ಡಿ.ಸತ್ಯಪ್ರಕಾಶ್ ನಿರ್ದೇಶನದ ‘Man Of The Match’ ಸಿನಿಮಾ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆಯಾಗಿದೆ. ನಟರಾಜ್, ಧರ್ಮಣ್ಣ ಕಡೂರು ಪ್ರಮುಖ ಪಾತ್ರಗಳಲ್ಲಿದ್ದು, ಹತ್ತಾರು ಯುವ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
“ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‍ಗಾಗಿ ನೋಡಿದ ಒಂದು ಅದ್ಭುತವಾದ ವಿಡಂಬನಾತ್ಮಕ ಭಾರತೀಯ ಸಿನಿಮಾ ‘ಮ್ಯಾನ್ ಆಫ್ ದಿ ಮ್ಯಾಚ್’. ಈ ಚಿತ್ರಕ್ಕೆ ನಾನು 10 ಅಂಕಗಳಿಗೆ ಪೂರ್ಣ 10 ಅಂಕ ನೀಡುತ್ತಿದ್ದೇನೆ” ಎಂದು ಸಿನಿಮಾ ವಿಮರ್ಶಕ ಲಾರೆನ್ಸ್ ವೈಟ್ನರ್ ಅವರು ಚಿತ್ರತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಡಿ.ಸತ್ಯಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆಯಾಗಿದೆ. ಇದು ಆರನೇ ವರ್ಷದ ಫೆಸ್ಟಿವಲ್ ಆಗಿದ್ದು, 2022ರ ಆಗಸ್ಟ್ 5 ರಿಂದ 14ರವರೆಗೆ ನಡೆಯಲಿದೆ. ಕೊರೋನಾ ನಂತರ ಮೊದಲ ಬಾರಿಗೆ ಫಿಸಿಕಲ್ ಆಗಿ ನಡೆಯಲಿರುವ ಫೆಸ್ಟಿವಲ್ ಇದು. ರೀಗಲ್ ಯೂಎ ಮಿಡ್‌ವೇ ಥಿಯೇಟರ್‌ನಲ್ಲಿ ಸಿನಿಮಾಗಳು ಸ್ಕ್ರೀನ್ ಆಗಲಿವೆ.
‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳ ಯಶಸ್ಸಿನ ನಂತರ ಸತ್ಯ ಪ್ರಕಾಶ್ ನಿರ್ದೇಶಿಸಿರುವ ಮೂರನೇ ಚಿತ್ರ ‘ಮ್ಯಾನ್ ಆಫ್ ದಿ ಮ್ಯಾಚ್’. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಆಡಿಷನ್‌ಗೆ ಕರೆದ ನಿರ್ದೇಶಕ, ಆಡಿಷನ್‌ಗೆ ಹಾಜರಾಗುವ ಕಲಾವಿದರ ನಡುವೆ ಘರ್ಷಣೆಯನ್ನು ಸೃಷ್ಟಿಸುವ ಮೂಲಕ ಚಲನಚಿತ್ರ ಮಾಡುತ್ತಾರೆ. ದೊಡ್ಡ ಪಾತ್ರವರ್ಗ ಹೊಂದಿರುವ ಮತ್ತು ಪ್ರಸ್ತುತ ಸಾಮಾಜಿಕ ಸಂಘರ್ಷಗಳನ್ನು ಹಾಸ್ಯಮಯ ಮತ್ತು ವಿಡಂಬನಾತ್ಮಕ ರೀತಿಯಲ್ಲಿ ಹೇಳುವ ಚಿತ್ರವಾಗಿ ಇದು ಗುರುತಾಗಿದೆ.
ನಟರಾಜ್ ಎಸ್. ಭಟ್ ಮತ್ತು ಧರ್ಮಣ್ಣ ಕಡೂರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ರಾಮಾ ರಾಮಾ ರೇ’ ನಂತರ ಸತ್ಯ ಪ್ರಕಾಶ್ ಅವರೊಂದಿಗೆ ಇಬ್ಬರೂ ಜೊತೆಯಾಗಿರುವ ಚಿತ್ರವಿದು. ಅಥರ್ವ ಪ್ರಕಾಶ್, ಬೃಂದಾ ಮತ್ತು ಮಯೂರಿ ನಟರಾಜ್ ಅವರಂತಹ ಹೊಸಬರೊಂದಿಗೆ ವೀಣಾ ಮತ್ತು ಸುಂದರ್ ಚಿತ್ರದಲ್ಲಿ ತಮ್ಮ ನಿಜ ಜೀವನದ ಪಾತ್ರಗಳನ್ನೇ ನಿರ್ವಹಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸುವುದರ ಜೊತೆಗೆ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಮೇ 5ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಸಿನಿಮಾ ವಿಶಿಷ್ಟ ಕಂಟೆಂಟ್ ಮತ್ತು ಚಿತ್ರಕಥೆ ಹೆಣೆಗೆಯಿಂದ ಗಮನ ಸೆಳೆಯುತ್ತಿದೆ.