ಚಂದ್ರಕಾಂತ್‌ ನಿರ್ದೇಶನದ ‘ತ್ರಿಕೋನ’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಏಪ್ರಿಲ್‌ 8ಕ್ಕೆ ತೆರೆಕಾಣಲಿದೆ. ಏಪ್ರಿಲ್‌ 1ರಂದು ಆರೇಳು ಸಿನಿಮಾಗಳ ಬಿಡುಗಡೆಯಾಗುತ್ತಿದ್ದು, ಅದಕ್ಕಾಗಿ ಒಂದು ವಾರ ತಡವಾಗಿ ಬರುತ್ತಿರುವುದಾಗಿ ಹೇಳುತ್ತಾರೆ ನಿರ್ಮಾಪಕ ರಾಜಶೇಖರ್‌.

ಏ.1ರಂದು ಬಿಡುಗಡೆಯಾಗಬೇಕಿದ್ದ ತ್ರಿಕೋನ ಚಿತ್ರವು ಈಗ ಏ.8ಕ್ಕೆ ಮುಂದೂಡಲ್ಪಟ್ಟಿದೆ. ಈ ಸಂಬಂಧ ನಿರ್ಮಾಪಕ ರಾಜಶೇಖರ್​, ರಾಯಭಾರಿ ಸುಚೇಂದ್ರ ಪ್ರಸಾದ್​ ಮತ್ತು ನಿರ್ದೇಶಕ ಚಂದ್ರಕಾಂತ್​ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಹಂಚಿಕೊಂಡರು. ಚಿತ್ರದ ನಿರ್ಮಾಪಕ ರಾಜಶೇಖರ್‌ ಮಾತನಾಡಿ, “ಪುನೀತ್​ ರಾಜಕುಮಾರ್​ ಅಭಿನಯದ ‘ಜೇಮ್ಸ್​’ ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ವಿತರಕರ ಜತೆಗೆ ಮಾತನಾಡುವಾಗ, ‘ಜೇಮ್ಸ್​’ ಚಿತ್ರವು ಎಲ್ಲೆಲ್ಲಿ ಪ್ರದರ್ಶನವಾಗುತ್ತಿದೆ, ಆ ಕೆಲವು ಚಿತ್ರಮಂದಿರಗಳನ್ನು ಕೊಡಿಸುವುದಾಗಿ ಹೇಳಿದರು. ನಾನು ಪುನೀತ್​ ಅಭಿಮಾನಿಯಾಗಿ, ಅವರ ಚಿತ್ರ ಓಡುತ್ತಿರುವ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಮನಸ್ಸು ಒಪ್ಪುತ್ತಲ್ಲ. ಇದು ಮೊದಲ ಕಾರಣ. ನಾವು ಏಪ್ರಿಲ್​ 1ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದಾಗ ಒಂದು ಚಿತ್ರ ಸಹ ಘೋಷಣೆಯಾಗಿರಲಿಲ್ಲ. ಈಗಿರುವ ಮಾಹಿತಿಯ ಪ್ರಕಾರ ಅಂದು ಆರೇಳು ಸಿನಿಮಾಗಳು ಬಿಡುಗಡೆಯಾಗುವ ಸಂಭವವಿದೆ. ಹಾಗಾಗಿ ಏಪ್ರಿಲ್‌ 8ಕ್ಕೆ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ” ಎಂದರು.

ಉದ್ಯಮದಲ್ಲಿ ಚಿತ್ರಮಂದಿರಗಳಿಗಾಗಿ ಕಿತ್ತಾಡುವ ಪರಿಸ್ಥಿತಿ ಎದುರಾಗಿದೆ ಎಂದು ರಾಜಶೇಖರ್‌ ಬೇಸರ ವ್ಯಕ್ತಪಡಿಸುತ್ತಾರೆ. “ನಾವು ಕನ್ನಡ ಸಿನಿಮಾದವರೇ ಚಿತ್ರಮಂದಿರಗಳಿಗಾಗಿ ಪರಸ್ಪರ ಕಿತ್ತಾಡುವ ಪರಿಸ್ಥಿತಿ ಇದೆ. ನಾವು ಮುಂಚೆಯೇ ಘೋಷಣೆ ಮಾಡಿದ್ದೇವೆ, ನೀವು ತಡವಾಗಿ ಬಿಡುಗಡೆ ಮಾಡಿ ಎಂದು ಹೇಳುವುದು ಎಷ್ಟು ಸೂಕ್ತ? ಎಂದು ಪ್ರಶ್ನೆ ಹಾಕಿಕೊಂಡಾಗ, ನಾವೇ ಮುಂದಕ್ಕೆ ಹೋಗುವ ಎಂದು ಚರ್ಚಿಸಿ, ಏಪ್ರಿಲ್​ 08ಕ್ಕೆ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ಚಿತ್ರದ ಮೂಲಕ ನಾವು ತಾಳ್ಮೆಯ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ. ಈಗಾಗಲೇ ಟೀಸರ್​ ಮತ್ತು ಟ್ರೇಲರ್​ನಲ್ಲಿ ಅಹಂ, ಶಕ್ತಿ ಮತ್ತು ತಾಳ್ಮೆಯ ನಡುವೆ ಯಾರಿಗೆ ಜಯ ಸಿಗುತ್ತದೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ನಾವು ಪ್ರಚಾರ ಮಾಡಿದ್ದೀವಿ, ಇನ್ನೂ ಮಾಡುತ್ತೇವೆ ಎನ್ನುವ ಶಕ್ತಿ ಪ್ರದರ್ಶನವಾಗಲೀ ಅಥವಾ ಚಿತ್ರ ಚೆನ್ನಾಗಿ ಬಂದಿದ್ದು ನೋಡಿದವರು ಒಪ್ಪಿಕೊಳ್ಳುತ್ತಾರೆ ಎಂಬ ಅಹಂಕಾರವಾಗಲೀ ನಮಗೆ ಇಲ್ಲ. ನಾವು ತಾಳ್ಮೆಯಿಂದ ಒಂದು ವಾರ ಮುಂದಕ್ಕೆ ಹೋದರೂ ಪರವಾಗಿಲ್ಲ ಎಂದು ಏಪ್ರಿಲ್ 8 ರಂದು ಬಿಡುಗಡೆ ಮಾಡುತ್ತಿದ್ದೇವೆ” ಎಂದು ನಿರ್ಮಾಪಕ ಹಾಗೂ ಕಥೆಗಾರ ರಾಜಶೇಖರ್.

ನಟ ಸುಚೇಂದ್ರ ಪಸಾದ್‌ ಅವರು ನಿರ್ಮಾಪಕ ರಾಜಶೇಖರ್‌ ಅವರ ಆತ್ಮೀಯರು. ಸ್ನೇಹಿತನ ಸಿನಿಮಾಗೆ ಅವರು ಪ್ರಚಾರ ರಾಯಭಾರಿಯಾಗಿ ತೊಡಗಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌ ಮಾತನಾಡಿ, “ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ನಿರ್ಮಾಪಕರಿಗೆ ಸಾಕಷ್ಟು ಕಷ್ಟಗಳಿರುತ್ತವೆ. ‘ತ್ರಿಕೋನ’ದ ಗುರಿ ಹೆಚ್ಚಿನ ಜನರಿಗೆ ಹೇಗೆ ತಲುಪುವುದು ಎನ್ನುವುದರ ಕಡೆ ಇದೆ. ಈ ಚಿತ್ರವನ್ನು ಸಿದ್ಧಸೂತ್ರಗಳ ಜಾಡಿನಿಂದ ಹೊರತಪ್ಪಿಸಿ ಮಾಡಿದ್ದಾರೆ. ಸಿನಿಮಾ ಹೆಸರಿನಲ್ಲಿ ಇನ್ನೂ ಏನೇನೋ ಮಾಡುವುದಕ್ಕೆ ಸಾಧ್ಯವಿದೆ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರ ಚರ್ವಿತಚರ್ವಣವಾಗಿರದೆ, ಅಭಿರುಚಿಯನ್ನು ಬಿತ್ತುವ ಕೆಲಸ ಮಾಡಲಿ” ಎಂದು ಚಿತ್ರತಂಡಕ್ಕೆ ಹಾರೈಸಿದರು. ನಿರ್ದೇಶಕ ಚಂದ್ರಕಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here