ಇವತ್ತು ವಿದ್ಯಾಭ್ಯಾಸ ಪಡೆಯುವುದಕ್ಕಿಂತ ಹೆಚ್ಚು ವಿದ್ಯಾಭ್ಯಾಸ ಕೊಡಿಸುವುದೇ ದೊಡ್ಡ ದಂಧೆ. ರೌಡಿಗಳು, ರಾಜಕಾರಣಿಗಳು – ಅವರ ಮಧ್ಯೆ ಕೊಂಡಿಯಾಗಿ ಹಳೆಯವರಾಗುವ ವಿದ್ಯಾರ್ಥಿಗಳು ಮಾಫಿಯಾದ ಬಲೆಯ ಎಳೆಯಾಗುವ ಕತೆಯನ್ನು ನಮ್ಮ ಭಾವನೆಗಳು ಸ್ಪಂದಿಸುವ ರೀತಿಯಲ್ಲಿ ಕತೆಯಾಗಿಸಿದೆ ‘ಸೆಲ್ಫಿ’. ‘aha’ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಈ ತಮಿಳು ಸಿನಿಮಾ.
ದೇಶದ ಬಹುತೇಕ ಶೇ.99 ಮಂದಿ ತಂದೆ-ತಾಯಂದಿರಿಗೂ ಇರುವ ಆಸೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬುದು. ಹಾಗಾಗಿಯೇ ನಮ್ಮಲ್ಲಿ ವಿದ್ಯಾಭ್ಯಾಸ ಆಧಾರಿತ ಟೆಕ್ ಕಂಪನಿಗಳಿಗೆ ಹರಿದು ಬರುವ ಹೂಡಿಕೆ ಕಳೆದ ಒಂದೇ ದಶಕದಲ್ಲಿ ಮೂವತ್ತೆರಡು ಪಟ್ಟು ಏರಿಕೆಯಾಗಿದೆ. ತಜ್ಞರ ಅಭಿಪ್ರಾಯ ಪ್ರಕಾರ ಕೋವಿಡ್ ನಂತರ ಈ ಕ್ಷೇತ್ರಕ್ಕೆ ಹರಿದುಬಂದ ಹಣ 1600 ಡಾಲರ್ಗೂ ಅಧಿಕ! ಇದು ಕೇವಲ ಬೈಜೂಸ್, ವೇದಾಂತ್ಯು, ವೈಟ್ ಹ್ಯಾಟ್, ಅನ್ ಅಕಾಡೆಮಿಯಂತೆ ಆನ್ಲೈನ್ ಮೂಲಕ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಕೈ ಹಾಕಿದ ಕಂಪನಿಗಳ ಕತೆ. ಇವೆಲ್ಲ ಕಂಪನಿಗಳ ಬಹುತೇಕ ಗ್ರಾಹಕರು ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳಲು ತವಕಿಸುವವರು. ಹಾಗಾದರೆ ಆ ಮೆಡಿಕಲ್-ಎಂಜಿನಿಯರಿಂಗ್ ಕಾಲೇಜುಗಳ ಒಟ್ಟು ಗಾತ್ರ ಎಷ್ಟಿರಬಹುದು? ಕೇಳಿದರೆ ನೀವು ಹೌಹಾರುತ್ತೀರಿ. ಕೇಂದ್ರ ವಾಣಿಜ್ಯ ಇಲಾಖೆ ಅಂದಾಜಿನ ಪ್ರಕಾರ ಅದರ ಗಾತ್ರ ಏಳು ಲಕ್ಷ ಕೋಟಿ ರೂಪಾಯಿಗೂ ಅಧಿಕ!!
ಇಷ್ಟು ಬೃಹತ್ ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳು ಎಂದರೆ ಯಕಶ್ಚಿತ್ ಗ್ರಾಹಕರೇ ಎಂಬುದು ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ವೃತ್ತಿಪರ ಕಾಲೇಜುಗಳು ತಮ್ಮ ಸೀಟುಗಳಲ್ಲಿ ಒಂದಂಶ ಪ್ರವೇಶ ಪರೀಕ್ಷೆಯ ಮೂಲಕ ಒಳಬರುವವರಿಗೆ ಮೀಸಲು ಇರಿಸಬೇಕು. ಆದರೆ ಇನ್ನೊಂದು ಅಂಶ ಮಾರಾಟಕ್ಕೆ ಇಡಲಾಗುತ್ತದಲ್ಲಾ, ಅಲ್ಲಿ ನಡೆಯುವ ಆಟ ಐಪಿಎಲ್ಗಿಂತಲೂ ದೊಡ್ಡದು. ಅಂಥ ಆಟದ ವಿಷಯದ ಸುತ್ತ ಹೆಣೆಯಲಾದ ಕತೆ ‘ಸೆಲ್ಫಿ’ ತಮಿಳು ಸಿನಿಮಾ.
ಇದೊಂದು ಥ್ರಿಲ್ಲರ್ ಸಿನಿಮಾ ಎಂಬ ಸೂಚನೆ ಕೊಡುವ ಮಧ್ಯಭಾಗದ ದೃಶ್ಯದಿಂದ ಸಿನಿಮಾ ಆರಂಭವಾಗುತ್ತದೆ. ನಿರ್ದೇಶಕ ಮತಿ ಮಾರಾನ್ಗೆ ಅನಗತ್ಯವಾಗಿ ಕತೆ ಕೊರೆಯುವ ಇರಾದೆ ಇಲ್ಲ. ಹಾಗಾಗಿ ದೃಶ್ಯದಿಂದ ದೃಶ್ಯಕ್ಕೆ ಕತೆಯ ಪಯಣಕ್ಕೆ ಅತಿ ವೇಗ ಕೊಡಲಾಗಿದೆ. ಮೇಲೆ ತಿಳಿಸಿದ ಅಂಕಿ ಅಂಶಗಳೆಲ್ಲ ನಾನು ಹೇಳಿದವೇ ಹೊರತು ನನ್ನಂತೆ ಅನಗತ್ಯ ಮಾಹಿತಿ ಹೇಳಿ ನಿರ್ದೇಶಕ ನಿಮ್ಮನ್ನು ಬೋರು ಹೊಡೆಸುವುದಿಲ್ಲ.
ಕತೆಗೆ ಭೂಮಿಕೆ ಹಾಕುವಲ್ಲಿ ಚಿತ್ರಕಥೆ ಹೆಚ್ಚು ಸಮಯ ಹಾಳು ಮಾಡಿಲ್ಲ. ಕನಾಲ್ ಒಬ್ಬ ಸರ್ವೇ ಸಾಮಾನ್ಯ ಎಂಜಿನಿಯರಿಂಗ್ ವಿದ್ಯಾರ್ಥಿ. ಆತನ ಸರ್ವೇ ಸಾಮಾನ್ಯ ತಂದೆಗೆ ಇರುವ ಸರ್ವೇ ಸಾಮಾನ್ಯ ಆಸೆ ಮಗನನ್ನು ಎಂಜಿನಿಯರಿಂಗ್ ಓದಿಸುವುದು. ಅದಕ್ಕಾಗಿ ಎರಡು ಲಕ್ಷ ರೂಪಾಯಿ ಡೊನೇಶನ್ ಕೊಟ್ಟು ಸೀಟು ಪಡೆದಿರುತ್ತಾರೆ. ಆದರೆ ಅದು ಡೊನೇಶನ್ ಅಲ್ಲ, ಸೀಟು ಕೊಡಿಸಿದವನಿಗೆ ಕೊಟ್ಟ ಕಮಿಷನ್ ಎಂಬುದು ಗೊತ್ತಾಗುವುದು ಮಗನಿಗೆ, ಅದೂ ಕಾಲೇಜು ಸೇರಿದ ಮೇಲೆಯೇ. ಆದರೂ ಪಾಪ ಮಗ ತನ್ನ ಸಿಗರೇಟು-ಎಣ್ಣೆ ಖರ್ಚಿಗೆ ಕಷ್ಟಪಟ್ಟು ದುಡ್ಡು ಹೊಂದಿಸುತ್ತಾನೆ. ಪುಸ್ತಕ, ಪ್ರಾಜೆಕ್ಟು, ಫೈನು ಎನ್ನುತ್ತಾ ತಂದೆಯಿಂದ ಅಡಿಗಡಿಗೆ ಎರಡು ಸಾವಿರ ಕೀಳುವುದು ಹೆಚ್ಚಿನ ವಿದ್ಯಾರ್ಥಿಗಳಂತೆ ಆತ ಕ್ಯಾಂಪಸ್ಸಲ್ಲಿ ಕಲಿಯುವ ವಿದ್ಯೆ.
ಇವೆಲ್ಲ ದೃಶ್ಯಗಳು ಫಟಫಟನೆ ಹಿನ್ನೆಲೆ ಸಿದ್ಧಪಡಿಸಿ ಕನಾಲ್ಗೊಬ್ಬಳು ಹುಡುಗಿ ಪರಿಚಯವಾಗುವ ವೇಳೆಗೆ ಇದಿನ್ನು ಹಳ್ಳ ಹಿಡಿಯಿತು ಎಂದುಕೊಳ್ಳುವ ಸಮಯ. ಆದರೆ ನಿರೀಕ್ಷೆ ಸುಳ್ಳಾಗುತ್ತದೆ. ಹುಡುಗ – ಹುಡುಗಿ ಹಳ್ಳದಲ್ಲಿ ಬಿದ್ದು ಕಾಲ ಕಳೆಯುವ ಸಿನಿಮಾ ಇದಲ್ಲ. ಮೆಡಿಕಲ್ ವಿದ್ಯಾರ್ಥಿನಿಯಾದ ಆಕೆ ಕತೆಯ ಮಟ್ಟಿಗೆ ಒಂದು ಮುಖ್ಯ ಕೊಂಡಿ. ಎಂಜಿನಿಯರಿಂಗಲ್ಲೇ ಎರಡು ಲಕ್ಷ ಕಕ್ಕಿರುವ ಕನಾಲ್ಗೆ ಮೆಡಿಕಲ್ ಮಾಫಿಯಾದ ಝಲಕ್ ಸಿಗುವುದು ತನ್ನ ಗರ್ಲ್ಫ್ರೆಂಡ್ ಜತೆಗೆ ಹಾಜರಾದ ಪಾರ್ಟಿಯಲ್ಲಿ.
ಹೇಗೂ ಎಂಜಿನಿಯರಿಂಗ್ ಕ್ಲಾಸಿಗೆ ಒಗ್ಗದ ಕನಾಲ್ ಮತ್ತು ತಂಡ ಸೀಟು ಬ್ರೋಕರ್ ಕೆಲಸ ಮಾಡಲು ತಯಾರಾಗುತ್ತದೆ. ಆದರೆ ಮೆಡಿಕಲ್ ಕಾಲೇಜಲ್ಲೇ ಓದಿ, ನಂತರ ಮೆಡಿಕಲ್ ಸೀಟು ಕೊಡಿಸುವ ಏಜೆಂಟ್ ಕೆಲಸಕ್ಕೇ ಕೈ ಹಾಕಿ ಪಳಗಿದ ತಿಮಿಂಗಿಲವೊಂದು ಅದಾಗಲೇ ಅಲ್ಲಿ ಸ್ಥಾಪನೆಯಾಗಿರುತ್ತದೆ. ಇವರು ಏನೇ ಇದ್ದರೂ ಆ ರವಿವರ್ಮನ ಮೂಲಕ ಸೀಟು ಕೊಡಿಸಬೇಕು. ಹಾಗಾಗಿ 50 ಲಕ್ಷ ರೂಪಾಯಿಯ ಡೊನೇಶನ್ ಸೀಟನ್ನು 65ಕ್ಕೆ ಮಾರಿ ಈ ಹುಡುಗರು ಜಮಾಯ್ಸಿ ಬಿಡುತ್ತಾರೆ. ಆದರೆ ಸಮಸ್ಯೆ ಎದುರಾಗುವುದು ಆ ಸೀಟು ಕ್ಯಾನ್ಸಲ್ ಆದಾಗ. ವಾಪಸ್ ಕೊಡಲು ಇವರ ಬಳಿ ಹಣವಿಲ್ಲ, ಬಂದದ್ದೆಲ್ಲ ಕಾರು ಕೊಳ್ಳಲು, ಪಾರ್ಟಿ ಮಾಡಲು ಖರ್ಚಾಗಿದೆ. ಇದು ಕಗ್ಗಾಂಟಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ದಂಧೆಯಲ್ಲಿ ಶಾಮೀಲಾದ ನಝೀರ್ ಎಂಬ ಪಾಪದ ವಿದ್ಯಾರ್ಥಿ ನೇಣು ಬಿಗಿದುಕೊಳ್ಳುತ್ತಾನೆ. ಪೊಲೀಸರು ದುಡ್ಡಿದ್ದ ಪಕ್ಷಕ್ಕೇ ಸೇರುತ್ತಾರೆ.
ಇಷ್ಟಾಗುವಾಗ ಅರ್ಧ ಸಿನಿಮಾದಲ್ಲೇ ಪೂರ್ತಿ ಕತೆ ಹೇಳಿಬಿಟ್ಟರಲ್ಲ ಎಂಬ ಅನುಮಾನ ನನ್ನದು. ಮಾಫಿಯಾದ ಪರಿಚಯ, ಅದರ ಪರಿಣಾಮ ಎಲ್ಲವನ್ನೂ ‘ಸೆಲ್ಫಿ’ ಬಹುಬೇಗ ಕಟ್ಟಿಕೊಡುತ್ತದೆ. ಅಲ್ಲಿಂದ ಮುಂದಕ್ಕೆ ನಡೆಯುವ ಘಟನೆಗಳಲ್ಲಿ ಹೆಚ್ಚಿನದ್ದು ಕಮರ್ಷಿಯಲ್ ಥ್ರಿಲ್ಲರ್ ಅಂಶಗಳೇ, ಆದರೂ ‘ಸೆಲ್ಫಿ’ ಹತ್ತರ ಜತೆಗೆ ಹನ್ನೊಂದು ಎಂಬ ಭಾವನೆ ಕೊಡುವುದಿಲ್ಲ. ಮೊದಲಾರ್ಧದಲ್ಲೇ ಪಾತ್ರಗಳ ಜತೆಗೆ ಪ್ರೇಕ್ಷಕನಿಗೆ ಭಾವನಾತ್ಮಕ ಸಂಬಂಧ ಕುದುರುವ ಕಾರಣ ಆ ಪಾತ್ರಗಳು ಏನಾದವು ಎಂಬ ಕುತೂಹಲ ಜೀವಂತವಾಗಿರುತ್ತದೆ.
ಜೀವ ಕಳೆದುಕೊಂಡ ಸ್ನೇಹಿತ, ಸಾಲದಲ್ಲಿರುವ ಆತನ ತಾಯಿ, ಸಂಕಷ್ಟದಲ್ಲಿರುವ ತಾವುಗಳು – ಪರಿಸ್ಥಿತಿ ಹೀಗೆಲ್ಲ ಇರುವಾಗ ಕನಾಲ್ ಮತ್ತೆ ಕೈ ಹಾಕುವುದು ಅದೇ ಸೀಟು ಬ್ರೋಕರ್ ದಂಧೆಗೆ. ಆದರೆ ಈ ಬಾರಿ ಆತ ಗುರಿ ಇಡುವುದು ರವಿವರ್ಮ ಎಂಬ ತಿಮಿಂಗಿಲವನ್ನೇ ಮೀರಿಸಲು. ಕಳೆದುಕೊಳ್ಳಲು ಏನೂ ಇಲ್ಲದವ ಮಾಫಿಯಾ ಕಿಂಗ್ ಆಗುವ ಸಿನಿಮಾ ಎಂಬಲ್ಲಿಗೆ ನಮ್ಮ ಮನಸ್ಥಿತಿ ಹೊಂದಿಸಿಕೊಂಡಾಗ ಅದೂ ಸುಳ್ಳಾಗುತ್ತದೆ. ಹೀಗೆ ಪ್ರತಿ ಕಾಲು ಗಂಟೆಗೊಮ್ಮೆ ತಿರುವು ಪಡೆಯುವ ಕತೆ ತನ್ನ ಪ್ರಯಾಣದ ಮುಂದಿನ ಹಾದಿಯನ್ನು ಬಿಟ್ಟುಕೊಡದೆ ನೋಡುಗರನ್ನು ತುದಿಗಾಗಲ್ಲಿ ನಿಲ್ಲಿಸುತ್ತದೆ.
ಸೀಟುಗಳು ಹೇಗೆ ಬಿಕರಿಯಾಗುತ್ತವೆ, ಆ ದಂಧೆಯ ಮರ್ಮವೇನು ಎಂಬುದನ್ನು ಪರಿಚಯಿಸುವ ಧಾವಂತಕ್ಕೆ ಚಿತ್ರಕತೆ ಇಳಿಯುವುದಿಲ್ಲ. ಪಾತ್ರಗಳ ಚೌಕಟ್ಟಿನಲ್ಲಿ ಅವನ್ನೆಲ್ಲ ತರುವುದು ಉತ್ತಮ ಸಿನಿತಯಾರಕರಿಗೆ ಇರಬೇಕಾದ ಗುಣ, ‘ಸೆಲ್ಪಿ’ ತಂಡಕ್ಕೆ ಆ ಗುಣವಿದೆ. ಹಾಗಾಗಿ ಮಾಫಿಯಾದ ಕಡೆಗೆ ಸೆಳೆಯುವುದಕ್ಕಿಂತ ಹೆಚ್ಚು ಕನಾಲ್ ಏನಾಗುತ್ತಾನೆ ಎಂಬ ಕುತೂಹಲವೇ ನಮ್ಮನ್ನು ಸಿನಿಮಾದ ಬಹುಪಾಲು ಆವರಿಸುತ್ತದೆ.
ತನ್ನ ತಂದೆಯೂ ದೊಡ್ಡ ಹೃದಯದ ಮನುಷ್ಯನೇ ಎಂದು ಮಗ ಒಪ್ಪಿಕೊಳ್ಳುವಲ್ಲಿ, ನಿನಗೆ ಯಾವುದು ಒಳ್ಳೆಯದು ಎಂದು ಕಾಣುತ್ತದೋ ಅದನ್ನೇ ಮಾಡು ಮಗನೇ ಎಂದು ಅಪ್ಪ ಹೇಳುವ ಮಾತಿನಲ್ಲಿ ಅಪ್ಪ-ಮಕ್ಕಳ ಮಧ್ಯೆ ಉಂಟಾಗುವ ಅನಗತ್ಯ ಬಿರುಕುಗಳು ನಿಮಗೆ ನೆನಪಾಗಬಹುದು. ಇಬ್ಬರೂ ಆ ಮನಸ್ಥಿತಿಗೆ ಮೊದಲೇ ಬಂದಿದ್ದರೆ ಬಿರುಕಿಗೇ ಅವಕಾಶವಿಲ್ಲವಲ್ಲ ಎಂದು ತರ್ಕ ಹೇಳಿದರೂ ಭಾವನಾತ್ಮಕ ಬದುಕು ತರ್ಕಕ್ಕೆ ಮೊದಲ ಆದ್ಯತೆ ನೀಡುವುದಿಲ್ಲ.
ಅಂತೂ ಶಿಕ್ಷಣ ಮಾಫಿಯಾಕ್ಕೆ ಪರಿಹಾರವೇನು ಎಂದು ಕೇಳಿದರೆ ಅದು ಸಿನಿಮಾದಲ್ಲಿ ಪರಿಹಾರ ಕಂಡುಕೊಳ್ಳುವಷ್ಟು ಸಣ್ಣ ವಿಚಾರ ಅಲ್ಲ ಎನ್ನಬಹುದು. ‘ಸೆಲ್ಫಿ’ಯ ಕತೆಯ ಕೊನೆಗೆ ಇರುವುದು ಪರಿಹಾರ ಎಂಬುದಕ್ಕಿಂತ ಹೆಚ್ಚು ಆಶಯ. ಅಷ್ಟಕ್ಕೂ ಈ ಸಿನಿಮಾಕ್ಕೆ ಸೆಲ್ಫಿ ಎಂಬ ಹೆಸರಿನ ಪ್ರಸ್ತುತತೆಗೂ ಉತ್ತರ ಇರುವುದು ಕ್ಲೈಮ್ಯಾಕ್ಸಿನಲ್ಲೇ.
ಜಿ.ವಿ.ಪ್ರಕಾಶ್ 34ರ ಪ್ರಾಯದಲ್ಲೂ ಎಂಜಿನಿಯರಿಂಗ್ ವಿದ್ಯಾರ್ಥಿಯಂತೆ ಕಾಣುತ್ತಾರೆ ಎಂಬುದು ವಿಡಂಬನೆಯಲ್ಲ. ಸ್ವತಃ ಸಂಗೀತ ನಿರ್ದೇಶಕನೂ ಆದ ಪ್ರಕಾಶ್ ಈ ಸಿನಿಮಾಕ್ಕೆ ವಾದ್ಯವನ್ನೂ ಹಿಡಿದಿದ್ದಾರೆ, ಆದರೆ ನಟನೆಯಲ್ಲೇ ಹೆಚ್ಚು ಇಷ್ಟವಾಗುತ್ತಾರೆ ಎಂಬುದು ಸಂಗೀತ ನಿರ್ದೇಶನಕ್ಕೆ ಕೊಡಬಹುದಾದ ಮಾರ್ಕು. ತೇಲುಗಣ್ಣಿನ ಗೌತಮ್ ಮೆನನ್ ವಿಲನ್ ಪಾತ್ರಕ್ಕೆ ಕೊಡಬೇಕಾದ ನ್ಯಾಯ ಕೊಟ್ಟಿದ್ದಾರೆ. ಮೂಲತಃ ಕೊಡಗಿನ ಬೆಡಗಿ ವರ್ಷ ಬೊಳ್ಳಮ್ಮಗೆ ನಟನೆಗೆ ಸೀಮಿತ ಅವಕಾಶವಾದರೂ ಕತೆಯಲ್ಲಿ ಆಕೆ ಪ್ರಮುಖ ಕೊಂಡಿ. ಉಳಿದೆಲ್ಲ ಪೋಷಕ ಪಾತ್ರಗಳೂ ನ್ಯಾಯ ಒದಗಿಸಿದ ಕಾರಣ ಕಮರ್ಷಿಯಲ್ ಅಂಶಗಳಲ್ಲೂ ಸಿನಿಮಾ ಬಾಲಿಶವಾಗುವುದಿಲ್ಲ. ‘ಆಹಾ’ದಲ್ಲಿ ಸ್ಟ್ರೀಂ ಆಗುತ್ತಿರುವ ಈ ಸಿನಿಮಾ ಶಿಕ್ಷಣ ಮಾಫಿಯಾದ ವೈಡ್ ಆ್ಯಂಗಲ್ ಸೆಲ್ಫಿ.