ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ‘ಲಹರಿ’ ಸಂಸ್ಥೆ ಆರಂಭವಾಗಿ ಈ ಹೊತ್ತಿಗೆ ನಲವತ್ತೆಂಟು ವರ್ಷ. ‘ಲಹರಿ ಮ್ಯೂಸಿಕ್’ ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿ ಗ್ರ್ಯಾಮಿ ಗೌರವ ಸಂದಿದೆ.

”ಕೇವಲ ಐನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಅವರು ಈ ಸಂಸ್ಥೆ ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ನಿಮ್ಮೆಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ ‘ಡಿವೈನ್ ಟೈಡ್ಸ್’ ಆಲ್ಬಂ ಸಂಗೀತಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ವೀಸಾ ಸಿಗದ ಕಾರಣ ಈ ಪ್ರಶಸ್ತಿ ಸಮಾರಂಭಕ್ಕೆ ನಾನು ಹೋಗಿರಲಿಲ್ಲ. ನನ್ನ ಅಣ್ಣನ ಮಗ ಚಂದ್ರು , ರಿಕ್ಕಿಕೇಜ್ ಅವರ ಜೊತೆಗೆ ಹೋಗಿದ್ದರು. ಸದ್ಯದಲ್ಲೇ ರಿಕ್ಕಿಕೇಜ್ ಅವರ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ” ಎಂದರು ಲಹರಿ ವೇಲು. ‘ಲಹರಿ’ಗೆ 48 ವರ್ಷ ಪೂರೈಸಿರುವುದು ಹಾಗೂ ರಿಕ್ಕಿ ಕೇಜ್‌ ಅವರಿಗೆ ಗ್ರ್ಯಾಮಿ ಗೌರವ ಸಂದ ಖುಷಿ ಹಂಚಿಕೊಳ್ಳಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂಗೀತ ಸಂಯೋಜಕ ರಿಕ್ಕಿ ಕೇಜ್‌ ಮಾತನಾಡಿ, “ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಕೋವಿಡ್‌ ಪ್ಯಾಂಡಮಿಕ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್‌ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ‌ಅರವತ್ತಕ್ಕೂ ಅಧಿಕರು ಭಾರತದವರು. ಮಿಕ್ಕವರು ಹೊರ ದೇಶದವರು. ಇಲ್ಲಿನ ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂನಲ್ಲಿದ್ದಾರೆ” ಎಂದರು. ಸಿನಿಮಾ ಸಂಗೀತಕ್ಕೆ ಅವರು ಹಳಬರೆ. ‘ಆಕ್ಸಿಡೆಂಟ್’, ‘ವೆಂಕಟ ಇನ್ ಸಂಕಟ’ ಹಾಗೂ ‘ಕ್ರೇಜಿ ಕುಟುಂಬ’ ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಮೂರು ಸಿನಿಮಾಗಳ ನಾಯಕ ರಮೇಶ್ ಅರವಿಂದ್. ಸಿನಿಮಾಗಳಿಗಿಂತ ವಿಭಿನ್ನ ಆಲ್ಬಂಗಳನ್ನು ರೂಪಿಸುವುದು ತಮಗೆ ಹೆಚ್ಚು ಖುಷಿ ಎನ್ನುತ್ತಾರೆ ರಿಕ್ಕಿ. “ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ರಿಕ್ಕಿಕೇಜ್ ನಮ್ಮ ಸಂಸ್ಥೆಯ ಕಾರ್ಯಗಳಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆ. ಅವರು ನಮ್ಮೊಂದಿಗೆ ಯಾವುದೇ ಅಗ್ರಿಮೆಂಟ್ ಸಹ ಮಾಡಿಕೊಂಡಿಲ್ಲ. ಇದೇ ಅವರ ಪ್ರೀತಿಗೆ ಸಾಕ್ಷಿ” ಎಂದರು ಲಹರಿ ಸಂಸ್ಥೆಯ ಚಂದ್ರು. ರಿಕ್ಕಿ ಕೇಜ್ ಅವರೊಂದಿಗೆ ಹದಿನೈದು ವರ್ಷಗಳಿಂದ ಜೊತೆಗಿರುವ ವಾಡಿಯಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

LEAVE A REPLY

Connect with

Please enter your comment!
Please enter your name here