ಹಿರಿಯ ಚಿತ್ರನಿರ್ದೇಶಕ ಪಿ ಎಚ್ ವಿಶ್ವನಾಥ್ ಅವರು ಸಿನಿಮಾ ಶೀರ್ಷಿಕೆ ರಿಜಿಸ್ಟ್ರೇಷನ್‌ಗೆ ಸಂಬಂಧಿಸಿದ ಗೊಂದಲಗಳ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಹಲವು ಫಿಲ್ಮ್ ಚೇಂಬರ್‌ಗಳಿದ್ದು, ಇದರಿಂದಾಗಿ ಅಂದುಕೊಂಡ ಸಿನಿಮಾಗಳ ಶೀರ್ಷಿಕೆಗಳು ಕೈತಪ್ಪುವ ಸಂಭವ ಹೆಚ್ಚಾಗಿದೆ ಎನ್ನುತ್ತಾರೆ.
‘ಚಿತ್ರನಿರ್ದೇಶಕರು ವರ್ಷಗಳ ಕಾಲ ಸಿನಿಮಾಗೆ ಕತೆ ಮಾಡಿಕೊಂಡು, ಕತೆಗೆ ಹೊಂದುವಂತೆ ಶೀರ್ಷಿಕೆ ಮಾಡಿಕೊಂಡಿರುತ್ತಾರೆ. ಕೊನೆಯ ಹಂತದಲ್ಲಿ ಶೀರ್ಷಿಕೆ ಮತ್ತಾರದ್ದೋ ಆಗಿರುತ್ತದೆ!’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹಿರಿಯ ಚಿತ್ರನಿರ್ದೇಶಕ ಪಿ ಎಚ್ ವಿಶ್ವನಾಥ್. ಕನ್ನಡ ಸಿನಿಮಾಗಳು ಶೀರ್ಷಿಕೆ ವಿಚಾರದಲ್ಲಿ ಸುದ್ದಿಯಾಗುವ ವಿದ್ಯಮಾನ ಇತ್ತೀಚೆಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಹಲವು ಫಿಲ್ಮ್ ಚೇಂಬರ್‌ಗಳಿದ್ದು, ತಾಂತ್ರಿಕ ತೊಡಕುಗಳಾಗುತ್ತಿವೆ ಎನ್ನುವುದು ವಿಶ್ವನಾಥ್‌ರ ಅಭಿಪ್ರಾಯ. ಇದೇ ಕಾರಣಕ್ಕೆ ಅವರು ತಮ್ಮ ನೂತನ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿ ಸೆನ್ಸಾರ್ ಆಗುವವರೆಗೂ ಶೀರ್ಷಿಕೆ ರಿವೀಲ್ ಮಾಡಿರಲಿಲ್ಲ. ಸಿನಿಮಾ (ಆಡೇ ನಮ್ GOD!) ಸಿದ್ಧವಾಗಿ ಸೆನ್ಸಾರ್ ಆದ ನಂತರ ಶೀರ್ಷಿಕೆ ಘೋಷಿಸಿ ಪ್ರಚಾರ ಆರಂಭಿಸಿದ್ದಾರೆ.
ಹುಬ್ಬಳ್ಳಿ, ಮಂಗಳೂರು ಫಿಲ್ಮ್ ಚೇಂಬರ್‌ಗಳನ್ನೂ ಸೇರಿಸಿ ರಾಜ್ಯದಲ್ಲಿ ಸದ್ಯ ಐದಾರು ಫಿಲ್ಮ್ ಚೇಂಬರ್‌ಗಳಾಗಿವೆ ಎನ್ನಲಾಗಿದೆ. ಎಲ್ಲಿ ಬೇಕಾದರೂ ಚಿತ್ರನಿರ್ಮಾಪಕರು ತಮ್ಮ ಸಿನಿಮಾಗಳ ಶೀರ್ಷಿಕೆ ರಿಜಿಸ್ಟರ್ ಮಾಡಿಸಬಹುದು. ಸೆನ್ಸಾರ್‌ಗೆ ಯಾರು ಮೊದಲು ಅಪ್ರೋಚ್ ಮಾಡುತ್ತಾರೋ ಅವರಿಗೆ ಶೀರ್ಷಿಕೆ ಎನ್ನುವುದು ಕಾನೂನು. ಇದರಿಂದಾಗಿ ಹಲವರು ಶೀರ್ಷಿಕೆ ಕೈತಪ್ಪಿ ಪರಿತಪಿಸಿದ್ದಾರೆ. ಮೊದಲೇ ಶೀರ್ಷಿಕೆ ಘೋಷಿಸಿ ಸಿನಿಮಾ ಶುರು ಮಾಡಿದರೆ, ಶೀರ್ಷಿಕೆಯನ್ನೇ ಕದಿಯುವ ಕಳ್ಳರಿದ್ದಾರೆ! ‘ನಿರ್ದೇಶಕರು ಕತೆಗೆ ಹೊಂದುವಂತಹ ಶೀರ್ಷಿಕೆ ಮಾಡಿಕೊಂಡು ಸಿನಿಮಾ ಶುರು ಮಾಡಿರುತ್ತಾರೆ. ಮತ್ತಾರೋ ಸಿನಿಮಾ ಮುಗಿಸಿಕೊಂಡು ಸೆನ್ಸಾರ್ ಮಾಡಿಸಿ ಅದೇ ಶೀರ್ಷಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ! ಇದು ಚಿತ್ರನಿರ್ದೇಶಕರ ಕ್ರಿಯೇಟಿವ್ ಪ್ರೊಸೆಸ್‌ಗೆ ಬಹುದೊಡ್ಡ ತೊಡಕು. ಟೈಟಲ್ ರಿಜಿಸ್ಟ್ರೇಷನ್ ಹೊಣೆಯನ್ನು ಫಿಲ್ಮ್ ಚೇಂಬರ್‌ಗೆ ಬದಲಾಗಿ ಸರ್ಕಾರಿ ಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಹೆಗಲಿಗೆ ಹೊರಿಸಿದರೆ ಸಮಸ್ಯೆ ತಿಳಿಯಾಗುತ್ತದೆ. ಆಗ ಶೀರ್ಷಿಕೆಗಳಿಗೆ ಹೊಡೆದಾಡುವುದು, ಶೀರ್ಷಿಕೆ ಕದಿಯುವುದು ತಪ್ಪುತ್ತದೆ’ ಎನ್ನುತ್ತಾರೆ ವಿಶ್ವನಾಥ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮ ಹರೀಶ್ ಅವರು ಕೂಡ ಇಂತಹ ಗೊಂದಲಗಳು ಆಗಕೂಡದು ಎನ್ನುತ್ತಾರೆ. ಮೊದಲು ಯಾರು ಶೀರ್ಷಿಕೆ ನೋದಣಿ ಮಾಡುತ್ತಾರೋ ಅವರಿಗೆ ಶೀರ್ಷಿಕೆ ಕೊಡಬೇಕು ಎನ್ನುವುದು ಅವರ ವಾದ. ‘ಯಾವುದೇ ಕಾರಣಕ್ಕೂ ಹಣ ಹೂಡುವ ನಿರ್ಮಾಪಕರಿಗೆ ತೊಂದರೆ ಆಗಕೂಡದು. ರಿಜಿಸ್ಟರ್ ಮಾಡಿಸಿದ ಟೈಟಲ್ ಚೆನ್ನಾಗಿದೆ ಎಂದು ಮತ್ತಾರೋ ಅದನ್ನು ಕದಿಯುವುದು ತಪ್ಪು. ಹೊಂದಾಣಿಕೆಯಿಂದ ಹೋಗಬೇಕು. ಮೊದಲು ಟೈಟಲ್ ರಿಜಿಸ್ಟರ್ ಮಾಡಿಸಿದವರಿಗೆ ಆದ್ಯತೆ ಕೊಟ್ಟು, ಬೇರೆ ಶೀರ್ಷಿಕೆಯೊಂದಿಗೆ ಸಿನಿಮಾ ಮಾಡಬೇಕು’ ಎಂದು ಹರೀಶ್ ಸಲಹೆ ಮಾಡುತ್ತಾರೆ.
ಹಿರಿಯ ಚಿತ್ರನಿರ್ದೇಶಕ ಟಿ ಎಸ್ ನಾಗಾಭರಣ, ‘ಟೈಟಲ್ ರಿಜಿಸ್ಟ್ರೇಷನ್‌ಗೆ ಸಂಬಂಧಿಸಿದ ಕೆಲಸವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಕೊಡುವುದು ಸರಿ ಕಾಣದು. ಅದು ವಾಣಿಜ್ಯದ ಕೆಲಸ ಮಾಡುವುದಿಲ್ಲ. ಅಲ್ಲದೆ ಅದಕ್ಕೆ ಬೇಕಾದ ಇನ್‌ಫ್ರಾಸ್ಟ್ರಕ್ಚ್ ಕೂಡ ಅಲ್ಲಿಲ್ಲ’ ಎನ್ನುತ್ತಾರೆ. ಟೈಟಲ್‌ಗೆ ಸಂಬಂಧಿಸಿದ ಗೊಂದಲಗಳ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ಯಾರು, ಏನು ಮಾಡಿದರೂ ಕನ್ನಡ ಚಿತ್ರಕ್ಕೇ ತೊಂದರೆ ಆಗೋದು. ಈಗ ಅಸ್ತಿತ್ವದಲ್ಲಿರುವ ಎಲ್ಲಾ ಫಿಲ್ಮ್ ಚೇಂಬರ್‌ಗಳು ಇದಕ್ಕೆ ಸಂಬಂಧಿಸಿದಂತೆ ಒಂದು ನಿಲುವು ತೆಗೆದುಕೊಳ್ಳಬೇಕು. ಪರಸ್ಪರ ಅವರೇ ಮಾತನಾಡಿಕೊಂಡು ಒಂದು ನಿರ್ಧಾರಕ್ಕೆ ಬರಬೇಕು. ಅಲ್ಲಿನ ಗೊಂದಲಗಳು ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಕೂಡದು’ ಎನ್ನುತ್ತಾರೆ ನಾಗಾಭರಣ.
ಸಿನಿಮಾ ಶೀರ್ಷಿಕೆ ಗೊಂದಗಳಿಗೆ ತಾಂತ್ರಿಕವಾಗಿ ಪರಿಹಾರ ಸಿಗಬಲ್ಲ ಒಂದು ಉಪಾಯವನ್ನೂ ನಾಗಾಭರಣ ಹೇಳುತ್ತಾರೆ. ‘ಯಾವುದೇ ಸಿನಿಮಾದ ಚಿತ್ರೀಕರಣಕ್ಕೆ ಲೊಕೇಶನ್ ಪರ್ಮಿಷನ್ ಕೊಡೋದೇ ಸರ್ಕಾರ. ನಿರ್ಮಾಪಕರು ಶೂಟಿಂಗ್‌ಗೂ ಮುನ್ನ ವಾರ್ತಾ ಇಲಾಖೆಯ ಅನುಮತಿ ಪಡೆಯಬೇಕಿದೆ. ಈಗಿರುವ ವಾರ್ತಾ ಇಲಾಖೆಯ ಅರ್ಜಿ ಪ್ರತಿಯಲ್ಲಿ ಮತ್ತೊಂದು ಕಾಲಂ ಸೇರಿಸಬೇಕು. ಈ ಕಾಲಂನಲ್ಲಿ ರಿಜಿಸ್ಟರ್ ಮಾಡಿಸಿದ ಟೈಟಲ್ ಶೀರ್ಷಿಕೆ ನಮೂದಾಗಲಿ. ಜೊತೆಗೆ ಈಗಿರುವ ಇತರೆ ಫಿಲ್ಮ್ ಚೇಂಬರ್‌ಗಳಿಂದ ಟೈಟಲ್‌ಗೆ ಸಂಬಂಧಿಸಿದಂತೆ NOC ತಂದು ಅಲ್ಲಿ ದಾಖಲಿಸಲಿ. ಮುಂದೆ ಆ ಚಿತ್ರದವರು ಸಬ್ಸಿಡಿಗೂ ಅರ್ಜಿ ಹಾಕುವುದರಿಂದ ಈ ದಾಖಲೆಯೇ ಅಧಿಕೃತವಾಗುತ್ತದೆ. ಇಲಾಖೆ ಈ ತಾಂತ್ರಿಕ ವಿಷಯದ ಕಾಲಂ ಸೇರ್ಪಡೆಗೊಳಿಸಿದರೆ ಒಳ್ಳೆಯದು’ ಎನ್ನುತಾರವರು.
ಇತರೆ ಫಿಲ್ಮ್ ಚೇಂಬರ್‌ಗಳಿಂದ NOC ತರುವ ಪ್ರಕ್ರಿಯೆಯಲ್ಲೇ ಗೊಂದಲಗಳಾಗುತ್ತವೆ ಎಂದು ನಿರ್ದೇಶಕ ಪಿ ಎಚ್ ವಿಶ್ವನಾಥ್ ಅಭಿಪ್ರಾಯ ಪಡುತ್ತಾರೆ. ‘ದಶಕಗಳಿಂದ ನಾವು ಒಡನಾಡಿರುವ ಮೂಲ ಕಾರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೊಂದು ಪಾರದರ್ಶಕತೆ ಇದೆ. ಆದರೆ ಹೊಸದಾಗಿ ಶುರುವಾದ ಫಿಲ್ಮ್ ಚೇಂಬರ್‌ಗಳಲ್ಲಿ ಇದನ್ನು ನಿರೀಕ್ಷಿಸಲಾಗದು. ಅಲ್ಲಿ NOC ಅಷ್ಟು ಸರಳವಾಗಿ ಸಿಗುವುದಿಲ್ಲ. NOCಗಾಗಿ ನಾವು ನಮ್ಮ ಟೈಟಲ್ ರಿವೀಲ್ ಮಾಡಬೇಕಾಗುತ್ತದೆ. ತಮ್ಮಲ್ಲಿ ಈ ಶೀರ್ಷಿಕೆ ಮೊದಲೇ ರಿಜಿಸ್ಟರ್ ಆಗಿದೆ ಎಂದು ಅವರು ಹೇಳುವ ಸಾಧ್ಯತೆಗಳೂ ಇಲ್ಲದಿಲ್ಲ! ಹಾಗಾಗಿ ವಾರ್ತಾ ಇಲಾಖೆ ಇಲ್ಲವೇ ಅಕಾಡೆಮಿ ಹೆಗಲಿಗೆ ಟೈಟಲ್ ರಿಜಿಸ್ಟರ್ ಹೊಣೆ ಇದ್ದರೆ ತಾಂತ್ರಿಕ ಸಮಸ್ಯೆಗಳೇ ಇರುವುದಿಲ್ಲ’ ಎನ್ನುತ್ತಾರೆ ವಿಶ್ವನಾಥ್.