ರಜನೀಕಾಂತ್ ಮತ್ತು ಅಶೋಕ್ ಸಿನಿಮಾ ಪ್ರವೇಶಿಸುವುದಕ್ಕೆ ಮುಂಚಿನಿಂದಲೂ ಆತ್ಮೀಯ ಗೆಳೆಯರು. ಇಂದು ರಜನೀಕಾಂತ್‌ರ ಜನ್ಮದಿನ. ನಟ ಅಶೋಕ್ ಅವರು ರಜನೀಕಾಂತ್ ಅವರೊಂದಿಗಿನ ಒಡನಾಟ ಹೇಳಿಕೊಂಡಿರುವ ‘ಗೆಳೆಯ ಶಿವಾಜಿ’ ಪುಸ್ತಕ ಇಂದು ಬಿಡುಗಡೆಯಾಗುತ್ತಿದೆ. ‘BEE CULTURE’ ಈ ಪುಸ್ತಕ ಪ್ರಕಟಿಸಿದೆ. ಕೃತಿಯಲ್ಲಿನ ಆಯ್ದ ಆಸಕ್ತಿಕರ ಪ್ರಸಂಗವೊಂದು ಇಲ್ಲಿದೆ.
ಅಮಂಜಿಕರೆ ಹೋಟೆಲ್ ರೂಮಿನಲ್ಲಿದ್ದಾಗ ಶಿವಾಜಿಗೆ ತನ್ನ ಬಟ್ಟೆ, ಬೇರೆಯವರ ಬಟ್ಟೆ ಎಂಬ ಬೇಧವಿರಲಿಲ್ಲ. ಹೆಚ್ಚು ಕಡಿಮೆ ಒಂದೇ ವಯಸ್ಸು, ಒಂದೇ ನಿಲುವಿನವರಾದ್ದರಿಂದ, ಒಬ್ಬರ ಬಟ್ಟೆ ಇನ್ನೊಬ್ಬರಿಗಾಗುತ್ತಿತ್ತು. ಯಾವುದೋ ಸಿಕ್ಕಿದ್ದನ್ನು ಸಿಕ್ಕಿಸಿಕೊಂಡು ಹೋಗಿ ಬಿಡುತ್ತಿದ್ದ. ಇದಕ್ಕೊಂದಷ್ಟು ಜಗಳಗಳು ಆಗುತ್ತಿದ್ದವು. ಒಂದು ಸಾರಿ ನನ್ನ ಲುಂಗಿ ಉಟ್ಟುಕೊಂಡು, ಅದು ಕಾಲಿಗೆ ತೊಡರಿ, ಒಂದಿಷ್ಟು ಹರಿದಿತ್ತು. ಹರಿದ ಬಟ್ಟೆ ಹೊಲಿದುಕೊಳ್ಳುವುದನ್ನು ನಮ್ಮ ಮನೆಗಳಲ್ಲಿ ಬಾಲ್ಯದಲ್ಲೇ ಕಲಿಯಬೇಕಾಗಿತ್ತು. ಸರಿ, ನಾನು ಸೂಜಿ – ದಾರ ಪೋಣಿಸಿಕೊಂಡು ಹೊಲಿಯುತ್ತಿದ್ದೆ. ಇವನು ಬಂದ. ಅವನಿಗೆ ಗಿಲ್ಟಿ. ‘ಏಯ್ ವೇಣು, ನಾನ್ ಹರಿದಿದ್ದು, ಹೊಲಿತೀನಿ ಕೊಡೋ’ ಅಂದ. ‘ಬೇಡ ಕಣೋ, ಇದ್ಯಾವ ದೊಡ್ಡ ಕೆಲ್ಸ’ ಅಂದೆ. ‘ಸರಿ, ಹರಿದಿದ್ದಕ್ಕೆ ಸ್ವಲ್ಪ ಬಯ್ಯೋ’ ಅಂದ. ‘ನೀನೇನು ಬೇಕಾಗಿ ಮಾಡಿದ್ಯೇನೋ, ಹೋಗ್ಲಿ ಬಿಡು’ ಅಂದೆ. ‘ಅದರೂ ಒಂದ್ ಚೂರ್ ಬೈದು ಬಿಡೋ, ಸಮಾಧಾನವಾಗುತ್ತೆ’ ಅಂದ… ಇದು ಶಿವಾಜಿ. ಇನ್ನೊಂದ್ಸಾರಿ ಇವನು ಬೆಂಗ್ಳೂರಿಗೆ ಹೊರಟ. ಇವನು ಹೋದ ಮೇಲೆ ನೋಡ್ತೀನಿ, ನಂದು ಎರಡು ಕಾಚಾಗಳು ಕಾಣ್ತಾ ಇಲ್ಲ. ಇರೋದು ಮೂರು! ಇವನು ಎರಡು ತಗೊಂಡ್ ಹೋಗ್ಬಿಟಿದ್ರೆ! ಒಂದು ಕಾಗದ ಬರೆದೆ.
ಆತ್ಮೀಯ ಶಿವಾಜಿ, ನೀನು ಬೆಂಗಳೂರಿಗೆ ಹೋಗುವಾಗ ನನ್ನ ಎರಡು ಕಾಚಾಗಳನ್ನು ತೆಗೆದುಕೊಂಡು ಹೋಗಿದ್ದೀಯೆ, ನೀನು ಅವನ್ನು ಕದ್ದೊಯ್ದಿದ್ದೀಯಾ ಎಂದು ಹೇಳುತ್ತಿಲ್ಲ. ಆಕಸ್ಮಿಕವಾಗಿ ನಿನ್ನ ಬ್ಯಾಗಿನಲ್ಲಿ ಬಂದಿರಬಹುದು. ನೀನು ವಾಪಾಸ್ಸು ಬರುವಾಗ, ಮರೆಯದೆ ನನ್ನ ಎರಡು ಕೌಪೀನಗಳನ್ನು ತರಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.
ಇತಿ,
ನಿನ್ನ ಆತ್ಮೀಯ ಗೆಳೆಯ ವೇಣು,
ಅಂತ ಬರೆದಿದ್ದೆ. ಅದನ್ನು ಅವನು ಅಲ್ಲಿಯ ಸ್ನೇಹಿತರಿಗೆಲ್ಲ ತೋರಿಸಿ, ಮದರಾಸಿಗೆ ಬಂದ ಮೇಲೆ, ರವಿಗೆ, ಸ್ವಾಮಿಗೆ ತೋರಿಸಿ ತಮಾಷೆ ಮಾಡಿದ್ದ.
(ಅಶೋಕ್ ಅವರ ಜನ್ಮನಾಮ ವೇಣುಗೋಪಾಲ)