‘ಕಂಬ್ಳಿಹುಳ’ ಖ್ಯಾತಿಯ ಅಂಜನ್‌ ನಾಗೇಂದ್ರ ಮತ್ತು ವೇನ್ಯಾ ರೈ ನಟನೆಯ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಕೆಲವು ಸನ್ನಿವೇಶಗಳನ್ನು ಹಿಮಾಲಯದ ತಪ್ಪಲಿನಲ್ಲಿ ಚಿತ್ರಿಸಲಾಗಿದೆ. ಕಿರುತೆರೆ ನಿರ್ದೇಶಕ ಹಯವದನ ಅವರ ಚೊಚ್ಚಲ ನಿರ್ದೇಶನದ ಸಿನಿಮಾಗೆ ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

ಕಿರುತೆರೆಯಲ್ಲಿ ಹೆಸರು ಮಾಡಿರುವ ಹಯವದನ ಚೊಚ್ಚಲ ನಿರ್ದೇಶನದ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’. ಕನ್ನಡ ನಾಡಿನ ಹಲವು ಲೊಕೇಶನ್‌ಗಳಲ್ಲಿ ಚಿತ್ರೀಕರಣ ನಡೆದಿದ್ದು ಮಹಾರಾಷ್ಟ್ರ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಹಿಮಾಲಯದ ತಪ್ಪಲಿನಲ್ಲಿ ಚಿತ್ರಕ್ಕೆ ಶೂಟಿಂಗ್‌ ನಡೆದಿದೆ. ಹಿಮಾಲಯದಲ್ಲಿ ಚಿತ್ರಿಸಬೇಕೆನ್ನುವುದು ನಿರ್ದೇಶಕರ ಕನಸು ಈಡೇರಿದೆ. ಚಿತ್ರಕಥೆಗೆ ಅಗತ್ಯವಿದ್ದುದರಿಂದ ಅಲ್ಲಿ ಚಿತ್ರೀಕರಣ ನಡೆಸಿರುವುದಾಗಿ ಹೇಳುತ್ತಾರೆ ಹಯವದನ. ಶೂಟಿಂಗ್‌ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿವೆ. ‘ಕಂಬ್ಳಿಹುಳ’ ಖ್ಯಾತಿಯ ಅಂಜನ್‌ ನಾಗೇಂದ್ರ ಮತ್ತು ವೇನ್ಯಾ ರೈ ಚಿತ್ರದ ಮುಖ್ಯಭೂಮಿಕೆಯ ಕಲಾವಿದರು.

‘ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನೀ ಸಿನಿಮಾ. ತಂದೆ – ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್‌. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕತೆ’ ಎನ್ನುತ್ತಾರೆ ನಿರ್ದೇಶಕ ಹಯವದನ. ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್‌ನಡಿ ಸಿನಿಮಾ ತಯಾರಾಗುತ್ತಿದೆ. ಶಿವಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಕ್ಯಾಮೆರಾ, ರವಿಚಂದ್ರನ್ ಸಂಕಲನ ಚಿತ್ರಕ್ಕಿದೆ. ಸದ್ಯ ಡಬ್ಬಿಂಗ್‌ ನಡೆಯುತ್ತಿದ್ದು ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಹಯವದನ ನಿರ್ಧರಿಸಿದ್ದಾರೆ.

Previous articleನೈಜ ಕ್ರೈಂ ಘಟನೆಗಳನ್ನು ಆಧರಿಸಿದ ‘ಹತ್ಯ’ | ಚಿತ್ರನಿರ್ಮಾಣ ನಿರ್ವಾಹಕ ಗಂಗು ನಿರ್ದೇಶನ
Next article

LEAVE A REPLY

Connect with

Please enter your comment!
Please enter your name here