ಡಾರ್ಲಿಂಗ್‌ ಕೃಷ್ಣ ಮತ್ತು ಬೃಂದಾ ಆಚಾರ್ಯ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಶಶಾಂಕ್‌ ಚಿತ್ರವಿದು. ನಟ ಸುದೀಪ್‌ ಟ್ರೈಲರ್‌ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಹಾರೈಸಿದ್ದಾರೆ.

‘ಟ್ರೈಲರ್‌ನಲ್ಲಿ ಬಹಳ ಒಳ್ಳೆಯ ಕತೆಯನ್ನು ಕಂಡೆ. ಇಲ್ಲಿ ನಂಬಿಕೆ ಮತ್ತು ಸಂಬಂಧಗಳ ಸಂಘರ್ಷ ಇದೆ. ಶಶಾಂಕ್ ಅವರು ಎಮೋಷನ್ಸ್‌ ಹಿಡಿದಿಡುವ ರೀತಿ ನನಗಿಷ್ಟ. ಅವರ ಕೆಲವು ಸಿನಿಮಾಗಳು ದೊಡ್ಡ ಯಶಸ್ಸು ಕಂಡಿವೆ. ಮತ್ತೆ ಕೆಲವು ಚಿತ್ರಗಳಿಗೆ ಸಾಧಾರಣ ಯಶಸ್ಸು ಸಿಕ್ಕಿದೆ. ಆದರೆ ಶಶಾಂಕ್‌ ಎಂದೂ ಕೆಟ್ಟ ಸಿನಿಮಾ ಮಾಡಿಲ್ಲ’ ಎಂದು ನಟ ಸುದೀಪ್‌ ಅವರು ತಾವು ಗ್ರಹಿಸಿದ ಶಶಾಂಕ್‌ ಸಿನಿಮಾ ಬಗ್ಗೆ ಹೇಳಿದರು. ಡಾರ್ಲಿಂಗ್‌ ಕೃಷ್ಣ ಮತ್ತು ಬೃಂದಾ ಆಚಾರ್ಯ ಜೋಡಿಯ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೈಲರ್‌ ಸುದೀಪ್‌ರಿಂದ ಬಿಡುಗಡೆಯಾಯ್ತು. ಎಂದಿನಂತೆ ಶಶಾಂಕ್‌ ಇಲ್ಲಿ ಫ್ಯಾಮಿಲಿ – ಲವ್‌ಸ್ಟೋರಿ ಮಾಡಿರುವ ಸೂಚನೆ ಟ್ರೈಲರ್‌ನಲ್ಲಿ ಸಿಗುತ್ತದೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಮಿಲನ ನಾಗರಾಜ್‌ ಅಭಿನಯಿಸಿದ್ದಾರೆ. ಪೋಷಕ ಪಾತ್ರಧಾರಿಗಳಾದ ಸುಧಾ ಬೆಳವಾಡಿ ಮತ್ತು ರಂಗಾಯಣ ರಘು ಅವರಿಗೆ ಅಭಿನಯಕ್ಕೆ ಸಾಕಷ್ಟು ಸ್ಕೋಪ್‌ ಇರುವುದನ್ನು ಟ್ರೈಲರ್‌ ಹೇಳುತ್ತದೆ.

ತಮ್ಮ ಸಿನಿಮಾ ಕುರಿತು ಮಾತನಾಡುವ ಶಶಾಂಕ್‌, ‘ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಬೆಸ್ಟ್ ಸಿನಿಮಾ ಇದು. ಕಾರಣ ಚಿತ್ರದ ಕತೆ. ಈ ಕತೆಗೆ ಹಲವು ಆಯಾಮಗಳಿವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ರಿಲೇಟ್ ಆಗುವ ಕತೆ. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್ ಮಾಡಿಕೊಳ್ಳಬಹುದು. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ. ಬೃಂದಾ ಮತ್ತು ಮಿಲನ ನಾಗರಾಜ್‌ ಅವರ ಪಾತ್ರಗಳೂ ವಿಶಿಷ್ಟವಾಗಿವೆ’ ಎನ್ನುತ್ತಾರೆ.

ಆರಂಭದಲ್ಲಿ ನಿರ್ದೇಶಕ ಶಶಾಂಕ್‌ ಅವರೇ ಸಿನಿಮಾ ನಿರ್ಮಿಸಲು ಆಲೋಚಿಸಿದ್ದರು. ಚಿತ್ರದ ಕತೆ ಹೆಚ್ಚು ಬಜೆಟ್‌ ಬೇಡುತ್ತದೆ ಎನಿಸಿದಾಗ ಅವರು ಬಿ ಸಿ ಪಾಟೀಲ್‌ ಅವರ ಸಹಕಾರ ಕೋರಿದ್ದಾರೆ. ಕೊನೆಗೆ ಬಿ ಸಿ ಪಾಟೀಲ್‌ ಅವರ ಕೌರವ ಪ್ರೊಡಕ್ಷನ್ಸ್‌ ಮತ್ತು ಶಶಾಂಕ್‌ ಸಿನಿಮಾ ಜೊತೆಗೂಡಿ ಚಿತ್ರ ನಿರ್ಮಿಸಿದ್ದಾರೆ. ಕೌರವ ಪ್ರೊಡಕ್ಷನ್ಸ್‌ನ ಹದಿನೇಳನೇ ಚಿತ್ರವಿದು. ಹೀರೋ ಕೃಷ್ಣ ಅವರಿಗೂ ಇದು ವಿಶೇಷ ಕತೆ ಎನಿಸಿದೆ. ‘ನಾನು ಇಷ್ಟು ವರ್ಷಗಳಲ್ಲಿ ಕೇಳಿರುವ ದಿ ಬೆಸ್ಟ್ ಕತೆ ಇದು. ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳಿದ್ದಾರೆ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ನಿರ್ದೇಶಕ ಶಶಾಂಕ್‌ ಕೇಳಿದ್ದರು. ನೀವು ನಿಮ್ಮ ಸ್ಟೈಲ್‌ನಲ್ಲೇ ಸಿನಿಮಾ ಮಾಡಿ ಎಂದು ಹೇಳಿದೆ. ಒಂದು ತಿಂಗಳ ನಂತರ ಈ ಕತೆ ತಂದರು. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ’ ಎನ್ನುತ್ತಾರೆ ಕೃಷ್ಣ. ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಜುಲೈ 28ರಂದು ಸಿನಿಮಾ ಥಿಯೇಟರ್‌ಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here