ಇಲ್ಲಿ ನಿರ್ದೇಶಕ, ಕ್ಯಾಮೆರಾಮನ್ ಜೊತೆ ಅತಿ ಪ್ರೀತಿಯಿಂದ ಕೂತು ಕೆಲಸ ಮಾಡಿಸಿರುವುದು ಕಾಣಿಸುತ್ತದೆ – ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಕುರಿತು ಚಿತ್ರಕಲಾವಿದ, ಕಲಾನಿರ್ದೇಶಕ ಬಾದಲ್ ನಂಜುಂಡಸ್ವಾಮಿ ಬರಹ.

ನಿರ್ದೇಶನ ಸುಲಭ. ಆದರೆ ಕ್ರಾಫ್ಟ್‌’ಮ್ಯಾನ್‌’ಶಿಪ್ ಇಲ್ಲದ ನಿರ್ದೇಶನ ಉಪಯೋಗಕ್ಕೆ ಬಾರದು. ಒಬ್ಬ ನಿಜವಾಗಿಯೂ ಪ್ರತಿಭೆಯುಳ್ಳ ನಿರ್ದೇಶಕನಾದರೆ, ತನಗೆ ಹೆಂಗ್ ಬೇಕೋ ಹಂಗೆ ಚಿತ್ರ ಮಾಡುತ್ತಾನೆ. ಜನ ಅವರ ಪಾಡಿಗೆ ಅವರು ಚಿತ್ರ ನೋಡಿ ಬೆಂಬಲಿಸುತ್ತಾರೆ. ವಿಶೇಷವಾಗಿ ಬಾಯಿಂದ ಬಾಯಿಗೆ ಆಗೋ ಪ್ರಚಾರ! ಆದರೆ ಪ್ರತಿಭೆಯಿಲ್ಲದ ನಿರ್ದೇಶಕ “ಜನಕ್ಕೆ ಇದು ಕೊಟ್ಟರೆ ಇದು ಇಷ್ಟಪಡುತ್ತಾರೆ” ಎಂದು ಅವನೇ ನಿರ್ಧರಿಸಿ ಜನರ ಅಭಿರುಚಿಗಾಗಿ ಚಿತ್ರ ಮಾಡುತ್ತಾನೆ. ಕೊನೆಗೆ ನಮ್ಮ ಚಿತ್ರ ನೋಡಿ… ನೋಡಿ… ಎಂದು ಅಂಗಲಾಚುವುದರೊಂದಿಗೆ ಎಲ್ಲವೂ ಮುಗಿದುಬಿಡುತ್ತದೆ.

ಇಲ್ಲಿ ನಿರ್ದೇಶಕ, ಕ್ಯಾಮೆರಾಮನ್ ಜೊತೆ ಅತಿ ಪ್ರೀತಿಯಿಂದ ಕೂತು ಕೆಲಸ ಮಾಡಿಸಿರುವುದು ಕಾಣಿಸುತ್ತದೆ. ಕ್ಯಾಮೆರಾಮನ್ ತನ್ನ ಕ್ಯಾಮೆರಾ ಆನ್ ಮಾಡಿ ತನ್ನ ಪಾಡಿಗೆ ತಾನು ಕೂತಿದ್ದಾನೆ. ಕ್ಯಾಮೆರಾ ಮುಂದಿನ ಜನ ತಮ್ಮ ಪಾಡಿಗೆ ತಾವು ನಟನೆ ಮಾಡಿಕೊಂಡು ದೃಶ್ಯವನ್ನು ಜೀವಂತವಾಗಿಸುತ್ತಾರೆ. ಅನಾವಶ್ಯಕವಾದ ಜ್ಯೂಯ್ಯ್ ಜ್ಯೂಯ್ಯ್  ಅನ್ನುವ ಕಟ್ಸ್ ಇಲ್ಲ. ಆದ್ದರಿಂದ “ಎಲ್ಲ ಪಾತ್ರಗಳೂ ನಟಿಸುವುದು ಕಾಣಿಸುತ್ತದೆ”. ಉದಾಹರಣೆಗೆ, ಪೊಲೀಸ್ ಜೀಪಿನ ಚಾಲಕ…ಆತನದ್ದು  ಬರೀ ಜೀಪ್ ಓಡಿಸುವುದೇ ಪಾತ್ರ. ಒಮ್ಮೆ ಪೊಲೀಸ್ ಜೀಪ್ ಮುಂದೆ ಏನೋ ಘಟನೆ ನಡೆಯುತ್ತಿದ್ದರೂ ನಿರ್ದೇಶಕ ಆ ಘಟನೆಯನ್ನು ತೋರಿಸದೆ ಚಾಲಕನ ಮೇಲೇ ಕ್ಯಾಮೆರಾ ಇಡುತ್ತಾನೆ. ಇಲ್ಲಿ ಚಾಲಕನ ಆಕ್ಟಿಂಗ್ ಸ್ಕಿಲ್  ಕಾಣಿಸುತ್ತದೆ. ಮತ್ತು ಚಾಲಕ, ಬರೀ ತನ್ನ ಮುಖದ ಹಾವಭಾವದಿಂದ ಘಟನೆಯನ್ನು ವೀಕ್ಷಕರಿಗೆ ಕಾಣಿಸುತ್ತಾನೆ! ನಿರ್ದೇಶಕ ಇಲ್ಲಿ ನಟನೆಗೆ ಜಾಗ ಮಾಡಿಕೊಡುತ್ತಾರೆ. ಇದು ಪ್ರತಿಭಾವಂತ ನಿರ್ದೇಶಕನ ಕ್ರಾಫ್ಟ್ ಮ್ಯಾನ್ ಶಿಪ್ಪಿಗೆ ಒಂದು ಸಣ್ಣ ಉದಾಹರಣೆ. 

ಇಡೀ ಚಿತ್ರದ ಪ್ರತೀ ದೃಶ್ಯವೂ ಒಂದು ರೀತಿಯ ಬಿಲ್ಡ್ ಅಪ್ ಇಂದಲೇ ಕೂಡಿದೆ ಆದರೂ ಎಷ್ಟೊಂದು ಸಹನೀಯವಾಗಿಸಿದೆ! ಇದು ಕ್ಯಾಮೆರಾ ಮ್ಯಾನ್‌ನ ದೈತ್ಯ ಪ್ರತಿಭೆಗೆ ಸಾಕ್ಷಿ. ಇದರಿಂದಾಗಿ ಕ್ಯಾಮೆರಾಮನ್ ಈ ಚಿತ್ರವನ್ನು ನಿರ್ದೇಶಕರಂತೆ ತಮ್ಮದೂ ಆಗಿಸಿಕೊಳ್ಳುತ್ತಾರೆ. ಚಿತ್ರೀಕರಣದ ವೇಳೆಯಲ್ಲಿ ಒಬ್ಬ ನಿರ್ದೇಶಕನಿಗೆ ಕ್ಯಾಮೆರಾಮನ್ ಹಾಗೂ ಕಲಾ ನಿರ್ದೇಶಕ ಇಬ್ಬರೂ ನಿರ್ದೇಶಕನ ಎರಡು ಕಣ್ಣಿದ್ದಂತೆ. ಆದರೆ ನಮ್ಮ ಬಹುತೇಕ ಚಿತ್ರಗಳಿಗೆ ಕಲಾನಿರ್ದೇಶಕರೇ ಇರುವುದಿಲ್ಲ. ಇದು ಚಿತ್ರದ ಗುಣಮಟ್ಟವನ್ನು ಮೊದಲೇ ನಿರ್ಧರಿಸಿಬಿಡುತ್ತದೆ.  ರಾಜ್ ಶೆಟ್ಟಿ ಕಲೆ, ಸಾಹಿತ್ಯ ಹಾಗು ಮ್ಯೂಸಿಕ್ ಸೆನ್ಸ್ ಅರಿತಿರುವ ಪ್ರತಿಭಾವಂತ ನಿರ್ದೇಶಕ.

LEAVE A REPLY

Connect with

Please enter your comment!
Please enter your name here