ದಾಂಪತ್ಯ, ಲೈಂಗಿಕತೆಯ ವಿಷಯಗಳನ್ನು ದೊಡ್ಡ ಪರದೆ ಮೇಲೆ ಹೇಳುವುದು ಅಷ್ಟು ಸುಲಭವಲ್ಲ. ಒಂಚೂರು ಆಚೀಚೆ ಆದರೂ ಎಡವಟ್ಟು ಖಚಿತ. ಜಗ್ಗೇಶ್ ಅವರಂತಹ ನಟ ಮತ್ತು ಸಮರ್ಪಕ ಸ್ಕ್ರಿಪ್ಟ್ ಮಾಡಿಕೊಂಡಿದ್ದರಿಂದ ಸಿನಿಮಾ ಚೆನ್ನಾಗಿ ಆಗಿದೆ. ನಿರ್ದೇಶಕ ಸಂತೋಷ್ ಇಲ್ಲಿ ಗೆದ್ದಿದ್ದಾರೆ.
ಚಿತ್ರದ ಕಥಾನಾಯಕ ಹಯವದನಿಗೆ ನಲವತ್ತು ವರ್ಷ ಆಗೋಗಿದೆ. ಆದ್ರೆ ಮದುವೆ ಯೋಗ ಕೂಡಿಬಂದಿಲ್ಲ. ತಂದೆಯ ಹೋಟೆಲ್ ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ಹಯವದನನ ಕೆಲಸ. ಹೋಟೆಲ್‌ನಲ್ಲಿ ಕೆಲಸ ಮಾಡೋನು ಅನ್ನೋದರ ಜೊತೆ ಸಂಪ್ರದಾಯ, ಪಂಚಾಂಗ, ನಕ್ಷತ್ರ ಹೊಂದಾಣಿಕೆ ಆಗೋಲ್ಲ ಅನ್ನೋದೂ ಮದುವೆ ಆಗದೇ ಇರೋದಕ್ಕೆ ಕಾರಣ. ಹಯವದನನ ಲೇಟ್ ಮ್ಯಾರೇಜು, ಇದರಿಂದಾಗಿ ಆತ ಅನುಭವಿಸಬೇಕಾದ ವೇದನೆ, ಮುಂದೆ ಮದುವೆ ನಂತರದ ಸಮಸ್ಯೆ, ದಾಂಪತ್ಯ, ಲೈಂಗಿಕತೆ ಕುರಿತೂ ಸಿನಿಮಾ ಮಾತನಾಡುತ್ತದೆ.
ನಿರ್ದೇಶಕ ಸಂತೋಷ್ ಆನಂದರಾಮ್ ಈ ಹಿಂದೆ ಮಾಸ್ ಸಿನಿಮಾಗಳನ್ನು ಮಾಡಿದವರು. ಸ್ಟಾರ್ ಹೀರೋಗಳ ನಿರ್ದೇಶಕ ಇಲ್ಲಿ ಕಂಟೆಂಟ್ ಸಿನಿಮಾ ಮಾಡಿರೋದು ವಿಶೇಷ. ಅಷ್ಟೇ ಅಲ್ಲ ತಾವು ಕಂಟೆಂಟ್ ಸಿನಿಮಾಗಳನ್ನೂ ಕನ್ವಿನ್ಸಿಂಗ್ ಆಗಿ ನಿರೂಪಿಸಬಲ್ಲೆ ಎನ್ನುವುದನ್ನು ಅವರಿಲ್ಲಿ ಸಾಬೀತು ಮಾಡಿದ್ದಾರೆ. ದಾಂಪತ್ಯ, ಲೈಂಗಿಕತೆಯ ವಿಷಯಗಳನ್ನು ದೊಡ್ಡ ಪರದೆ ಮೇಲೆ ಹೇಳುವುದು ಅಷ್ಟು ಸುಲಭವಲ್ಲ. ಒಂಚೂರು ಆಚೀಚೆ ಆದರೂ ಎಡವಟ್ಟು ಖಚಿತ. ಜಗ್ಗೇಶ್ ಅವರಂತಹ ನಟ ಮತ್ತು ಸಮರ್ಪಕ ಸ್ಕ್ರಿಪ್ಟ್ ಮಾಡಿಕೊಂಡಿದ್ದರಿಂದ ಸಿನಿಮಾ ಚೆನ್ನಾಗಿ ಆಗಿದೆ. ನಿರ್ದೇಶಕ ಸಂತೋಷ್ ಇಲ್ಲಿ ಗೆದ್ದಿದ್ದಾರೆ.
ಚಿತ್ರದ ಮೊದಲಾರ್ಧ ಪೂರಾ ಹಾಸ್ಯಕ್ಕೇ ಮೀಸಲು. ಅದರಲ್ಲೂ ಜಗ್ಗೇಶ್ ಮ್ಯಾನರಿಸಂ, ಟೈಮಿಂಗ್ ಅನ್ನು ನಿರ್ದೇಶಕರು ಸರಿಯಾಗಿಯೇ ಬಳಕೆ ಮಾಡಿಕೊಂಡಿದ್ದಾರೆ. ಅಶ್ಲೀಲವಲ್ಲದ ಪೋಲಿತನವೂ ಅಲ್ಲಲ್ಲಿ ಇದೆ. ಇಂಟರ್‌ವೆಲ್ ನಂತರ ಹಾಸ್ಯದ ಜೊತೆ ದಾಂಪತ್ಯಗೀತೆ ಶುರುವಾಗುತ್ತಿದ್ದಂತೆ ಸಿನಿಮಾ ಕೊಂಚ ಗಂಭೀರ ಹಾದಿಗೆ ಹೊರಳುತ್ತದೆ. ಬಾಡಿಗೆ ತಾಯ್ತನ ಮತ್ತು ಸಂಪ್ರದಾಯದ ತಿಕ್ಕಾಟ, ಅನಾಥ ಮಕ್ಕಳೆಡೆಗಿನ ಹಯವದನ ದಂಪತಿಯ ವಾತ್ಸಲ್ಯದ ಚಿತ್ರಣವಿದೆ. ರಾಜಕೀಯ ಲಾಭಕ್ಕಾಗಿ ಅನಾಥ ಮಕ್ಕಳ ಬದುಕಿನ ಜೊತೆ ಚೆಲ್ಲಾಟವಾಡುವ ದುಷ್ಟತನದ ಒಂದು ಟ್ರ್ಯಾಕ್ ಅನ್ನು ತಂದಿದ್ದಾರೆ ನಿರ್ದೇಶಕರು. ಮೂಲ ಕತೆಯೊಂದಿಗೆ ಬೆಸೆದುಕೊಂಡೇ ಇರುವ ಈ ಟ್ರ್ಯಾಕ್‌ನೊಂದಿಗೆ ಚಿತ್ರಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ. ಅಫ್‌ಕೋರ್ಸ್ ಒಂದೊಳ್ಳೆಯ ಸಂದೇಶದೊಂದಿಗೆ..
ಇನ್ನು ಈ ಸಿನಿಮಾದ ಜೀವಾಳ ಎಂದು ಹೇಳುವುದಾದರೆ ಅದು ನಟ ಜಗ್ಗೇಶ್. ಬಹುಶಃ ಅವರಲ್ಲದೆ ಈ ಪಾತ್ರವನ್ನು ಮತ್ತಾರೂ ನಿರ್ವಹಿಸಲು ಸಾಧ್ಯವಾಗದೇನೋ.. ನಿಸ್ಸಂಶಯವಾಗಿ ಇದು ಅವರ ವೃತ್ತಿಬದುಕಿನಲ್ಲಿ ದಾಖಲಾಗಬಹುದಾದ ಪ್ರಮುಖ ಪಾತ್ರ. ಮೊದಲಾರ್ಧದಲ್ಲಿ ಮದುವೆ – ಸಂಗಾತಿಗೆ ಹಾತೊರೆಯುವ ‘ಎಲಿಜಿಬಲ್ ಬ್ಯಾಚುಲರ್’ ಆಗಿ, ದ್ವಿತಿಯಾರ್ಧದಲ್ಲಿ ಮದುವೆ – ದಾಂಪತ್ಯ – ತಂದೆಯ ಸ್ಥಾನಕ್ಕಾಗಿ ಮಿಡಿಯುವ ಗೃಹಸ್ಥನಾಗಿ ಅವರ ಟ್ರಾನ್ಸ್‌ಫಾರ್ಮೇಷನ್ ಸೂಪರ್. ಯೋಗಾಭ್ಯಾಸ ತನ್ನಿಂದಾಗದು ಎಂದು ಗೊಣಗಿಕೊಂಡು ತೂಗುಸೇತುವೆ ಮೇಲೆ ಕಾಲು ಬಿಸಾಕಿಕೊಂಡು ನಡೆದುಬರುವ ಶೈಲಿ ಜಗ್ಗೇಶ್ ಅವರಿಗಲ್ಲದೆ ಮತ್ತಾರಿಗೂ ಸಾಧ್ಯವಾಗದು!
ವೈಜಯಂತಿಯಾಗಿ ನಟಿ ಶ್ವೇತಾ ಶ್ರೀವಾತ್ಸವ್ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ನಾಯಕನಟಿಯಾಗಿ ಅವರಿಗಿದು ಒಳ್ಳೆಯ ಕಮ್‌ಬ್ಯಾಕ್. ದತ್ತಣ್ಣ, ಮಿತ್ರ, ರವಿಶಂಕರ್ ಗೌಡ, ಅಚ್ಯುತ್ ಕುಮಾರ್ ಅವರ ಪಾತ್ರಗಳಿಗೂ ಸ್ಕೋಪ್ ಇದೆ. ಮೂಗನ ಪಾತ್ರದಲ್ಲಿ ನಟ ಮಿತ್ರ ಹೆಚ್ಚು ಸ್ಕೋರ್ ಮಾಡುತ್ತಾರೆ. ಅರ್ಥಗರ್ಭಿತ ಸಾಹಿತ್ಯದ ಎರಡು ಹಾಡುಗಳಿಗೆ ಅಜನೀಶ್ ಲೋಕನಾಥ್ ಅಷ್ಟೇ ಮಧುರವಾದ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂಡುವಳ್ಳಿ ಅವರ ಕ್ಯಾಮರಾ ಕಣ್ಗಳಲ್ಲಿ ಮಳೆ, ಮಲೆನಾಡಿನ ದೃಶ್ಯಗಳು ಚಿತ್ರವನ್ನು ಚೆಂದಗಾಣಿಸಿವೆ.