತಾರೆ ನಿರ್ದೇಶಕ ಅಶೋಕ್‌.

https://youtu.be/mAQxOeQylqM

‘ಪದ್ಮಾವತಿ’ ಧಾರಾವಾಹಿ ಖ್ಯಾತಿಯ ನಟ ತ್ರಿವಿಕ್ರಮ್ ಚಿತ್ರದ ನಾಯಕನಟನಾಗಿ ಅಭಿನಯಿಸಿದ್ದಾರೆ. “ಇದು ಹಾರರ್‌ ಅಷ್ಟೇ ಅಲ್ಲ. ನವಿರು ಪ್ರೇಮಕತೆಯೂ ಇದೆ. ನಿರ್ದೇಶಕರು ಕತೆ ಹೇಳುವಾಗಲೇ ತುಂಬಾ ಇಂಪ್ರೆಸ್ ಆಗಿದ್ದೆ. ಚಿತ್ರೀಕರಣದ ಸಮಯದಲ್ಲಾದ ವಿಶೇಷ ಅನುಭವಗಳನ್ನಂತೂ ಮರೆಯಲು ಸಾಧ್ಯವಿಲ್ಲ” ಎನ್ನುವ ಅವರಿಗೆ ತಮ್ಮ ಸಿನಿಮಾ ಬಗ್ಗೆ ಅಪಾರ ವಿಶ್ವಾಸವಿದೆ. ಕೊಟ್ಟ ದುಡ್ಡಿಗೆ ಮೋಸ ಆಗದ ಸಿನಿಮಾ ಇದು ಎನ್ನುತ್ತಾರೆ. ನಾಯಕಿಯಾಕಿ ಡಯಾನಾ ನಟಿಸಿದ್ದಾರೆ. ಅಶೋಕ್ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಹೃದಯಶಿವ ಗೀತರಚನೆ, ಗಣೇಶ್ ಗೋವಿಂದಸ್ವಾಮಿ ಸಂಗೀತ ಸಂಯೋಜನೆ, ಆನಂದ್ ಸುಂದರೇಶ್ ಛಾಯಾಗ್ರಹಣ, ಬಿ.ಸಿ.ಅಶ್ವಿನ್ ನಿರ್ಮಾಣವಿದೆ. ಟ್ರೈಲರ್ ಬಿಡುಗಡೆಗೆ ‘ದಿಯಾ’ ಚಿತ್ರದ ನಾಯಕಿ ಖುಷಿ ರವಿ,‌ ನಿರ್ದೇಶಕ ಮಹೇಶ್ ಬಾಬು ಅತಿಥಿಗಳಾಗಿ ಆಗಮಿಸಿದ್ದರು.

‘ಸಕೂಚಿ’ ಚಿತ್ರತಂಡ

LEAVE A REPLY

Connect with

Please enter your comment!
Please enter your name here