ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ‘ತಲೆದಂಡ’, ‘ಡೊಳ್ಳು’, ತುಳು ಸಿನಿಮಾ ‘ಜೀಟಿಗೆ’ ಮತ್ತು ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಗೌರವಕ್ಕೆ ಭಾಜನವಾಗಿವೆ.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಪ್ರವೀಣ್‌ ಕೃಪಾಕರ್‌ ನಿರ್ದೇಶನದಲ್ಲಿ ಸಂಚಾರಿ ವಿಜಯ್‌ ಅಭಿನಯಿಸಿರುವ ‘ತಲೆದಂಡ’ ಸಿನಿಮಾವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಎಂದು ಘೋಷಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು 1.50 ಲಕ್ಷ ನಗದು ಒಳಗೊಂಡಿದೆ. ಪವನ್‌ ಒಡೆಯರ್‌ ನಿರ್ಮಾಣ, ಸಾಗರ್‌ ಪುರಾಣಿಕ್‌ ನಿರ್ದೇಶನದ ‘ಡೊಳ್ಳು’ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಜತ ಕಮಲಕ್ಕೆ ಪಾತ್ರವಾಗಿದ್ದು, ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿದೆ. ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ ಇದೇ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, 50 ಸಾವಿರ ರೂ. ನಗದು ಒಳಗೊಂಡಿದೆ. ಸಂವಿಧಾನದ 8ನೇ ಪರಿಚ್ಛೇದದ ಅಡಿ ಹೊರತಾದ ಭಾಷೆಗಳ ಸಿನಿಮಾಗಳ ವಿಭಾಗದಲ್ಲಿ ಸಂತೋಷ್‌ ಮಾಡ ನಿರ್ದೇಶನದ ತುಳು ಸಿನಿಮಾ ‘ಜೀಟಿಗೆ’ಗೆ ರಜತ ಕಮಲ ಲಭಿಸಿದೆ. ಅತ್ಯುತ್ತಮ ಕಲೆ, ಸಂಸ್ಕೃತಿ ಆಧಾರಿತ ವಿಭಾಗದ ಅಡಿ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ – ಡಾ.ಪಂಡಿತ್‌ ವೆಂಕಟೇಶ್‌ ಮೂರ್ತಿ’ ರಜತ ಕಮಲ ಪ್ರಶಸ್ತಿ ಪಡೆದಿದೆ.

ಡೊಳ್ಳು ಕುಣಿತದ ಸುತ್ತ ಸಾಗುವ ‘ಡೊಳ್ಳು’ ಸಿನಿಮಾ ಎರಡು ಗೌರವ ಪಡೆದಿರುವುದು ವಿಶೇಷ. ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ಮೂಲಕ ಪತ್ನಿ ಅಪೇಕ್ಷಾ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರತಿಷ್ಠಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ‘ಡೊಳ್ಳು’ ಸಿನಿಮಾ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.

ಅತ್ಯುತ್ತಮ ನಟ ಸೂರ್ಯ : ‘ಸೂರಾರೈ ಪೋಟ್ರು’ ತಮಿಳು ಚಿತ್ರದ ನಟನೆಗಾಗಿ ಸೂರ್ಯ ಅತ್ಯುತ್ತಮ ನಟ ಹಾಗೂ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಇದೇ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಶಾಲಿನಿ ಉಷಾ ನಾಯರ್‌ ಮತ್ತು ಚಿತ್ರದ ನಿರ್ದೇಶಕಿ ಸುಧಾ ಕೊಂಗರ ಹಂಚಿಕೊಂಡಿದ್ದಾರೆ. ಇದೇ ಚಿತ್ರಕ್ಕಾಗಿ ಜಿ.ವಿ.ಪ್ರಕಾಶ್‌ ಕುಮಾರ್‌ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ. ‘ತಾನಾಜಿ – ದಿ ಅನ್‌ಸಂಗ್‌ ವಾರಿಯರ್‌’ ಹಿಂದಿ ಚಿತ್ರಕ್ಕಾಗಿ ಅಜಯ್‌ ದೇವಗನ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸೂರ್ಯ ಅವರೊಂದಿಗೆ ಹಂಚಿಕೊಂಡಿದ್ದಾರೆ.

‘ಅಯ್ಯಂಪ್ಪನುಂ ಕೋಷಿಯುಂ’ ಮಲಯಾಳಂ ಚಿತ್ರಕ್ಕಾಗಿ ದಿವಂಗತ ಕೆ.ಆರ್‌.ಸಚ್ಚಿದಾನಂದನ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯ ಗೌರವ ಸಂದಿದೆ. ಇದೇ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ರಾಜಶೇಖರ್‌, ಮಾಫಿಯಾ ಸಸಿ ಮತ್ತು ಸುಪ್ರೀಂ ಸುಂದರ್‌ ಅವರಿಗೆ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರದ ಪೋಷಕ ಪಾತ್ರಧಾರಿ ಬಿಜು ಮೆನನ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಸಿಕ್ಕಿದ್ದು, ‘ಶಿವರಂಜಿನಿಯುಂ ಇನ್ನುಂ ಸುಲಾ ಪೆಂಗಲುಂ’ ತಮಿಳು ಚಿತ್ರದಲ್ಲಿನ ಉತ್ತಮ ನಟನೆಗೆ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಹಿನ್ನೆಲೆ ಗಾಯಕ ರಾಹುಲ್‌ ದೇಶಪಾಂಡೆ (ಸಿನಿಮಾ : ಮಿ ವಸಂತರಾವ್‌), ಅತ್ಯುತ್ತಮ ಹಿನ್ನೆಲೆ ಗಾಯಕಿ ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ), ಅತ್ಯುತ್ತಮ ಛಾಯಾಗ್ರಹಣ ಸುಪ್ರತಿಮ್‌ ಭೋಲ್‌ (ಅವಿಜಾತ್ರಿಕ್‌), ಅತ್ಯುತ್ತಮ ಸಂಕಲನ ಶ್ರೀಕರ ಪ್ರಸಾದ್‌ (ಶಿವಾರ್ಜುನೀಯುಂ ಇನ್ನುಂ ಸುಲಾ ಪೆಂಗಲುಂ, ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ ಕಪ್ಪೆಲ ಸಿನಿಮಾಗೆ ಪ್ರಶಸ್ತಿಯ ಗೌರವ ಸಂದಿದೆ. ‘ಮಂಡೇಲ’ ತಮಿಳು ಸಿನಿಮಾ ಚೊಚ್ಚಲ ನಿರ್ದೇಶನಕ್ಕಾಗಿ ಮದೊನ್ನೆ ಅಶ್ವಿನ್‌ ಅವರಿಗೆ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದ್ದು, ಇದೇ ಚಿತ್ರಕ್ಕೆ ಅಶ್ವಿನ್‌ ಅವರು ಅತ್ಯುತ್ತಮ ಚಿತ್ರಕಥೆ ಗೌರವಕ್ಕೆ ಪಾತ್ರರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here