ಒಂದು ರೀತಿಯಲ್ಲಿ ಇದು ಪಾಪಪ್ರಜ್ಞೆಯ ಕತೆ. ನಂಬಿಕೆ ದ್ರೋಹಕ್ಕೆ ಒಳಗಾಗಿ ಮತ್ತೆಂದು, ಮತ್ಯಾರನ್ನೂ ನಂಬಲಾರದವನ ಕತೆ, ತನ್ನ ಕ್ರಿಯೆಯಿಂದ, ನಡವಳಿಕೆಯಿಂದ ಆದ ಪರಿಣಾಮವನ್ನು ಕಡೆಗೂ ಅರ್ಥಮಾಡಿಕೊಳ್ಳದವಳ ಕತೆ. – ‘The Reader’ ಇಂಗ್ಲಿಷ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಅಗುತ್ತಿದೆ.

ನಮ್ಮ ಹೊಣೆ ಹೊರಬೇಕಾಗಿರುವುದು ನಾವು ಆಡಿದ ಮಾತುಗಳಿಗೆ ಮಾತ್ರವೆ? ನಾವು ಖಂಡಿಸದೆ, ಮೌನವಾಗಿ ಉಳಿದ ಮಾತುಗಳ ಹೊಣೆ ನಮ್ಮ ಮೇಲೆ ಇರುವುದಿಲ್ಲವೆ? ಕಾಲದ ಯಾವುದೇ ಘಟ್ಟದಲ್ಲಿ ನಾವು ಇಲ್ಲಿ, ಈ ಬದಿಗೆ ನಿಲ್ಲುತ್ತೇವೆ ಎಂದು ಹೇಳದೆ ಉಳಿದಾಗ, ನಮ್ಮ ಮೌನ ಇನ್ಯಾವುದೋ ಶಕ್ತಿಗೆ ಬಲ ತುಂಬಿದಾಗ ಆ ಶಕ್ತಿಯಿಂದ ಆದ ಪಾಪದ ಹೊಣೆಯ ಒಂದು ಪಾಲು ನಮ್ಮದೂ ಆಗುವುದಿಲ್ಲವೆ? ಈ ಪಾಪಪ್ರಜ್ಞೆ ಸಾರ್ವಜನಿಕ ಮತ್ತು ವೈಯಕ್ತಿಕ ನೆಲೆಗಳಲ್ಲಿ ಹೇಗೆ ಕೆಲಸ ಮಾಡುತ್ತದೆ? ತುಂಬಾ ಹಿಂದೆ ನೋಡಿದ ಒಂದು ಫೋಟೋ ನೆನಪಾಗುತ್ತಿದೆ. ಅರೆಬರೆ ವಸ್ತ್ರ ಧರಿಸಿದ ಒಬ್ಬ ಯಹೂದಿ ಹೆಣ್ಣುಮಗಳನ್ನು, ಚಿಕ್ಕವಯಸ್ಸಿನ ಹುಡುಗನೊಬ್ಬ ಅಟ್ಟಾಡಿಸುತ್ತಿದ್ದಾನೆ. ಕ್ರೌರ್ಯ ಇರುವುದು ಅವನಲ್ಲಿಯೆ ಅಥವಾ ಯಹೂದಿಗಳನ್ನು ಹಾಗೆ ಅಟ್ಟಾಡಿಸುವುದು ತಪ್ಪು ಎಂದು ಹೇಳದೆ ಕಣ್ಣು ಕೆಳಗೆ ಹಾಕಿ ನಿಂತ ಎಲ್ಲಾ ಜರ್ಮನ್ನರಲ್ಲೋ? ಇವರನ್ನೇ ಪಿ.ಸಾಯಿನಾಥ್ ‘ನೀರೋನ ಅತಿಥಿಗಳು’ ಎಂದು ಕರೆಯುತ್ತಾರೆ.

ರಾತ್ರಿಗಳಲ್ಲಿ ನಡೆಯುವ ತನ್ನ ಔತಣಕೂಟಕ್ಕೆ ನೀರೋ ಆ ಕಾಲದ ಕವಿ, ಕಲಾವಿದರು, ಪುರಪ್ರಮುಖರನ್ನು ಆಹ್ವಾನಿಸುತ್ತಿದ್ದನಂತೆ. ಕತ್ತಲಲ್ಲಿ ಬೆಳಕಿನ ವ್ಯವಸ್ಥೆಗಾಗಿ ಅವನೊಂದು ಉಪಾಯ ಹುಡುಕುತ್ತಾನೆ. ಕಾರಾಗೃಹಗಳಲ್ಲಿದ್ದ ಕೈದಿಗಳನ್ನು ಕರೆಸಿ, ಅವರ ಮೈಮೇಲೆಲ್ಲಾ ಎಣ್ಣೆ ಸುರಿದು ಬೆಂಕಿ ಹಚ್ಚಲಾಗುತ್ತದೆ. ಝಗ್ ಎನ್ನುವ ಆ ಬೆಳಕಿನಲ್ಲಿ ಸಂಭ್ರಮದ ಔತಣ ನಡೆಯುತ್ತದೆ. ಸಾಯಿನಾಥ್ ಕೇಳುತ್ತಾರೆ, ನೀರೋ ಅಂತೂ ಹುಚ್ಚನೆ, ಆ ಬಗ್ಗೆ ಎರಡು ಮಾತಿಲ್ಲ. ಆದರೆ ಅವನ ಅತಿಥಿಗಳಾಗಿ ಬರುತ್ತಿದ್ದರಲ್ಲ, ಆ ಕಾಲದ ಅತ್ಯಂತ ಸಂವೇದನಾಶೀಲರು, ಅವರ ಬಗ್ಗೆ ಏನು ಹೇಳೋಣ, ಅಲ್ಲಿ ಒಂದು ಜೀವ ಬೆಂಕಿಯಲ್ಲಿ ಉರಿಯುತ್ತಿದ್ದಾಗ, ಇಲ್ಲಿ ಇನ್ನೊಂದು ಹಣ್ಣು ತೆಗೆದು ಬಾಯಿಗೆ ಹಾಕಿಕೊಳ್ಳಲು ಅವರಿಗೆ ಆದದ್ದಾದರೂ ಹೇಗೆ ಎಂದು ಅವರು ಪ್ರಶ್ನಿಸುತ್ತಾರೆ. ‘ಮಂದೆಯಲಿ ಒಂದಾಗಿ’ ಹೋಗುವ ಈ ಗುಣ ನಂತರ ಕೇವಲ ಇನ್ಯಾವುದೋ ಪಾಪದ ನೆರಳೋ ಅಥವಾ ವೈಯಕ್ತಿಕ ಪಾಪಪ್ರಜ್ಞೆಯೋ? ಈ ಎಲ್ಲಾ ಪ್ರಶ್ನೆಗಳು ಮೂಡಿದ್ದು ಸ್ಟೀಫನ್ ಡಾಲ್ಡ್ರೈ ನಿರ್ದೇಶಿಸಿರುವ, 2008ರಲ್ಲಿ ಬಿಡುಗಡೆಯಾದ, ‘The Reader’ ಚಿತ್ರ ನೋಡುವಾಗ. ಚಿತ್ರದ ಕಥೆ ನಡೆಯುವುದು ಜರ್ಮನಿಯಲ್ಲಿ, ಆದರೆ ಚಿತ್ರ ಇರುವುದು ಇಂಗ್ಲಿಷಿನಲ್ಲಿ.

ಮೊದಲ ನೋಟಕ್ಕೆ ಈ ಚಿತ್ರ ವಯಸ್ಕ ಹೆಣ್ಣುಮಗಳೊಬ್ಬಳು ತನ್ನ ಸರಿಸುಮಾರು ಅರ್ಧವಯಸ್ಸಿನ ಬಾಲಕನೊಡನೆ ನಡೆಸಿದ ಸಲ್ಲಾಪದ ಕಥೆಯಂತೆ ಕಾಣುತ್ತದೆ. ಚಿತ್ರದ ಮೊದಲ ಅರ್ಧ ಗಂಟೆಯ ದೃಶ್ಯಗಳು ಸಹ ಇದನ್ನೇ ಪುಷ್ಟೀಕರಿಸುತ್ತದೆ. ಆದರೆ ನೋಡುತ್ತಾ, ನೋಡುತ್ತಾ ಚಿತ್ರ ಅದಕ್ಕಿಂತ ಆಳವಾದದ್ದೇನನ್ನೋ ಹೇಳುತ್ತದೆ. ಚಿತ್ರದ ಕಥಾಸಾರಾಂಶ ಇದು : 15 – 16 ವಯಸ್ಸಿನ ಹುಡುಗ ಮೈಕೆಲ್ ಹುಷಾರು ತಪ್ಪಿ, ಯಾವುದೋ ಕಟ್ಟಡದ ನೆರಳಲ್ಲಿ ವಾಂತಿ ಮಾಡಿಕೊಳ್ಳುತ್ತಿರುತ್ತಾನೆ. ಆಗ ಅಲ್ಲೇ ವಾಸ ಮಾಡುವ ಹನ್ನಾ ಎನ್ನುವ ಟ್ರಾಂ ನಿರ್ವಾಹಕಿಯೊಬ್ಬಳು ಬಂದು, ಅವನ ಮುಖ ತೊಳೆಸಿ, ಅವನನ್ನು ಮನೆ ತಲುಪಿಸುತ್ತಾಳೆ. ಸುಧಾರಿಸಿಕೊಂಡ ನಂತರ ಆ ಹುಡುಗ ಅವಳಿಗೆ ಥ್ಯಾಂಕ್ಸ್ ಹೇಳಲು ಬರುತ್ತಾನೆ. ಈ ಪರಿಚಯ, ಸಲಿಗೆಯಾಗಿ, ಇಬ್ಬರ ನಡುವೆ ದೈಹಿಕ ಸಂಬಂಧ ಶುರುವಾಗುತ್ತದೆ. ಅದು ದೈಹಿಕ ಅನುಸಂಧಾನ ಮಾತ್ರ ಎನ್ನುವುದನ್ನು ಸೂಚಿಸಲು ಅನೇಕ ನಗ್ನ ದೃಶ್ಯಗಳನ್ನು ನಿರ್ದೇಶಕರು ಅಲ್ಲಿ ಸೇರಿಸಿದ್ದಾರೆ.

ಆ ದೈಹಿಕ ಅನುಸಂಧಾನಕ್ಕೆ ಒಂದು ವಿಶೇಷ ಅಥವಾ ವಿಚಿತ್ರ ಆಯಾಮ ಸಹ ಇದೆ. ಮೊದಲು ಆ ಹುಡುಗ ಯಾವುದಾದರೂ ಕ್ಲಾಸಿಕ್ ಪುಸ್ತಕದ ಹಲವಾರು ಪುಟಗಳನ್ನು ಓದಬೇಕು. ಅವಳು ಅದನ್ನು ಆಸಕ್ತಿಯಿಂದ ಕೇಳುತ್ತಾಳೆ, ಅದರೊಡನೆ ನಗುತ್ತಾಳೆ, ಅಳುತ್ತಾಳೆ. ನಂತರ ಪ್ರಣಯ. ನಿನಗೆ ಪುಸ್ತಕ ತಂದುಕೊಡುತ್ತೇನೆ ನೀನು ಓದು ಎಂದು ಮೈಕೆಲ್ ಹೇಳಿದರೆ ಅದನ್ನು ಬಿಲ್ಕುಲ್ ನಿರಾಕರಿಸುತ್ತಾಳೆ. ಅವನು ಓದಬೇಕು, ಅವಳು ಕೇಳಬೇಕು. ವಯಸ್ಸಿನಲ್ಲಿ ಹಿರಿಯಳಾದ ಅವಳು ಆ ಸಂಬಂಧವನ್ನು ತನಗೆ ಬೇಕಾದಂತೆ ನಿಯಂತ್ರಿಸುತ್ತಿರುತ್ತಾಳೆ. ಅದರ ಬಗ್ಗೆ ಹುಡುಗ ಒಮ್ಮೊಮ್ಮೆ ಸಿಡಿಯುತ್ತಾನೆ. ಆದರೆ ಪ್ರತಿಸಲ ಅವನೇ ಸಾರಿ ಹೇಳಬೇಕು. ಅದನ್ನು ಅವನು ಹೇಳುತ್ತಾನೆ ಕೂಡ. ಅವಳ ಕೆಲಸ ಚೆನ್ನಾಗಿದೆ ಎಂದು ಹೇಳಿ ಅವಳಿಗೆ ಭಡ್ತಿ ನೀಡಿ, ಆಫೀಸಿನ ಕೆಲಸ ಕೊಡಲಾಗುತ್ತದೆ. ಅಂದು ಅವಳನ್ನು ಹುಡುಕಿಕೊಂಡು ಬಂದ ಹುಡುಗನಿಗೆ – ಆಕೆ ಅವನನ್ನು ’ಕಿಡ್’ ಎಂದು ಕರೆಯುತ್ತಿರುತ್ತಾಳೆ – ಎದುರಾಗುವುದು ಖಾಲಿ ಮನೆ. ಹುಡುಗ ಚೂರಾಗುತ್ತಾನೆ. ಆಗ ಅವನಿಗಾದ ಆಘಾತ ಮತ್ತು ಮೋಸ ಹೋದ ಭಾವನೆ ಅವನು ತನ್ನ ಸುತ್ತಲೂ ಒಂದು ಅಗೋಚರ ಕೋಟೆ ಕಟ್ಟಿಕೊಳ್ಳುವಂತೆ ಮಾಡುತ್ತದೆ. ಮುಂದೆ ಅವನ ಹೆಂಡತಿಯನ್ನೂ ಸೇರಿ ಇನ್ಯಾವ ಹೆಣ್ಣಿಗೂ ಆ ಕೋಟೆ ದಾಟಲಾಗುವುದಿಲ್ಲ.

ಹುಡುಗ ನಂತರ ಲಾ ಸ್ಕೂಲ್ ಸೇರುತ್ತಾನೆ. ತನ್ನ ಕಲಿಕೆಯ ಭಾಗವಾಗಿ ಅವನು ಒಂದು ಕಾನೂನು ವಿಚಾರಣೆಗೆ ತನ್ನ ಸಹಪಾಠಿಗಳೊಡನೆ ಹಾಜರಾಗುತ್ತಾನೆ. ಅದು ಎರಡನೆಯ ಮಹಾಯುದ್ಧದಲ್ಲಿ ಹಿಟ್ಲರನ ಸೇನೆಯ ಮಾರಣ ಹೋಮದಲ್ಲಿ ಭಾಗವಹಿಸಿದ್ದ ಗಾರ್ಡ್‌ಗಳ ವಿಚಾರಣೆ. ಒಂದು ದನಿ ಕೇಳಿ ಮೈಕೆಲ್ ತಟ್ಟನೆ ತಲೆ ಎತ್ತುತ್ತಾನೆ. ಅದು ಹನ್ನಾ. ಅವಳು ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್ ಒಂದರಲ್ಲಿ ಗಾರ್ಡ್ ಆಗಿ ಕೆಲಸ ಮಾಡಿರುತ್ತಾಳೆ. ಯಹೂದಿಗಳ ಡೆತ್ ಮಾರ್ಚ್‌ನಲ್ಲಿ ಭಾಗಿಯಾಗಿರುತ್ತಾಳೆ. ಮುನ್ನೂರು ಜನ ಚರ್ಚ್ ಒಂದರಲ್ಲಿ ಜೀವಂತವಾಗಿ ಬೆಂಕಿಗೆ ಬೂದಿಯಾಗುವಂತೆ ಮಾಡಿರುತ್ತಾಳೆ. ವಿಚಾರಣೆ ನಡೆಯುವಾಗ ಎಲ್ಲಾ ಗಾರ್ಡ್‌ಗಳೂ ಹನ್ನಾಳ ಮೇಲೆ ಅಪರಾಧದ ಹೊಣೆ ಹೊರೆಸುತ್ತಾರೆ. ತಪ್ಪೊಪ್ಪಿಗೆಯ ಬರವಣಿಗೆ ಅವಳದೇ ಎಂದು ಹೇಳುತ್ತಾರೆ. ಹನ್ನಾಳಲ್ಲಿ ತಾನು ಕೈಗೊಂಡ ಕೃತ್ಯಗಳ ಬಗ್ಗೆ ಇನಿತಾದರೂ ಪಶ್ಚಾತ್ತಾಪ ಇಲ್ಲ. ತನ್ನ ಕರ್ತವ್ಯ ತಾನು ಮಾಡಿದ್ದೇನೆ ಎಂದು ಹೇಳುತ್ತಾಳೆ. ಹನ್ನಾಳ ಪಾತ್ರ ಮಾಡಿರುವುದು ಟೈಟಾನಿಕ್‌ನ ಕೇಟ್. ತನ್ನ ಪಾತ್ರಕ್ಕೆ ಯಾವುದೇ ಸಮಜಾಯಿಶಿ ಕೊಡದೆ, ಅದಕ್ಕೊಂದು ಕಾರಣ ಕೊಡದೆ ಆಕೆ ಪಾತ್ರ ನಿರ್ವಹಿಸಿದ್ದಾಳೆ. ಆ ತಪ್ಪೊಪ್ಪಿಗೆ ಪತ್ರ ನಾನು ಬರೆದಿಲ್ಲ ಎನ್ನುತ್ತಾಳೆ, ಹಾಗಾದರೆ ನಿನ್ನ ಬರವಣಿಗೆಯೊಂದಿಗೆ ಅದನ್ನು ಹೋಲಿಸಿ ಪರೀಕ್ಷೆ ಮಾಡೋಣ, ಏನಾದರೂ ಬರಿ ಎಂದಾಗ, ಬರೆಯದೆ, ಹೌದು ತಾನೇ ಅದನ್ನು ಬರೆದದ್ದು ಎಂದು ಒಪ್ಪಿಕೊಂಡು ಬಿಡುತ್ತಾಳೆ. ಆಗ ಇದ್ದಕ್ಕಿದ್ದಂತೆ ಮೈಕೆಲ್‌ಗೆ ಒಂದು ಸತ್ಯದ ಅನಾವರಣವಾಗುತ್ತದೆ. ಹನ್ನಾ ಅನಕ್ಷರಸ್ಥೆ ಎನ್ನುವುದು ಹೊಳೆಯುತ್ತದೆ.

ಅವನು ಅದನ್ನು ನ್ಯಾಯದ ಕಮಿಟಿ ಮುಂದೆ ಹೇಳಿದರೆ ಹನ್ನಾ ಶಿಕ್ಷೆ ಕಡಿಮೆಯಾಗಬಹುದು. ಆದರೆ ಅವನು ಹೇಳುವುದಿಲ್ಲ. ಅದು ಹೇಳಿದರೆ, ತನಗೂ ಅವಳಿಗೂ ಇದ್ದ ಸಂಬಂಧದ ಬಗ್ಗೆ ಹೇಳಬೇಕಾಗುತ್ತದೆ. ಅದಕ್ಕೆ ಅವನು ತಯಾರಿಲ್ಲ! ಮಿಕ್ಕ ಗಾರ್ಡ್‌ಗಳಿಗೆ 3 ವರ್ಷ ಶಿಕ್ಷೆಯಾದರೆ, ಗಾರ್ಡ್‌ಗಳ ನಾಯಕಿ ಎಂದು ಹನ್ನಾಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಹಾಗೆ ಹೇಳದೆ ಉಳಿದೆ ಎನ್ನುವ ಗಿಲ್ಟ್ ಮೈಕೆಲ್‌ನನ್ನು ಜೀವಮಾನದುದ್ದಕ್ಕೂ ಕಾಡುತ್ತದೆ. ಒಂದು ಕಡೆ ಅವಳಿಗೆ ಏಕಾಂತವಾಸದ ಶಿಕ್ಷೆ ಆಗಿದ್ದರೆ, ಮೈಕೆಲ್ ತಾನೇ ತನ್ನ ಮೇಲೆ ಆ ಶಿಕ್ಷೆಯನ್ನು ವಿಧಿಸಿಕೊಂಡಿರುತ್ತಾನೆ. ಅಷ್ಟು ಹತ್ತಿರವಿದ್ದ ಹೆಣ್ಣೊಬ್ಬಳು ತನ್ನಿಂದ ಹಾಗೆ ಕೈಬಿಡಿಸಿಕೊಂಡು ಹೋಗಬಲ್ಲಳು ಎನ್ನುವ ಸಾಧ್ಯತೆ ಅವನು ಯಾರನ್ನೂ ಹಚ್ಚಿಕೊಳ್ಳದಂತೆ ಮಾಡುತ್ತದೆ, ಕಡೆಗೆ ಅವನ ತಾಯಿ ಮತ್ತು ಸ್ವಂತ ಮಗಳನ್ನು ಸಹ. ಅವನು ಒಂದು ರೀತಿಯಲ್ಲಿ ಅಂಗೈಯಲ್ಲಿ ಇನ್ನೊಂದು ಕೈ ಹಿಡಿದು ನಿದ್ರಿಸಲು ಹೆದರುವವನು.

ಬದುಕಿನ ನಡುವಯಸ್ಸಿನಲ್ಲಿ ಅವನು ಹನ್ನಾಳೊಡನೆ ಮತ್ತೆ ಒಂದು ಸೇತುವೆ ಕಟ್ಟುತ್ತಾನೆ. ಅವಳಿಗಾಗಿ ಅದೇ ಕ್ಲಾಸಿಕ್ ಪುಸ್ತಕಗಳನ್ನು ಟೇಪ್ ರೆಕಾರ್ಡರ್‌ನಲ್ಲಿ ರೆಕಾರ್ಡ್ ಮಾಡಿ ಅವಳಿಗೆ ಕಳಿಸಲು ಪ್ರಾರಂಭಿಸುತ್ತಾನೆ. ‘ದ ರೀಡರ್’ ಈಗ ‘ದ ಸ್ಟೋರಿ ಟೆಲ್ಲರ್’ ಆಗಿದ್ದಾನೆ. ಯಾವುದೇ ಅತಿಯಾದ ಎಮೋಷನಲ್ ಇಲ್ಲದೆ ತೆಗೆದ ಈ ಚಿತ್ರದಲ್ಲಿ ಇದೊಂದು ದೃಶ್ಯ ಗಂಟಲು ಕಟ್ಟುವಂತೆ ಮಾಡುತ್ತದೆ. ಆನಂತರ ಇವನು ತನ್ನೆಲ್ಲಾ ರಾತ್ರಿಗಳನ್ನೂ ಕಥೆಗಳನ್ನು ಓದುವ ಕೆಲಸಕ್ಕೆ ಮೀಸಲಾಗಿಡುತ್ತಾನೆ. ಆ ಕ್ಯಾಸೆಟ್‌ಗಳನ್ನು ಕೇಳುತ್ತಾ, ಅದೇ ಪುಸ್ತಕವನ್ನು ಕಣ್ಣೆದುರಿಗೆ ಇಟ್ಟುಕೊಂಡು ಅವಳು ಓದುವುದನ್ನು ಕಲಿಯುತ್ತಾಳೆ, ಅಕ್ಷರಗಳ ಮೂಲಕ ಅಲ್ಲ, ಪದಗಳ ಮೂಲಕ. ಮೈಕೆಲ್‌ಗೆ ಪತ್ರ ಬರೆಯುತ್ತಾಳೆ, ಉತ್ತರ ಬರಿ ಎಂದು ಬೇಡುತ್ತಾಳೆ. ಆದರೆ ಮೈಕೆಲ್ ಸಂವಹನ ಮಾಡುವುದು ಆ ಕ್ಯಾಸೆಟ್‌ಗಳ ಮೂಲಕ ಮಾತ್ರ.

ಕಡೆಗೊಂದು ಬಾರಿ ಮೈಕೆಲ್, ಹನ್ನಾಳನ್ನು ಜೈಲಿನಲ್ಲಿ ಸಂಧಿಸುತ್ತಾನೆ. ಒಂದೊಮ್ಮೆ ಅವಳ ದೇಹಕ್ಕಾಗಿ, ಅದರ ಸ್ಪರ್ಶಕ್ಕಾಗಿ ಕಾತರಿಸುತ್ತಿದ್ದವನು, ಇಂದು ಅವಳ ಕೈಗಳಿಂದ ತನ್ನ ಕೈಗಳನ್ನು ಹೊರತೆಗೆದುಕೊಳ್ಳಲು ಚಡಪಡಿಸುತ್ತಿದ್ದಾನೆ. ಬೈ ಹೇಳುವಾಗ ಒಂದು ಅಪ್ಪುಗೆ ಸಹಾ ಇಲ್ಲದೆ, ಅಪರಿಚಿತರಂತೆ ಹೊರಟುಬರುತ್ತಾನೆ. ಅಂದು ರಾತ್ರಿ ಹನ್ನಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ಉಯಿಲಿನ ಪ್ರಕಾರ ಅವಳ ಉಳಿಕೆಯ ಹಣವನ್ನು ಆ ಹಾಲೋಕಾಸ್ಟ್ ಸರ್ವೈವರ್ ಮಗಳಿಗೆ ಕೊಡಲು ಹೋಗುತ್ತಾನೆ. ಅವಳ ಮುಂದೆ ಮೊದಲನೆಯ ಸಾರಿ ಹನ್ನಾಳೊಂದಿಗಿನ ತನ್ನ ಸಂಬಂಧ ಒಪ್ಪಿಕೊಳ್ಳುತ್ತಾನೆ. ಆಗ ಅವನ ಕಣ್ಣುಗಳ ತುಂಬಾ ನೀರಿರುತ್ತದೆ. ‘She has done much worse to other people’ ಎಂದು ಬಿಕ್ಕುತ್ತಾನೆ. ಬಹುಶಃ ಅಷ್ಟು ನೋವು ತಿಂದು ಬದುಕಿದ ಅವಳು ಮಾತ್ರ ತನ್ನ ದುಃಖದ ಭಾರವನ್ನು ಹೊರಬಲ್ಲಳು ಎಂದು ಅವನಿಗೆ ಅನ್ನಿಸಿರುತ್ತದೆ.

ಒಂದು ರೀತಿಯಲ್ಲಿ ಇದು ಪಾಪಪ್ರಜ್ಞೆಯ ಕತೆ. ನಂಬಿಕೆ ದ್ರೋಹಕ್ಕೆ ಒಳಗಾಗಿ ಮತ್ತೆಂದು, ಮತ್ಯಾರನ್ನೂ ನಂಬಲಾರದವನ ಕತೆ, ತನ್ನ ಕ್ರಿಯೆಯಿಂದ, ನಡವಳಿಕೆಯಿಂದ ಆದ ಪರಿಣಾಮವನ್ನು ಕಡೆಗೂ ಅರ್ಥಮಾಡಿಕೊಳ್ಳದವಳ ಕತೆ. ಚಿತ್ರದುದ್ದಕ್ಕೂ ಸುರಿವ ಮಂಜು ಅದಕ್ಕೊಂದು ಶೀತಲತೆಯ ಚೌಕಟ್ಟನ್ನು ಕಟ್ಟಿಕೊಡುತ್ತದೆ. ಹನ್ನಾಳಾಗಿ ಕೇಟ್ ವಿನ್ಸ್ಲೆಟ್, ಮೈಕೆಲ್ ಆಗಿ ಡೇವಿಡ್ ಕ್ರಾಸ್ ಮತ್ತು ರಾಲ್ಫ್ ಫಿಯೆನ್ಸ್ ಸಂಯಮಪೂರ್ಣ ಅಭಿನಯದ ಮೂಲಕವೇ ಕರುಳಿನೊಳಗೆ ಚಾಕು ಆಡಿಸುತ್ತಾರೆ. ಹೆಚ್ಚೇನೂ ಅಬ್ಬರವಿಲ್ಲದೆ, ಅತಿಯಾದ ಭಾವುಕತೆಯ ಸನ್ನಿವೇಶಗಳೊಂದೂ ಇಲ್ಲದೆ, ವೈಯಕ್ತಿಕ ಮತ್ತು ಸಾರ್ವಜನಿಕ ಎರಡೂ ನೆಲೆಗಳಲ್ಲಿ ತೆರೆದುಕೊಳ್ಳುವ ಈ ಚಿತ್ರ ಗಟ್ಟಿಮಣ್ಣಿನ ಮೇಲೆ ನಿಧಾನವಾಗಿ ಇಂಗುವ ನೀರ ಹನಿಯಂತೆ ನಿಧಾನವಾಗಿ ನಮ್ಮೊಳಗಿಳಿಯುತ್ತದೆ.

LEAVE A REPLY

Connect with

Please enter your comment!
Please enter your name here