ಯಾವುದೇ ಸಂದರ್ಭ ಬರಲಿ ಡೋಂಟ್ ಕೇರ್ ಎನ್ನುವ, ಅನ್ಯಾಯ ಆಗ್ತಿದೆ ಅಂದ್ರೆ ಹಿಂದೆಮುಂದೆ ನೋಡದೆ ಸಿಡಿದೇಳುವ ಧರ್ಯಶಾಲಿ ಹುಡುಗಿ ಅವಳು. ಹೆಣ್ಣುಮಕ್ಕಳು ಹುಟ್ಟಿದರೆ ಬೆಳೀತಾ ಬೆಳೀತಾ ಧೈರ್ಯ, ಆತ್ಮವಿಶ್ವಾಸದ ಕಿಚ್ಚನ್ನು ಮೈಗೂಡಿಸಿಕೊಂಡು ಇಂಡಿಪೆಂಡೆಂಟ್‌ ವ್ಯಕ್ತಿತ್ವ ಹೊಂದಬೇಕು ಎಂದು ಕನಸು ಕಾಣುವ ಪೋಷಕರೆದುರು ಇವಳು ನಿಂತರೆ ಇವಳೇ ಆ ಮನೆ ಬೆಳಗುವ ದೀಪ. ‘ಆ ಪುಟ್ಟಕ್ಕನ ಮಗಳು ಸ್ನೇಹಾನ ನೋಡಿ ಕಲಿ’ ಎಂದು ಬುದ್ಧಿ ಹೇಳುವ ಪೋಷಕರ ಮಕ್ಕಳಿಗೂ ಇವಳೆಂದರೆ ಇಷ್ಟ. ಅಕ್ಕನೋ, ತಂಗಿಯೋ ಅನ್ನುವಷ್ಟು ಆತ್ಮೀಯ ಭಾವ. ಆ ಮಟ್ಟಿಗೆ ಮನೆಮಗಳಾಗಿ ಹೋಗಿದ್ದಾಳೆ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ. ZEE ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಆರೂರು ಜಗದೀಶ್ ನಿರ್ದೇಶನ – ನಿರ್ಮಾಣದ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿರುವ ಈ ಧಾರಾವಾಹಿ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಸೀರಿಯಲ್. ಪ್ರತಿ ವಾರ ಟಿಆರ್‌ಪಿಯಲ್ಲೂ ಶ್ರೇಷ್ಠತೆ ಕಾಯ್ದುಕೊಳ್ಳುವ ಈ ಧಾರಾವಾಹಿಯಲ್ಲಿ ‘ಪುಟ್ಟಕ್ಕನ ಮಗಳು’ ಅಂದರೆ ಖಡಕ್ ಹುಡುಗಿ ಸ್ನೇಹಾ ಹೈಲೈಟ್. ಸಹಜ ಅಭಿನಯ, ಮುದ್ದಾದ ಮಾತು, ನೋಟದಿಂದ ಪ್ರೇಕ್ಷಕರ ಮನ ಗೆದ್ದಿರುವ ಸಂಜನಾ ಬಗೆಗಿನ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ನಟನೆಯೆಡೆಗೆ ಬಾಲ್ಯದಲ್ಲೇ ಸೆಳೆತ
ಅದೊಂಥರಾ ಹುಚ್ಚು. ಟೀವಿ ಮೇಲೆ ಕಂಡ ಚಂದದ ನಟಿಯ ಮೇಲೆ ಸೆಳೆತ. ಅಲಂಕಾರಕ್ಕೋ, ಚಂದಕ್ಕೊ, ವೇಷಭೂಷಣಕ್ಕೋ ಮನಸು ಮರುಳಾಗುತ್ತದೆ. ಯಾವುದೋ ನಟಿಯಂತೆ ಸಿಂಗಾರಗೊಳ್ಳಬೇಕು, ಇನ್ಯಾರದ್ದೋ ರೀತಿ ಮಾತನಾಡಬೇಕು ಅಂತೆಲ್ಲ ಎಲ್ಲಾ ಹುಡುಗಿಯರಂತೆ ಸಂಜನಾಗೂ ಅನಿಸಿತ್ತು. ಅದೇ ಕಾರಣಕ್ಕೆ ಸಂಜನಾ ಕನ್ನಡಿ ಎದುರು ನಿಲ್ಲುತ್ತಿದ್ದದ್ದು. ತಮ್ಮಿಷ್ಟದ ಪಾತ್ರಗಳ ಹಾವಭಾವ, ಸಂಭಾಷಣೆಯನ್ನೆಲ್ಲ ಹೇಳುತ್ತಿದ್ದರು. ಅದೇ ಹೊತ್ತಲ್ಲಿ ನಟನೆ ಅವರನ್ನು ಆವರಿಸಿಕೊಳ್ಳುತ್ತಿತ್ತು. ಅವತ್ತು ಸುಮ್ನೆ ಟೈಮ್‌ಪಾಸ್ ಎಂದುಕೊಂಡಿದ್ದವರಿಗೆ ಇವತ್ತು ತಾವೊಬ್ಬರು ನಟಿಯಾಗಿ ಪ್ರೇಕ್ಷಕರ ಮೆಚ್ಚಿಸುತ್ತೇನೆ, ಲೆಕ್ಕ ಮೀರಿ ಅಭಿಮಾನಿ ಬಳಗವನ್ನು ಸಂಪಾದಿಸುತ್ತೇನೆ ಎಂದು ಕನಸಲ್ಲೂ ಯೋಚಿಸಿರಲಿಲ್ಲವಂತೆ. ಆದರೆ ಸಂಜನಾ ಅವರ ಬಾಲ್ಯದಿಂದಲೇ ಕಲೆ ಅವರ ಬೆನ್ನಿಗೆ ಅಂಟಿಕೊಂಡೇ ಬಂದಿತ್ತು. ನೃತ್ಯ, ನಟನೆ ಅವರ ಶಾಲಾ ದಿನಗಳಿಂದಲೇ ಜತೆಗಿತ್ತು.

ಟರ್ನಿಂಗ್‌ ಪಾಯಿಂಟ್‌ ಆಯ್ತು ‘ದ್ರೌಪತಿ’ ಪಾತ್ರ!
ಶಾಲಾ ದಿನಗಳಲ್ಲಿ ಫಸ್ಟ್ ಬೆಂಜ್ ಹುಡುಗಿ ಸಂಜನಾ. ಓದಿನ ಜತೆ ಪಠ್ಯೇತರ ಚಟುವಟಿಕೆಯಲ್ಲೂ ಸೈ ಎನಿಸಿದ್ದರು. ಲಾಸ್ಟ್ ಬೆಂಚ್ ಹುಡುಗ – ಹುಡುಗಿಯರು ಇವರನ್ನು ಸಿಕ್ಕಾಪಟ್ಟೆ ಹೇಟ್ ಮಾಡ್ತಾ ಇದ್ರಂತೆ. ಅವರು ಪತ್ರಕರ್ತ – ಲೇಖಕ ರವಿ ಬೆಳಗೆರೆ ಅವರ ಪ್ರಾರ್ಥನಾ ಸ್ಕೂಲ್‌ ವಿದ್ಯಾರ್ಥಿನಿ. ಶಾಲೆಯಲ್ಲಿ ಓದುವಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಂಜನಾ ಅವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿದ್ದವಂತೆ. ಒಮ್ಮೆ ಸಂಜನಾ ಅವರ ಸಂಸ್ಕೃತ ಗುರುಗಳು ಇವರ ನಟನಾಸಕ್ತಿ ಗಮನಿಸಿ ಏಕಪಾತ್ರಾಭಿನಯವೊಂದರಲ್ಲಿ ಅಭಿನಯಿಸಲು ಅವಕಾಶ ಕೊಟ್ಟಿದ್ದಾರೆ. ದ್ರೌಪದಿ ಪಾತ್ರವದು. ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಗುರುಗಳು ತುಂಬಿದ ಧೈರ್ಯ ಜೊತೆಗಿತ್ತು. ಒಂಚೂರು, ಭಯ, ಹಿಂಜರಿಕೆಯಿದ್ದರೂ ನಟನೆ ಅಂತ ಬಂದಾಗ ಹಿಂದೆಮುಂದೆ ನೋಡದೆ ಪಾತ್ರ ಪ್ರವೇಶಿಸುವ ಸಂಜನಾ ಅವರು ಅಂದು ಪ್ರಥಮ ಬಹುಮಾನ ಗೆದ್ದು ತಂದರು. ಅದೊಂದು ಗೆಲುವು ಅವರ ಬದುಕನ್ನೇ ಬದಲಿಸಿಬಿಟ್ಟಿತು.

ನಟಿಯಾಗಬೇಕು ಎನ್ನುವ ಆಸೆ ಚಿಗುರುತ್ತಿತ್ತು. ಆದರೆ ಓದಿನಲ್ಲಿ ಮುಂದಿದ್ದ ಸಂಜನಾ ಅವರ ಮುಂದೆ ವೈದ್ಯೆ ಅಥವಾ ಎಂಜಿನಿಯರ್ ಆಗುವ ಆಯ್ಕೆ ಇತ್ತು. ಪೋಷಕರ ಇಚ್ಛೆಯೂ ಇದೇ ಆಗಿತ್ತು. ಅತ್ತ ಓದಿನ ಹಂಬಲ. ಇನ್ನೊಂದೆಡೆ ನಟನೆಯ ಹುಚ್ಚು. ಎರಡನ್ನೂ ಬಿಡಲಾರದ ತೊಳಲಾಟ. ಇವುಗಳ ನಡುವೆ ಬಣ್ಣದ ಜಗತ್ತಿನೊಳಗೆ ಅವರು ಪುಟ್ಟ ಪುಟ್ಟ ಹೆಜ್ಜೆ ಇಡಲಾರಂಭಿಸಿದರು. ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಗಾಗಿ ನಡೆಯುತ್ತಿದ್ದ ಆಡಿಷನ್ ಇವರ ಗಮನ ಸೆಳೆಯಿತು. ಬದುಕಿನಲ್ಲಿ ಮೊದಲ ಬಾರಿಗೆ ಇವರು ಕ್ಯಾಮೆರಾ ಎದುರು ನಿಂತರು. ಕಿರುತೆರೆಯ ಬಾಗಿಲು ತೆರೆಯಿತು. ನಂತರದ ದಿನಗಳಲ್ಲಿ ಓದು ಹಾಗೂ ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ ಎರಡನ್ನೂ ಸಿದ್ಧಿಸಿಕೊಂಡರು.

ಅನಂತನಾಗ್‌ ಚಿತ್ರದೊಂದಿಗೆ ಸಿಲ್ವರ್‌ ಸ್ಕ್ರೀನ್‌ ಎಂಟ್ರಿ
ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೂ ಸಂಜನಾರ ಸಿನಿಮಾ ನಂಟು ಅದಕ್ಕೂ ಮುನ್ನವೇ ಬೆಳೆದಿತ್ತು. ನಟನಾ ಜರ್ನಿಯ ಆರಂಭದಲ್ಲೇ ಅನಂತ್‌ನಾಗ್ ಅವರಂಥ ಮೇರು ಕಲಾವಿದರೊಂದಿಗೆ ನಟಿಸುವ ಅವಕಾಶ! ‘ವೀಕೆಂಡ್’ ಚಿತ್ರದಲ್ಲಿ ಅವರೊಂದಿಗೆ ಮಿಂಚಿದರು. ಅನಂತ್‌ನಾಗ್ ಅವರೊಂದಿಗೆ ಅಭಿನಯಿಸಿದ ಅನುಭವ ಮರೆಯಲೇಬಾರದ್ದು ಎನ್ನುವ ಅವರು ‘ವೀಕೆಂಡ್’ ಚಿತ್ರದ ಸೆಟ್‌ನಲ್ಲಿ ಅನಂತ್ ನಾಗ್ ಅವರು ಹೇಳಿಕೊಟ್ಟ ನಟನೆಯ ಪಾಠವನ್ನು ಎಂದೂ ಮರೆಯುವುದಿಲ್ಲ ಎನ್ನುತ್ತಾರೆ. ಅಂಥದ್ದು ಅವರೇನು ಅಂದಿದ್ದರು ಅವತ್ತು ಗೊತ್ತಾ? ಚಿತ್ರದ ಮೊದಲ ದೃಶ್ಯಕ್ಕೆ ಹಲವು ಬಾರಿ ಟೇಕ್ಸ್ ತೆಗೆದುಕೊಂಡಿದ್ದ ಸಂಜನಾ ಬೇಸರದಲ್ಲಿದ್ದರಂತೆ. ಅದನ್ನು ಗಮನಿಸಿದ್ದ ಅನಂತ್‌ನಾಗ್ ಅವರು ‘ಈ ಮುಂಚೆಯೂ ನೀನು ನಟಿಸಿದ್ದೀಯಲ್ಲ, ಇದು ನಿನಗೆ ಹೊಸದಲ್ಲವಲ್ಲ’ ಎಂದು ಧೈರ್ಯ ತುಂಬಿದ್ದರು. ಅದೊಂದು ಮಾತು ಸಂಜನಾ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮುಂದೆ ಅವರೊಂದಿಗೆ ನಟನೆ ಸಲೀಸಾಯ್ತು.

‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’, ‘ನಾನ್‌ವೆಜ್‌’, ‘ಸ್ಟೀಲ್ ಪಾತ್ರೆ ಸಾಮಾನು’ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇಲ್ಲಿನ ಪಾತ್ರಗಳು ಕೂಡ ಒಂದಕ್ಕೊಂದು ಭಿನ್ನ. ಸಂಜನಾ ಇನ್ನಷ್ಟು ಚಿತ್ರಗಳ ನಿರೀಕ್ಷೆಯಲ್ಲಿದ್ದು, ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಅವರ ಆಸೆ. ತಮಿಳಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಶ್ವರ್ ಕೊಟ್ಟಾವೆ ನಿರ್ದೇಶನದ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದು ಪಾಸಿಟಿವ್ ಹಾಗೂ ನೆಗೆಟಿವ್ ಶೇಡಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವಕಾಶಕ್ಕಾಗಿ ಸ್ಟ್ರಗಲ್‌ ಮಾಡಿದ್ರಾ ಸಂಜನಾ?
ಹೌದು, ತೀರ ಸಣ್ಣ ವಯಸ್ಸಿನಲ್ಲೇ ನಟನಾ ಜಗತ್ತಿಗೆ ತೆರೆದುಕೊಂಡರೂ ಒಂದೊಳ್ಳೆ ಬ್ರೇಕ್ ಸಿಗುವ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಅಷ್ಟೇನೂ ಸುಲಭವಾಗಿರಲಿಲ್ಲ. ಓದಿನ ನಡುನಡುವೆ ಅಲ್ಲಲ್ಲಿ ಕಾಣಿಸಿಕೊಂಡರಾದರೂ ಸಿಕ್ಕ ಅವಕಾಶಗಳು ಅವರ ಕೈ ಹಿಡಿಯಲಿಲ್ಲ. ಎರಡು ವರ್ಷಗಳ ಕೊರೊನಾ ಸಹ ಅವರ ನಟನೆಯ ವೇಗಕ್ಕೆ ಬ್ರೇಕ್ ಹಾಕಿತ್ತು. ಅವರೇ ಹೇಳುವಂತೆ ಒಂದೊಳ್ಳೆ ಬ್ರೇಕ್ ಕೊಡುವ ಪಾತ್ರಕ್ಕಾಗಿ ಒದ್ದಾಡಿದ್ದರಂತೆ.

ಸೀರಿಯಲ್‌ ದುನಿಯಾ
‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಯಲ್ಲಿ ಸಣ್ಣ ಪಾತ್ರ ನಿರ್ವಹಿಸಿದ ಅನುಭವ ಜತೆಗಿತ್ತು. ಹೀಗಾಗಿ ಕಿರುತೆರೆ ಜಗತ್ತನ್ನು ಅಲ್ಪಸ್ವಲ್ಪ ಅರಿತಿದ್ದ ಅವರಿಗೆ ಮತ್ತೆ ಕಿರುತೆರೆ ಪ್ರವೇಶಿಸಲು ಆಹ್ವಾನ ಸಿಕ್ಕಿದ್ದು ‘ಲಗ್ನ ಪತ್ರಿಕೆ’ ಮೂಲಕ. ಕಲರ್ಸ್ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗಿದ್ದ ‘ಲಗ್ನ ಪತ್ರಿಕೆ’ ಧಾರಾವಾಹಿ ಇವರನ್ನು ಹಂತಹಂತವಾಗಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಿಸುತ್ತಿತ್ತು. ಅಷ್ಟರೊಳಗೆ ಧಾರಾವಾಹಿ ಪ್ರಸಾರವನ್ನೇ ನಿಲ್ಲಿಸಿಬಿಟ್ಟಿತು. ಕಿರುತೆರೆಯಲ್ಲಿ ಬಿಗ್ ಜರ್ನಿ ಆರಂಭಿಸಬೇಕಿದ್ದ ಸಂಜನಾ ಅವರಿಗೆ ನಿರಾಸೆಯಾಯ್ತು. ಅವರ ನಟನಾ ಪ್ರತಿಭೆ ಹೊರ ಬರುವ ಮುನ್ನವೇ ಧಾರಾವಾಹಿ ನಿಂತಿದ್ದು ಕೊಂಚ ಹಿನ್ನೆಡೆ ಆದರೂ ಓದು ಜತೆಗಿತ್ತು. ಓದಿನ ಕಡೆ ಗಮನ ಹರಿಸಿದರಾಯ್ತು ಎಂದುಕೊಂಡರು. ಆದರೆ ಕೆಲ ತಿಂಗಳ ನಂತರ ಮತ್ತೆ ಅವರನ್ನು ಅರಸಿ ಬಂದಿದ್ದೇ ಈ ‘ಪುಟ್ಟಕ್ಕನ ಮಕ್ಕಳು’. ಮೊದಲು ಅವಕಾಶ ಬಂದಾಗ ಅರೆ ಮನಸ್ಸಿನಿಂದಲೇ ನಿರಾಕರಿಸಿದವರು ಸುದೀರ್ಘ ಕಾಲದ ನಂತರ ಪುನಃ ಒಪ್ಪಿದರು. ಈಗ ಸಂಜನಾ ಕಿರುತೆರೆ ಲೋಕದ ಕಲರವ. ‘ಉಮಾಶ್ರೀ ಅವರಂಥ ಹಿರಿಯ ನಟಿಯೊಂದಿಗೆ ಅಭಿನಯಿಸುವುದೇ ಅದೃಷ್ಟ. ಹಿರಿಯ ನಟಿಯಿಂದ ಕಲಿಯುವುದು ಸಾಕಷ್ಟು ಇದೆ’ ಎನ್ನುತ್ತಾರೆ ಸಂಜನಾ.

ಮುಂದೇನು?
ಓದಿನಲ್ಲಿ ಮುಂಚಿನಿಂದಲೂ ಮುಂದಿದ್ದ ಸಂಜನಾ ನಟನೆಯ ಜೊತೆಜೊತೆಗೆ ಮೆಡಿಕಲ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. ವೈದ್ಯಕೀಯಕ್ಕೆ ಸಂಬಂಧಿಸಿದ ತಾಂತ್ರಿಕ ಕ್ಷೇತ್ರದಲ್ಲಿ ಏನನ್ನಾದರೂ ಮಾಡುವ ಆಸೆಯಂತೂ ಅವರಿಗಿದೆ. ಅದರ ಜತೆ ನಟನೆಯಲ್ಲೂ ಹೆಚ್ಚೆಚ್ಚು ತೊಡಗಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಸದ್ಯ ಸಿನಿಮಾವೊಂದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು ಅದು ಅವರಿಗೆ ಯಾವ ರೀತಿ ಬ್ರೇಕ್ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

ಸೋಷಿಯಲ್ ಮೀಡಿಯಾದಲ್ಲೂ ಮಿಂಚು!
ಸಂಜನಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರು ಆಗಾಗ ತಮ್ಮ ಧಾರಾವಾಹಿ, ಹವ್ಯಾಸ, ಫೋಟೊಶೂಟ್‌ಗೆ ಸಂಬಂಧಿಸಿದ ಸಾಕಷ್ಟು ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಭಿಮಾನಿಗಳ ಕಮೆಂಟ್‌ಗಳಿಗೂ ಒಮ್ಮೊಮ್ಮೆ ರಿಯಾಕ್ಟ್ ಮಾಡುತ್ತಾರೆ. ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸುವ ಇವರನ್ನು ಅನುಕರಿಸುವ ಅಭಿಮಾನಿ ಹುಡುಗಿಯರಿದ್ದಾರೆ. ರೀಲ್ಸ್ ಮೂಲಕ ಅಭಿಮಾನಿಗಳನ್ನು ಸದಾ ರಂಜಿಸುತ್ತಾರೆ. ನಟನೆಯ ಹೊರತಾಗಿಯೂ ಹಾಡುವುದು ಎಂದರೆ ಇವರಿಗಿಷ್ಟ. ಗಿಟಾರ್ ಕಲಿತಿದ್ದಾರೆ. ನೃತ್ಯ, ಪ್ರವಾಸ ಇವರ ಇಷ್ಟದ ಹವ್ಯಾಸಗಳು. ಫಿಟ್‌ನೆಸ್ ವಿಷಯದಲ್ಲೂ ಸಿಕ್ಕಾಪಟ್ಟೆ ಕಾಳಜಿ. ಸಮತೋಲಿತ ಆಹಾರ ಪದ್ಧತಿ ಇವರದ್ದು. ಜಿಮ್‌ಗೆ ಹೋಗುವ ಅಭ್ಯಾಸ ಇದೆ. ಬ್ಯಾಡ್ಮಿಂಟನ್, ಈಜು ಇವರ ಜೊತೆಗಿದೆ. ಯೋಗಾಭ್ಯಾಸ ಬಾಲ್ಯದಿಂದಲೂ ರೂಢಿಗತ.

LEAVE A REPLY

Connect with

Please enter your comment!
Please enter your name here