ಸಿನಿಮಾ ತಾಂತ್ರಿಕತೆ ಗಮನಿಸುವವರಿಗೆ ಅತ್ಯುತ್ತಮ ಗುಣಮಟ್ಟದ ಕ್ಯಾಮರಾ ಕುಸುರಿ ಒಂದೆಡೆ ಸೆಳೆದರೆ ಅತಿಸಣ್ಣ ವಿವರಗಳನ್ನೂ ದಾಖಲಿಸುವ ಸೌಂಡ್ ಎಂಜಿನಿಯರಿಂಗ್ ಬೆರಗುಗೊಳಿಸುತ್ತದೆ. ಬರೆಯವ ಬಿಳಿ ಹಾಳೆ ಅಲುಗಾಡುವ ಸದ್ದೂ ದಾಖಲಾಗಿರುವುದು ಮಾತ್ರವಲ್ಲ, ದೃಶ್ಯಕ್ಕೊಂದು ಅರ್ಥವನ್ನೂ ಕೊಡುತ್ತದೆ. ಈ ಎಲ್ಲಾ ಕಾರಣಕ್ಕಾಗಿ ಸಿನಿಮಾ ವಿದ್ಯಾರ್ಥಿಗಳು ನೋಡಲೇಬೇಕಾದ ಚಿತ್ರ ‘ಮೀಲ್ ಪತ್ಥರ್’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.
ನಮ್ಮ ದೇಶದ ರಸ್ತೆಗಳಲ್ಲಿ ಸುಮಾರು ಒಂದೂ ಕಾಲು ಕೋಟಿ ಲಾರಿಗಳು ನಿತ್ಯ ಸಂಚರಿಸುತ್ತಿವೆ. ನಮ್ಮ ಬೆಳಗಿನ ಕಾಫಿ, ಅದನ್ನು ಸಿಹಿಗೊಳಿಸುವ ಸಕ್ಕರೆ, ತಿನ್ನುವ ಅನ್ನ, ಬೇಯಿಸುವ ಗ್ಯಾಸು ಹೀಗೆ ಎಲ್ಲವೂ ಒಂದಲ್ಲಾ ಒಂದು ಹಂತದಲ್ಲಿ ಟ್ರಕ್‌ಗಳಲ್ಲೇ ಪಯಣ ಮಾಡಿ ನಮ್ಮ ಮನೆ ಸೇರುವುದು. ವರ್ಷಕ್ಕೆ ಶೇ. 12ರಷ್ಟು ವೃದ್ಧಿ ಕಾಣುತ್ತಿರುವ ಲಾರಿ ಉದ್ಯಮಕ್ಕೆ ಪ್ರತಿ ತಿಂಗಳೂ ಆರು ಲಕ್ಷ ಹೊಸ ಲಾರಿಗಳು ಸೇರ್ಪಡೆಯಾಗುತ್ತವೆ ಎನ್ನುತ್ತದೆ ಅಂಕಿ ಅಂಶ. ಆದರೆ ಅಂಕಿ ಅಂಶಗಳ ಪರಿಧಿಯ ಆಚೆ ನಿಲ್ಲುವುದು ಒಂದೂಕಾಲು ಕೋಟಿ ಲಾರಿ ಚಾಲಕರು ಮತ್ತು ಅವರ ಕತೆಗಳು. ಅವರಲ್ಲಿ ಒಬ್ಬನ ಕತೆಯನ್ನು ಪ್ರಾತಿನಿಧಿಕವಾಗಿ ಹೆಕ್ಕಿ ಆ ಮೂಲಕ ಚಾಲಕರ ಬವಣೆ ತಿಳಿಸುವ ಸಿನಿಮಾ ‘ಮೀಲ್ ಪತ್ಥರ್.’
ಬೃಹತ್ ವಾಣಿಜ್ಯ ವಹಿವಾಟಿಗೆ ಕಾರಣವಾಗುವ ಲಾರಿ ಚಾಲಕ ಕೇಂದ್ರಿತವಾದ ಈ ಸಿನಿಮಾ ಮಾತ್ರ ವಾಣಿಜ್ಯ ಸೂತ್ರಗಳಲ್ಲಿ ಇಲ್ಲ. ಆರಂಭದಿಂದಲೇ ತುಸು ಉದಾಸೀನದ ಚಿತ್ರಕತೆಯಲ್ಲಿ ಸಾಗುವ ಈ ಸಿನಿಮಾ ತೀರಾ ಕಮರ್ಷಿಯಲ್ ಚಿತ್ರಗಳನ್ನು ಇಷ್ಟಪಡುವ ಮಂದಿಗಲ್ಲ. ಆದರೆ ಒಮ್ಮೆ ಸಿನಿಮಾದ ಒಳಹೊಕ್ಕರೆ ಕನಿಷ್ಠ ಎರಡು ಬಾರಿ ವೀಕ್ಷಿಸಬೇಕು ಎಂಬಷ್ಟು ಸೆಳೆಯುವ ಕತೆ, ಆವರಿಸುವ ಪಾತ್ರಗಳು. ಘಾಲಿಬ್ ಎಂಬ ಚಾಲಕನ ಸುತ್ತ ಸಾಗುವ ಈ ಚಿತ್ರಕತೆ ಕೆಲವು ಕಡೆ ಕತೆಯನ್ನೇ ಹೇಳಿದರೆ ಇನ್ನು ಕೆಲವೆಡೆ ಸಂಕೇತಗಳ ಮೂಲಕ ಕತೆಯ ಆಚೆಗಿನ ಕತೆ ಹೇಳುವ ಗುಣ ಹೊಂದಿದೆ. ವಿದೇಶಿಗನ ಹೆಸರಿನಂತಿರುವ ಭಾರತೀಯ ಇವಾನ್ ಐರ್ ನಿರ್ದೇಶನ ಮತ್ತು ಕೊಲಂಬಿಯಾ ಮೂಲದ ಏಂಜಲೋ ಫ್ಯಾಸ್ಸಿನಿ ಛಾಯಾಗ್ರಹಣದ ‘ಮೀಲ್ ಪತ್ಥರ್’ ಸಿಂಗಾಪುರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಘಾಲಿಬ್ ಎಂಬ ಚಾಲಕನ ಪಾತ್ರಕ್ಕೆ ಸುವೀಂದರ್ ವಿಕ್ಕಿ ಅತ್ಯತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.
ಮೊದಲಿಗೆ ಭೂಮಿಕೆ ಸಿದ್ಧಪಡಿಸಿ ನಂತರ ಕತೆ ಹೇಳುವ ಸಿನಿಮಾ ಇದಲ್ಲ. ಬದಲಾಗಿ ದೃಶ್ಯದಿಂದ ದೃಶ್ಯಕ್ಕೆ ಸಾಗುತ್ತಾ ಒಂದೊಂದು ಪದರದಲ್ಲಿ ಒಂದೊಂದು ವಿಚಾರ ಹೊರಹಾಕುತ್ತಾ ಸಾಗುವ ನವಿರಾದ ಕಲಾಕೃತಿ. ಘಾಲಿಬ್ ವಿದ್ಯಾವಂತ. ಅಪ್ಪ ಕುವೈತ್‌ನಲ್ಲಿ ಲಾರಿ ಚಾಲಕನಾಗಿದ್ದಾಗ ಅಲ್ಲೇ ಹುಟ್ಟಿ ಸದ್ದಾಂ ಹುಸೇನ್‌ನ ಇರಾಕ್ ದಾಳಿ ಸಂದರ್ಭ ದಿಕ್ಕಾಪಾಲಾಗಿ ಓಡಿಬಂದ ಕುಟುಂಬ ಆತನದ್ದು ಎಂಬ ವಿವರ ನಮಗೆ ಆರಂಭದಲ್ಲೇ ಸಿಗುವುದಿಲ್ಲ. ಮೊದಲಿಗೆ ಪರದೆ ಮೇಲೆ ಮೂಡಿ ಬರುವ ವಿವರಗಳು ಟ್ರಕ್ ಚಾಲಕನ ವೃತ್ತಿ ಬವಣೆಗಳು ಮಾತ್ರ. ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರ ಸಂಘಟನೆಯ ಹರತಾಳ ಸಂದರ್ಭದಲ್ಲಿ ಸಾಮಗ್ರಿಗಳನ್ನು ಸ್ವತಃ ಲೋಡ್ ಮಾಡಬೇಕಾದ ಅನಿವಾರ್ಯತೆ ಘಾಲಿಬ್‌ನದ್ದು. ಕೊಂಚ ಅನ್ಯಮನಸ್ಕನಂತೆ ಕಾಣುವ ಅವನ ವರ್ತನೆಗೆ ನಮಗೆ ಅರ್ಥ ಕಾಣುವುದು ಪ್ರೀತಿಸಿ ಮದುವೆಯಾದ ಹೆಂಡತಿ ಈಗಾಗಲೇ ತೀರಿ ಹೋಗಿದ್ದಾಳೆ ಎಂಬ ವಿವರ ಬಂದಾಗಲೇ.
ಚಿತ್ರದಲ್ಲೆಲ್ಲೂ ನಿರ್ದೇಶಕ ಇವಾನ್ ಅವನ ಹೆಂಡತಿಯನ್ನು ತೋರಿಸುವುದಿಲ್ಲ. ಆದರೂ ಈತ ಅವಳನ್ನು ಪ್ರೀತಿಸಿ ಮದುವೆಯಾದುದು, ಚಾಲಕನಾಗಿ ದಿನಗಟ್ಟಲೆ ಮನೆಯಿಂದ ದೂರವಿದ್ದ ಕಾರಣ ಕಾಲಕ್ರಮೇಣ ದಂಪತಿಗಳ ಮಧ್ಯೆ ಉಂಟಾದ ಬಿರುಕು, ಆಕೆ ಅನುಭವಿಸಿರಬಹುದಾದ ವೇದನೆಗಳೆಲ್ಲ ನಮ್ಮ ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಡುವಲ್ಲಿ ಚಿತ್ರಕತೆ ಮತ್ತು ಸಂಭಾಷಣೆಯ ಪಾತ್ರ ದೊಡ್ಡದು. ಮೇಲ್ನೋಟಕ್ಕೆ ತೀರಾ ಸಹಜವಾಗಿ ಕೇಳಿಸುವ ಮಾತುಗಳು ತನ್ನೊಳಗೆ ಅದುಮಿಟ್ಟುಕೊಂಡ ವಿಸ್ತಾರದಲ್ಲಿ ಸಂಭಾಷಣೆಯ ಹಿರಿಮೆ ಅಂದಾಜಿಗೆ ಸಿಗುತ್ತದೆ. ಉದಾಹರಣೆಗೆ ಈ ಎರಡು ವಾಕ್ಯ ಗಮನಿಸಿ. ಲಾರಿಯಲ್ಲಿ ಹೆಂಡ, ಅಥವಾ ಗೌರವಯುತವಾಗಿ ಅಬಕಾರಿ ಸಾಮಗ್ರಿ ಸಾಗಿಸಿ ವೈನ್ ಸ್ಟೋರಿನಲ್ಲಿ ಇಳಿಸುವ ದೃಶ್ಯವದು. ಹೀಗೇ ಸಹಜವಾಗಿ ಮಾತುಕತೆಯಾಗುವಾಗ ಈ ಮೊದಲು ಪಕ್ಕದಲ್ಲಿ ಸಂಗೀತ ವಾದ್ಯಗಳ ಅಂಗಡಿ ಇತ್ತಲ್ಲಾ ಎಂಬುದು ಘಾಲಿಬ್‌ಗೆ ನೆನಪಾಗುತ್ತದೆ. ‘ಇಲ್ಲೊಂದು ವಾದ್ಯಗಳ ಅಂಗಡಿಯಿತ್ತಲ್ಲಾ?’ ಎಂಬುದಕ್ಕೆ ವೈನ್‌ಶಾಪ್ ಮಾಲೀಕನಿಂದ ಸಿಗುವ ಉತ್ತರ ‘ಹಾ.. ಅವ್ನು ನಷ್ಟದಲ್ಲಿದ್ದ, ಅದಕ್ಕೇ ಆ ಭಾಗವನ್ನೂ ನಾನೇ ಖರೀದಿಸಿದೆ’ ಎಂಬುದು. ಮೇಲ್ನೋಟಕ್ಕೆ ಮಂದವಾಗಿರುವ ಇಂಥ ಸಂಭಾಷಣೆಯ ಒಳಗೆ ಚುಚ್ಚುವ ತೀಕ್ಷ್ಣತೆಯಿದೆ. ಕಮೆಂಟರಿಯಂತೆ ಕೇಳಿಸದ ಸಾಮಾಜಿಕ ಕಮೆಂಟರಿಯಿದೆ.
ಘಾಲಿಬ್‌ನ ಲೋಕ ಅಲ್ಲೋಲ ಕಲ್ಲೋಲವಾಗುವುದು ಪಾಶ್ ಎಂಬ ಹೊಸ ಹುಡುಗ ಕೆಲಸಕ್ಕೆ ಬಂದಾಗ. ಅದುವರೆಗೆ ಛೋಟಾ ಹಾತಿಯ ಚಾಲಕನಾಗಿದ್ದ ಆತನನ್ನು ದೊಡ್ಡ ಲೋಡಿನ ಜವಾಬ್ದಾರಿಗೆ ಹಾಕುವವ ಟ್ರಕ್ ಉದ್ಯಮಿ ಗಿಲ್ ಸಾಬ್. ಹೊಸ ಚಾಲಕನಿಗೆ ಚಾಲನೆ ಗೊತ್ತಿದೆ. ಆದರೆ ದಾರಿಯಲ್ಲಿ ಎದುರಾಗುವ ಅನಪೇಕ್ಷಿತ ಘಟನೆಗಳ ಅನುಭವ ಹಾಗೂ ಅದಕ್ಕೆ ಸಿದ್ಧತೆ ಇರುವುದಿಲ್ಲ. ಅದರ ತರಬೇತಿಗೇ ಆತನನ್ನು ಲಾರಿ ಮಾಲೀಕ ಜೂನಿಯರ್ ಡ್ರೈವರ್ ಸ್ಥಾನದಲ್ಲಿ ಕೂರಿಸುವುದು. ಮುಂದೆ ತನ್ನದೇ ಸ್ಥಾನ ಕಸಿದುಕೊಳ್ಳುವವನಿಗೆ ತರಬೇತಿ ನೀಡುವ ಜವಾಬ್ದಾರಿ ಘಾಲಿಬ್‌ನದ್ದು ಎಂಬುದು ಸಂಭಾಷಣೆಯಲ್ಲಿ ಇಲ್ಲ. ಆದರೆ ಮಾತಲ್ಲಿ ಇಲ್ಲದ್ದು ಕೃತಿಯಲ್ಲಿ ಕಾಣುತ್ತದೆ. ಘಾಲಿಬ್ ಮತ್ತು ಪಾಶ್ ಪಾತ್ರಗಳ ನಡುವಿನ ಘರ್ಷಣೆಯೇ ಸಿನಿಮಾವಾಗುತ್ತದೆ ಎಂದು ನಾವು ಅಂದುಕೊಳ್ಳುವ ಹೊತ್ತಿಗೆ ನಮ್ಮ ಆ ನಿರೀಕ್ಷೆಯನ್ನು ಸುಳ್ಳಾಗಿಸಿ ಹೊಸ ಆಯಾಮ ನೀಡುತ್ತಾನೆ ನಿರ್ದೇಶಕ.
ಇದೆಲ್ಲ ನಡೆಯುವ ಮೊದಲೇ ದೃಷ್ಟಿ ಮಂದವಾಗುತ್ತಿದೆ ಎಂಬ ಕಾರಣಕ್ಕೆ ಅಗೌರವಪೂರ್ಣ ನಿವೃತ್ತಿ ಕಾಣಬೇಕಾದ ದಿಲ್ಭಾಗ್ ಪ್ರೇಕ್ಷಕನ ಮನಸ್ಸನ್ನು ಒಂಚೂರು ಕಲಕಿರುತ್ತಾನೆ. ಘಾಲಿಬ್ ಚಲಾಯಿಸುತ್ತಿರುವ ಲಾರಿ ಅದಾಗಲೇ ಐದು ಲಕ್ಷ ಕಿಲೋಮೀಟರ್ ಕ್ರಮಿಸಿದೆ ಎಂಬ ವಿವರ ಪ್ರೇಕ್ಷಕನ ಪಾಲಿಗೆ ಕೊನೆಯ ಹಂತದಲ್ಲಿ ವಿಸ್ಮಯಕಾರಿ. ಆದರೆ ರಸ್ತೆ ಬದಿ ನಿಲ್ಲುವ ಹಂತಕ್ಕೆ ಬರುವವರೆಗೆ ಮಾಲೀಕನಿಗೂ ತನ್ನ ಲಾರಿ ಅಷ್ಟು ಓಡಿದೆ ಎಂದು ಗೊತ್ತಿಲ್ಲದಿರುವುದು ಉದ್ಯಮಿ-ಚಾಲಕರ ನಡುವಿನ ಅಂತರವನ್ನು ಗಟ್ಟಿಯಾಗಿ ಸೆರೆಹಿಡಿದ ದೃಶ್ಯ.
ನಮ್ಮಿಂದ ದೂರವಿರುವ ಪಾಶ್ಚಾತ್ಯ ರಾಷ್ಟ್ರ ಅಮೆರಿಕಾದ ದೂರದ ಭಾಗವಾದ ಪಶ್ಚಿಮ ಅಮೆರಿಕದ ಕತೆ ‘ನೋ ಕಂಟ್ರಿ ಫಾರ್ ಓಲ್ಡ್ ಮೆನ್’ ಸಿನಿಮಾವನ್ನು ನಮ್ಮಲ್ಲೂ ಹಲವರು ಮೆಚ್ಚಿದವರಿದ್ದಾರೆ. ಕಥಾವಸ್ತುವಿನ ವಿಚಾರದಲ್ಲಿ ಅದಕ್ಕಿಂತಲೂ ಹತ್ತಿರವಾಗುವ ಚಿತ್ರ ‘ಮೀಲ್ ಪತ್ಥರ್.’ ಗುಣಮಟ್ಟದ ವಿಚಾರದಲ್ಲಂತೂ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿತ್ರಗಳ ಸಾಲಿಗೆ ನಿಲ್ಲುತ್ತದೆ. ಸಿನಿಮಾ ತಾಂತ್ರಿಕತೆ ಗಮನಿಸುವವರಿಗೆ ಅತ್ಯುತ್ತಮ ಗುಣಮಟ್ಟದ ಕ್ಯಾಮರಾ ಕುಸುರಿ ಒಂದೆಡೆ ಸೆಳೆದರೆ ಅತಿಸಣ್ಣ ವಿವರಗಳನ್ನೂ ದಾಖಲಿಸುವ ಸೌಂಡ್ ಎಂಜಿನಿಯರಿಂಗ್ ಬೆರಗುಗೊಳಿಸುತ್ತದೆ. ಬರೆಯುವ ಬಿಳಿ ಹಾಳೆ ಅಲುಗಾಡುವ ಸದ್ದೂ ದಾಖಲಾಗಿರುವುದು ಮಾತ್ರವಲ್ಲ, ದೃಶ್ಯಕ್ಕೊಂದು ಅರ್ಥವನ್ನೂ ಕೊಡುತ್ತದೆ. ಈ ಎಲ್ಲಾ ಕಾರಣಕ್ಕಾಗಿ ಸಿನಿಮಾ ವಿದ್ಯಾರ್ಥಿಗಳು ನೋಡಲೇಬೇಕಾದ ಚಿತ್ರ ‘ಮೀಲ್ ಪತ್ಥರ್’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.