ಟ್ರೆಂಡೀ ಶೀರ್ಷಿಕೆಯ ಸಿನಿಮಾದೊಂದಿಗೆ ಚಿತ್ರನಿರ್ದೇಶಕ ಪಿ ಎಚ್ ವಿಶ್ವನಾಥ್ ತೆರೆಗೆ ಮರಳುತ್ತಿದ್ದಾರೆ. ಗಂಭೀರ ವಿಚಾರವೊಂದನ್ನು ತಿಳಿಹಾಸ್ಯದೊಂದಿಗೆ ದಾಟಿಸುವ ಪ್ರಯತ್ನವಿದು. ಸಿನಿಮಾ ಸೆನ್ಸಾರ್ ಕೂಡ ಆಗಿದ್ದು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವುದು ಅವರ ಯೋಜನೆ.
ಕನ್ನಡದ ಸದಭಿರುಚಿ ಮತ್ತು ಫೀಲ್‌ಗುಡ್ ಸಿನಿಮಾಗಳ ನಿರ್ದೇಶಕರಲ್ಲೊಬ್ಬರು ಪಿ ಎಚ್ ವಿಶ್ವನಾಥ್. ಅವರ ಕೊನೆಯ ಸಿನಿಮಾ ‘ಸುಳಿ’ ತೆರೆಕಂಡು ಏಳು ವರ್ಷಗಳೇ ಆಯ್ತು. ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನಿಮಾ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಯೂ ಅವರು ಸಾಮಾಜಿಕ ಸಮಸ್ಯೆಯೊಂದನ್ನು ಪ್ರಸ್ತಾಪಿಸಿದ್ದರು. ಈಗ ‘ಆಡೇ ನಮ್ GOD!’ ಎನ್ನುವ ವಿಶಿಷ್ಟ ಶೀರ್ಷಕೆಯಡಿ ಅಂಥದ್ದೇ ಒಂದು ವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ. ‘ನಂಬಿಕೆ ಮತ್ತು ಮೂಢನಂಬಿಕೆ ಸುತ್ತ ಹೆಣೆದಿರುವ ಕತೆ. ಮೂಢನಂಬಿಕೆಯಿಂದಾಗಿ ಜನರು ಹೇಗೆಲ್ಲಾ ಮೋಸ ಹೋಗುತ್ತಾರೆ? ಇದರಿಂದ ಅವರ ಬದುಕಿನಲ್ಲಿ ಆಗಬಹುದಾದ ಏರುಪೇರುಗಳನ್ನು ಹೇಳಿದ್ದೇನೆ’ ಎನ್ನುತ್ತಾರವರು.
ಗಂಭೀರವಾದ ವಿಚಾರವೊಂದನ್ನು ತಿಳಿಹಾಸ್ಯದಲ್ಲಿ ನಿರೂಪಿಸಿರುವುದಾಗಿ ಹೇಳುತ್ತಾರೆ ವಿಶ್ವನಾಥ್. ಬದಲಾದ ಪ್ರೇಕ್ಷಕರ ಮನಸ್ಥಿತಿಗೆ ಹೊಂದುವಂತಹ ಶೀರ್ಷಿಕೆ ಮತ್ತು ನಿರೂಪಣೆಯೊಂದಿಗೆ ಸಿನಿಮಾ ಮಾಡಿದ್ದಾರೆ. ‘ಇಲ್ಲಿ ಹಾಸ್ಯವಿದೆ, ಆದರೆ ಅದು ಖಂಡಿತ ಡಬ್ಬಲ್ ಮೀನಿಂಗ್ ಹಾಸ್ಯವಲ್ಲ. ಆರೋಗ್ಯಕರ ಹಾಸ್ಯದೊಂದಿಗೆ ನರೇಟ್ ಮಾಡಿದ್ದೇನೆ. ಒಂದೊಳ್ಳೆಯ ಸಂದೇಶವಿದೆ’ ಎನ್ನುತ್ತಾರೆ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು.. ಇಂತಹ ಸದಭಿರುಚಿ, ಪ್ರೇಮಕತೆಗಳ ಮೂಲಕ ಕನ್ನಡಿಗರಿಗೆ ಪರಿಚಯವಾಗಿರುವ ವಿಶ್ವನಾಥ್‌ರ ಹೊಸತನದ ಶೀರ್ಷಿಕೆ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಲವ್, ಡ್ಯೂಯೆಟ್ ಇಲ್ಲ. ನಾಲ್ವರು ಯುವಕರ ಪಾತ್ರಗಳಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’, ‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ‘ಪಿಂಕಿ ಎಲ್ಲಿ?’ ಚಿತ್ರದ ಅನೂಪ್ ಶೂನ್ಯ ಇದ್ದಾರೆ. ಬಿ ಸುರೇಶ್ ಮತ್ತು ಸಾರಿಕಾ ರಾವ್ ಇತರೆ ಪ್ರಮುಖ ಪಾತ್ರಧಾರಿಗಳು. ಪ್ರೊ ಬಿ ಬಸವರಾಜ್ ಮತ್ತು ರೇಣುಕಾ ಬಸವರಾಜ್ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಸಂಕಲನ, ಸ್ವಾಮಿನಾಥನ್ ಸಂಗೀತ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ – ಸಹ ನಿರ್ದೇಶನವಿದೆ. ‘ಆಡೇ ನಮ್ GOD!’ಗೆ ಸೆನ್ಸಾರ್ ಆಗಿದ್ದು, ಆಗಸ್ಟ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರು ಮತ್ತು ನಿರ್ದೇಶಕರ ಯೋಜನೆ.
Nice theme and It’s very informative. Such movies are required for the society…
Thank you for giving such a great mesage…