‘ವರ ಪಧಾರವೋ ಸಾವಧಾನ್’ ಗುಜರಾತಿ ಚಿತ್ರವನ್ನು ‘ರಾಯರು ಬಂದರು ಮಾವನ ಮನೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ತರುತ್ತಿದ್ದಾರೆ ನಿರ್ಮಾಪಕ ಜಾಕ್ ಮಂಜು. ವಿಪುಲ್ ಶರ್ಮಾ ನಿರ್ದೇಶನದ ಸಿನಿಮಾ ಜುಲೈ 7ರಂದು ತೆರೆಕಾಣಲಿದೆ.
ದಕ್ಷಿಣ ಭಾರತದ ಸ್ಟಾರ್ ಹೀರೋಗಳ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ತೆರೆಗೆ ತರುವುತ್ತಿರುವುದು ಈಗ ಹಳೆಯ ವಿದ್ಯಮಾನ. ಇದೀಗ ಮೊದಲ ಬಾರಿಗೆ ಗುಜರಾತಿ ಚಿತ್ರವೊಂದು ಕನ್ನಡದಲ್ಲಿ ತೆರೆಕಾಣಲಿದೆ. ವಿಪುಲ್ ಶರ್ಮಾ ನಿರ್ದೇಶನ ‘ವರ ಪಧಾರವೋ ಸಾವಧಾನ್’ ಗುಜರಾತಿ ಸಿನಿಮಾ ‘ರಾಯರು ಬಂದರು ಮಾವನ ಮನೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಬರುತ್ತಿದೆ. ನಿರ್ಮಾಪಕ ಜಾಕ್ ಮಂಜು ತಮ್ಮ ಶಾಲಿನಿ ಆರ್ಟ್ಸ್ ಬ್ಯಾನರ್‌ನಡಿ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಜುಲೈ 7ಕ್ಕೆ ಸಿನಿಮಾ ತೆರೆಕಾಣಲಿದೆ.
ವಿಪುಲ್ ಶರ್ಮಾ ನಿರ್ದೇಶನದಲ್ಲಿ ತೆರೆಕಂಡ ‘ರತ್ನಪುರ’, ‘ಜೀತಿ ಲೇ ಜಿಂದಗಿ’ ಗುಜರಾತಿ ಸಿನಿಮಾಗಳು ಯಶಸ್ಸು ಕಂಡಿದ್ದವು. ಅವರ ಹೊಸ ಸಿನಿಮಾ ಕೂಡ ಕಂಟೆಂಟ್ ಮತ್ತು ನಿರೂಪಣಾ ದೃಷ್ಟಿಯಿಂದ ಭಿನ್ನವಾಗಿದೆ . ಶೈಲೇಶ್ ಧಮೇಲಿಯಾ, ಅನಿಲ್ ಸಾಂಘವಿ, ಭರತ್ ಮಿಸ್ತ್ರೀ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸಾಧು ತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಇದ್ದಾರೆ. ಸದ್ಯದಲ್ಲೇ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಚಾರ ಕಾರ್ಯ ನಡೆಸಲಿದೆ. ‘ಇದೊಂದು ಫ್ಯಾಮಿಲಿ – ಡ್ರಾಮಾ ಕತೆ. ಕುಟುಂಬ, ಸಂಬಂಧಗಳ ಸುತ್ತಾ ಇಡೀ ಸಿನಿಮಾ ಸಾಗಲಿದೆ’ ಎನ್ನುತ್ತಾರೆ ನಿರ್ದೇಶಕರು.