ಬೇಬಿ ಮೋನಿಕಾ ಶಿವ ಮತ್ತು ಮಾಸ್ಟರ್ ಶಕ್ತಿ ರಿತ್ವಿಕ್ ನಟಿಸಿರುವ ‘ಎರುಂಬು’ ತಮಿಳು ಸಿನಿಮಾ ಜುಲೈ 16ರಿಂದ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಕಳೆದು ಹೋದ ಉಂಗುರವನ್ನು ಹುಡುಕುವ ಮಕ್ಕಳ ಕತೆಯಿದು.
ಜಿ ಸುರೇಶ್ ನಿರ್ದೇಶನದ ಮಕ್ಕಳ ಚಿತ್ರ ‘ಎರುಂಬು’ (Erumbu) ಜುಲೈ 16ರಿಂದ Amazon Primeನಲ್ಲಿ ಸ್ಟ್ರೀಮ್ ಆಗಲಿದೆ. ಈ ತಮಿಳು ಸಿನಿಮಾದಲ್ಲಿ ಬಾಲ ಕಲಾವಿದರಾದ ಬೇಬಿ ಮೋನಿಕಾ ಶಿವ ಮತ್ತು ಮಾಸ್ಟರ್ ಶಕ್ತಿ ರಿತ್ವಿಕ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತನ್ನ ಮಲತಾಯಿಯ ಉಂಗುರವನ್ನು ಕಳೆದುಬಿಡುವ 9 ವರ್ಷದ ಬಾಲಕ ಮುತ್ತುವಿನ (ಶಕ್ತಿ) ಸುತ್ತ ‘ಎರುಂಬು’ ಕಥಾವಸ್ತು ಸುತ್ತುತ್ತದೆ. ಮತ್ತು ಅವನ ಕುಟುಂಬವು ಮನೆಗೆ ಹಿಂದಿರುಗುವ ಮೊದಲು ಅದನ್ನು ಹುಡುಕಲೇಬೇಕಾದ ಪರಿಸ್ಥಿತಿ ಇರುತ್ತದೆ. ಅವನ ಅಕ್ಕ ಪಚ್ಚೈಯಮ್ಮ (ಮೋನಿಕಾ) ಮತ್ತು ಅವನ ಸ್ನೇಹಿತ (ಜಾರ್ಜ್ ಮೇರಿಯನ್) ಮುತ್ತುವಿನ ಬೆಂಬಲಕ್ಕೆ ನಿಂತು ಆ ಮೂವರು ಒಟ್ಟುಗೂಡಿ ಉಂಗುರವನ್ನು ಹುಡುಕಲು ಆರಂಭಿಸುತ್ತಾರೆ. ಇವರೆಲ್ಲರೂ ಸೇರಿ ಮನೆಗೆ ಬರುವ ಮೊದಲು ಉಂಗುರವನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆಯೇ ಎಂಬುದು ಚಿತ್ರದ ಕಥೆ. ಕ್ರಿಯೇಟಿವ್ ಎಂಟರ್‌ಟೇನರ್ಸ್ ಬ್ಯಾನರ್ ಅಡಿ ಸುರೇಶ್ ಗುಣಶೇಖರನ್ ಸಿನಿಮಾ ನಿರ್ಮಿಸಿರುವ ಚಿತ್ರವನ್ನು ಧನಂಜಯನ್ ನಿರ್ದೇಶಿಸಿದ್ದಾರೆ. ಎಂ ಎಸ್ ಭಾಸ್ಕರ್, ಚಾರ್ಲಿ, ಸೂಸನ್ ಜಾರ್ಜ್, ಪರವೈ, ಸುಂದರಂಬಾಳ್ ಮತ್ತು ಜಗನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರುಣ್ ರಾಜ್ ಸಂಗೀತ, ಕೆ ಎಸ್ ಕಾಳಿದಾಸ್ ಛಾಯಾಗ್ರಹಣ ಮತ್ತು ಎಂ ತ್ಯಾಗರಾಜನ್ ಸಂಕಲನ ಚಿತ್ರಕ್ಕಿದೆ.