ಮಂಸೋರೆ ನಿರ್ದೇಶನದ ‘19.20.21’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಂವಿಧಾನದ ಆಶಯವನ್ನು ಜನರಿಗೆ ತಿಳಿಸುವ ಕತೆ. ಕ್ರೈಂ – ಡ್ರಾಮಾ, ಸೋಷಿಯಲ್‌ ಥ್ರಿಲ್ಲರ್‌ ಜಾನರ್‌ ಸಿನಿಮಾ ಎನ್ನುತ್ತಾರವರು. ಚಿತ್ರದಲ್ಲಿ ನಟಿಸಿರುವ ಬಹುಪಾಲು ಕಲಾವಿದರು ರಂಗಭೂಮಿ ಹಿನ್ನೆಲೆಯವರು ಎನ್ನುವುದು ವಿಶೇಷ. ಮಾರ್ಚ್‌ 3ರಂದು ಸಿನಿಮಾ ತೆರೆಕಾಣಲಿದೆ.

“ಪತ್ರಿಕೋದ್ಯಮ ಓದುವ ಬುಡಕಟ್ಟು ಜನಾಂಗದ ಯುವಕ ತನ್ನ ಸಮುದಾಯ ಮತ್ತು ಸಂವಿಧಾನದ ಹಕ್ಕುಗಳಿಗಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಕಥೆಯಿದು. ಇಡೀ ಬುಡಕಟ್ಟು ಸಮುದಾಯದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶಿಸಿದ ಮೊದಲ ವ್ಯಕ್ತಿ ಆತ. ಅಧಿಕಾರಶಾಹಿಗಳ ವಿರುದ್ಧ ಹೋರಾಡುವ ಒಂದು ಸಮುದಾಯದ ಕತೆ” ಎಂದು ತಮ್ಮ ಚಿತ್ರದ ಆಶಯದ ಕುರಿತಾಗಿ ಹೇಳಿದ್ದರು ನಿರ್ದೇಶಕ ಮಂಸೋರೆ. ಇಂದು ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ ಅವರ ಮಾತುಗಳಿಗೆ ಸಾಕ್ಷ್ಯ ನುಡಿಯುತ್ತದೆ. ನಮ್ಮ ಸುತ್ತಲಿನ ಕತೆಗಳನ್ನು ಹೇಳುವ ಚಿತ್ರವಾಗಿ ‘19.20.21’ ಕಾಣಿಸುತ್ತದೆ. ಅಲ್ಲಿ ಕಾಣಿಸುವ ಬಹುತೇಕ ಕಲಾವಿದರು ರಂಗಭೂಮಿ ಹಿನ್ನೆಲೆಯವರಿದ್ದು, ನಿರ್ದೇಶಕರು ಕಟ್ಟಿರುವ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಮಂಸೋರೆಯವರ ಈ ಹಿಂದಿನ ಯಶಸ್ವೀ ‘ಆಕ್ಟ್-1978’ ನಿರ್ಮಿಸಿದ್ದ ದೇವರಾಜ್‌ ಅವರೇ ‘19.20.21’ ನಿರ್ಮಾಪಕರು. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಶೃಂಗ, ಕೃಷ್ಣ ಹೆಬ್ಬಾಳೆ, ಬಾಲಾಜಿ ಮನೋಹರ್, ಎಂ.ಡಿ.ಪಲ್ಲವಿ, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಧಾರವಾಡ, ಯಲ್ಲಾಪುರ, ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ವೀರೇಂದ್ರ ಮಲ್ಲಣ್ಣ ಮತ್ತು ಮಂಸೋರೆ ಚಿತ್ರಕಥೆ, ಅವಿನಾಶ್‌ ಜಿ. ಸಂಭಾಷಣೆ, ಸತ್ಯ ಹೆಗ್ಡೆ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ, ಬಿಂದು ಮಾಲಿನಿ ಮತ್ತು ಬಕ್ಕೇಶ್‌ ರೋಣದ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮಾರ್ಚ್‌ 3ರಂದು ಸಿನಿಮಾ ತೆರೆಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here