ಅಭಿಶೇಕ್ ಚೌಬೆ ಚೊಚ್ಚಲ ನಿರ್ದೇಶನದ ‘ಇಶ್ಕಿಯಾ’ದಲ್ಲಿದ್ದಂತೆ ‘ಕಿಲ್ಲರ್ ಸೂಪ್‌’ನಲ್ಲೂ ಕೂಡ ಪ್ರಮುಖ ಸೂತ್ರಧಾರಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸಿಲುಕಿಕೊಂಡ, ಅದರಿಂದ ಬೇಸತ್ತ ಮಹಿಳೆ. ಯೋಜನೆ, ಪ್ರತಿಯೋಜನೆ ರೂಪಿಸುವುದು ಮಹಿಳೆ ಮತ್ತು ಅದನ್ನು ಒಪ್ಪಿ ನಿರ್ವಹಿಸುವುದು ಅಲ್ಲಿರುವ ಪುರುಷರು, ಅದೂ ಮುಖ್ಯವಾಗಿ ಆಕೆಯ ಪ್ರೇಮಕ್ಕಾಗಿ ಹಂಬಲಿಸಿ. ‘ಕಿಲ್ಲರ್ ಸೂಪ್‌’ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಾಲ್ಕು ಸಾವು, ಒಂದು ದೆವ್ವ, ಹಿಡಿಯಷ್ಟು ಹಾಸ್ಯ, ಒಂದಷ್ಟು ಪೊಲೀಸ್ ತನಿಖೆ, ಸಾಕಷ್ಟು ಥ್ರಿಲ್, ರುಚಿಗೆ ತಕ್ಕಷ್ಟು ಶೇಕ್ಸ್‌ಪಿಯರ್ ಮತ್ತು ಕವಿತೆ ಸೇರಿಸಿ ನಿರ್ದೇಶಕ ಅಭಿಷೇಕ್ ಚೌಬೆ ಸಿದ್ಧಪಡಿಸಿರುವುದೇ ‘ಕಿಲ್ಲರ್ ಸೂಪ್’. ಇಂತಹ ವಿಶಿಷ್ಟ ರುಚಿಯ ಸೂಪನ್ನು ಸರಿಯಾದ ರೀತಿಯಲ್ಲಿ ಉಣಬಡಿಸಲು ಪ್ರತಿಭಾವಂತ ನಟರ ದಂಡೇ ಇರುವುದರಿಂದ ಕಿಲ್ಲರ್ ಸೂಪ್ ನಾಲಿಗೆಗೆ ಚುರುಕು ಮುಟ್ಟಿಸುವ ಸ್ವಾದದೊಂದಿಗೆ ಸೆಳೆಯುತ್ತದೆ.

ಕತೆ ನಡೆಯುವುದು ತಮಿಳುನಾಡಿನ ಸುಂದರ ಕಾಲ್ಪನಿಕ ಪಟ್ಟಣ ಮೈಂಜೂರ್‌ನಲ್ಲಿ. ಇಲ್ಲಿದ್ದಾರೆ ಶೆಟ್ಟಿ ಬ್ರದರ್ಸ್. ಅಣ್ಣ ಅರವಿಂದ ಶೆಟ್ಟಿ (ಸಯ್ಯಾಜಿ ಶಿಂಧೆ), ತಮ್ಮ ಪ್ರಭಾಕರ ಶೆಟ್ಟಿ (ಮನೋಜ್ ಬಾಜ್‌ಪೇಯಿ). ಅರವಿಂದ್ ಶೆಟ್ಟಿ ಹಲವು ಅಕ್ರಮ ಉದ್ಯಮಗಳನ್ನು ಗುಟ್ಟಾಗಿ ನಡೆಸುತ್ತಿರುವ ಶ್ರೀಮಂತ ಉದ್ಯಮಿ. ಆದರೆ, ಪ್ರಭಾಕರ್ ಶೆಟ್ಟಿ ಹಲವು ಉದ್ಯಮಗಳಿಗೆ ಕೈಹಾಕಿ ಅಣ್ಣನ ಹಣವನ್ನು ಕಳೆದಿರುವ, ಜೊತೆಗೆ ಅವನಿಂದಲೇ ಗುಟ್ಟಾಗಿ ಹಣ ಕದ್ದಿರುವ ವಿಫಲ
ಉದ್ಯಮಿ. ತಾನೊಬ್ಬ ಅದ್ಧುತ ಪಾಕ ಪ್ರವೀಣೆ ಎಂದುಕೊಂಡಿರುವ ಆತನ ಹೆಂಡತಿ ಸ್ವಾತಿಗೆ (ಕೊಂಕಣಾ ಸೇನ್ ಶರ್ಮಾ) ತನ್ನದೇ ರೆಸ್ಟೋರೆಂಟ್ ಆರಂಭಿಸುವ ಕನಸು. ಬಹಿರಂಗವಾಗಿ ಶ್ರೀಮಂತ ಜೀವನ ನಡೆಸುತ್ತಿದ್ದರೂ, ಒಳಗೆ ಪೂರ್ತಿಯಾಗಿ ದಿವಾಳಿ ಎದ್ದಿರುವ ಶೆಟ್ಟಿ ದಂಪತಿಗಳ ಬದುಕಿನೊಳಗೆ, ಪರಸ್ಪರರ ಬಳಿ ಮುಚ್ಚಿಟ್ಟ ಒಂದಷ್ಟು ರಹಸ್ಯಗಳಿವೆ, ಹೇಳಿರುವ ಸುಳ್ಳುಗಳಿವೆ. ಮಾಡಿರುವ ಮೋಸಗಳಿವೆ.

ಇವರ ಜೀವನದಲ್ಲಿ ಒಂದು ರಾತ್ರಿ ಹಲವು ಅನಿರೀಕ್ಷಿತ ಘಟನೆಗಳು ನಡೆದು, ಅವು ಮತ್ತಷ್ಟು ತಿರುವು ಪಡೆದು ದುರಂತವೊಂದರಲ್ಲಿ ಪರ್ಯಾವಸನವಾಗುತ್ತದೆ. ಪಾತ್ರಗಳು ಒಂದು ಸಮಸ್ಯೆ ಬಗೆಹರಿಸುವ ಯತ್ನದಲ್ಲಿ, ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಾ, ಮತ್ತಷ್ಟು ದುರಂತಗಳಿಗೆ ಸಾಕ್ಷಿಯಾಗುತ್ತಾ ಸಾಗುತ್ತವೆ. ಇದೆಲ್ಲದರ ಕೇಂದ್ರದಲ್ಲಿರುವ ಸ್ವಾತಿ, ತಾನೇ ಹೆಣೆದ ಬಲೆಯಲ್ಲಿ ತಾನೇ ಸಿಲುಕಿಕೊಂಡು, ಬಿಡಿಸಿಕೊಂಡು, ಮತ್ತೆ ಸಿಲುಕಿಕೊಂಡರೂ ಛಲ ಬಿಡದೆ ಮುಂದೇ ಸಾಗುತ್ತಲೇ, ಸೀರೀಸ್ ಅನ್ನು ರೋಚಕವಾಗಿಸುತ್ತಾಳೆ.

‘ಕಿಲ್ಲರ್ ಸೂಪ್‌’ನ ವಿಶೇಷವೆಂದರೆ ಇಲ್ಲಿ ಸರಣಿ ಸಾವು ಸಂಭವಿಸುತ್ತವೆ. ಬಹುತೇಕ ಎಲ್ಲವೂ ಸ್ವಾತಿಯತ್ತ ಕೈಮಾಡುವ ಕೊಲೆಯಂತೆ ಕಾಣುತ್ತವೆ. ಆದರೆ, ತಾಂತ್ರಿಕವಾಗಿ ಯಾವುದೂ ಕೊಲೆಯಲ್ಲ. ಈ ಎಲ್ಲಾ ಸಾವುಗಳಿಂದ ಸ್ವಾತಿಯ ಸಮಸ್ಯೆ ಬಗೆಹರಿಯುವುದು ನಿಜ, ಆಕೆ ಕೆಲವರ ಸಾವನ್ನು ಬಯಸುವುದೂ ನಿಜ, ಕೈಮೀರಿದ ಪರಿಸ್ಥಿತಿಯಲ್ಲಿ ಆಕೆ ಕೊಲ್ಲಲೂಬಹುದು ಎಂಬುದು ಕೂಡ ನಿಜ, ಹಾಗಂತ, ಆಕೆ ಕೊಲೆ ಮಾಡಿಲ್ಲ. ಆದರೆ, ಅಂತಹ ಸಂದರ್ಭಗಳಲ್ಲಿ ಕೊಲೆಗಾರ್ತಿಯಂತೆ ಯೋಚಿಸುತ್ತಾಳೆ, ಪ್ರತಿಕ್ರಿಯಿಸುತ್ತಾಳೆ ಮತ್ತು ನಡೆದುಕೊಳ್ಳುತ್ತಾಳೆ. ಹಾಗಿದ್ದೂ, ಅಭಿಶೇಕ್ ಚೌಬೆ ಸ್ವಾತಿಯನ್ನು ಕ್ರಿಮಿನಲ್‌ನಂತೆ ಚಿತ್ರಿಸಿಲ್ಲ, ಅವಳ ಎಲ್ಲಾ ಕೊರತೆಗಳ ನಡುವೆಯೂ ಆಕೆಯದು ಉಳಿವಿಗಾಗಿ ಮತ್ತು ಅಸ್ತಿತ್ವಕ್ಕಾಗಿನ ಹೋರಾಟದಂತೆ ಕಾಣುತ್ತದೆ.

ಅಭಿಶೇಕ್ ಚೌಬೆ ಚೊಚ್ಚಲ ನಿರ್ದೇಶನದ ‘ಇಶ್ಕಿಯಾ’ದಲ್ಲಿದ್ದಂತೆ ‘ಕಿಲ್ಲರ್ ಸೂಪ್‌’ನಲ್ಲೂ ಕೂಡ ಪ್ರಮುಖ ಸೂತ್ರಧಾರಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸಿಲುಕಿಕೊಂಡ, ಅದರಿಂದ ಬೇಸತ್ತ ಮಹಿಳೆ. ಯೋಜನೆ, ಪ್ರತಿಯೋಜನೆ ರೂಪಿಸುವುದು ಮಹಿಳೆ ಮತ್ತು ಅದನ್ನು ಒಪ್ಪಿ ನಿರ್ವಹಿಸುವುದು ಅಲ್ಲಿರುವ ಪುರುಷರು, ಅದೂ ಮುಖ್ಯವಾಗಿ ಆಕೆಯ ಪ್ರೇಮಕ್ಕಾಗಿ ಹಂಬಲಿಸಿ. ‘ಕಿಲ್ಲರ್ ಸೂಪ್‌’ನಲ್ಲಿ ಪ್ರೇಕ್ಷಕರಿಂದ ಮುಚ್ಚಿಡಲ್ಪಟ್ಟಿರುವ ಸಸ್ಪೆನ್ಸ್ ಯಾವುದೂ ಇಲ್ಲ. ಪ್ರೇಕ್ಷಕರಿಗೆ ಎಲ್ಲವೂ ಗೊತ್ತಿದೆ. ಆದರೆ, ಪಾತ್ರಗಳಿಗೆ ಗೊತ್ತಿಲ್ಲ. ಹೀಗಾಗಿ, ಈ ಸಾವುಗಳೊಂದಿಗೆ ಪೋಲೀಸ್ ತನಿಖೆಯೂ ಸಾಗುತ್ತದೆ. ಹೊಸ ಉತ್ಸಾಹಿ ಪೊಲೀಸ್ ಅಧಿಕಾರಿ ತುಪಾಲಿ (ಅನ್ಬುತಾಸನ್) ಮತ್ತು ಆತನ ಮೇಲಧಿಕಾರಿ ಹಸನ್ (ನಾಸರ್) ತಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತಾರೆ. ಆ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಶಿಷ್ಟ ಪಾತ್ರಗಳು ಬಂದು ಹೋಗುತ್ತವೆ.

ನಿರ್ದೇಶಕ ಮ್ಯಾಜಿಕ್ ರಿಯಲಿಸಂ (Hallucination?) ಅನ್ನೂ ತರುತ್ತಾರೆ. ರಾಬರ್ಟ್ ಫ್ರಾಸ್ಟ್‌ನ ಪ್ರಸಿದ್ಧ ಕವಿತೆ ‘ಸ್ಪಾಂಪಿಗ್ ಬೈ ವುಡ್ಸ್’ ತನಿಖೆಯಲ್ಲಿ ಹೆಜ್ಜೆ ಹೆಜ್ಜೆಗೂ ನೆರವಾಗುತ್ತದೆ. ನಿರ್ದೇಶಕರು ಕವಿತೆಯ ಸಾಲುಗಳನ್ನು ಇಟ್ಟುಕೊಂಡು ಕತೆಯನ್ನು ಹೆಣೆದಿರುವ, ಅಪರಾಧದ ಪರಿಸರವನ್ನು ಕಟ್ಟಿಕೊಟ್ಟಿರುವ ರೀತಿ ಅನನ್ಯ. ಜೊತೆಗೆ, ನಿರ್ದೇಶಕರು ಇಲ್ಲಿ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದ ಅಂಶಗಳನ್ನು ತರುತ್ತಾರೆ. ಸೀರೀಸ್‌ನಲ್ಲಿ ಅತೀ ಹೆಚ್ಚಾಗಿ ಗಮನ ಸೆಳೆಯುವ ಅಂಶವೆಂದರೆ ಭಾಷೆ. ಇದು ಹಿಂದಿ ಸೀರೀಸ್ ಆದರೂ, ಪಾತ್ರಗಳು ತಮಗೆ ಸಹಜವಾದ ಭಾಷೆಯಲ್ಲಿ ಮಾತನಾಡುತ್ತವೆ. ಬಹುತೇಕ ಭಾಗದಲ್ಲಿ ತಮಿಳು ಮತ್ತು ಇಂಗ್ಲಿಷ್‌ ಇದೆ. ಮಲಯಾಳಂ ಕೇಳಿಬರುತ್ತದೆ. ದಖ್ಖನಿಯ ಸೊಬಗು ಕಾಣುತ್ತದೆ. ಭಾಷೆ ಮಾತ್ರವೇ ಅಲ್ಲ, ಉಪ ಭಾಷೆಗಳು, ಹಲವು ಆ್ಯಕ್ಸೆಂಟ್‌ಗಳನ್ನು ಬಳಸಿಕೊಳ್ಳಲಾಗಿದೆ. ಇವುಗಳೆಲ್ಲಾ ಸಹಜವಾಗಿವೆ, ಸುಂದರವಾಗಿವೆ ಮತ್ತು ಸೀರೀಸ್‌ ಅನ್ನು ಒಂದೆರಡು ಹಂತ ಮೇಲೆರಿಸಿದೆ.

ಇಲ್ಲಿರುವ ಪಾತ್ರಗಳ ಇಂಗ್ಲಿಷ್ ಅನ್ನು ಪಾಲಿಷ್ ಮಾಡಿ ಏಕರೂಪಕ್ಕೆ ತಂದಿಲ್ಲ. ಪ್ರತೀ ಪಾತ್ರಗಳು ತಮ್ಮದೇ ಶೈಲಿಯಲ್ಲಿ ಇಂಗ್ಲಿಷ್ ಮಾತನಾಡುತ್ತವೆ ಮತ್ತು ಅದನ್ನು ಹಾಸ್ಯಕ್ಕಾಗಿ ಬಳಸಿಲ್ಲ. ಭಾಷೆಯ ಹಲವು ರೂಪಗಳನ್ನು, ಹೀರಿಕೊಂಡು, ಒಪ್ಪಿಕೊಂಡಿರುವ ರೀತಿ ಸೊಗಸಾಗಿದೆ. ಸೀರೀಸ್‌ನ ಡಾರ್ಕ್ ಹ್ಯೂಮರ್ ಕಚಗುಳಿ ಇಡುತ್ತದೆ. ಹೊಸ ರುಚಿಯನ್ನು ಪ್ರಯತ್ನಿಸುವ ಇರಾದೆ ಇರುವವರಿಗೆ, ಸಾಧಾರಣ ರುಚಿಗಿಂತಲೂ ಭಿನ್ನವಾಗಿರುವ ‘ಕಿಲ್ಲರ್ ಸೂಪು’ ಇಷ್ಟವಾಗುತ್ತದೆ. ‘ಕಿಲ್ಲರ್ ಸೂಪ್‌’ನ ಕಿಲ್ಲರ್ ಅಂಶವೆಂದರೆ ಅಭಿನಯ. ಅಭಿಶೇಕ್ ಚೌಬೆ ಕನಸಿನ ತಂಡವನ್ನು ಒಟ್ಟು ಸೇರಿಸಿದ್ದಾರೆ. ಮನೋಜ್ ಬಾಜ್‌ಪೇಯಿ, ಪ್ರಭಾಕರ್ ಮತ್ತು ಉಮೇಶ್ ಆಗಿ ದ್ವಿಪಾತ್ರದಲ್ಲಿ ನಟಿಸಿದ್ದರೂ, ಅವರದ್ದು ಒಂದು ರೀತಿಯಲ್ಲಿ ಎರಡನೇ ನಾಯಕನ ಪಾತ್ರ.

ಸೀರೀಸ್‌ನ ಪ್ರಮುಖ ಪಾತ್ರ ಸ್ವಾತಿ ಶೆಟ್ಟಿಯಾಗಿ ಅಭಿನಯಿಸಿರುವ ಕೊಂಕಣ ಸೇನ್‌ ಶರ್ಮಾಗೆ, ಸಂಪೂರ್ಣ ಬೆಂಬಲವಾಗಿ ನಿಂತಿರುವ ಅವರು ತಮ್ಮ ಪಾತ್ರದ ದೌರ್ಬಲ್ಯ, ಅಸಹಾಯಕತೆ, ಹೇಡಿತನ ಮತ್ತು ಒಳ್ಳೆಯತನಗಳನ್ನು, ಪಾತ್ರವನ್ನು ಕೆಳಗಿಳಿಸುವ ರೀತಿಯ ಹಾಸ್ಯದ ಮೂಲಕವೇ ವ್ಯಕ್ತಪಡಿಸುವ ರೀತಿ ಚಂದ. ಕೊಂಕಣಾಗೆ ಇದು ಖಂಡಿತಾ ಅತಿ ಪ್ರಮುಖ ಪಾತ್ರ. ಪಾತ್ರದ ಎಲ್ಲಾ ಸಂಕೀರ್ಣತೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಅವರು, ಒಂದು ಕ್ಷಣ ಖಳನಾಯಕಿಯಂತೆಯೂ, ಮರುಕ್ಷಣ ಸಂತ್ರಸ್ತೆಯಂತೆಯೂ ಕಾಣುತ್ತಾರೆ. ಒಂದು ಕ್ಷಣ ಆಕೆಯ ಪ್ರೀತಿ ನಿಜವೆನಿಸಿದರೆ, ಮತ್ತೊಂದು ಕ್ಷಣ ನಟನೆಯೆನಿಸುತ್ತದೆ. ಈ ಇಬ್ಬರು ಪರಸ್ಪರ ಬೇಬಿ ಬೇಬಿ ಎಂದು ಕರೆಯುವ ರೀತಿಯೇ ಅವರ ನಡುವಿನ ಸಂಬಂಧದ ಏರಿಳಿತಗಳನ್ನು, ಸತ್ಯ ಮಿಥ್ಯವನ್ನು ತರೆದಿಡುವುದು ಅವರ ಪ್ರತಿಭೆಗೆ ಸಾಕ್ಷಿ.

ಇನ್ಸ್‌ಪೆಕ್ಟರ್ ಹಸನ್ ಪಾತ್ರದಲ್ಲಿ ನಾಸರ್‌ ಮನ ಗೆಲ್ಲುತ್ತಾರೆ. ತನಿಖೆಯ ಸಂದರ್ಭದಲ್ಲಿ ಬದಲಾಗುವ ಅವರ ದ್ವನಿ, ನಡವಳಿಕೆ ಆ ಪಾತ್ರವನ್ನು ಅಪಹಾಸ್ಯವಾಗಿಸದೆ, ನೈಜ್ಯ ಮತ್ತು ಮಾನವೀಯವಾಗಿಸಿದೆ. ಅದಕ್ಕೊಂದು ವಿವರಿಸಲಾಗದ ಘನತೆ ತಂದುಕೊಟ್ಟಿದೆ. ಕಾಗದದ ಮೇಲೆ ಅಷ್ಟೇನೂ ಭಾವುಕವೆನಿಸದ ಕೆಲವು ಕ್ಷಣಗಳನ್ನು, ತಮ್ಮ ನಟನೆಯ ಮೂಲಕವೇ ಅವರು ಭಾವುಕವಾಗಿಸಿದ್ದಾರೆ. ತುಪಾಲಿ ಪಾತ್ರಧಾರಿ ಅನ್ಬುತಾಸನ್, ಅರವಿಂದ್ ಶೆಟ್ಟಿ ಪಾತ್ರದಲ್ಲಿ ಸಯ್ಯಾಜಿ ಶಿಂಧೆ ಮಿಂಚುತ್ತಾರೆ. ಪ್ರಭಾಕರನ ಪ್ರೇಮಿಯಾಗಿ ಕನಿ ಕುಸೃತಿ ಪ್ರಮುಖವಾಗಿ ಗಮನಸೆಳೆಯುತ್ತಾರೆ. ಅರವಿಂದ ಶೆಟ್ಟಿಯ ಮಗಳು ಅಪೇಕ್ಷಾ ಪಾತ್ರದಲ್ಲಿ ಅನುಲಾ, ಆತನ ಬಲಗೈ ಬಂಟನ ಪಾತ್ರದಲ್ಲಿ ಲಾಲ್ ಹೀಗೆ ಎಲ್ಲರೂ ಉತ್ತಮವಾಗಿ ಅಭಿನಯಿಸಿ ಪಾತ್ರಗಳನ್ನು ಸ್ಮರಣೀಯವಾಗಿಸಿದ್ದಾರೆ.

ಸೀರೀಸ್‌ನ ಮತ್ತೊಂದು ದೊಡ್ಡ ಪ್ಲಸ್, ಸೊಗಸು, ನಿಗೂಢತೆ ಮತ್ತು ರೋಚಕತೆ ಕಟ್ಟಿಕೊಡುವ ಸಿನಿಮಾಟೋಗ್ರಫಿ. ತೆಲಂಗಾಣದಲ್ಲಿ ಸುಮಾರು 6 ವರ್ಷಗಳ ಹಿಂದೆ ನಡೆದ ನೈಜ್ಯ ಘಟನೆಯೇ ‘ಕಿಲ್ಲರ್ ಸೂಪ್’ ಕತೆಯ ಹಿಂದಿರುವ ಪ್ರೇರಣೆ. ಸುಧಾಕರ ರೆಡ್ಡಿ ಮತ್ತು ಆತನ ಪತ್ನಿ ಸ್ವಾತಿ ರೆಡ್ಡಿ ಹಾಗೂ ಆಕೆಯ ಪ್ರಿಯಕರ ರಾಜೇಶ್ ಪ್ರಮುಖವಾಗಿದ್ದ ಈ ಘಟನೆ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಇವರ ಹೆಸರುಗಳನ್ನೇ ಹೋಲುವ ಹೆಸರುಗಳನ್ನು ಕಿಲ್ಲರ್ ಸೂಪ್ ಪಾತ್ರಗಳಿಗೆ ನೀಡಲಾಗಿದೆ. ಬಹುತೇಕ ಯಶಸ್ವಿಯಾಗಿದ್ದ, ಈ ಭಾರಿ ಕ್ರಿಮಿನಲ್ ಯೋಜನೆ ಆಗ ಬಯಲಿಗೆ ಬಂದಿದ್ದು, ಅಪರಾಧಿಗಳು ಸಿಕ್ಕಿಬಿದ್ದದ್ದು, ಮಟನ್ ಸೂಪಿನ ಕಾರಣದಿಂದ. ವಿಚಿತ್ರವೆಂದರೆ, ಅಂದು ನಡೆದ ಆ ಅಪರಾಧಕ್ಕೆ ಸ್ಫೂರ್ತಿಯಾಗಿದ್ದು ಒಂದು ತೆಲುಗು ಸಿನಿಮಾ. ಈಗ ‘ಕಿಲ್ಲರ್ ಸೂಪ್‌’ ಸೀರೀಸ್‌ಗೆ ಸ್ಪೂರ್ತಿಯಾಗಿರುವುದು, ಸಿನಿಮಾದಿಂದ ಸ್ಪೂರ್ತಿ ಪಡೆದ ಅದೇ ಅಪರಾಧ. ‘ಕಿಲ್ಲರ್ ಸೂಪ್‌’ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here