ಎಲ್ಲಾ ಐತಿಹಾಸಿಕ ಚಿತ್ರಗಳಂತೆ ರಾಜಕಾರಣ, ತಂತ್ರಗಾರಿಕೆ, ಯುದ್ದ, ಸೇಡು, ಪಿತೂರಿ ಇವೆಲ್ಲವೂ ಚಿತ್ರದ ಅವಿಭಾಜ್ಯ ಅಂಗವಾಗಿದ್ದರೂ PS2 ಹೆಚ್ಚು ಭಾವನಾತ್ಮಕವಾಗಿದೆ. ಎರಡನೇ ಭಾಗದಲ್ಲೂ ಕತೆಗೇ ಪ್ರಮುಖ ಸ್ಥಾನವಿದ್ದರೂ, ತಾಂತ್ರಿಕತೆಯ ವಿಷಯದಲ್ಲೂ ಚಿತ್ರ ಗೆದ್ದಿದೆ. ಹಿತಮಿತವಾಗಿ, ಬೇಕೇ ಬೇಕಾದಲ್ಲಿ ಮಾತ್ರ ವಿಎಫ್ಎಕ್ಸ್ ಬಳಸಿರುವುದು ಉತ್ತಮ ಫಲಿತಾಂಶ ನೀಡಿದೆ.

ಭಾರತೀಯ ಚಿತ್ರರಂಗದಲ್ಲಿ ಸೀಕ್ವೆಲ್‌ಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಆದರೆ, ಚಿತ್ರದ ಎರಡನೇ ಭಾಗದ ಬಿಡುಗಡೆಗೆ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುವುದು ಅಷ್ಟೇ ಸಾಮಾನ್ಯವಾಗಿದೆ. ಆದರೆ, ಪೊನ್ನಿಯನ್ ಸೆಲ್ವನ್ ಚಿತ್ರ ಮಾತ್ರ ಪ್ರೇಕ್ಷಕರನ್ನು ಹೆಚ್ಚು ಕಾಯಿಸಿಲ್ಲ. ಆರು ತಿಂಗಳಲ್ಲೇ ಎರಡನೇ ಭಾಗವನ್ನು ತೆರೆಗೆ ತರುವ ಮೂಲಕ, ಮೊದಲ ಭಾಗಕ್ಕೆ ಸಿಕ್ಕಿದ್ದ ಉತ್ತಮ ಪ್ರತಿಕ್ರಿಯೆಯ ಬಿಸಿ ಆರದಂತೆ ನಿರ್ದೇಶಕ ಮಣಿರತ್ನಂ ನೋಡಿಕೊಂಡಿದ್ದಾರೆ.

PS2 ಚಿತ್ರ ಆರಂಭವಾಗುವುದು ಎರಡು ಎಳೆಯ ಹೃದಯಗಳ, ಒಂದು ಕೋಮಲ ಪ್ರೇಮಕತೆಯ ಮೂಲಕ. ಇದೇ ಕತೆ ಮುಂದೆ ಚೋಳ ಸಾಮ್ರಾಜ್ಯದ ದಿಕ್ಕನ್ನು ಬದಲಿಸುವುದು ವಿಶೇಷ. PS1ನಲ್ಲಿ ಚೋಳರ ರಾಜಕುಮಾರ, ಮುಂದಿನ ಅರಸು ಅದಿತ ಕರಿಕಾಲನ್ (ವಿಕ್ರಂ) ಮತ್ತು ನಂದಿನಿ (ಐಶ್ವರ್ಯ ರೈ) ನಡುವಿನ ಪ್ರೇಮ ಸಂಬಂಧದ ಬಗ್ಗೆ ಸುಳಿವು ನೀಡಲಾಗಿತ್ತು. ಅದರ ಮುಂದುವರಿಕೆಯಾಗಿ ಅವರ ನಡುವಿನ ಈ ಹದಿಹರೆಯದ ಪ್ರೇಮ ಕತೆಯ ಫ್ಲಾಷ್ ಬ್ಯಾಕ್ ಅನ್ನು ಆರಂಭದಲ್ಲೇ ನೀಡಲಾಗಿದೆ. ನಂತರ ಸಣ್ಣ ರಿಕ್ಯಾಪ್ ಕೊಟ್ಟು, ಮೊದಲ ಭಾಗದಲ್ಲಿ ಕತೆಯನ್ನು ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ನೇರವಾಗಿ ಮುಂದುವರಿಸಲಾಗಿದೆ.

ಮೊದಲ ಭಾಗದಲ್ಲಿ ಹಿನ್ನಲೆ, ಪಾತ್ರವರ್ಗ ಮುಂತಾದವುಗಳ ಪರಿಚಯಕ್ಕೆ ಕೊಂಚ ಸಮಯ ನೀಡುವುದು ಅನಿವಾರ್ಯವಾಗಿತ್ತು. ಹೀಗಾಗಿ, ಸಿನಿಮಾ ದ್ವಿತೀಯಾರ್ಧದಲ್ಲಿ ವೇಗ ಪಡೆದುಕೊಂಡಿತ್ತು. ಅದೇ ವೇಗದಲ್ಲಿ ಎರಡನೆಯ ಭಾಗವು ಶುರುವಾಗುತ್ತದೆ. ಹಡಗು ಅಪಘಾತದಿಂದಾಗಿ ಸಮುದ್ರದಲ್ಲಿ ಮುಳುಗಿದ್ದ ಅರುಳ್ಮೊಳಿ ವರ್ಮನ್ (ಜಯಂ ರವಿ) ಸ್ಥಿತಿ ಏನಾಯಿತು? ಸುಂದರ ಚೋಳ (ಪ್ರಕಾಶ್ ರೈ)ನನ್ನು ಮತ್ತು ಆತನ ಮಕ್ಕಳನ್ನು ಸಿಂಹಾಸನದಿಂದ ದೂರ ಇಡುವ ಅಸ್ಥಾನಿಕರ ಸಂಚು ಏನಾಯಿತು? ಚೋಳರ ವಿರುದ್ದ ಹಗೆ ತೊಟ್ಟು ಪ್ರತೀಕಾರಕ್ಕಾಗಿ ಕಾಯುತ್ತಿರುವ ಪಾಂಡ್ಯನರು ಏನು ಮಾಡಿದರು? ಇವೆಲ್ಲಾ ಪ್ರಶ್ನೆಗಳಿಗೆ ಈ ಭಾಗದಲ್ಲಿ ಉತ್ತರ ಸಿಗುತ್ತದೆ. ಅಷ್ಟೇ ಅಲ್ಲದೆ, ನಂದಿನಿಯ ಜನ್ಮ ರಹಸ್ಯ, ಸುಂದರ ಚೋಳ ಮುಚ್ಚಿಟ್ಟಿರುವ ಆತನ ಪ್ರೇಮ ಪ್ರಕರಣ, ಐಶ್ವರ್ಯ ರೈ ದ್ವಿಪಾತ್ರದಲ್ಲಿ ನಟಿಸಿರುವ ನಂದಿನಿಯ ತಾಯಿಯ ಕತೆ ಹೀಗೆ ಇನ್ನಷ್ಟು, ಮತ್ತಷ್ಟು ನಿಗೂಢಗಳನ್ನು ಈ ಎರಡನೇ ಭಾಗ ಬಿಡಿಸಿ ನಮ್ಮ ಮುಂದಿಡುತ್ತದೆ.

ಎಲ್ಲಾ ಐತಿಹಾಸಿಕ ಚಿತ್ರಗಳಂತೆ ರಾಜಕಾರಣ, ತಂತ್ರಗಾರಿಕೆ, ಯುದ್ದ, ಸೇಡು, ಪಿತೂರಿ ಇವೆಲ್ಲವೂ ಚಿತ್ರದ ಅವಿಭಾಜ್ಯ ಅಂಗವಾಗಿದ್ದರೂ PS2 ಹೆಚ್ಚು ಭಾವನಾತ್ಮಕವಾಗಿದೆ. PS2 ಚಿತ್ರದ ಬಹುತೇಕ ಭಾಗವನ್ನು ಆವರಿಸಿರುವುದು ಮತ್ತು ನಮ್ಮ ನೆನಪಿನಲ್ಲಿ ಹೆಚ್ಚು ಉಳಿಯುವುದು ಕರಿಕಾಲನ್ ಮತ್ತು ನಂದಿನಿ ನಡುವಣ ಭೇಟಿ. ಇಂತಹ ಒಂದು ಅಭೂತಪೂರ್ವ ಭೇಟಿಗೆ ಪ್ರೇಕ್ಷಕರನ್ನು ಸಜ್ಜಾಗಿಸುವ ರೀತಿಯಲ್ಲೇ ಮೊದಲಾರ್ಧವನ್ನು ಹೆಣೆಯಲಾಗಿದೆ. ಒಂದೊಮ್ಮೆ ಅತಿಯಾಗಿ ಪ್ರೀತಿಸಿದ್ದ, ನಂತರ ಬದ್ಧ ದ್ವೇಷಿಗಳಾಗಿದ್ದವರಿಬ್ಬರು, ದಶಕಗಳ ನಂತರ ಒಂದೆಡೆ ಸಿಕ್ಕಾಗ ಏನಾಗುತ್ತದೆಂಬುದನ್ನು ಕುತೂಹಲದಿಂದ ಪ್ರೇಕ್ಷಕರೂ ಕಾಯತೊಡಗುತ್ತಾರೆ. ಅದೇ ಚಿತ್ರದ ಪ್ರಮುಖ ಘಟ್ಟವಾಗುವುದರಿಂದ ಆಗುವ ಒಂದು ತೊಂದರೆ ಎಂದರೆ, ಅವರ ಭೇಟಿಯ ಸನ್ನಿವೇಶದೊಂದಿಗೆ ಚಿತ್ರ ಹೈ ಪಾಯಿಂಟ್ ತಲುಪುತ್ತದೆ. ಅಲ್ಲಿಗೇ ಸಿನಿಮಾ ಮುಗಿದ ಭಾವ ಮೂಡಿಬಿಡುತ್ತದೆ.

ನಂತರ ನಡೆಯುವ ಕತೆ, ಸಾಕಷ್ಚು ಪ್ರಮುಖ ಸನ್ನಿವೇಶಗಳನ್ನು ಒಳಗೊಂಡಿದ್ದರೂ, ಅವೆಲ್ಲಾ ಸೇರ್ಪಡೆ ಎನಿಸಿಬಿಡುತ್ತದೆ. ಇದರ ಅರಿವಿದ್ದೇ ಮಣಿರತ್ನಂ ಕೊನೆಯಲ್ಲಿ ಪ್ರಮುಖ ಯುದ್ಧದ ಸನ್ನಿವೇಶಗಳನ್ನು ತಂದಿದ್ದಾರೆ ಮತ್ತು ಅದನ್ನು ದೊಡ್ಡ ಪ್ರಮಾಣದಲ್ಲಿಯೂ ಚಿತ್ರೀಕರಿಸಿ ಕ್ಲೈಮ್ಯಾಕ್ಸ್ ಗೆ ಬೇಕಾದ ರೋಚಕತೆಯನ್ನು ನೀಡಲು ಯತ್ನಿಸಿದ್ದಾರೆ. ಜೊತೆಗೆ, ನಂತರದ ಘಟನೆಗಳನ್ನು ವೇಗವಾಗಿ ನಿರೂಪಿಸಿ ಚಿತ್ರ ಉದ್ದವಾಗದಂತೆಯೂ ತಡೆದಿದ್ದಾರೆ. ಆದರೂ, ಕ್ಲೈಮ್ಯಾಕ್ಸ್ ಪರಿಪೂರ್ಣವೆನಿಸಿದರೂ, ಕೊಂಚ ಸಪ್ಪೆಯಾಗಿ ಬಿಡುತ್ತದೆ.

ಮೊದಲ ಭಾಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ವಿಕ್ರಂ ಮತ್ತು ಐಶ್ವರ್ಯ ರೈ ಎರಡನೇ ಭಾಗದಲ್ಲಿ ತೆರೆಯನ್ನು ಆವರಿಸುತ್ತಾರೆ. ಜೊತೆಗೆ, ಅತ್ಯುತ್ತಮ ನಟನೆಯ ಮೂಲಕ ಚಿತ್ರದಲ್ಲಿರುವ ಭಾವೋತ್ಕರ್ಷದ ಸಂದರ್ಭಗಳನ್ನು ಸ್ಮರಣೀಯವಾಗಿಸಿದ್ದಾರೆ. ಅರಮನೆಯೊಳಗೆ ಅವರಿಬ್ಬರ ಭೇಟಿಯ ಸನ್ನಿವೇಶವನ್ನು ತುಂಬಾ ಕಾವ್ಯಾತ್ಮಕವಾಗಿ ಮತ್ತು ಸುಂದರವಾಗಿ ತೆರೆಯ ಮೇಲೆ ತರಲಾಗಿದೆ. ಸಾಮಾನ್ಯವಾಗಿ ರೋಮ್ಯಾಂಟಿಕ್ ಸೀನ್ ಗಳಲ್ಲಿ ಮಣಿರತ್ನಂ ಸಾಧಿಸುವ ಜಾದು ಈ ದೃಶ್ಯಗಳಲ್ಲಿ ಕಂಡು ಬರುತ್ತದೆ. ಅದರಲ್ಲೂ ಐಶ್ವರ್ಯ ರೈ ಇದ್ದಾಗ ಮಣಿರತ್ನಂ ತೆರೆಯ ಮೇಲೆ ಕಾವ್ಯ ಬರೆಯುವುದು ಹೊಸದೇನಲ್ಲ. ಇನ್ನು, ಕಾರ್ತಿ ಮತ್ತು ತ್ರಿಷಾ ನಡುವಿನ ಪ್ರೇಮ ದೃಶ್ಯಗಳು ಇದಕ್ಕೆ ವಿರುದ್ಧವಾಗಿವೆ. ಯಾವುದೇ ಮಾತು, ಅಧಿಕ ಭಾವೋತ್ಕರ್ಷಗಳಿಲ್ಲದೆ, ಸೂಕ್ಷ್ಮವಾಗಿ, ಇದ್ದೂ ಇಲ್ಲದಂತೆ ಮೂಡಿಬಂದಿವೆ. ಆದರೆ, ಅಷ್ಟೇ ಮುದ ನೀಡುವಂತಿದೆ.

ಅರುಳ್ಮೊಳಿಯ ಪಾತ್ರ ನಿರೂಪಣೆ ತುಂಬಾ ಪ್ರೌಢವಾಗಿದೆ. ಮೊದಲ ಭಾಗದಲ್ಲೂ ಅರುಳ್ಮೊಳಿಯದ್ದು ಹೆಚ್ಚು ತೂಕವಾದ, ಗಂಭೀರವಾದ, ಸಮಭಾವದ ವ್ಯಕ್ತಿತ್ವವಾದರೂ, ಎರಡನೇ ಭಾಗದಲ್ಲಿ ಆ ಗುಣಗಳು ಮತ್ತಷ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಅನಗತ್ಯ ರಾಗ ದ್ವೇಷಗಳಿಗೆ ಒಳಗಾಗದೆ, ಒಬ್ಬ ಅತ್ಯುತ್ತಮ ನಾಯಕನಿಗಿರಬೇಕಾದ ಗುಣಗಳೊಂದಿಗೆ ಅರುಳ್ಮೊಳಿಯ ಪಾತ್ರ ಗಮನ ಸೆಳೆಯುತ್ತದೆ. ಮತ್ತು ಇವು ಯಾವುವೂ ರಾತ್ರೋ ರಾತ್ರಿ ಹುಟ್ಟಿಕೊಂಡ ಗುಣಗಳಂತೆ ಕಾಣದೆ, ಪಾತ್ರದ ನಿರಂತರ ಬೆಳವಣಿಗೆಯಂತೆ ಭಾಸವಾಗಿ, ಭಾರತ ಕಂಡ ಒಬ್ಬ ದೊಡ್ಡ ಅರಸು ನಮ್ಮ ಕಣ್ಣೆದುರಿಗೆ ಸೃಷ್ಚಿಯಾದಂತೆ ಅನಿಸುತ್ತದೆ. ಜಯರಾಂ ರವಿ ಶಾಂತ, ಮಂದಹಾಸ ಭರಿತ ಮುಖಭಾವದೊಂದಿಗೆ ಈ ಪಾತ್ರಕ್ಕೆ ತಕ್ಕದಾಗಿ ನಟಿಸಿದ್ದಾರೆ.

ಎರಡನೇ ಭಾಗದಲ್ಲೂ ಕತೆಗೇ ಪ್ರಮುಖ ಸ್ಥಾನವಿದ್ದರೂ, ತಾಂತ್ರಿಕತೆಯ ವಿಷಯದಲ್ಲೂ ಚಿತ್ರ ಗೆದ್ದಿದೆ. ಹಿತಮಿತವಾಗಿ, ಬೇಕೇ ಬೇಕಾದಲ್ಲಿ ಮಾತ್ರ ವಿಎಫ್ಎಕ್ಸ್ ಬಳಸಿರುವುದು ಉತ್ತಮ ಫಲಿತಾಂಶ ನೀಡಿದೆ. ಇಂತಹ ಎಪಿಕ್ ಚಿತ್ರಗಳು ನೀಡುವ ಮಾಸ್ ಅಪೀಲ್ ಇಲ್ಲದೆ ಇದ್ದರೂ, ಹೆಚ್ಚು ಸೂಕ್ಷ್ಮವಾದ ಕುಸುರಿ ಕೆಲಸದಂತಹ ಚಿತ್ರ ಮೂಡ್ ಬಂದಿದೆ. ರೆಹಮಾನ್ ಬಿಜಿಎಂ ಕೆಲವು ಕಡೆ ಪೂರಕವಾಗಿದೆ, ಆದರೆ, ಮತ್ತಷ್ಚು ಕಡೆ ಹಳೆಯದೆನಿಸಿ, ಧಾರಾವಾಹಿಯಯ ಭಾವ ಮೂಡಿಸುತ್ತದೆ. ಆದರೆ, ಹಿನ್ನೆಲೆ ಸಂಗೀತ ಎಲ್ಲಿಯೂ ದೃಶ್ಯಗಳನ್ನು ಮೀರಿ ವಿಜ್ರಂಭಿಸುವುದಿಲ್ಲ. ಹಾಡುಗಳು ಚಿತ್ರದ ಜೊತೆ ಚೆನ್ನಾಗಿ ಮಿಳಿತವಾಗಿದ್ದು, ಯಾವುದನ್ನೂ ಅನಗತ್ಯವಾಗಿ ತುರುಕಿದಂತೆ ಅನಿಸುವುದಿಲ್ಲ ಮತ್ತು ಮತ್ತೆ ಮತ್ತೆ ಕೇಳುವಂತಿವೆ.

ರವಿವರ್ಮನ್ ಸಿನಿಮಟೋಗ್ರಫಿ ಈ ಚಿತ್ರದ ಅತೀ ದೊಡ್ಡ ಹೈಲೈಟ್. ಅವರು ನೆರಳು ಮತ್ತು ಬೆಳಕನ್ನು ಬಳಸಿಕೊಂಡಿರುವ ರೀತಿ ಅದ್ಭುತವಾಗಿದೆ. ರಾತ್ರಿಯ ಒಳಾಂಗಣದ ದೃಶ್ಯಗಳ ವರ್ಣ ಸಂಯೋಜನೆಯನ್ನು, ಬೆಳಕನ್ನು ಬಳಸಿರುವ ರೀತಿಯಲ್ಲಿರುವ ಕಲಾತ್ಮಕತೆಯನ್ನು ನೋಡಿಯೇ ಆನಂದಿಸಬೇಕು. 10ನೇ ಶತಮಾನವನ್ನು ರಮ್ಯವಾಗಿ ಮರುಸೃಷ್ಟಿಸಿರುವ ಕಲಾ ನಿರ್ದೇಶಕರ ಕೈಚಳಕವೂ ಶ್ಲಾಘನೀಯ.

ಪೊನ್ನಿಯನ್ ಸೆಲ್ವನ್ ಯೋಜನೆ ಆರಂಭವಾದಾಗ ಇದ್ದದ್ದು ಒಂದೇ ಚಿತ್ರದ ಯೋಚನೆಯಂತೆ. ಆದರೆ, ಈ ಮಹಾ ಕಾದಂಬರಿಯನ್ನು ಒಂದು ಚಿತ್ರಕ್ಕೆ ಇಳಿಸುವುದು ಕಷ್ಚವಿತ್ತು ಮತ್ತು ಅದು ಕತೆಗೆ ಮಾಡಿದ ಅನ್ಯಾಯವಾಗಿರುತ್ತಿತ್ತು ಎಂಬುದನ್ನು ಎರಡನೇ ಭಾಗ ನೋಡಿದಾಗ ಅರಿವಾಗುತ್ತದೆ. ಎರಡೂ ಚಿತ್ರಗಳನ್ನು ಸೇರಿಸಿದರೆ ಚಿತ್ರದ ಉದ್ದ ಹತ್ತಿರ ಹತ್ತಿರ ಆರು ಗಂಟೆಯಾಗುತ್ತದೆ. ಆದರೂ, ಸಿನಿಮಾದ ಗತಿ ವೇಗವಾಗಿಯೇ ಇದೆ. ಮೊದಲ ಭಾಗದಲ್ಲಿ PS ಜಗತ್ತಿನ ಪರಿಚಯ ಪ್ರೇಕ್ಷಕರಿಗೆ ಆಗಿರುವ ಕಾರಣ ಪಾತ್ರಗಳು ಮತ್ತು ಅವುಗಳ ನಡುವಣ ಸಂಬಂಧಗಳು ಹೆಚ್ಚು ಜಟಿಲವೆನಿಸದೆ, ಎರಡನೇ ಭಾಗದಲ್ಲಿ ಕತೆ ಸುಲಭವಾಗಿ ಅರ್ಥವಾಗುತ್ತದೆ.

ಮಧ್ಯಕಾಲೀನ ಭಾರತದ ಬಗ್ಗೆ ನಮ್ಮಲ್ಲಿ ಸಿನಿಮಾಗಳು ತೀರಾ ಕಡಿಮೆ. ಅದರಲ್ಲೂ ಮಧ್ಯಕಾಲದ ದಕ್ಷಿಣ ಭಾರತದ ಬಗ್ಗೆಯಂತೂ ಇನ್ನೂ ಕಡಿಮೆ. ಈ ಚಿತ್ರದಲ್ಲಿ ಚೋಳ, ಪಾಂಡ್ಯ, ರಾಷ್ಚ್ರಕೂಟ, ಪಲ್ಲವ ಮುಂತಾದ ಸಾಮ್ರಾಜ್ಯಗಳ ಹೆಸರು ಕೇಳುವಾಗ ಇತಿಹಾಸದ ಪುಸ್ತಕದಲ್ಲಿ ಓದಿದ ಹೆಸರುಗಳು ನೆನಪಾಗದೇ ಇರದು. ಭಾರತದ ಮದ್ಯಕಾಲೀನ ಕಾಲಘಟ್ಟದ ಬಗೆಗಿನ ಮತ್ತಷ್ಚು ಚಿತ್ರಗಳಿಗೆ ಪೊನ್ನಿಯನ್ ಸೆಲ್ವನ್ ಸ್ಪೂರ್ತಿಯಾದರೆ ಒಳ್ಳೆಯದೇ.

LEAVE A REPLY

Connect with

Please enter your comment!
Please enter your name here