ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ ಚಿತ್ರದ ಧ್ವನಿ ಏನು ಹೇಳುತ್ತದೆ ಎನ್ನುವುದನ್ನು. ಇದು ಸಿದ್ಧಾಂತಗಳ ಸಂಘರ್ಷ ಮತ್ತು ವಾಸ್ತವತೆಯ ಕಥೆಯೇ ಅಥವಾ ಫಲಿಸದ ಪ್ರೇಮದ ಕಥೆಯೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ಆದರೆ ಚಿತ್ರದ ಐದು ಮುಖ್ಯ ಪಾತ್ರಗಳೂ ನಾಳಿನ ಬೆಳಗಿಗಾಗಿ ಹಂಬಲಿಸುತ್ತಲೇ, ಅದಕ್ಕಾಗಿ ಕನಸುತ್ತಲೇ ಮುಟ್ಟುವ ದುರಂತ ಅಂತ್ಯ ಬಹುಶಃ ಚಿತ್ರದ ವಸ್ತು. ‘Dear ವಿಕ್ರಂ’ ಕನ್ನಡ ಸಿನಿಮಾ Voot Selectನಲ್ಲಿ ಸ್ಟ್ರೀಮ್ ಆಗುತ್ತಿದೆ.
‘….ರಾಜಕೀಯ ವ್ಯವಸ್ಥೆಯಲ್ಲಿ ಯಾರದೋ ಷಡ್ಯಂತ್ರಗಳ ಪಾನ್‌ಗಳಾಗಿ ಬಳಕೆಯಾಗುತ್ತಿರುತ್ತೇವೆ. ನಮಗರಿವಿಲ್ಲದೆ ನಮ್ಮ ನಡೆಗಳನ್ನು ಯಾವುದೋ ಪಟ್ಟಭದ್ರ ಹಿತಾಸಕ್ತಿಗಳು ನಿರ್ದೇಶಿಸುತ್ತಿರುತ್ತವೆ. ಆದರ್ಶಗಳ ಬೆನ್ನು ಬಿದ್ದು ಕ್ರಾಂತಿಯ ಕನಸಿಟ್ಟುಕೊಂಡು ಹೊರಟ ಬಹುತೇಕರಿಗೆ ದಾರಿಯ ಕೊನೆಯಲ್ಲಿ ಎದುರಾಗುವುದು ಭ್ರಮನಿರಸನವೇ, ಉಳಿಯುವುದು ಹತಾಶೆಯೇ. ಪಂಥ ಸಿದ್ಧಾಂತ ಹೋರಾಟ ಎಡ ಬಲ ಪ್ರಸ್ತುತ ಸಮಾಜದ ಹೊಯ್ದಾಟಗಳಿಗೆ ಕನ್ನಡಿ ಹಿಡಿದಿದೆ ಈ ಸಿನಿಮಾ…..’ ಎನ್ನುವ ಸಾಲುಗಳನ್ನು ಕವಿ, ಬರಹಗಾರ, ನಿರ್ದೇಶಕ ಕವಿರಾಜ್ ಅವರ ಫೇಸ್‌ಬುಕ್ ಪುಟದಲ್ಲಿ ನೋಡಿ, ಆ ದಿನವೇ ’ಡಿಯರ್ ವಿಕ್ರಂ’ ಚಿತ್ರವನ್ನು ನೋಡಲು ಕುಳಿತೆ. ಚಿತ್ರದ ಓಪನಿಂಗ್ ದೃಶ್ಯದಿಂದಲೇ ಚಿತ್ರದ ಧ್ವನಿ ಅರ್ಥವಾಗಿಬಿಡುತ್ತದೆ. ರಾಜಕೀಯ ನಾಯಕರು ಮತ್ತು ದೇಶದ ಉದ್ಯೋಗಪತಿಗಳು ದೇಶದ ಜೊತೆಜೊತೆಗೆ ದೇಶದ ಜನತೆಯನ್ನೂ ನಿರ್ದೇಶಿಸುತ್ತಿರುವ ಈ ದಿನಮಾನಗಳಲ್ಲಿ ನಾವು ಮಾತನಾಡಬೇಕಿರುವುದು ಇದೇ ವಿಷಯಗಳ ಬಗ್ಗೆ.
ಅಂದ ಹಾಗೆ ಈ ಚಿತ್ರಕ್ಕೆ ಮೊದಲು ‘ಗೋಧ್ರಾ’ ಎನ್ನುವ ನಾಮಕರಣವಾಗಿದ್ದ ನೆನಪು. ಆದರೆ ಆ ಹೆಸರನ್ನಿಟ್ಟುಕೊಂಡು ಚಿತ್ರ ಮಾಡುವುದು, ಮಾಡಿ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಇಡೀ ಚಿತ್ರ ನೋಡಿದ ಮೇಲೂ ‘ಗೋಧ್ರಾ’ ಎನ್ನುವ ಹೆಸರು ಈ ಕಥೆಗೆ ಯಾವ ರೀತಿಯಲ್ಲೂ ಹೊಂದುವ ಹಾಗೆ ತೋರುವುದಿಲ್ಲ. ಹೆಸರಿನೊಂದಿಗೆ ಕಥೆಯನ್ನೂ ಬದಲಿಸಲಾಯಿತೆ ಎನ್ನುವ ಪ್ರಶ್ನೆ ಇನ್ನೂ ಹಾಗೆಯೇ ಉಳಿದಿದೆ. ‘ಗೋಧ್ರಾ – ಎಂದೂ ಮುಗಿಯದ ಯುದ್ಧ’ ಎನ್ನುವ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಘೋಷಣೆಯಾಗಿದ್ದ ಈ ಚಿತ್ರದಲ್ಲಿ ಗೋಧ್ರಾ ಒಂದು ರೂಪಕವಾಗಿತ್ತೆ, ಆ ಕಾರಣಕ್ಕಾಗಿಯೇ ಇದನ್ನು ಬದಲಾಯಿಸಬೇಕಾಯಿತೇ? ಎನ್ನುವ ಪ್ರಶ್ನೆ ಕೂಡಾ ಇದೆ. ಈ ಕಥೆಯಲ್ಲಿ ನಮಗೆ ಪರಿಚಿತವಾಗಿದ್ದ ಅನೇಕ ಹೆಸರುಗಳಿವೆ. ಕಾರ್ತಿಕ ಸ್ವಾಮಿ ಎನ್ನುವ ಮುಖ್ಯಮಂತ್ರಿ ಇದ್ದಾರೆ, ದಲಿತರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುತ್ತಾರೆ. ಪ್ರೇಮ್, ಕಿಶನ್ ಜಿ ಎನ್ನುವ ನಕ್ಸಲ್ ನಾಯಕರಿದ್ದಾರೆ. ಇಲ್ಲಿಂದ ಕರಾಚಿ, ಆಫ್ಘಾನಿಸ್ತಾನದವರೆಗೂ ಕೇಸರಿ ಧ್ವಜ ಹಾರಿಸಬೇಕು ಎನ್ನುವ ನಾಯಕರ ಘೋಷಣೆಗಳಿವೆ. ಹಾಗಾಗಿ ಈ ಚಿತ್ರದ ಹೆಸರು, ಪಾತ್ರಗಳು, ಘಟನೆ, ಸನ್ನಿವೇಶಗಳು ಕೇವಲ ಕಾಲ್ಪನಿಕ ಅಥವಾ ಕಾಲ್ಪನಿಕ ಅಲ್ಲ!
ಚಿತ್ರದಲ್ಲಿ ಹಲವಾರು ಎಳೆಗಳಿವೆ. ಕಾಲೇಜಿಗೆ ಮೊದಲಿಗನಾಗಿ ಬರುತ್ತಿದ್ದ ದಲಿತ ಯುವಕನೊಬ್ಬ ಸಹಪಾಠಿಯ ಆತ್ಮಹತ್ಯೆ ಪ್ರಯತ್ನದ ಕಾರಣಕ್ಕೆ ಕಾಲೇಜಿನಲ್ಲಿ ಚಳುವಳಿ ಮಾಡುತ್ತಾನೆ. ಅವನನ್ನು ನಕ್ಸಲ್ ಚಳುವಳಿ ಕೈಬೀಸಿ ಕರೆಯುತ್ತದೆ. ಮತ್ತೊಬ್ಬ ಯುವಕ, ಪ್ರತಿಷ್ಠಿತ ವಕೀಲರ ಕುಟುಂಬಕ್ಕೆ ಸೇರಿದವನು ಬಲಪಂಥೀಯ ಚಳುವಳಿಗಳಲ್ಲಿ ಭಾಗವಹಿಸುತ್ತಿರುತ್ತಾನೆ. ಆದರೆ ಅದರಲ್ಲಿ ಮುಳುಗದೆ ಪೈಲಟ್ ಆಫೀಸರ್ ಟ್ರೇನಿಂಗ್ ಮುಗಿಸಿ ಪೈಲಟ್ ಆಗುತ್ತಾನೆ. ಮೇಲ್ ಮಧ್ಯಮ ವರ್ಗದಿಂದ ಬರುವ ಯುವಕರು ಹೀಗೆ ಸಮಯಕ್ಕೆ ಸರಿಯಾಗಿ (ನಾವು ಎಲ್ಲಿಂದ ನೋಡುತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ) ಸರಿ ಹಾದಿ ಹಿಡಿದು ಅಥವಾ ಹಾದಿ ತಪ್ಪಿ – ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಕಡೆಗೂ ಬಹುಮಟ್ಟಿಗೆ ಹೋರಾಟದ ಹಾದಿಯಲ್ಲಿ ಮಣ್ಣುಪಾಲಾದವರು ಏನೂ ಇಲ್ಲದವರೇ.
ಇದರ ನಡುವೆ ಮಾಜಿ ಪ್ರಧಾನ ಮಂತ್ರಿಗಳ ಮಗ ಕಾರ್ತಿಕ್ ಸ್ವಾಮಿ ಚಾನೆಲ್ ಒಂದನ್ನು ರೂಪಿಸಬೇಕೆಂದು ಇದ್ದವರು ನಂತರ ರೈತರ ಬೆಂಬಲಕ್ಕೆ ನಿಂತು, ಅವರ ಬೆಂಬಲದಿಂದ ಒಂದು ಅವಧಿಗೆ ಮುಖ್ಯಮಂತ್ರಿ ಆಗಿದ್ದಾರೆ. ಇನ್ನೊಂದು ಅವಧಿಗೆ ಮುಖ್ಯಮಂತ್ರಿ ಆಗಲು ಉದ್ಯಮಪತಿಗಳೊಂದಿಗೆ ಹೊಂದಾಣಿಕೆ ಸಹ ಮಾಡಿಕೊಂಡಿದ್ದಾರೆ. ಇವೆಲ್ಲದರ ಹಿಂದೆ ರಾಷ್ಟ್ರೀಯ ರಾಜಕೀಯ ಪಕ್ಷ ಮತ್ತು ಕರ್ನಾಟಕದಲ್ಲಿ ಪವರ್ ಪ್ಲಾಂಟ್ ಮಾಡಲು ಕಾಯಿ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ ಇದೆ. ಇವೆರಡೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಕಣ್ಣಳತೆಯೊಳಗಿಟ್ಟುಕೊಳ್ಳುವ, ನಿರ್ದೇಶಿಸುವ ಬಿಗ್ ಬಾಸ್. ಹೀಗೆ ಹಲವು ನೆಲೆಗಳಲ್ಲಿ ಸಾಗುವ ಚಿತ್ರ ಕಡೆಯದಾಗಿ ಒಂದೇ ಕಥೆಯೊಳಗೆ ಈ ಎಲ್ಲಾ ಎಳೆಗಳನ್ನೂ ಸೇರಿಸುವ ಲಕ್ಷ್ಯ ಹೊಂದಿದೆ. ಯಾವುದೇ ನಿರ್ದೇಶಕರಿಗೂ ಈ ಎಲ್ಲಾ ಎಳೆಗಳನ್ನೂ ಏಕಕಾಲದಲ್ಲಿ ನಿರ್ವಹಿಸುವುದು ಸವಾಲಿನ ಕೆಲಸವೇ.
ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ನಂದೀಶ್ ಅವರದು ಆ ಮಟ್ಟಿಗೆ ಸವಾಲಿನ ಕೆಲಸವೇ ಹೌದು. ಹೋರಾಟದ ಹಾದಿಯಲ್ಲಿ ಅಣ್ಣ, ತಾಯಿ, ಪತ್ನಿ, ಮಗಳು ಎಲ್ಲರಿಂದ ದೂರಾಗುವ ವಿಕ್ರಂ ತಲ್ಲಣಗಳನ್ನು, ಅವನಿಗಾಗುವ ಭ್ರಮ ನಿರಸವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಆ ಪಾತ್ರಕ್ಕೆ ಸತೀಶ್ ನೀನಾಸಂ ಸಂಪೂರ್ಣವಾಗಿ ನ್ಯಾಯ ಒದಗಿಸಿದ್ದಾರೆ. ಆ ಹಾದಿ ಹಿಡಿದ ಮೇಲೆ ಬದಲಾಗುವ ವ್ಯಕ್ತಿತ್ವ, ನಡೆನುಡಿ, ಅದರ ನಡುವೆಯೂ ಕಾಡುವ ಮಗಳ ನೆನಪು ತನ್ನಂತಾನೆ ಕಥೆ ಹೇಳುತ್ತದೆ. ನಟನೆಯ ವಿಷಯಕ್ಕೆ ಬಂದರೆ ಸತೀಶ್ ಅವರ ಜೊತೆಯಲ್ಲಿ ಅಚ್ಯುತ ಕುಮಾರ್, ವಸಿಷ್ಟ ಸಿಂಹ, ಶ್ರದ್ಧಾ ಶ್ರೀನಾಥ್, ರಕ್ಷಾ ಸೋಮಶೇಖರ್, ಸೋನು ಗೌಡ, ಧರ್ಮೇಂದ್ರ ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಆದರೆ ಸೋನು ಗೌಡ ಅವರ ಪಾತ್ರದ ಉದ್ದೇಶಕ್ಕೆ ಸರಿಯಾದ ಸಮರ್ಥನೆ ಸಿಕ್ಕಿಲ್ಲ. ಆ ಪಾತ್ರದ ಜೊತೆಗೆ ಕಾರ್ತಿಕ್ ಸ್ವಾಮಿ ಅವರ ಪಾತ್ರಕ್ಕೆ ಏನಾದರೂ ಸಂಬಂಧ ಇತ್ತೆ ಅಥವಾ ಇರಲಿಲ್ಲವೆ ಎನ್ನುವುದು ಗೊತ್ತಾಗುವುದಿಲ್ಲ.
ಕಥೆಯ ಯಾವುದೇ ಸನ್ನಿವೇಶಕ್ಕೆ ಆಯಾ ಪಾತ್ರಗಳ ಪ್ರತಿಕ್ರಿಯೆ ಆಯಾ ಸಂದರ್ಭಗಳಿಗೆ ಸರಿಯಾಗಿದ್ದರೂ ಒಟ್ಟಾರೆ ಆ ಪಾತ್ರದ ಗುಣಸ್ವಭಾವಕ್ಕೆ ಹೊಂದುತ್ತವೆಯೇ ಎನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಲಾಗಿಲ್ಲ. ಸಂಭಾಷಣೆಯಲ್ಲಿ ಬರುವ ಭಾವವನ್ನು ದೃಶ್ಯದಲ್ಲಿ ತೋರಿಸಲಾಗಿಲ್ಲ. ವಿಕ್ರಂ ಓದಿನಲ್ಲಿ ಜಾಣ, ಕಾಲೇಜಿಗೇ ಎರಡನೆಯವನಾಗಿ ತೇರ್ಗಡೆಯಾದವ. ಆದರೆ ಗೆಳೆಯನ ಆತ್ಮಹತ್ಯೆ ಮಾತ್ರ ಅವನನ್ನು ನಕ್ಸಲಿಸಂ ಕಡೆಗೆ ಹೋಗಲು ಪ್ರಭಾವಿಸಿತು ಎಂದು ಹೇಳಬೇಕಾದರೆ ಅದಕ್ಕೆ ತಕ್ಕಂತೆ ಗೆಳೆಯನ ಪಾತ್ರವನ್ನು ರೂಪಿಸಬೇಕಾಗುತ್ತದೆ. ಅವನ ಅಟೆಂಡೆನ್ಸ್ ಕಡಿಮೆಯಾಗಲು ಕಾರಣ ಸರ್ಕಾರದ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ನೀತಿ ಎನ್ನುವುದು ಸಂಭಾಷಣೆಯಲ್ಲಿ ಮಾತ್ರ ಬರುತ್ತದೆ ಮತ್ತು ಆ ಕಾರಣಕ್ಕೆ ಆ ಕಾರಣ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.
ಅದೇ ರೀತಿಯಲ್ಲಿ ಅಪ್ಪನ ಆತ್ಮವಿಶ್ವಾಸ ಕುಸಿಯುವಂತೆ ಅಪ್ಪನ ಎದುರಿಸಿ ನಿಂತ ಮಗ ಮರು ದೃಶ್ಯದಲ್ಲೇ ಬದಲಾಗಿ, ತಾನು ಅದುವರೆವಿಗೂ ನಂಬಿದ್ದ ಬಲಪಂಥೀಯ ಸಿದ್ಧಾಂತದ ದಾರಿಯನ್ನು ಬಿಟ್ಟು, ಪ್ರೀತಿಸಿದ್ದ ಹುಡುಗಿಯನ್ನೂ ಬಿಟ್ಟು ಪೈಲಟ್ ಟ್ರೇನಿಂಗ್‌ಗೆ ಹೊರಟುಬಿಡುತ್ತಾನೆ. ಅದಕ್ಕೆ ಪೂರಕವಾಗಿ ಏನಾದರೂ ಇರಬೇಕು ಅನ್ನಿಸುತ್ತದೆ. ಮಾಮೂಲಿ ಚಿತ್ರವಾಗಿದ್ದರೆ ಹೀಗೆ ನಿರೀಕ್ಷೆ ಮಾಡುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ, ಆದರೆ ಕೆ.ಎಸ್.ನಂದೀಶ್ ಇಂತಹ ವಸ್ತುವನ್ನು ಕೈಗೆತ್ತಿಕೊಳ್ಳುವ ಧೈರ್ಯ ಮಾಡಿದ್ದಾರೆ ಎನ್ನುವ ಕಾರಣದಿಂದಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ, ಯಾವುದಾದರೂ ಒಂದು ಶಕ್ತ ಹೆಣ್ಣುಪಾತ್ರವನ್ನಾದರೂ ಕಟ್ಟಬಹುದಿತ್ತು, ಇರುವ ಎರಡೂ ನಾಯಕಿ ಪಾತ್ರಗಳೂ ತಮ್ಮತಮ್ಮ ನಾಯಕನಿಗೆ ಪೂರಕ ಪಾತ್ರಗಳಾಗಿ ಉಳಿದುಬಿಟ್ಟಿದ್ದಾರೆ. ಆದರೆ ಇದೆಲ್ಲದನ್ನು ಮೀರಿಯೂ ನಿರ್ದೇಶಕರಿಂದ ಬರಬಹುದಾದ ಮುಂದಿನ ಚಿತ್ರಗಳ ಬಗ್ಗೆ ಕಾಯಬಹುದು.
ಯಾವುದೇ ಚಿತ್ರವಾಗಲಿ, ಅದರ ಆಶಯ ಒಂದು ಭಾಗವಾದರೆ, ಆ ಆಶಯದ ಸಾಕ್ಷಾತ್ಕಾರ ಎರಡನೆಯ ಭಾಗ. ಆ ಎರಡನೆಯ ಭಾಗ ಕಸುಬುದಾರಿಕೆಗೆ ಸಂಬಂಧಪಟ್ಟಿದ್ದು. ಕಸುಬುದಾರಿಕೆ ಕಸುಬು ಮಾಡಿದಂತೇ ಪಕ್ವವಾಗುತ್ತಾ, ಹರಿತವಾಗುತ್ತಾ ಹೋಗುತ್ತದೆ. ಒಳ್ಳೆಯ ಆಶಯಗಳನ್ನಿಟ್ಟುಕೊಂಡ ಚಿತ್ರಗಳನ್ನು ಆ ಪಕ್ವತೆಯ ಮುನ್ಸೂಚನೆಯಾಗಿಯೇ ನಾವು ನೋಡಬೇಕಾಗುತ್ತದೆ. ‘ಬಯಕೆ ಬರುವುದರ ಕಣ್ಸನ್ನೆ ಕಾಣಾ’ ಎನ್ನುವ ಕವಿ ಮಧುರ ಚೆನ್ನರ ಸಾಲುಗಳ ಹಾಗೆ ಈ ಇಂತಹ ಪ್ರಯತ್ನಗಳನ್ನು ನಾವು ಆ ಬರುವ ನಾಳೆಗಳ ಭಾಗವಾಗಿಯೇ ನೋಡಬೇಕಾಗುತ್ತದೆ. ಆ ಕಾರಣಕ್ಕೆ ಹಲವು ಮಿತಿಗಳ ನಡುವೆಯೂ ಈ ಚಿತ್ರ ಗಮನಾರ್ಹವಾಗುತ್ತದೆ. ಏಕೆಂದರೆ ಕತೆಯನ್ನಾಗಲೀ, ಹೀರೋಯಿಸಂ ಅನ್ನಾಗಲೀ ಯಾವುದೇ ವೈಭವೀಕರಣ ಮಾಡದ ಇಂತಹ ಚಿತ್ರಗಳನ್ನು ಕೈಗೆತ್ತಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಇಂತಹ ಪ್ರಯತ್ನಗಳೇ ಉತ್ತಮ ನಾಳೆಗಳಿಗೆ ಸೇತುವೆ ಕಟ್ಟುತ್ತವೆ. ಇಂತಹ ಚಿತ್ರಗಳಿಗೆ ಓಟಿಟಿ ಸರಿಯಾದ ವೇದಿಕೆ ಒದಗಿಸಬಹುದು. ಈ ಸ್ಥಳಾವಕಾಶವನ್ನು ಈ ಚಿತ್ರಗಳು ಬಳಸಿಕೊಳ್ಳಬೇಕು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ ಚಿತ್ರದ ಧ್ವನಿ ಏನು ಹೇಳುತ್ತದೆ ಎನ್ನುವುದನ್ನು. ಇದು ಸಿದ್ಧಾಂತಗಳ ಸಂಘರ್ಷ ಮತ್ತು ವಾಸ್ತವತೆಯ ಕಥೆಯೇ ಅಥವಾ ಫಲಿಸದ ಪ್ರೇಮದ ಕಥೆಯೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ಆದರೆ ಚಿತ್ರದ ಐದು ಮುಖ್ಯ ಪಾತ್ರಗಳೂ ನಾಳಿನ ಬೆಳಗಿಗಾಗಿ ಹಂಬಲಿಸುತ್ತಲೇ, ಅದಕ್ಕಾಗಿ ಕನಸುತ್ತಲೇ ಮುಟ್ಟುವ ದುರಂತ ಅಂತ್ಯ ಬಹುಶಃ ಚಿತ್ರದ ವಸ್ತು.